ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ʻಕೇವಲ ಎರಡೇ ದಿನದಲ್ಲಿ ನಾಲ್ಕನೇ ಟೆಸ್ಟ್‌ ಅಂತ್ಯʼ: ಎಂಸಿಜಿ ಪಿಚ್‌ ಅನ್ನು ಟೀಕಿಸಿದ ದಿನೇಶ್‌ ಕಾರ್ತಿಕ್‌!

ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಹಾಗೂ ಬಾಕ್ಸಿಂಗ್‌ ಡೇ ಟೆಸ್ಟ್ ಪಂದ್ಯ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ನಡೆಯಿತು. ಆದಾಗ್ಯೂ, ಆ ಟೆಸ್ಟ್ ಕೇವಲ ಎರಡೇ ದಿನಗಳಲ್ಲಿ ಕೊನೆಗೊಂಡಿತು. ಇಂಗ್ಲೆಂಡ್ ನಾಲ್ಕು ವಿಕೆಟ್‌ಗಳಿಂದ ಪಂದ್ಯವನ್ನು ಗೆದ್ದುಕೊಂಡಿತು. ಆದರೆ, ಈ ಪಂದ್ಯದ ಬಳಿಕ ಎಂಸಿಜಿ ಮೈದಾನದ ಪಿಚ್‌ ಅನ್ನು ಮಾಜಿ ಕ್ರಿಕೆಟಿಗರಾದ ದಿನೇಶ್‌ ಕಾರ್ತಿಕ್‌ ಹಾಗೂ ಕೆವಿನ್‌ ಪೀಟರ್ಸನ್‌ ಟೀಕಿಸಿದ್ದಾರೆ.

ಎಂಸಿಜಿ ಪಿಚ್‌ ಅನ್ನು ಟೀಕಿಸಿದ ದಿನೇಶ್‌ ಕಾರ್ತಿಕ್‌, ಪೀಟರ್ಸನ್‌.

ನವದೆಹಲಿ: ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ (ENG vs AUS) ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ (ನಾಲ್ಕನೇ ಟೆಸ್ಟ್) ಪಂದ್ಯದ ಮೊದಲ ದಿನ ಬೌಲರ್‌ಗಳು ಪ್ರಾಬಲ್ಯ ಸಾಧಿಸಿದ್ದರು. ಬೌಲಿಂಗ್‌ಗೆ ಅನುಕೂಲಕರವಾದ ಮೆಲ್ಬೋರ್ನ್ ಕ್ರಿಕೆಟ್‌ ಗ್ರೌಂಡ್‌ ಪಿಚ್‌ನಲ್ಲಿ ಮೊದಲ ದಿನದಂದು 20 ವಿಕೆಟ್‌ಗಳು ಪತನವಾದವು. ಇದರ ನಂತರ ಇಂಗ್ಲೆಂಡ್‌ನ ದಂತಕಥೆ ಕೆವಿನ್ ಪೀಟರ್ಸನ್ (Kevin pietersen) ಮತ್ತು ಮಾಜಿ ಭಾರತೀಯ ವಿಕೆಟ್‌ ಕೀಪರ್‌ ದಿನೇಶ್ ಕಾರ್ತಿಕ್ (Dinesh Karthik) ಮೆಲ್ಬೋರ್ನ್ ಕ್ರಿಕೆಟ್‌ ಗ್ರೌಂಡ್‌ನ ಪಿಚ್ ಅನ್ನು ಟೀಕಿಸಿದ್ದಾರೆ. ಭಾರತವನ್ನು ಉದಾಹರಣೆಯಾಗಿ ಉಲ್ಲೇಖಿಸಿ ಕೆವಿನ್ ಪೀಟರ್ಸನ್ ಆಸ್ಟ್ರೇಲಿಯಾವನ್ನು ಖಂಡಿಸಿದ್ದಾರೆ.

