ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs SA: ಕೊಹ್ಲಿ, ಗಾಯಕ್ವಾಡ್‌ ಶತಕಗಳು ವ್ಯರ್ಥ, ಭಾರತಕ್ಕೆ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ!

IND vs SA 2nd ODI Highlights: ವಿರಾಟ್‌ ಕೊಹ್ಲಿ ಹಾಗೂ ಋತುರಾಜ್‌ ಗಾಯಕ್ವಾಡ್‌ ಶತಕಗಳ ಹೊರತಾಗಿಯೂ ಭಾರತ ತಂಡ, ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 4 ವಿಕೆಟ್‌ಗಳಿಂದ ಸೋಲು ಅನುಭವಿಸಿತು. ಈ ಪಂದ್ಯದ ಗೆಲುವಿನ ಮೂಲಕ ಹರಿಣ ಪಡೆ ಏಕದಿನ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿದೆ.

ಎರಡನೇ ಒಡಿಐನಲ್ಲಿ ಭಾರತಕ್ಕೆ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ!

ಭಾರತ ವಿರುದ್ಧ ದಕ್ಷಿಣ ಆಫ್ರಿಕಾ ತಂಡಕ್ಕೆ 4 ವಿಕೆಟ್‌ ಜಯ. -

Profile
Ramesh Kote Dec 3, 2025 10:26 PM

ರಾಯ್ಪುರ: ವಿರಾಟ್‌ ಕೊಹ್ಲಿ (Virat kohli) ಹಾಗೂ ಋತುರಾಜ್‌ ಗಾಯಕ್ವಾಡ್‌ (Ruturaj Gaikwad) ಅವರ ಶತಕಗಳ ಹೊರತಾಗಿಯೂ ಭಾರತ ತಂಡ, ಬೌಲಿಂಗ್‌ ವೈಫಲ್ಯದಿಂದ ಎರಡನೇ ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಎದುರು 4 ವಿಕೆಟ್‌ಗಳ ಸೋಲು ಅನುಭವಿಸಿತು. ಭಾರತ ನೀಡಿದ್ದ 359 ರನ್‌ಗಳ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ, ಏಡೆನ್‌ ಮಾರ್ಕ್ರಮ್‌ (Aiden Markram) ಶತಕ, ಡೆವಾಲ್ಡ್‌ ಬ್ರೆವಿಸ್‌ ಹಾಗೂ ಮ್ಯಾಥ್ಯೂ ಬ್ರೀಟ್ಜ್ಕೆ ಅವರ ಅರ್ಧಶತಕಗಳ ಬಲದಿಂದ 49.2 ಓವರ್‌ಗಳಿಗೆ 6 ವಿಕೆಟ್‌ ಕಳೆದುಕೊಂಡು ಗೆಲುವು ಸಾಧಿಸಿತು. ಆ ಮೂಲಕ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿ ತವರಿನಾಚೆ ಅತ್ಯಂತ ದೊಡ್ಡ ಮೊತ್ತವನ್ನು ಚೇಸ್‌ ಮಾಡಿದ ತಂಡ ಎಂಬ ಸಾಧನೆಗೆ ಹರಿಣ ಪಡೆ ಭಾಜನವಾಯಿತು. ಇನ್ನು ಮೂರನೇ ಹಾಗೂ ಸರಣಿ ನಿರ್ಣಾಯಕ ಪಂದ್ಯ ಡಿ 6 ರಂದು ವಿಶಾಖಪಟ್ಟಣಂನಲ್ಲಿ ನಡೆಯಲಿದೆ.

ಬುಧವಾರ ಇಲ್ಲಿನ ಶಾಹೀದ್‌ ವೀರ್‌ ನಾರಾಯಣ್‌ ಸಿಂಗ್‌ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಕೊನೆಯ ಓವರ್‌ವರೆಗೂ ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವೆ ಗೆಲುವಿಗಾಗಿ ಪೈಪೋಟಿ ನಡೆದಿತ್ತು. ಆದರೆ, ದ್ವಿತೀಯ ಇನಿಂಗ್ಸ್‌ನಲ್ಲಿ ಇಬ್ಬನಿಯ ಕಾರಣ ಭಾರತದ ಬೌಲರ್‌ಗಳು ಚೆಂಡಿನ ಮೇಲೆ ಹೆಚ್ಚಿನ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಬೃಹತ್‌ ಮೊತ್ತದ ಗುರಿ ನೀಡಿದ ಹೊರತಾಗಿಯೂ ಎದುರಾಳಿ ತಂಡವನ್ನು ಕಟ್ಟಿ ಹಾಕಲು ಸಾಧ್ಯವಾಗಲಿಲ್ಲ.

IND vs SA: ಎರಡನೇ ಪಂದ್ಯದಲ್ಲಿ ಶತಕ ಬಾರಿಸಿ ವಿಶೇಷ ದಾಖಲೆ ಬರೆದ ಏಡೆನ್‌ ಮಾರ್ಕ್ರಮ್‌!

