ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs NZ: ಭಾರತ ತಂಡದಲ್ಲಿ ಬೆಂಚ್‌ ಕಾಯುತ್ತಿರುವ ಮೊಹಮ್ಮದ್‌ ಸಿರಾಜ್‌ ಬಗ್ಗೆ ಭವಿಷ್ಯ ನುಡಿದ ಆರ್‌ ಅಶ್ವಿನ್‌!

ನ್ಯೂಜಿಲೆಂಡ್‌ ವಿರುದ್ಧದ ಎರಡನೇ ಟೆಸ್ಟ್‌ ಪಂದ್ಯದಲ್ಲಿಯೂ ಹಿರಿಯ ವೇಗಿ ಮೊಹಮ್ಮದ್‌ ಸಿರಾಜ್‌ ಅವರನ್ನು ಟೀಮ್‌ ಮ್ಯಾನೇಜ್‌ಮೆಂಟ್‌ ಬೆಂಚ್‌ ಕಾಯಿಸಿದೆ. ಆ ಮೂಲಕ ಹಲವು ಮಾಜಿ ಕ್ರಿಕೆಟಿಗರ ಕೆಂಗಣ್ಣಿಗೆ ಗೌತಮ್‌ ಗಂಭೀರ್‌ ಹಾಗೂ ಶುಭಮನ್‌ ಗಿಲ್‌ ಗುರಿಯಾಗಿದ್ದಾರೆ. ಅಂದ ಹಾಗೆ ಸಿರಾಜ್‌ ಅವರ ಭವಿಷ್ಯದ ಬಗ್ಗೆ ಆರ್‌ ಅಶ್ವಿನ್‌ ತಮ್ಮ ಹೇಳಿಕೆಯನ್ನು ನೀಡಿದ್ದಾರೆ.

ಮೊಹಮ್ಮದ್‌ ಸಿರಾಜ್‌ ಭವಿಷ್ಯದ ಬಗ್ಗೆ ಅಶ್ವಿನ್‌ ಹೇಳಿಕೆ.

ನವದೆಹಲಿ: ಪ್ರಸ್ತುತ ಸಾಗುತ್ತಿರುವ 2025-27ರ ಸಾಲಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ (WTC 2025-27) ಟೂರ್ನಿಯಲ್ಲಿ 11 ಪಂದ್ಯಗಳಿಂದ 43 ವಿಕೆಟ್‌ಗಳನ್ನು ಕಿತ್ತು ಅಗ್ರ ಸ್ಥಾನದಲ್ಲಿರುವ ಭಾರತ ತಂಡದ ಹಿರಿಯ ವೇಗಿ ಮೊಹಮ್ಮದ್‌ ಸಿರಾಜ್‌ (Mohammed Siraj), ಸದ್ಯ ತಮ್ಮ ವೃತ್ತಿ ಜೀವನದ ಕಠಿಣ ಅವಧಿಯಲ್ಲಿದ್ದಾರೆ. ಅವರಿಗೆ ಭಾರತ ಟೆಸ್ಟ್‌ ತಂಡದ ಪ್ಲೇಯಿಂಗ್‌ XIನಲ್ಲಿ ಅವಕಾಶ ನೀಡಲಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಹಲವು ಮಾಜಿ ಕ್ರಿಕೆಟಿಗರು ಗೌತಮ್‌ ಗಂಭೀರ್‌ ಮಾರ್ಗದರ್ಶನದ ಟೀಮ್‌ ಮ್ಯಾನೇಜ್‌ಮೆಂಟ್‌ ವಿರುದ್ಧ ಗುಡುಗಿದ್ದಾರೆ. ಇದರ ನಡುವೆ ಸಿರಾಜ್‌ ಅವರ ಮುಂದಿನ ಭವಿಷ್ಯದ ಬಗ್ಗೆ ರವಿಚಂದ್ರನ್‌ ಅಶ್ವಿನ್‌ (R Ashwin) ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ತಮ್ಮ ಯೂಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಅಶ್ವಿನ್‌, ಸಿರಾಜ್‌ ಈಗ ತಂಡದ ವೇಗದ ಬೌಲರ್‌ಗಳ ಆಯ್ಕೆಯಲ್ಲಿ ನಿತೀಶ್‌ ಕುಮಾರ್‌ ರೆಡ್ಡಿ ಅವರಿಗಿಂತಲೂ ಹಿಂದಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

