ನವದೆಹಲಿ: ಭಾರತ ಹಾಗೂ ಇಂಗ್ಲೆಂಡ್ ತಂಡಗಳ (IND vs ENG) ನಡುವಣ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಕಾದಾಟ ನಡೆಸುತ್ತಿವೆ. ಮೊದಲನೇ ಪಂದ್ಯ ಮಳೆಗೆ ಬಲಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಂಡಿದ್ದ ಭಾರತ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 189 ರನ್‌ಗಳನ್ನು ಕಲೆ ಹಾಕಿತ್ತು. ನಂತರ ಇಂಗ್ಲೆಂಡ್ ತಂಡದ ಚೇಸಿಂಗ್‌ಗೆ ಮಳೆ ಅವಕಾಶ ನೀಡಿಲಿಲ್ಲ. ಅಂತಿಮವಾಗಿ ಪಂದ್ಯ ಫಲಿತಾಂಶವಿಲ್ಲದೆ ಅಂತ್ಯವಾಗಿತ್ತು. ಅಂದ ಹಾಗೆ ಮೊದಲನೇ ಟಿ20ಐ ಪಂದ್ಯದಲ್ಲಿ ಭಾರತ ತಂಡದ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ಎಸಗಿದ್ದ ತಪ್ಪನ್ನು ಮಾಜಿ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್ (Dinesh Karthik) ರಿವೀಲ್ ಮಾಡಿದ್ದಾರೆ.
ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡ ಎರಡು ಪಂದ್ಯಗಳ ಟಿ20ಐ ಸರಣಿಯಲ್ಲಿ ಐರ್ಲೆಂಡ್ ವಿರುದ್ಧ ವೈಟ್‌ವಾಶ್ ಆಘಾತ ಅನುಭವಿಸಿತ್ತು. ಎರಡೂ ಪಂದ್ಯಗಳಲ್ಲಿ ಗುರಿ ಬೆನ್ನಟ್ಟುವಲ್ಲಿ ವಿಫಲವಾದ ಭಾರತ, ಮೊದಲ ಪಂದ್ಯವನ್ನು 34 ರನ್‌ಗಳಿಂದ ಹಾಗೂ ಎರಡನೇ ಪಂದ್ಯವನ್ನು ಕೇವಲ ಒಂದು ರನ್‌ನಿಂದ ಸೋತಿತ್ತು. ಈ ಸರಣಿಯಲ್ಲಿನ ಫಲಿತಾಂಶದ ಪರಿಣಾಮ ಶ್ರೇಯಸ್ ಅಯ್ಯರ್ ಇಂಗ್ಲೆಂಡ್ ಎದುರು ಮೊದಲನೇ ಟಿ20ಐ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆರಿಸಿಕೊಳ್ಳಲು ಕಾರಣ ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
IND vs ENG: ವೈಭವ್ ಸೂರ್ಯವಂಶಿಗೆ ಆಡಿಸದ ಬಗ್ಗೆ ಎಬಿ ಡಿ ವಿಲಿಯರ್ಸ್ ಪ್ರತಿಕ್ರಿಯೆ!
ಕ್ರಿಕ್‌ಬಝ್ ಜೊತೆ ಮಾತನಾಡಿದ ದಿನೇಶ್ ಕಾರ್ತಿಕ್, "ಭಾರತ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದು ಉತ್ತಮ ನಿರ್ಧಾರ. ಹವಾಮಾನ ಅಡ್ಡಿಯಾಗುವ ಸಾಧ್ಯತೆ ಇದ್ದರೂ, ಸಾಮಾನ್ಯವಾಗಿ ತಂಡಗಳು ಗುರಿ ಬೆನ್ನಟ್ಟಲು ಹೆಚ್ಚು ಒಲವು ತೋರುತ್ತವೆ," ಎಂದು ಕಾರ್ತಿಕ್ ಕ್ರಿಕ್‌ಬಜ್‌ಗೆ ತಿಳಿಸಿದ್ದಾರೆ.