ಏಡೆನ್‌ ಮಾರ್ಕ್ರಮ್‌ ಭರ್ಜರಿ ಶತಕ

ದಕ್ಷಿಣ ಆಫ್ರಿಕಾ ತಂಡದ ಚೇಸಿಂಗ್‌ನಲ್ಲಿ ಕ್ಬಿಂಟನ್‌ ಡಿ ಕಾಕ್‌ ಬಿಟ್ಟರೆ ಇನ್ನುಳಿದ ಎಲ್ಲಾ ಬ್ಯಾಟ್ಸ್‌ಮನ್‌ಗಳು ಉಪಯುಕ್ತ ಕೊಡುಗೆ ನೀಡಿದರು. ವಿಶೇಷವಾಗಿ ಆರಂಭಿಕ ಏಡೆನ್‌ ಮಾರ್ಕ್ರಮ್‌ 98 ಎಸೆತಗಳಲ್ಲಿ 110 ರನ್‌ ಗಳಿಸಿ ದಕ್ಷಿಣ ಆಫ್ರಿಕಾ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಭಾರತದಲ್ಲಿ ಒಡಿಐ ಶತಕ ಸಿಡಿಸಿದ ಮೊದಲ ಆಫ್ರಿಕಾ ಬ್ಯಾಟರ್‌ ಎಂಬ ಸಾಧನೆಗೆ ಮಾರ್ಕ್ರಮ್‌ ಭಾಜನರಾದರು ಹಾಗೂ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಸ್ವೀಕರಿಸಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ 34 ಎಸೆತಗಳಲ್ಲಿ ಡೆವಾಲ್ಡ್‌ ಬ್ರೆವಿಸ್‌ 54 ರನ್‌ ಗಳಿಸಿ ತಮ್ಮ ತಂಡದ ಮೇಲಿನ ಒತ್ತಡವನ್ನು ಕಡಿಮೆ ಮಾಡಿದರು. ಮ್ಯಾಥ್ಯೂ ಬ್ರೀಟ್ಜ್ಕೆ ( 68 ರನ್‌) ಕೂಡ ಉಪಯುಕ್ತ ಕಾಣಿಕೆ ನೀಡಿದರು. ನಾಯಕ ತೆಂಬಾ ಬವೂಮ ಕೂಡ 46 ರನ್‌ ಗಳಿಸಿದರು. ಇನ್ನು ಕೊನೆಯಲ್ಲಿ ಒತ್ತಡದ ಸನ್ನಿವೇಶದಲ್ಲಿ 15 ಎಸೆತಗಳಲ್ಲಿ 29 ರನ್‌ ಗಳಿಸಿದ ಕಾರ್ಬಿನ್‌ ಬಾಷ್‌ ತಂಡವನ್ನು ಗೆಲುವಿನ ದಡ ಸೇರಿಸಿದರು.

ಭಾರತದ ಪರ ಅರ್ಷದೀಪ್‌ ಸಿಂಗ್‌ ಹಾಗೂ ಪ್ರಸಿಧ್‌ ಕೃಷ್ಣ ತಲಾ ಎರಡೆರಡು ವಿಕೆಟ್‌ಗಳನ್ನು ಕಬಳಿಸಿದರು.



358 ರನ್‌ ಕಲೆ ಹಾಕಿದ್ದ ಭಾರತ

ಇದಕ್ಕೂ ಮುನ್ನ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾಗಿದ್ದ ಭಾರತ ತಂಡದ ಪರ ವಿರಾಟ್‌ ಕೊಹ್ಲಿ ಹಾಗೂ ಋತುರಾಜ್‌ ಗಾಯಕ್ವಾಡ್‌ ಶತಕಗಳನ್ನು ಬಾರಿಸಿದ್ದರು. ಅಲ್ಲದೆ ನಾಯಕ ಕೆಎಲ್‌ ರಾಹುಲ್‌ ಅರ್ಧಶತಕವನ್ನು ಸಿಡಿಸಿದ್ದರು. ಆ ಮೂಲಕ ಆತಿಥೇಯ ಭಾರತ ತಂಡ, ತನ್ನ ಪಾಲಿನ 50 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 358 ರನ್‌ಗಳನ್ನು ಗಳಿಸಿತು ಹಾಗೂ ಎದುರಾಳಿ ದಕ್ಷಿಣ ಆಫ್ರಿಕಾ ತಂಡಕ್ಕೆ 359 ರನ್‌ಗಳ ಗುರಿಯನ್ನು ನೀಡಿತ್ತು.

IND vs SA: 53ನೇ ಒಡಿಐ ಶತಕ ಸಿಡಿಸಿ ಜಿಂಕೆಯಂತೆ ಜಿಗಿದು ಸಂಭ್ರಮಿಸಿದ ವಿರಾಟ್‌ ಕೊಹ್ಲಿ!

