IND vs ENG: ಎರಡನೇ ಪಂದ್ಯಕ್ಕೆ ಭಾರತ ತಂಡದ ಸಂಭಾವ್ಯ ಪ್ಲೇಯಿಂಗ್ XI ವಿವರ!
IND vs ENG 2nd T20I Match Preview: ಭಾರತ ಹಾಗೂ ಇಂಗ್ಲೆಂಡ್ ತಂಡಗಳ ನಡುವಣ ಎರಡನೇ ಟಿ20ಐ ಪಂದ್ಯ ಜುಲೈ 4 ರಂದು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಉಭಯ ತಂಡಗಳು ಸಜ್ಜಾಗುತ್ತಿವೆ. ಈ ಪಂದ್ಯಕ್ಕೆ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI ಸೇರಿದಂತೆ ಪ್ರಮುಖ ಸಂಗತಿಗಳನ್ನು ಇಲ್ಲಿ ವಿವರಿಸಲಾಗಿದೆ.
ಭಾರತ ಹಾಗೂ ಇಂಗ್ಲೆಂಡ್ ನಡುವಣ ಎರಡನೇ ಟಿ20ಐ ಪಂದ್ಯ. -
ಮ್ಯಾಂಚೆಸ್ಟರ್: ಮೊದಲನೇ ಪಂದ್ಯ ಮಳೆಗೆ ಬಲಿಯಾದ ಬಳಿಕ ಭಾರತ ಹಾಗೂ ಇಂಗ್ಲೆಂಡ್ ತಂಡಗಳು (IND vs ENG) ಎರಡನೇ ಪಂದ್ಯದಲ್ಲಿ ಕಾದಾಟ ನಡೆಸಲು ಸಜ್ಜಾಗುತ್ತಿವೆ. ಈ ಪಂದ್ಯ ಜುಲೈ 4 ರಂದು ಇಲ್ಲಿನ ಓಲ್ಡ್ ಟ್ರಾಫರ್ಡ್ ಅಂಗಣದಲ್ಲಿ ನಡೆಯಲಿದೆ. ಈ ಪಂದ್ಯ ಭಾರತೀಯ ಕಾಲಮಾನ ಸಂಜೆ 07: 00 ಘಂಟೆಗೆ ಆರಂಭವಾಗಲಿದೆ. ಅಂದ ಹಾಗೆ ಈ ಪಂದ್ಯವನ್ನು ಗೆದ್ದು ಸರಣಿಯಲ್ಲಿ ಶುಭಾರಂಭ ಕಾಣಲು ಉಭಯ ತಂಡಗಳು ಎದುರು ನೋಡುತ್ತಿವೆ. ಈ ಪಂದ್ಯಕ್ಕೆ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI, ಪಿಚ್ ರಿಪೋರ್ಟ್ ಸೇರಿದಂತೆ ಪ್ರಮುಖ ಸಂಗತಿಗಳನ್ನು ಇಲ್ಲಿ ವಿವರಿಸಲಾಗಿದೆ.
ಮೊದಲನೇ ಟಿ20ಐ ಪಂದ್ಯ ಜುಲೈ 1 ರಂದು ಚೆಸ್ಟರ್ ಲೀ ಸ್ಟ್ರೀಟ್‌ನಲ್ಲಿ ನಡೆದಿತ್ತು. ಈ ಪಂದ್ಯದಲ್ಲಿ ಟಾಸ್ ಗೆದದು ಮೊದಲು ಬ್ಯಾಟಿಂಗ್ ಆರಿಸಿಕೊಂಡಿದ್ದ ಭಾರತ ತಂಡ, ತನ್ನ ಪಾಲಿನ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 189 ರನ್‌ಗಳನ್ನು ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಇಂಗ್ಲೆಂಡ್ ತಂಡಕ್ಕೆ 190 ರನ್‌ಗಳ ಗುರಿಯನ್ನು ನೀಡಿತ್ತು. ಆದರೆ, ಎರಡನೇ ಇನಿಂಗ್ಸ್‌ಗೂ ಮುನ್ನ ಮಳೆ ಬಂದಿದ್ದರಿಂದ ಇಂಗ್ಲೆಂಡ್ ತಂಡದ ಚೇಸಿಂಗ್ ನಡೆಯಲಿಲ್ಲ. ಅಂತಿಮವಾಗಿ ಈ ಪಂದ್ಯ ಮಳೆಗೆ ಬಲಿಯಾಯಿತು.
