ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IPL 2027: ಲಖನೌ ಸೂಪರ್‌ ಜಯಂಟ್ಸ್‌ನ ಮುಂದಿನ ನಾಯಕನ ಬಗ್ಗೆ ಸುಳಿವು ನೀಡಿದ ದಿಗ್ವೇಶ್‌ ರಾಠಿ!

ರಿಷಭ್ ಪಂತ್ ಡೆಲ್ಲಿ ಕ್ಯಾಪಿಟಲ್ಸ್‌ಗೆ ಮರಳಿದ ಹಿನ್ನೆಲೆಯಲ್ಲಿ ಲಖನೌ ಸೂಪರ್ ಜೈಂಟ್ಸ್ ನೂತನ ನಾಯಕನ ಹುಡುಕಾಟದಲ್ಲಿದೆ. ನಿಕೋಲಸ್ ಪೂರನ್ ಹೆಸರು ಮುಂಚೂಣಿಯಲ್ಲಿದ್ದು, ದಿಗ್ವೇಶ್ ರಾಠಿ ಅವರ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಮಿಚೆಲ್ ಮಾರ್ಷ್, ಏಡನ್ ಮಾರ್ಕ್ರಮ್ ಮತ್ತು ಸ್ಯಾಮ್ ಕರನ್ ಕೂಡ ಸಂಭಾವ್ಯ ಆಯ್ಕೆಗಳಾಗಿದ್ದಾರೆ.

ಎಲ್‌ಎಸ್‌ಜಿಯ ಮುಂದಿನ ನಾಯಕನ ಬಗ್ಗೆ ಸುಳಿವು ನೀಡಿದ ದಿಗ್ವೇಶ್‌ ರಾಠಿ.

ಲಖನೌ: ಮುಂದಿನ 2027ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಗೂ (IPL 2027) ಮುನ್ನ ಲಖನೌ ಸೂಪರ್ ಜಯಂಟ್ಸ್ (LSG) ತಂಡದ ನಾಯಕತ್ವದಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. ರಿಷಭ್ ಪಂತ್ ಟ್ರೇಡ್ ಒಪ್ಪಂದದ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಮರಳಿರುವ ಹಿನ್ನೆಲೆಯಲ್ಲಿ ಲಖನೌ ಫ್ರಾಂಚೈಸಿ ನೂತನ ನಾಯಕನ ಹುಡುಕಾಟದಲ್ಲಿದೆ. ಇದರ ನಡುವೆ ವೆಸ್ಟ್ ಇಂಡೀಸ್‌ನ ಸ್ಫೋಟಕ ಬ್ಯಾಟರ್ ನಿಕೋಲಸ್ ಪೂರನ್ ತಂಡದ ಮುಂದಿನ ನಾಯಕನಾಗಬಹುದು ಎಂಬ ಚರ್ಚೆ ಶುರುವಾಗಿದೆ.

ಸೈಯದ್ ಮುಷ್ತಾಕ್ ಅಲಿ ಟ್ರೋಫಿ ವೇಳೆ ಅಭಿಮಾನಿಗಳೊಂದಿಗೆ ನಡೆದ ಸಂವಾದದಲ್ಲಿ ಲಖನೌ ತಂಡದ ಸ್ಪಿನ್ನರ್ ದಿಗ್ವೇಶ್ ರಾಠಿ ಈ ಕುರಿತು ಸುಳಿವು ನೀಡಿದ್ದಾರೆ ಎನ್ನಲಾಗಿದೆ. ತಂಡದ ಮುಂದಿನ ನಾಯಕ ಯಾರು ಎಂಬ ಪ್ರಶ್ನೆಗೆ ರಾಠಿ, ನಿಕೋಲಸ್ ಪೂರನ್ ಅವರ ಹೆಸರನ್ನು ಹೇಳಿದ್ದಾರೆ. ಈ ಹೇಳಿಕೆ ಅಭಿಮಾನಿಗಳಲ್ಲಿ ನಾಯಕತ್ವದ ಬಗ್ಗೆ ಕುತೂಹಲ ಮೂಡಿಸಿದೆ. ಆದರೆ, ನಾಯಕತ್ವದ ಕುರಿತು ಲಖನೌ ಫ್ರಾಂಚೈಸಿ ಈವರೆಗೆ ಯಾವುದೇ ಅಧಿಕೃತ ಘೋಷಣೆ ಮಾಡಿಲ್ಲ. ರಾಠಿ ಅವರ ಹೇಳಿಕೆಯಿಂದ ಪೂರನ್ ನಾಯಕನಾಗುವ ಸಾಧ್ಯತೆ ಕುರಿತ ಚರ್ಚೆಗಳು ಮತ್ತಷ್ಟು ತೀವ್ರಗೊಂಡಿವೆ.

IPL 2027 Mini Auction: ಆಟಗಾರರ ರಿಲೀಸ್‌ ಬಳಿಕ ತಂಡಗಳ ಖಾತೆಯಲ್ಲಿ ಎಷ್ಟು ಹಣವಿದೆ? ಆರ್‌ಸಿಬಿ ಪರ್ಸ್‌ ಹೇಗಿದೆ?

