ನವಿ ಮುಂಬೈ: ಲಿಝೆಲ್ ಲೀ (Lizelle Lee) ಅರ್ಧಶತಕದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ, 2026ರ ಮಹಿಳಾ ಪ್ರೀಮಿಯರ್ ಲೀಗ್ (WPL 2026) ಟೂರ್ನಿಯ ಪಂದ್ಯದಲ್ಲಿ ಯುಪಿ ವಾರಿಯರ್ಸ್ ಎದುರು 7 ವಿಕೆಟ್‌ಗಳ ಗೆಲುವು ಸಾಧಿಸಿತು. ಆ ಮೂಲಕ ಆರಂಭಿಕ ಎರಡು ಪಂದ್ಯಗಳನ್ನು ಸೋತಿದ್ದ ಡೆಲ್ಲಿ, ನಾಲ್ಕನೇ ಆವೃತ್ತಿಯಲ್ಲಿ ಮೊದಲನೇ ಗೆಲುವು ದಾಖಲಿಸಿತು. ಇನ್ನು ಮೆಗ್ ಲ್ಯಾನಿಂಗ್ ಅರ್ಧಶತಕದ ಹೊರತಾಗಿಯೂ ಯುಪಿ ವಾರಿಯರ್ಸ್ ತಂಡ, ಈ ಟೂರ್ನಿಯಲ್ಲಿ ಗೆಲುವು ಕಾಣದೆ ಹ್ಯಾಟ್ರಿಕ್ ಸೋಲು ಅನುಭವಿಸಿತು.
ಇಲ್ಲಿನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಯುಪಿ ವಾರಿಯರ್ಸ್ ನೀಡಿದ್ದ 155 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ, ಲಿಝೆಲ್ ಲೀ ಹಾಗೂ ಶಫಾಲಿ ವರ್ಮಾ ಬ್ಯಾಟಿಂಗ್ ಬಲದಿಂದ 20 ಓವರ್‌ಗಳಿಗೆ 3 ವಿಕೆಟ್ ನಷ್ಟಕ್ಕೆ 158 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಗೆದ್ದು ಬೀಗಿತು. ಅತ್ಯುತ್ತಮ ಬ್ಯಾಟ್ ಮಾಡಿದ ಲಿಝೆಲ್ ಲೀ, 44 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 8 ಬೌಂಡರಿಗಳೊಂದಿಗೆ 67 ರನ್ ಗಳಿಸಿ ಡೆಲ್ಲಿ ಗೆಲುವಿನಲ್ಲಿ ಮಹತ್ತರ ಪಾತ್ರವಹಿಸಿದರು.
IND vs NZ: ಕೆಎಲ್ ರಾಹುಲ್ ಶತಕ ವ್ಯರ್ಥ, ಭಾರತಕ್ಕೆ ತಿರುಗೇಟು ನೀಡಿದ ನ್ಯೂಜಿಲೆಂಡ್!
ಆರಂಭಿಕ ಬ್ಯಾಟರ್ ಶಫಾಲಿ ವರ್ಮಾ ಕೂಡ ಉಪಯುಕ್ತ ಕೊಡುಗೆಯನ್ನು ತಂಡಕ್ಕೆ ನೀಡಿದರು. ಅವರು 32 ಎಸೆತಗಳಲ್ಲಿ 36 ರನ್ ಗಳಿಸಿದರು. ಲಾರಾ ವೋಲ್ವಾರ್ಡ್ ಹಾಗೂ ಜೆಮಿಮಾ ರೊಡ್ರಿಗಸ್ ಕ್ರಮವಾಗಿ 25 ಮತ್ತು 21 ರನ್‌ಗಳನ್ನು ಕಲೆ ಹಾಕಿದರು.
154 ರನ್ ಕಲೆ ಹಾಕಿದ್ದ ಯುಪಿ ವಾರಿಯರ್ಸ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಯುಪಿ ವಾರಿಯರ್ಸ್ ತಂಡ, ಮೆಗ್ ಲ್ಯಾನಿಂಗ್ ಹಾಗೂ ಹರ್ಲೀನ್ ಡಿಯೋಲ್ ಅವರ ಬ್ಯಾಟಿಂಗ್ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 8 ವಿಕೆಟ್‌ಗಳ ನಷ್ಟಕ್ಕೆ 154 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 155 ರನ್‌ಗಳ ಸ್ಪರ್ಧಾತ್ಮಕ ಗುರಿಯನ್ನು ನೀಡಿತ್ತು.
ಮಾರಿಜನ್ ಕಾಪ್ ಸೇರಿದಂತೆ ಡೆಲ್ಲಿ ಬೌಲರ್‌ಗಳ ದಾಳಿಯ ಎದುರು ಯುಪಿ ವಾರಿಯರ್ಸ್ ತಂಡದ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ನಾಯಕಿ ಮೆಗ್ ಲ್ಯಾನಿಂಗ್, ಹರ್ಲೀನ್ ಡಿಯೋಲ್ ಹಾಗೂ ಫೋಬ್ ಲಿಚ್‌ಫೀಲ್ಡ್ ಅವರನ್ನು ಹೊರತುಪಡಿಸಿ ಇನ್ನುಳಿದ ಬ್ಯಾಟರ್‌ಗಳು ವಿಫಲರಾದರು. ಆದರೆ, ನಾಯಕಿ ಮೆಗ್ ಲ್ಯಾನಿಂಗ್ ಉತ್ತಮ ಬ್ಯಾಟ್ ಮಾಡಿದರು. ಅವರು ಆಡಿದ 38 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ 54 ರನ್ ಗಳಿಸಿದರು. ಆ ಮೂಲಕ ಯುಪಿ ಪರ ವೈಯಕ್ತಿಕ ಗರಿಷ್ಠ ಸ್ಕೋರರ್ ಎನಿಸಿಕೊಂಡರು.
WPL 2026: ಹರ್ಮನ್‌ಪ್ರೀತ್ ಕೌರ್ ಅಬ್ಬರ, ಜಯಂಟ್ಸ್ ಎದುರು ಮುಂಬೈ ಇಂಡಿಯನ್ಸ್‌ಗೆ ಅಧಿಕಾರಯುತ ಜಯ!
ಇನ್ನು ಇವರಿಗೆ ಸಾಥ್ ನೀಡಿದ ಹರ್ಲಿನ್ ಡಿಯೋಲ್ 36 ಎಸೆತಗಳಲ್ಲಿ 7 ಬೌಂಡರಿಗಳೊಂದಿಗೆ 47 ರನ್ ಗಳಿಸಿದರು. ಫೋಬ್ ಲಿಚ್‌ಫೀಲ್ಡ್ ಕೂಡ 27 ರನ್‌ಗಳ ಕೊಡುಗೆಯನ್ನು ನೀಡಿದರು. ಡೆಲ್ಲಿ ಪರ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ ಮಾರಿಜನ್ ಕಾಪ್ ಹಾಗೂ ಶಫಾಲಿ ವರ್ಮಾ ತಲಾ ಎರಡೆರಡು ವಿಕೆಟ್ ಕಿತ್ತರೆ, ನಂದಿನ ಶರ್ಮಾ,ಸ್ನೇಹಾ ರಾಣಾ ಹಾಗೂ ಶ್ರೀ ಚರಣಿ ತಲಾ ಒಂದೊಂದು ವಿಕೆಟ್ ಕಿತ್ತರು.