ಭಾರತ-ಇಂಗ್ಲೆಂಡ್ ನಡುವಣ 2ನೇ ಟಿ20 ಪಂದ್ಯ ಯಾವಾಗ?
ಮೊದಲನೇ ಪಂದ್ಯದಲ್ಲಿ ಭಾರತ ತಂಡದ ಪರ ಅಭಿಷೇಕ್ ಶರ್ಮಾ (59 ರನ್) ಹಾಗೂ ನಾಯಕ ಶ್ರೇಯಸ್ ಅಯ್ಯರ್ (68 ರನ್) ತಲಾ ಅರ್ಧಶತಕಗಳನ್ನು ಬಾರಿಸಿದ್ದರು. ಶಿವಂ ದುಬೇ ಅವರು ಕೂಡ ಅಜೇಯ 42 ರನ್‌ಗಳ ಕೊಡುಗೆಯನ್ನು ನೀಡಿದ್ದರು. ಇದೀಗ ಎರಡನೇ ಪಂದ್ಯದಲ್ಲಿಯೂ ಅವರು ಅದೇ ಲಯವನ್ನು ಮುಂದುವರಿಸಲು ಎದುರು ನೋಡುತ್ತಿದ್ದಾರೆ. ಇನ್ನು ಸಂಜು ಸ್ಯಾಮ್ಸನ್, ಇಶಾನ್ ಕಿಶನ್ ಹಾಗೂ ತಿಲಕ್ ವರ್ಮಾ ಅವರು ವಿಫಲರಾಗಿದ್ದರು.
ಇಂಗ್ಲೆಂಡ್ ತಂಡದ ಪರ ಸಾಕಿಬ್ ಮಹ್ಮೂದ್ ಅವರು 3 ವಿಕೆಟ್‌ಗಳನ್ನು ಕಬಳಿಸಿದ್ದರು. ಲ್ಯೂಕ್ ವುಡ್ ಅವರು ವಿಕೆಟ್ ಪಡೆಯದೆ ದುಬಾರಿಯಾಗಿದ್ದರು. ಸ್ಪಿನ್ನರ್ ಆದಿಲ್ ರಶೀದ್ ಹಾಗೂ ಮಧ್ಯಮ ವೇಗಿ ಸ್ಯಾಮ್ ಕರನ್ ಅವರು ತಲಾ ಒಂದೊಂದು ವಿಕೆಟ್ ಪಡೆದಿದ್ದರು. ಇದೀಗ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ವಿಲ್ ಜ್ಯಾಕ್ಸ್ ಸೇರಿದಂತೆ ಮೂವರು ಸ್ಪಿನ್ನರ್‌ಗಳನ್ನು ಕಣಕ್ಕೆ ಇಳಿಸುತ್ತಾ ಕಾದು ನೋಡಬೇಕಾಗಿದೆ.
IND vs ENG: ಭಾರತ 189 ರನ್ ಗಳಿಸಿದ ಬಳಿಕ ಮಳೆಗೆ ಬಲಿಯಾದ ಮೊದಲನೇ ಟಿ20ಐ ಪಂದ್ಯ!