"ಸಿರಾಜ್‌ ಈಗ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದ ಆಟಗಾರ ಎಂಬ ಸಂದೇಶ ರವಾನೆಯಾಗುತ್ತಿದೆ. ವೇಗದ ಬೌಲರ್‌ಗಳ ಆಯ್ಕೆಯಲ್ಲಿ ಅವರು ನಿತೀಶ್‌ ಕುಮಾರ್‌ ರೆಡ್ಡಿ ಅವರಿಗಿಂತಲೂ ಹಿಂದೆ ಉಳಿದಿರಬಹುದು. ಈ ಸಮಯದಲ್ಲಿ ಸಿರಾಜ್‌ ಅವರ ಆತ್ಮವಿಶ್ವಾಸ ತಳಮಟ್ಟಕ್ಕೆ ಕುಸಿದಿರಬಹುದು. ಯಾರಾದರೂ ಅವರೊಂದಿಗೆ ಮಾತನಾಡಿ, ಅವರ ಅಸಮಾಧಾನವನ್ನು ಆಲಿಸಿ, ಸರಿಯಾದ ಮಾರ್ಗದರ್ಶನ ನೀಡಬೇಕು. ಇಲ್ಲದಿದ್ದರೆ ಸಿರಾಜ್‌ ಅವರ ಪಾಲಿಗೆ ಇದು ಉತ್ತಮ ಅಂತ್ಯವಾಗುವುದಿಲ್ಲ ಎಂದು ನನಗೆ ಅನಿಸುತ್ತದೆ," ಎಂದು ಅಶ್ವಿನ್‌ ಹೇಳಿದ್ದಾರೆ.

ʻನಾನು ನಾಯಕನಾಗಿದ್ದರೆ ಮೊಹಮ್ಮದ್‌ ಸಿರಾಜ್‌ರನ್ನು ಆಡಿಸುತ್ತಿದ್ದೆʼ: ಸೌರವ್‌ ಗಂಗೂಲಿ!

"ಬೇರೆ ಸ್ಥಳದಲ್ಲಿ ಅದೇ ಘಟನೆ ಪುನರಾವರ್ತನೆಯಾಗಿದೆ. ಸಿರಾಜ್‌ ಭಾವನಾತ್ಮಕ ವ್ಯಕ್ತಿ. ಇಂದು ಸಿರಾಜ್‌, ನಾಳೆ ಬೇರೊಬ್ಬ ಆಟಗಾರನಿಗೂ ಇದೇ ಪರಿಸ್ಥಿತಿ ಎದುರಾಗಬಹುದು. ತಂಡದಲ್ಲಿ ನಿಜವಾದ ಅನಿಶ್ಚಿತತೆ ಸೃಷ್ಟಿಯಾಗುತ್ತಿದೆ. ಟೆಸ್ಟ್‌ ತಂಡಕ್ಕೆ ಏಳನೇ ವೇಗದ ಬೌಲರ್‌ ಆಗಿ ಗುರ್ನೂರ್‌ ಬ್ರಾರ್‌ ಅವರನ್ನು ಆಯ್ಕೆ ಮಾಡಿದಾಗಲೇ ಈ ಪಂದ್ಯದಲ್ಲಿ ಸಿರಾಜ್‌ಗೆ ಅವಕಾಶ ಸಿಗುವುದಿಲ್ಲ ಎಂದು ನನಗೆ ಅರ್ಥವಾಗಿತ್ತು," ಎಂದು ಅವರು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ತಂಡದಲ್ಲಿ ಸ್ಥಾನ ಪಡೆಯಬೇಕಾದರೆ ಸಿರಾಜ್‌ ಅಸಾಧಾರಣ ಪ್ರದರ್ಶನ ನೀಡಲೇಬೇಕಾದ ಪರಿಸ್ಥಿತಿ ಇದೆ ಎಂದು ಅಶ್ವಿನ್‌ ಅಭಿಪ್ರಾಯಪಟ್ಟಿದ್ದಾರೆ. "ಮುಂದಿನ ಅವಕಾಶದಲ್ಲಿ ಗಂಟೆಗೆ 145 ಕಿ.ಮೀ ವೇಗದಲ್ಲಿ ಬೌಲ್‌ ಮಾಡಿ ಐದು ವಿಕೆಟ್‌ ಪಡೆಯುವುದನ್ನು ಬಿಟ್ಟರೆ ಸಿರಾಜ್‌ಗೆ ಬೇರೆ ಆಯ್ಕೆಯಿಲ್ಲ. ಈ ಹಿಂದಿನ ಸಾಧಕರನ್ನು ಬದಿಗಿಟ್ಟು ತಂಡದ ಆಡಳಿತ ಮಂಡಳಿ ಮುಂದೆ ಸಾಗುತ್ತಿರುವಂತೆ ಕಾಣುತ್ತಿದೆ. ಸಿರಾಜ್‌ ಪಾಲಿಗೆ ಇದು ಸುಲಭವಾದ ಅಂತ್ಯವಾಗುವುದಿಲ್ಲ," ಎಂದು ಅಶ್ವಿನ್‌ ಆತಂಕ ವ್ಯಕ್ತಪಡಿಸಿದ್ದಾರೆ.