ಕೊಹ್ಲಿ-ಗಾಯಕ್ವಾಡ್‌ ಜುಗಲ್‌ಬಂದಿ

ಭಾರತ ತಂಡದ ಪರ ಇನಿಂಗ್ಸ್‌ ಆರಂಭಿಸಿದ ರೋಹಿತ್‌ ಶರ್ಮಾ ಹಾಗೂ ಯಶಸ್ವಿ ಜೈಸ್ವಾಲ್‌ ಅವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ. ಈ ಇಬ್ಬರೂ ಕ್ರಮವಾಗಿ 14 ಮತ್ತು 22 ರನ್‌ಗಳನ್ನು ಗಳಿಸಿ ವಿಕೆಟ್‌ ಒಪ್ಪಿಸಿದರು. ಈ ವೇಳೆ ಮೂರನೇ ವಿಕೆಟ್‌ಗೆ ಜೊತೆಯಾದ ವಿರಾಟ್‌ ಕೊಹ್ಲಿ ಹಾಗೂ ಋತುರಾಜ್‌ ಗಾಯಕ್ವಾಡ್‌ ಅವರು 195 ರನ್‌ಗಳ ದಾಖಲೆಯ ಜೊತೆಯಾಟನ್ನು ಆಡಿ ತಂಡದ ಮೊತ್ತವನ್ನು 250ರ ಗಡಿಯನ್ನು ದಾಟಿಸಿದರು.

IND vs SA: ಚೊಚ್ಚಲ ಒಡಿಐ ಶತಕ ಬಾರಿಸಿದ ಋತುರಾಜ್‌ ಗಾಯಕ್ವಾಡ್‌!

ಋತುರಾಜ್‌ ಗಾಯಕ್ವಾಡ್‌ ಚೊಚ್ಚಲ ಶತಕ

ಮೊದಲನೇ ಪಂದ್ಯದಲ್ಲಿ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ಋತುರಾಜ್‌ ಗಾಯಕ್ವಾಡ್‌, ಎರಡನೇ ಪಂದ್ಯದಲ್ಲಿ ಚೊಚ್ಚಲ ಶತಕ ಸಿಡಿಸುವ ಮೂಲಕ ಭರ್ಜರಿಯಾಗಿ ಕಮ್‌ಬ್ಯಾಕ್‌ ಮಾಡಿದರು. ಅವರು ಆಡಿದ 83 ಎಸೆತಗಳಲ್ಲಿ ಎರಡು ಸಿಕ್ಸರ್‌ ಹಾಗೂ 12 ಬೌಂಡರಿಗಳೊಂದಿಗೆ 105 ರನ್‌ಗಳನ್ನು ಕಲೆ ಹಾಕಿದರು. ಆ ಮೂಲಕ ತಮಗೆ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಂಡರು.



53ನೇ ಶತಕ ಬಾರಿಸಿದ ವಿರಾಟ್‌ ಕೊಹ್ಲಿ

ಇನ್ನು ಮೊದಲನೇ ಪಂದ್ಯದಲ್ಲಿ ಶತಕ ಸಿಡಿಸಿದ್ದ ವಿರಾಟ್‌ ಕೊಹ್ಲಿ ಎರಡನೇ ಪಂದ್ಯದಲ್ಲಿಯೂ ಶತಕವನ್ನು ಪೂರ್ಣಗೊಳಿಸಿದರು. ಅವರು ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್‌ ಮಾಡಿದರು. ಅವರು ಆಡಿದ 93 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ 7 ಬೌಂಡರಿಗಳೊಂದಿಗೆ 102 ರನ್‌ಗಳನ್ನು ಗಳಿಸಿದರು. ಆ ಮೂಲಕ ತಮ್ಮ ಒಡಿಐ ವೃತ್ತಿ ಜೀವನದಲ್ಲಿ 53ನೇ ಶತಕವನ್ನು ಸಿಡಿಸಿದರು. ಇದು ಅವರ ಸತತ ಎರಡನೇ ಶತಕ. ಇನ್ನು ಕೊನೆಯಲ್ಲಿ ಸ್ಪೋಟಕ ಬ್ಯಾಟಿಂಗ್‌ ನಡೆಸಿದ ನಾಯಕ ಕೆಎಲ್‌ ರಾಹುಲ್‌, 43 ಎಸೆತಗಳಲ್ಲಿ 66 ರನ್‌ ಗಳಿಸಿದರೆ, ರವೀಂದ್ರ ಜಡೇಜಾ 24 ರನ್‌ ಗಳಿಸಿದ್ದರು.

ಪ್ರವಾಸಿ ತಂಡದ ಪರ ಮಾರ್ಕೊ ಯೆನ್ಸನ್‌ ಎರಡು ವಿಕೆಟ್‌ ಕಿತ್ತರೆ, ಲುಂಗಿ ಎನ್ಗಿಡಿ ಮತ್ತು ನಂಡ್ರೆ ಬರ್ಗರ್‌ ತಲಾ ಒಂದೊಂದು ವಿಕೆಟ್‌ ಪಡೆದರು.