ನವದೆಹಲಿ: ಮುಂಬರುವ 2026ರ ಟಿ20 ವಿಶ್ವಕಪ್ (T20 World Cup 2026) ಟೂರ್ನಿಗೂ ಮುನ್ನ ಪಾಕಿಸ್ತಾನ (Pakistan) ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ವಿಶ್ವದ ಎರಡನೇ ಶ್ರೇಯಾಂಕದ ಆಸ್ಟ್ರೇಲಿಯಾ (Australia) ತಂಡಕ್ಕೆ ಭಾರಿ ಹಿನ್ನಡೆಯನ್ನು ಅನುಭವಿಸಿದೆ. ವಿದೇಶಿ ನೆಲದಲ್ಲಿ ಪಾಕಿಸ್ತಾನದ ವಿರುದ್ಧ ಆಡಿದ ಸರಣಿಯಲ್ಲಿ ಆಸ್ಟ್ರೇಲಿಯಾ 0–3 ಅಂತರದಿಂದ ಸಂಪೂರ್ಣ ವೈಟ್‌ವಾಷ್ ಆಘಾತ ಅನುಭವಿಸಿತು. ಅದರಲ್ಲಿ ಆರಂಭಿಕ ಎರಡು ಪಂದ್ಯಗಳಲ್ಲಿ ಪ್ರವಾಸಿ ಆಸ್ಟ್ರೇಲಿಯಾ ತಂಡ ಕ್ರಮವಾಗಿ 108 ರನ್ ಹಾಗೂ 96 ರನ್‌ಗಳಿಗೆ ಆಲ್‌ಔಟ್ ಆಗಿ ಹೀನಾಯ ಸೋಲು ಅನುಭವಿಸಿತ್ತು.
ಈ ಸೋಲುಗಳು ನಿಧಾನ ಹಾಗೂ ಕಡಿಮೆ ಬೌನ್ಸ್ ಹೊಂದಿರುವ ಉಪಖಂಡದ ಪಿಚ್‌ಗಳಲ್ಲಿ ಆಸ್ಟ್ರೇಲಿಯಾದ ದೌರ್ಬಲ್ಯ ಮತ್ತು ಸಂಕಷ್ಟಗಳನ್ನು ಮತ್ತೊಮ್ಮೆ ಬಹಿರಂಗಪಡಿಸಿವೆ. ಮೊಹಮ್ಮದ್ ನವಾಜ್, ಉಸ್ಮಾನ್ ತಾರಿಕ್ ಮತ್ತು ಅಬ್ರಾರ್ ಅಹ್ಮದ್ ಅವರು ಆಸ್ಟ್ರೇಲಿಯಾದ ಬ್ಯಾಟಿಂಗ್ ಕ್ರಮವನ್ನು ಸಂಪೂರ್ಣವಾಗಿ ಉರುಳಿದರು. ಮೂರು ಪಂದ್ಯಗಳಲ್ಲಿಯೂ ಪ್ರವಾಸಿ ತಂಡದ ಬ್ಯಾಟ್ಸ್‌ಮನ್‌ಗಳು ಇಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳಲು ವಿಫಲವಾದರು. ಜಾಗತಿಕ ಟೂರ್ನಿಗೆ ಇನ್ನೂ ಕೆಲವೇ ವಾರಗಳು ಬಾಕಿ ಇರುವ ವೇಳೆ ಈ ಸರಣಿಯಲ್ಲಿ ಆಸ್ಟ್ರೇಲಿಯಾ ತಂಡದ ಸಮತೋಲನ ಮತ್ತು ಸಿದ್ಧತೆ ಕುರಿತಾಗಿ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದೆ.
ಭಾರೀ ಸೋಲುಗಳ ಹೊರತಾಗಿಯೂ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಫಲಿತಾಂಶದ ಮಹತ್ವವನ್ನು ಬಿಟ್ಟು, 2026ರ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ತಲುಪಲು ವಿಷಯದಲ್ಲಿ ತಮ್ಮ ತಂಡವನ್ನು ಬೆಂಬಲಿಸಿದ್ದಾರೆ.
ʻಕಣ್ಣೀರಿಡುತ್ತಿದ್ದ ನನ್ನನ್ನು ವಿರಾಟ್ ಕೊಹ್ಲಿ ಸಮಾಧಾನ ಪಡಿಸಿದ್ದರುʼ: 2021ರ ಘಟನೆ ನೆನೆದ ಇಶಾನ್ ಕಿಶನ್!