"ಇಲ್ಲಿ ಮಳೆಯ ಭೀತಿ ನಿರಂತರವಾಗಿ ಕಾಡುತ್ತಿತ್ತು. ಆದರೆ ಐರ್ಲೆಂಡ್ ವಿರುದ್ಧದ ಸರಣಿಯ ಸೋಲಿನ ಪರಿಣಾಮ ತಂಡದ ಮನಸ್ಥಿತಿಯ ಮೇಲೆ ಇನ್ನೂ ಇತ್ತು ಎಂದು ನಾನು ಭಾವಿಸುತ್ತೇನೆ. ಅದಕ್ಕಾಗಿಯೇ ಭಾರತ 'ಈ ಬಾರಿ ಗುರಿ ಬೆನ್ನಟ್ಟುವುದಕ್ಕಿಂತ ಮೊದಲು ಬ್ಯಾಟಿಂಗ್ ಮಾಡೋಣ' ಎಂಬ ನಿರ್ಧಾರ ಕೈಗೊಂಡಿರಬಹುದು," ಎಂದು ಅವರು ಹೇಳಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಮೊದಲ ಟಿ20ಐ ಪಂದ್ಯದ ಟಾಸ್ ಗೆದ್ದ ಬಳಿಕ ಮಾತನಾಡಿದ ಶ್ರೇಯಸ್ ಅಯ್ಯರ್, ಐರ್ಲೆಂಡ್ ಸರಣಿಯ ಬಗ್ಗೆ ಮಾತನಾಡಿದರು. ಆ ಸರಣಿಯನ್ನು ಹಿಂದಿನ ಅಧ್ಯಾಯವೆಂದು ಪರಿಗಣಿಸಿ ಇದೀಗ ಇಂಗ್ಲೆಂಡ್ ಸರಣಿಯ ಮೇಲೆ ಹೆಚ್ಚಿನ ಗಮನ ನೀಡಲಿದ್ದೇನೆಂದು ತಿಳಿಸಿದ್ದಾರೆ.
IND vs ENG: ಎರಡನೇ ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ XI ವಿವರ!
"ಐರ್ಲೆಂಡ್ ಸರಣಿ ಈಗ ಇತಿಹಾಸ. ಇದು ಹೊಸ ಸರಣಿ. ಐದು ಪಂದ್ಯಗಳಿವೆ ಮತ್ತು ನಮ್ಮ ಮುಂದೆ ಸಾಕಷ್ಟು ಅವಕಾಶಗಳಿವೆ. ಇದು ನಮ್ಮ ಪಾಲಿಗೆ ಅತ್ಯುತ್ತಮ ಅವಕಾಶ. ನಾಯಕನಾಗಿ ಇದು ನನ್ನ ಮೊದಲ... ಇಲ್ಲ, ಎರಡನೇ ಸರಣಿ. ಹೀಗಾಗಿ ಸಾಕಷ್ಟು ಉತ್ಸಾಹದಲ್ಲಿದ್ದೇನೆ. ನಾವು ಬಯಸಿದ್ದನ್ನೇ ಪಡೆದಿದ್ದೇವೆ. ನಿನ್ನೆ ಇಲ್ಲಿ ಉತ್ತಮ ಅಭ್ಯಾಸ ನಡೆಸಿದ್ದೇವೆ ಮತ್ತು ಇಲ್ಲಿನ ಪರಿಸ್ಥಿತಿಗೂ ಹೊಂದಿಕೊಂಡಿದ್ದೇವೆ. ರೋಚಕ ಸರಣಿಗಾಗಿ ಎದುರು ನೋಡುತ್ತಿದ್ದೇವೆ," ಎಂದು ಅಯ್ಯರ್ ಹೇಳಿದ್ದರು.
"ಐರ್ಲೆಂಡ್ ಸರಣಿಯಿಂದ ನಾವು ಸಾಕಷ್ಟು ಪಾಠಗಳನ್ನು ಕಲಿತಿದ್ದೇವೆ. ಇಲ್ಲಿ ಬಂದ ಬಳಿಕ ಇಂಗ್ಲೆಂಡ್ ಯಾವ ರೀತಿಯ ಕ್ರಿಕೆಟ್ ಆಡುತ್ತದೆ ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಅವರ ಬಲ ಮತ್ತು ದುರ್ಬಲತೆಗಳ ಬಗ್ಗೆ ಸ್ಪಷ್ಟ ಅರಿವು ಇದೆ. ಅದಕ್ಕೆ ತಕ್ಕಂತೆ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ನಮ್ಮಲ್ಲಿದೆ," ಎಂದು ಅವರು ಹೇಳಿದರು.