ಇನ್ನು ಮಾಜಿ ಕ್ರಿಕೆಟಿಗರಾದ ಮುರಳಿ ಕಾರ್ತಿಕ್‌ ಮತ್ತು ಅಜಿಂಕ್ಯ ರಹಾನೆ ಕೂಡ ಸಿರಾಜ್‌ ಅವರನ್ನು ತಂಡದಿಂದ ಹೊರಗಿಟ್ಟಿರುವ ನಿರ್ಧಾರದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.‌

IND vs NZ: ಕ್ರೈಸ್ಟ್‌ಚರ್ಚ್ ಟೆಸ್ಟ್‌ನಲ್ಲಿ ವಿಕೆಟ್ ಪಡೆಯದೆ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಜಸ್‌ಪ್ರೀತ್ ಬುಮ್ರಾ!

ಹ್ಯಾಗ್ಲಿ ಓವಲ್‌ನಲ್ಲಿ ನಡೆದಿದ್ದ ಎರಡನೇ ಟೆಸ್ಟ್‌ ಪಂದ್ಯಕ್ಕೂ ಸಿರಾಜ್‌ಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗಲಿಲ್ಲ. ಈ ವೇಳೆ ಸಿರಾಜ್‌ ಸನ್‌ಗ್ಲಾಸ್‌ ಧರಿಸಿ ಕಣ್ಣುಗಳನ್ನು ಮುಚ್ಚಿಕೊಂಡಿರುವ ದೃಶ್ಯಗಳು ಕ್ಯಾಮೆರಾದಲ್ಲಿ ಸೆರೆಯಾಗಿದ್ದವು. ಇದನ್ನು ಗಮನಿಸಿದ ರಹಾನೆ, ಸೋನಿ ಸ್ಪೋರ್ಟ್ಸ್‌ನಲ್ಲಿ "ಈ ದೃಶ್ಯಗಳನ್ನು ನೋಡಿ" ಎಂದರೆ, ಮುರಳಿ ಕಾರ್ತಿಕ್‌ "ಅವರು ಅಳುತ್ತಿದ್ದಾರೆಯೇ?" ಎಂದು ಪ್ರಶ್ನಿಸಿದ್ದರು.

"ಇದು ಸಹಜವಾಗಿಯೇ ನೋವುಂಟುಮಾಡುತ್ತದೆ. ಅವರು ಭಾವನಾತ್ಮಕ ವ್ಯಕ್ತಿಯಾಗಿರುವುದರಿಂದ ಸಾಕಷ್ಟು ಬೇಸರಗೊಂಡಿರುವಂತೆ ಕಾಣುತ್ತಿದ್ದಾರೆ. ಏಕದಿನ ಸರಣಿಯಲ್ಲಿಯೂ ಅವರಿಗೆ ಬೆಂಚ್‌ ಕಾಯಿಸಲಾಗಿತ್ತು. ಭಾರತದಲ್ಲೇ ನಡೆದ ವೆಸ್ಟ್‌ ಇಂಡೀಸ್‌ ಸರಣಿಯಲ್ಲಿಯೂ ಕೊನೆಯ ಪಂದ್ಯದಲ್ಲಿ ಮಾತ್ರ ಅವಕಾಶ ನೀಡಲಾಗಿತ್ತು. ಇಂತಹ ಬೆಳವಣಿಗೆ ಆಟಗಾರನಿಗೆ ನೋವುಂಟುಮಾಡುತ್ತದೆ," ಎಂದು ಕಾರ್ತಿಕ್‌ ಹೇಳಿದ್ದಾರೆ.

"ಸಿರಾಜ್‌ ಅವರ ಹಿಂದಿನ ಪ್ರದರ್ಶನವನ್ನು ಗಮನಿಸಿದರೆ ಅವರನ್ನು ಹೊರಗಿಟ್ಟಿರುವುದು ಅಚ್ಚರಿ ಮೂಡಿಸಿದೆ. ಅವರ ಫಾರ್ಮ್‌ ಚೆನ್ನಾಗಿಲ್ಲ ಅಥವಾ ನೆಟ್ಸ್‌ನಲ್ಲಿ ಉತ್ತಮವಾಗಿ ಬೌಲಿಂಗ್‌ ಮಾಡುತ್ತಿಲ್ಲ ಎಂಬ ಅಭಿಪ್ರಾಯವಿದ್ದರೆ ಅವರನ್ನು ಪ್ರವಾಸಕ್ಕೆ ಆಯ್ಕೆ ಮಾಡಬಾರದಿತ್ತು. ತಂಡಕ್ಕೆ ಆಯ್ಕೆ ಮಾಡಿ ಅವಕಾಶ ನೀಡದೆ ಇರುವುದರಲ್ಲಿ ಅರ್ಥವೇನು?" ಎಂದು ಮುರಳಿ ಕಾರ್ತಿಕ್‌ ಪ್ರಶ್ನಿಸಿದ್ದಾರೆ.