"ತಂಡವನ್ನು ನೋಡಿದರೆ, ಇತರ ಯಾವುದೇ ತಂಡದಷ್ಟೇ ಅವರಿಗೆ (ಆಸ್ಟ್ರೇಲಿಯಾ) ಉತ್ತಮ ಅವಕಾಶಗಳಿವೆ ಎಂದು ನನಗೆ ಅನಿಸುತ್ತದೆ,” ಎಂದು ಐಸಿಸಿ ಜೊತೆ ಹೇಳಿದ ರಿಕಿ ಪಾಂಟಿಂಗ್, “ಪರಿಸ್ಥಿತಿಗಳು, ಪ್ರತಿಭೆ ಮತ್ತು ಅವರು ಆಯ್ಕೆ ಮಾಡಿಕೊಂಡಿರುವ ಆಟಗಾರರ ಗುಂಪನ್ನು ಗಮನಿಸಿದರೆ, ಭಾರತ ತಂಡ ಟಿ20 ವಿಶ್ವಕಪ್ ಗೆಲ್ಲುವ ನೆಚ್ಚಿನ ತಂಡವಾಗಿ ಟೂರ್ನಿಯನ್ನು ಆರಂಭಿಸಬಹುದು. ಅವರನ್ನು ಸೋಲಿಸುವುದು ಕಷ್ಟ. ಆದರೆ ಸೆಮಿಫೈನಲ್ ಹಂತಕ್ಕೆ ಬಂದಾಗ ಆಸ್ಟ್ರೇಲಿಯಾ ತಂಡ ಅಲ್ಲಿ ಇದ್ದೇ ಇರುತ್ತದೆ ಎಂದು ನಾನು ನಂಬುತ್ತೇನೆ,” ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಆಸ್ಟ್ರೇಲಿಯಾ ತಂಡದ ವಿಶ್ವಕಪ್ ತಯಾರಿಯು ಗಾಯದ ಸಮಸ್ಯೆಗಳ ಕಾರಣದಿಂದ ಇನ್ನಷ್ಟು ಕಠಿಣವಾಗಿದೆ. ವೇಗದ ಬೌಲರ್ ಪ್ಯಾಟ್ ಕಮಿನ್ಸ್ ಟೂರ್ನಿಯಿಂದ ಹೊರಗುಳಿದಿರುವುದು ತಂಡಕ್ಕೆ ದೊಡ್ಡ ಹೊಡೆತವಾಗಿದೆ. ಇದಲ್ಲದೆ, ಸ್ಪಿನ್ ವಿಭಾಗದಲ್ಲಿ ಪರಿಣತಿ ಹೊಂದಿದ ವಿಶೇಷ ಆಟಗಾರರ ಕೊರತೆಯೂ ತಂಡದ ಆಯ್ಕೆ ಬಗ್ಗೆ ಚರ್ಚೆಗೆ ಕಾರಣವಾಗಿದೆ. ಉತ್ತಮ ಫಾರ್ಮ್‌ನಲ್ಲಿರುವ ಸ್ಟೀವ್ ಸ್ಮಿತ್ ಅವರನ್ನು ತಂಡದಲ್ಲಿ ಸೇರಿಸದಿರುವುದು ಕೂಡ ಗಮನ ಸೆಳೆದಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು ಬ್ಯಾನ್ ಮಾಡಿದ ಐಸಿಸಿ? ಇದರ ಅಸಲಿ ಸತ್ಯ ಇಲ್ಲಿದೆ!
ವಿಶ್ವಕಪ್ ಟೂರ್ನಿಗೂ ಮುನ್ನ ಗಾಯಗಳು ಆಸ್ಟ್ರೇಲಿಯಾ ತಂಡದ ಅತಿದೊಡ್ಡ ಚಿಂತೆಯಾಗಿದೆ ಎಂದು ಪಾಂಟಿಂಗ್ ಒಪ್ಪಿಕೊಂಡಿದ್ದಾರೆ. ಆದರೆ ಅನುಭವಿ ಆಲ್‌ರೌಂಡರ್‌ಗಳಾದ ಮಾರ್ಕಸ್ ಸ್ಟೋಯಿನಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್, ಜೊತೆಗೆ ಯುವ ಆಟಗಾರ ಕೂಪರ್ ಕೊನೊಲಿ ತಂಡದ ಹೊಣೆಗಾರಿಕೆಯನ್ನು ಹೊರುವರು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.
ಆಸ್ಟ್ರೇಲಿಯಾ ಫೆಬ್ರವರಿ 11ರಂದು ಐರ್ಲೆಂಡ್ ವಿರುದ್ಧ ತಮ್ಮ ಅಭಿಯಾನವನ್ನು ಆರಂಭಿಸಲಿದೆ. ಗುಂಪು ಹಂತದ ಎಲ್ಲಾ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿದ್ದು, ಆರ್. ಪ್ರೇಮದಾಸ ಸ್ಟೇಡಿಯಂ ಮತ್ತು ಪಲ್ಲೇಕೆಲೆ ಮೈದಾನಗಳ ಪಿಚ್‌ಗಳು ಸ್ಪಿನ್‌ಗೆ ನೆರವಾಗುವ ಹಾಗೆಯೇ ಅಸ್ಥಿರ ಬೌನ್ಸ್ ನೀಡುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ.
2026ರ ಐಸಿಸಿ ವಿಶ್ವಕಪ್ ಟೂರ್ನಿಗೆ ಆಸ್ಟ್ರೇಲಿಯಾ ತಂಡ
ಮಿಚೆಲ್ ಮಾರ್ಷ್ (ನಾಯಕ), ಕ್ಸಿವಿಯರ್ ಬಾರ್ಲೆಟ್, ಕೂಪರ್ ಕನೋಲಿ, ಟಿಮ್ ಡೇವಿಡ್, ಬೆನ್ ದ್ವಾರುಶಿಯಸ್, ಕ್ಯಾಮೆರಾನ್ ಗ್ರೀನ್, ನೇಥನ್ ಎಲ್ಲಿಸ್, ಜಾಶ್ ಹೇಝಲ್‌ವುಡ್, ಟ್ರಾವಿಸ್ ಹೆಡ್, ಜಾಶ್ ಇಂಗ್ಲಿಸ್, ಮ್ಯಾಟ್ ಕುಹ್ನೆಮನ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಟ್ ರೆನ್ಷಾ, ಮಾರ್ಕಸ್ ಸ್ಟೋಯ್ನಿಸ್, ಆಡಂ ಝಾಂಪ.