ಲಖನೌ ತಂಡದ ಪ್ರಮುಖ ರನ್ ಸರದಾರ ಪೂರನ್

ನಿಕೋಲಸ್ ಪೂರನ್ 2023ರಿಂದ ಲಖನೌ ಸೂಪರ್ ಜಯಂಟ್ಸ್‌ ತಂಡದ ಭಾಗವಾಗಿದ್ದಾರೆ. 2025ರ ಐಪಿಎಲ್ ಮೆಗಾ ಹರಾಜಿಗೂ ಮುನ್ನ ಅವರನ್ನು 21 ಕೋಟಿ ರು. ಗಳ ಮೊತ್ತಕ್ಕೆ ಫ್ರಾಂಚೈಸಿ ರಿಟೇನ್ ಮಾಡಿಕೊಂಡಿತ್ತು. ಲಖನೌ ತಂಡದ ಐಪಿಎಲ್ ಇತಿಹಾಸದಲ್ಲೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎಂಬ ದಾಖಲೆ ಕೂಡ ಪೂರನ್ ಹೆಸರಿನಲ್ಲಿದೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ತಂಡವನ್ನು ಮುನ್ನಡೆಸಿರುವ ಅನುಭವ ಪೂರನ್ ಅವರಿಗಿದೆ. ಅಲ್ಲದೆ, ಎಂಐ ನ್ಯೂಯಾರ್ಕ್ ಮತ್ತು ಎಂಐ ಎಮಿರೇಟ್ಸ್‌ನಂತಹ ಫ್ರಾಂಚೈಸಿ ತಂಡಗಳಿಗೂ ನಾಯಕತ್ವ ವಹಿಸಿದ್ದಾರೆ. ಹೀಗಾಗಿ ಲಖನೌ ತಂಡದ ನಾಯಕತ್ವಕ್ಕೆ ಅವರು ಪ್ರಮುಖ ಆಯ್ಕೆಯಾಗಬಹುದು ಎನ್ನಲಾಗಿದೆ.

IPL 2027: ಮಿನಿ ಹರಾಜಿಗೆ ಬಿಡುಗಡೆಯಾದ ಟಾಪ್‌ 10 ಸ್ಟಾರ್‌ ಆಟಗಾರರ ವಿವರ!

ನಾಯಕತ್ವದ ರೇಸ್‌ನಲ್ಲಿ ಮಾರ್ಷ್, ಮಾರ್ಕ್ರಮ್, ಸ್ಯಾಮ್ ಕರನ್

ನಿಕೋಲಸ್ ಪೂರನ್ ಮಾತ್ರವಲ್ಲದೆ, ಆಸ್ಟ್ರೇಲಿಯಾದ ಮಿಚೆಲ್ ಮಾರ್ಷ್ ಮತ್ತು ದಕ್ಷಿಣ ಆಫ್ರಿಕಾದ ಏಡನ್ ಮಾರ್ಕ್ರಮ್ ಕೂಡ ನಾಯಕತ್ವದ ರೇಸ್‌ನಲ್ಲಿದ್ದಾರೆ. ಇಬ್ಬರೂ ತಮ್ಮ ದೇಶಗಳ ರಾಷ್ಟ್ರೀಯ ತಂಡಗಳನ್ನು ಮುನ್ನಡೆಸಿದ ಅನುಭವ ಹೊಂದಿದ್ದಾರೆ. ಇಂಗ್ಲೆಂಡ್‌ನ ಆಲ್‌ರೌಂಡರ್ ಸ್ಯಾಮ್ ಕರನ್ ಕೂಡ ನಾಯಕತ್ವದ ಸ್ಪರ್ಧೆಗೆ ಪ್ರವೇಶಿಸುವ ಸಾಧ್ಯತೆಯಿದೆ. ರಾಜಸ್ಥಾನ್ ರಾಯಲ್ಸ್ ತಂಡದಿಂದ ಲಖನೌಗೆ ಸೇರ್ಪಡೆಯಾಗಿರುವ ಕರನ್, ಈ ಹಿಂದೆ ಐಪಿಎಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವ ವಹಿಸಿದ್ದರು. ಅಲ್ಲದೆ, 2026ರಲ್ಲಿ ಡೆಸರ್ಟ್ ವೈಪರ್ಸ್ ತಂಡಕ್ಕೆ ILT20 ಪ್ರಶಸ್ತಿ ಗೆಲ್ಲಿಸಿಕೊಟ್ಟಿದ್ದರು.

ರಿಷಭ್ ಪಂತ್ ನಿರ್ಗಮನದಿಂದ ಲಖನೌ ತಂಡದಲ್ಲಿ ನಾಯಕತ್ವದ ಸ್ಥಾನ ಖಾಲಿಯಾಗಿದೆ. ತಂಡದಲ್ಲಿ ಅಂತಾರಾಷ್ಟ್ರೀಯ ಮಟ್ಟದ ನಾಯಕತ್ವದ ಅನುಭವ ಹೊಂದಿರುವ ಹಲವು ಆಟಗಾರರಿರುವುದರಿಂದ, 2027ರ ಐಪಿಎಲ್‌ಗೂ ಮುನ್ನ ಫ್ರಾಂಚೈಸಿ ಯಾರಿಗೆ ನಾಯಕತ್ವದ ಹೊಣೆ ನೀಡಲಿದೆ ಎಂಬುದು ಕುತೂಹಲ ಮೂಡಿಸಿದೆ.