ಮೆಲ್ಬೋರ್ನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ನಡೆದಿದ್ದ ಆಷಸ್ ಟೆಸ್ಟ್ ಸರಣಿಯ ನಾಲ್ಕನೇ ಪಂದ್ಯ ಎರಡನೇ ದಿನದಂದು ಕೊನೆಗೊಂಡಿತು. ಮೊದಲ ದಿನದಂದು 20 ವಿಕೆಟ್‌ಗಳು ಮತ್ತು ಎರಡನೇ ದಿನದಂದು 16 ವಿಕೆಟ್‌ಗಳು ಉರುಳಿದವು. ಈ ಕಾರಣದಿಂದ ಎಂಸಿಜಿ ಪಿಚ್‌ ಸಾಕಷ್ಟು ಟೀಕೆಗಳಿಗೆ ಗುರಿಯಾಗಿದೆ. ಅಂದ ಹಾಗೆ ಆರಂಭಿಕ ಮೂರು ಪಂದ್ಯಗಳನ್ನು ಸೋತಿದ್ದ ಪ್ರವಾಸಿ ಇಂಗ್ಲೆಂಡ್‌ ಬಾಕ್ಸಿಗ್‌ ಡೇ ಟೆಸ್ಟ್‌ ಪಂದ್ಯವನ್ನು ಗೆದ್ದುಕೊಂಡಿತು. ಆ ಮೂಲಕ ಟೆಸ್ಟ್‌ ಸರಣಿಯಲ್ಲಿ 1-3 ಹಿನ್ನಡೆಯನ್ನು ಕಾದುಕೊಂಡಿದೆ.

AUS vs ENG: 15 ವರ್ಷಗಳ ಬಳಿಕ ಆಸ್ಟ್ರೇಲಿಯಾದಲ್ಲಿ ಬಾಕ್ಸಿಂಗ್‌ ಡೇ ಟೆಸ್ಟ್‌ ಗೆದ್ದ ಇಂಗ್ಲೆಂಡ್‌!

ಎಂಸಿಜಿ ಪಿಚ್‌ ಬಗ್ಗೆ ಕೆವಿನ್ ಪೀಟರ್ಸನ್ ಅಸಮಾಧಾನ

ಇಂಗ್ಲೆಂಡ್‌ನ ಮಾಜಿ ನಾಯಕ ಕೆವಿನ್ ಪೀಟರ್ಸನ್ ತಮ್ಮ ಎಕ್ಸ್‌ ಖಾತೆಯಲ್ಲಿ "ಪಂದ್ಯದ ಮೊದಲ ದಿನದಂದು ಹೆಚ್ಚಿನ ಸಂಖ್ಯೆಯ ವಿಕೆಟ್‌ಗಳು ಬಿದ್ದಾಗ ಭಾರತವನ್ನು ಯಾವಾಗಲೂ ಟೀಕಿಸಲಾಗುತ್ತದೆ. ಇದೀಗ ಆಸ್ಟ್ರೇಲಿಯಾವನ್ನು ಇದೇ ರೀತಿ ಪರಿಶೀಲಿಸಲಾಗುತ್ತದೆ ಎಂದು ನಾನು ಭಾವಿಸುತ್ತೇನೆ. ಯಾವುದು ಸರಿಯೋ ಅದು ಸರಿ,"ಎಂದು ಅಸಮಾಧಾನವನ್ನು ವ್ಯಕ್ಯಪಡಿಸಿದ್ದಾರೆ.



