IND vs WI: ಎರಡನೇ ಟಿ20ಐ ಸೋಲಿನ ಬಳಿಕ ಭಾರತದ ಪ್ಲೇಯಿಂಗ್ XI ಬಗ್ಗೆ ದಿನೇಶ್ ಕಾರ್ತಿಕ್ ಪ್ರತಿಕ್ರಿಯೆ!
IND vs WI: ಎರಡನೇ ಟಿ20ಐ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಸೋಲಿನ ಬಳಿಕ ಭಾರತ ತಂಡದ ಪ್ಲೇಯಿಂಗ್ XIಗೆ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಪ್ರತಿಕ್ರಿಯೆ ನೀಡಿದ್ದಾರೆ. ಸೋಲಿನ ಹೊರತಾಗಿಯೂ ಭಾರತ ತಂಡ ಅದೇ ಆಡುವ ಬಳಗವನ್ನು ಉಳಿಸಿಕೊಳ್ಳಬೇಕೆಂದು ಅವರು ಸಲಹೆ ನೀಡಿದ್ದಾರೆ.
ಭಾರತ ತಂಡದ ಪ್ಲೇಯಿಂಗ್ XI ಬಗ್ಗೆ ಮಾತನಾಡಿದ ದಿನೇಶ್ ಕಾರ್ತಿಕ್. -
ನವದೆಹಲಿ: ವೆಸ್ಟ್ ಇಂಡೀಸ್ ವಿರುದ್ಧದ ಎರಡನೇ ಟಿ20ಐ ಪಂದ್ಯದಲ್ಲಿ (IND vs WI) ಭಾರತ ಸೋಲು ಕಂಡಿದ್ದರೂ, ಮುಂದಿನ ಪಂದ್ಯಕ್ಕೆ ಆಡುವ ಹನ್ನೊಂದರ ಬಳಗದಲ್ಲಿ ಹೆಚ್ಚಿನ ಬದಲಾವಣೆಗಳನ್ನು ಮಾಡಬಾರದು ಎಂದು ಭಾರತದ ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ (Dinesh karthik) ಅಭಿಪ್ರಾಯಪಟ್ಟಿದ್ದಾರೆ. ತಂಡವು ಬಲಿಷ್ಠ ಆಟಗಾರರನ್ನು ಒಳಗೊಂಡಿದ್ದು, ಒಂದೇ ಪಂದ್ಯದ ಸೋಲಿನ ಆಧಾರದ ಮೇಲೆ ತಂಡದ ಸಂಯೋಜನೆಯನ್ನು ಬದಲಿಸುವ ಅಗತ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ರಾಂಚಿಯಲ್ಲಿ ನಡೆದಿದ್ದ ಎರಡನೇ ಟಿ20ಐ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ, ಸಂಜು ಸ್ಯಾಮ್ಸನ್ ಅವರ 82 ರನ್‌ಗಳ ಸ್ಫೋಟಕ ಇನಿಂಗ್ಸ್ ಹಾಗೂ ಶ್ರೇಯಸ್ ಅಯ್ಯರ್, ಇಶಾನ್ ಕಿಶನ್ ಮತ್ತು ತಿಲಕ್ ವರ್ಮಾ ಅವರ ಕೊಡುಗೆಯ ನೆರವಿನಿಂದ 249 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಆದರೆ, ಶೇಯ್ ಹೋಪ್ ಕೇವಲ 45 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ವೆಸ್ಟ್ ಇಂಡೀಸ್ ತಂಡವನ್ನು ಗುರಿ ತಲುಪಿಸಿದರು.
IND vs WI 3rd T20I: ಶಿವಂ ದುಬೇ ಔಟ್? ಭಾರತದ ಸಂಭಾವ್ಯ ಪ್ಲೇಯಿಂಗ್ XI ವಿವರ!
ಪಂದ್ಯದ ಬಳಿಕ ಕ್ರಿಕ್‌ಬಜ್‌ನಲ್ಲಿ ಮಾತನಾಡಿದ ದಿನೇಶ್ ಕಾರ್ತಿಕ್, ಭಾರತ ಹೆಚ್ಚುವರಿ ವೇಗದ ಬೌಲರ್‌ಗೆ ಅವಕಾಶ ನೀಡುವ ಬಗ್ಗೆ ಯೋಚಿಸಬಹುದಾದರೂ, ತಂಡದಲ್ಲಿ ದೊಡ್ಡ ಮಟ್ಟದ ಬದಲಾವಣೆ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
“ಹೆಚ್ಚುವರಿ ವೇಗದ ಬೌಲರ್ ಅಗತ್ಯವಿದೆ ಎಂದು ಭಾರತ ಯೋಚಿಸಬಹುದೇ? ಹಾಗಿದ್ದರೆ, ಸ್ಪಿನ್ನರ್‌ಗಳಲ್ಲಿ ಒಬ್ಬರ ಬದಲಿಗೆ ಪ್ರಿನ್ಸ್ ಯಾದವ್ ಅವರನ್ನು ಆಡಿಸಬಹುದು. ಆದರೆ, ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ಭಾರತೀಯ ಡ್ರೆಸ್ಸಿಂಗ್ ರೂಮ್‌ನಲ್ಲಿ ಇದ್ದಿದ್ದರೆ ತಂಡದಲ್ಲಿ ಹೆಚ್ಚು ಬದಲಾವಣೆಗಳನ್ನು ಮಾಡುತ್ತಿರಲಿಲ್ಲ. ನನ್ನ ಪ್ರಕಾರ, ಭಾರತ ಬಲಿಷ್ಠ ಆಡುವ ಹನ್ನೊಂದರ ಬಳಗದೊಂದಿಗೆ ಆಡುತ್ತಿದೆ,” ಎಂದು ಕಾರ್ತಿಕ್ ತಿಳಿಸಿದ್ದಾರೆ.