ಪಂದ್ಯದ ವಿವರ
ಭಾರತ VS ಇಂಗ್ಲೆಂಡ್
ಎರಡನೇ ಟಿ20ಐ ಪಂದ್ಯ
ದಿನಾಂಕ: ಜುಲೈ 4, 2026
ಸಮಯ: ಸಂಜೆ 07: 00ಕ್ಕೆ (ಭಾರತೀಯ ಕಾಲಮಾನ)
ಸ್ಥಳ: ಓಲ್ಡ್ ಟ್ರಾಫರ್ಡ್, ಮ್ಯಾಂಚೆಸ್ಟರ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್
ಲೈವ್ ಸ್ಟ್ರೀಮಿಂಗ್: ಜಿಯೊ ಹಾಟ್‌ಸ್ಟಾರ್
ಓಲ್ಡ್ ಟ್ರಾಫರ್ಡ್ ಪಿಚ್ ರಿಪೋರ್ಟ್
ಪಂದ್ಯದ ಪವರ್‌ಪ್ಲೇನಲ್ಲಿ ವೇಗದ ಬೌಲರ್‌ಗಳಿಗೆ ಪಿಚ್ ಸೀಮ್ ಹಾಗೂ ಸ್ವಿಂಗ್‌ಗೆ ಹೆಚ್ಚು ನೆರವು ನೀಡಲಿದೆ. ಒಮ್ಮೆ ಪಂದ್ಯ ಸಾಗುತ್ತಿದ್ದಂತೆ ಪಿಚ್ ಸ್ಪಿನ್ನರ್‌ಗಳಿಗೆ ನೆರವು ನೀಡಲಿದೆ. ಬ್ಯಾಟ್ಸ್‌ಮನ್‌ಗಳು ಪಿಚ್‌ನಲ್ಲಿ ಸ್ವಲ್ಪ ಹೊತ್ತು ಸಮಯ ಕಳೆದ ಬಳಿಕ ಪದ್ಯದಲ್ಲಿ ಹೆಚ್ಚಿನ ರನ್‌ಗಳನ್ನು ಸ್ಕೋರ್ ಮಾಡಬಹುದು. ಆದರೆ, ಈ ಅಂಗಣದಲ್ಲಿ ಹೊಸ ಬ್ಯಾಟ್ಸ್‌ಮನ್ ಕ್ರೀಸ್‌ಗೆ ಬಂದ ತಕ್ಷಣ ಸಿಕ್ಸರ್ ಅಥವಾ ಬೌಂಡರಿಯನ್ನು ತ್ವರಿತವಾಗಿ ಸಿಡಿಸಲು ಸಾಧ್ಯವಾಗುವುದಿಲ್ಲ.
Durham ➔ Manchester 📍#TeamIndia on the move for 2️⃣nd #ENGvIND T20I 🚌 pic.twitter.com/XDdIUrzycE
— BCCI (@BCCI) July 3, 2026
ಮುಖಾಮುಖಿ ದಾಖಲೆ
ಒಟ್ಟು ಆಡಿರುವ ಪಂದ್ಯಗಳು: 31 ಪಂದ್ಯಗಳು
ಭಾರತದ ಗೆಲುವು: 18 ಪಂದ್ಯಗಳು
ಇಂಗ್ಲೆಂಡ್ ತಂಡದ ಗೆಲುವು: 12 ಪಂದ್ಯಗಳ
ನೋ ರಿಸಲ್ಟ್: 01
ಉಭಯ ತಂಡಗಳ ಪ್ಲೇಯಿಂಗ್ XI
ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್ (ನಾಯಕ), ತಿಲಕ್ ವರ್ಮಾ, ಶಿವಂ ದುಬೇ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್
ಇಂಗ್ಲೆಂಡ್: ಫಿಲ್ ಸಾಲ್ಟ್, ಜೋಸ್ ಬಟ್ಲರ್, ಹ್ಯಾರಿ ಬ್ರೂಕ್ (ನಾಯಕ), ಜೇಕಬ್ ಬೆಥೆಲ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ವಿಲ್ ಜ್ಯಾಕ್ಸ್, ಲಿಯಾಮ್ ಡಾಸನ್, ಸಾಕಿಬ್ ಮಹ್ಮೂದ್, ಆದಿಲ್ ರಶೀದ್, ಲ್ಯೂಕ್ ವುಡ್/ಜೋಫ್ರಾ ಆರ್ಚರ್