"ಮೆಲ್ಬೋನ್‌ ಕ್ರಿಕೆಟ್‌ ಗ್ರೌಂಡ್‌ನಲ್ಲಿ ಸಾಧಾರಣ ಪಿಚ್ ಅನ್ನು ಸಿದ್ಧಪಡಿಸಿದೆ. ನಾಲ್ಕು ಟೆಸ್ಟ್‌ ಪಂದ್ಯಗಳಲ್ಲಿ ಎರಡು ಪಂದ್ಯಗಳು ಕೇವಲ ಎರಡು ದಿನಗಳಲ್ಲಿ ಕೊನೆಗೊಂಡಿವೆ ಎಂಬುದು ನಂಬಲಾಗದ ಸಂಗತಿ. ಎಲ್ಲಾ ಪ್ರಚಾರದ ನಂತರ, ನಾಲ್ಕು ಆಷಸ್ ಟೆಸ್ಟ್‌ಗಳು ಕೇವಲ 13 ದಿನಗಳಲ್ಲಿ ಕೊನೆಗೊಂಡವು," ಎಂದು ಭಾರತದ ಮಾಜಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಟೀಕಿಸಿದ್ದಾರೆ.



ಆಸ್ಟ್ರೇಲಿಯಾಗೆ ಶಾಕ್‌ ನೀಡಿದ ಆಂಗ್ಲರು

ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು. ಆಸ್ಟ್ರೇಲಿಯಾ 152 ರನ್‌ಗಳಿಗೆ ಆಲೌಟ್ ಆಗಿತ್ತು. ಪ್ರಥಮ ಇನಿಂಗ್ಸ್‌ನಲ್ಲಿ ಜಾಶ್ ಟಾಂಗ್ ಇಂಗ್ಲೆಂಡ್ ಪರ 5 ವಿಕೆಟ್‌ ಸಾಧನೆ ಮಾಡಿದರು. ಆಸೀಸ್‌ ಪರ ಮೈಕೆಲ್ ನೇಸರ್ ಗರಿಷ್ಠ 35 ರನ್ ಕಲೆ ಹಾಕಿದರು.

ಇದಾದ ನಂತರ, ಇಂಗ್ಲೆಂಡ್ ಮೊದಲ ದಿನವೇ 110 ರನ್ ಗಳಿಸಿ ಆಲೌಟ್ ಆಯಿತು. ಹ್ಯಾರಿ ಬ್ರೂಕ್ 41 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ಮೈಕೆಲ್ ನೇಸರ್ 4 ವಿಕೆಟ್ ಪಡೆದರು. ಎರಡನೇ ದಿನ ಆಸ್ಟ್ರೇಲಿಯಾ ದ್ವಿತೀಯ ಇನಿಂಗ್ಸ್‌ನಲ್ಲಿ 132 ರನ್‌ಗಳಿಗೆ ಕುಸಿಯಿತು, ಇದರಿಂದಾಗಿ ಇಂಗ್ಲೆಂಡ್‌ಗೆ 175 ರನ್‌ಗಳ ಗುರಿ ನೀಡಲಾಯಿತು. ದ್ವಿತೀಯ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ 46 ರನ್ ಗಳಿಸಿದರು ಮತ್ತು ಇಂಗ್ಲೆಂಡ್ ಪರ ಬ್ರೈಡನ್ ಕಾರ್ಸ್‌ 4 ವಿಕೆಟ್ ಪಡೆದರು.

VHT 2025-26: ಸತತ 5 ಶತಕಗಳನ್ನು ಬಾರಿಸಿ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದ ಧ್ರುವ್‌ ಶೋರೆ!

ಇಂಗ್ಲೆಂಡ್ 175 ರನ್‌ಗಳ ಗುರಿಯನ್ನು 4 ವಿಕೆಟ್‌ಗಳು ಬಾಕಿ ಇರುವಾಗಲೇ ಬೆನ್ನಟ್ಟಿತು. ಕೊನೆಯ ಇನಿಂಗ್ಸ್‌ನಲ್ಲಿ ಇಂಗ್ಲೆಂಡ್ ಪರ ಜಾಕೋಬ್ ಬೆಥೆಲ್ 40 ರನ್ ಗಳಿಸಿದರು. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್, ಜೇ ರಿಚರ್ಡ್ಸನ್ ಮತ್ತು ಸ್ಕಾಟ್ ಬೋಲ್ಯಾಂಡ್ ತಲಾ 2 ವಿಕೆಟ್ ಪಡೆದರು.