37 ಬಾಲ್‌ಗಳಲ್ಲಿ ಶತಕ ಬಾರಿಸಿದ ಎಬಿ ಡಿ ವಿಲಿಯರ್ಸ್; ಐಪಿಎಲ್ ಟೂರ್ನಿಗೆ ಮರಳುವಂತೆ ಫ್ಯಾನ್ಸ್ ಕರೆ!
“ನಿತೀಶ್ ಕುಮಾರ್ ರೆಡ್ಡಿ ಅವರನ್ನು ಆಡಿಸಬೇಕೆಂದಿದ್ದರೆ, ಈಗಿನ ತಂಡದಲ್ಲಿ ಮತ್ತೊಬ್ಬ ಆಟಗಾರನಿಗೆ ಹೇಗೆ ಅವಕಾಶ ಕಲ್ಪಿಸುತ್ತಾರೆ ಎಂಬುದು ಸ್ಪಷ್ಟವಾಗಿಲ್ಲ. ಯಾರಿಗಾದರೂ ವಿಶ್ರಾಂತಿ ನೀಡುವ ನಿರ್ಧಾರವಿದ್ದು, ಅದರ ಬಗ್ಗೆ ಸ್ಪಷ್ಟವಾದ ಸಂವಹನ ನಡೆದಿದ್ದರೆ ಬೇರೆ ಮಾತು. ಆದರೆ, ಈ ಒಂದು ಪಂದ್ಯದ ಫಲಿತಾಂಶದ ಆಧಾರದ ಮೇಲೆ ತಂಡದಲ್ಲಿ ಬದಲಾವಣೆ ಮಾಡುವ ಅಗತ್ಯವಿಲ್ಲ,” ಎಂದು ಅವರು ಅಭಿಪ್ರಾಯಪಟ್ಟರು.
ಅಕ್ಟೋಬರ್ 11ರಂದು ಇಂದೋರ್‌ನಲ್ಲಿ ಮೂರನೇ ಟಿ20 ಪಂದ್ಯ
ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳು ಮುಗಿದಿದ್ದು, ಸರಣಿ 1-1ರಿಂದ ಸಮಬಲಗೊಂಡಿದೆ. ಲಖನೌನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದ್ದರೆ, ರಾಂಚಿಯಲ್ಲಿ ನಡೆದ ಎರಡನೇ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಜಯಭೇರಿ ಬಾರಿಸಿತು.
ʻನಮ್ಮ ತಂಡದಲ್ಲಿ ಗುಣಮಟ್ಟದ ಬೌಲಿಂಗ್ ಇಲ್ಲʼ: ಭಾರತ ತಂಡದ ಬೌಲಿಂಗ್ ಅನ್ನು ಟೀಕಿಸಿದ ಆರ್ ಅಶ್ವಿನ್!
ಇದೀಗ ಸರಣಿಯಲ್ಲಿ ಮುನ್ನಡೆ ಸಾಧಿಸುವ ಉದ್ದೇಶದೊಂದಿಗೆ ಉಭಯ ತಂಡಗಳು ಮೂರನೇ ಟಿ20 ಪಂದ್ಯಕ್ಕೆ ಸಜ್ಜಾಗಿವೆ. ಈ ಪಂದ್ಯ ಅಕ್ಟೋಬರ್ 11ರಂದು ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಸರಣಿಯ ನಿರ್ಣಾಯಕ ಘಟ್ಟದತ್ತ ಸಾಗುತ್ತಿರುವ ಈ ಸಂದರ್ಭದಲ್ಲಿ ಭಾರತ ತನ್ನ ಆಡುವ ಹನ್ನೊಂದರ ಬಳಗದಲ್ಲಿ ಬದಲಾವಣೆ ಮಾಡುತ್ತದೆಯೇ ಅಥವಾ ಹಿಂದಿನ ತಂಡವನ್ನೇ ಮುಂದುವರಿಸುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ.