ನವದೆಹಲಿ: ಪ್ರಸ್ತುತ ನಡೆಯುತ್ತಿರುವ 2025-26ರ ಬಾಂಗ್ಲಾದೇಶ ಪ್ರೀಮಿಯರ್ ಲೀಗ್ (BPL 2025-26) ಟೂರ್ನಿಯಿಂದ ಭಾರತೀಯ ನಿರೂಪಕಿ ರಿಧಿಮಾ ಪಠಾಕ್ (Ridhima Pathak) ಅವರನ್ನು ತೆಗೆದುಹಾಕಲಾಗಿದೆ ಎಂದು ವರದಿಯಾಗಿವೆ. ರಿಧಿಮಾ ಬಿಪಿಎಲ್‌ನ ಢಾಕಾ ಹಂತದ ಪಂದ್ಯಗಳಲ್ಲಿ ನಿರೂಪಣೆ ಮಾಡಬೇಕಾಗಿತ್ತು. ಆದರೆ, ಬಾಂಗ್ಲಾದೇಶಕ್ಕೆ (Bangladesh) ಬರುವ ಮುನ್ನವೇ ಅವರನ್ನು ಕೈಬಿಡಲಾಗಿದೆ ಎಂದು ವರದಿಗಳು ಹೇಳಿವೆ. ಇದೀಗ ಭಾರತದ ಕ್ರೀಡಾ ನಿರೂಪಕಿ ರಿಧಿಮಾ ಪಠಾಕ್ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಈ ವರದಿಗಳಿಗೆ ಪ್ರತಿಕ್ರಿಯೆಯಾಗಿ ಭಾರತದ ಜನಪ್ರಿಯ ನಿರೂಪಕಿ ರಿಧಿಮಾ ಪಠಾಕ್ ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೆ ನೀಡಿದ್ದು, ಅವರು ಸ್ವತಃ ಬಾಂಗ್ಲಾದೇಶ ಪ್ರೀಮಿಯರ್ ಲೀಗ್‌ನಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ, ಅವರನ್ನು ಕೈಬಿಡಲಾಗಿದೆ ಎಂಬುದು ಸುಳ್ಳು ಎಂದು ಸ್ಟಷ್ಟನೆ ಕೊಟ್ಟಿದ್ದಾರೆ.
ದಕ್ಷಿಣ ಆಫ್ರಿಕಾ ವಿರುದ್ಧ 63 ಎಸೆತಗಳಲ್ಲಿ ಶತಕ ಬಾರಿಸಿದ ವೈಭವ್ ಸೂರ್ಯವಂಶಿ!
"ಕಳೆದ ಕೆಲವು ಗಂಟೆಗಳಿಂದ ನನ್ನನ್ನು ಬಿಪಿಎಲ್‌ನಿಂದ ಕೈಬಿಡಲಾಗಿದೆ ಎಂದು ವರದಿಯಾಗಿದೆ. ಆದಾಗ್ಯೂ, ಲೀಗ್‌ನಿಂದ ಹಿಂದೆ ಸರಿಯುವ ನನ್ನ ನಿರ್ಧಾರ ವೈಯಕ್ತಿಕವಾಗಿತ್ತು. ನನಗೆ, ನನ್ನ ದೇಶ ಯಾವಾಗಲೂ ಮೊದಲು. ನಾನು ಕ್ರಿಕೆಟ್ ಅನ್ನು ಬೇರೆ ಯಾವುದೇ ಹುದ್ದೆಗಿಂತ ಹೆಚ್ಚು ಗೌರವಿಸುತ್ತೇನೆ. ಈ ಕ್ರೀಡೆಯಲ್ಲಿ ಪ್ರಾಮಾಣಿಕತೆ, ಗೌರವ ಮತ್ತು ಉತ್ಸಾಹದಿಂದ ವರ್ಷಗಳ ಕಾಲ ಕೆಲಸ ಮಾಡಿದ್ದಕ್ಕೆ ನಾನು ಅದೃಷ್ಟಶಾಲಿ. ನಾನು ಸಮಗ್ರತೆ, ಪಾರದರ್ಶಕತೆ ಮತ್ತು ಆಟದ ಉತ್ಸಾಹಕ್ಕಾಗಿ ನಿಲ್ಲುವುದನ್ನು ಮುಂದುವರಿಸುತ್ತೇನೆ," ಎಂದು ರಿಧಿಮಾ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
"ನನ್ನನ್ನು ಬೆಂಬಲಿಸಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಸಂದೇಶಗಳು ತುಂಬಾ ಅರ್ಥಪೂರ್ಣವಾಗಿವೆ. ಕ್ರಿಕೆಟ್ ಸತ್ಯಕ್ಕೆ ಅರ್ಹವಾಗಿದೆ. ಅಷ್ಟೇ, ನಾನು ಹೇಳಲು ಇನ್ನೇನೂ ಇಲ್ಲ," ಎಂದು ಅವರು ತಮ್ಮ ಹೇಳಿಕೆಯಲ್ಲಿ ಬರೆದಿದ್ದಾರೆ.
ಬಿಸಿಸಿಐ ಕೋರಿಕೆಯ ಮೇರೆಗೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಬಾಂಗ್ಲಾದೇಶದ ಆಟಗಾರ ಮುಸ್ತಾಫಿಝುರ್ ರೆಹಮಾನ್ ಅವರನ್ನು ಬಿಡುಗಡೆ ಮಾಡಿದೆ. ಬಾಂಗ್ಲಾದೇಶ ಈಗ ಐಪಿಎಲ್ ಅನ್ನು ನಿಷೇಧಿಸಿದೆ ಮತ್ತು 2026 ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಡಲು ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದೆ. ಇಎಸ್‌ಪಿಎನ್ ಕ್ರಿಕ್ಇನ್ಫೋ ಪ್ರಕಾರ, ಬಾಂಗ್ಲಾದೇಶದ ಪಂದ್ಯಗಳನ್ನು ಶ್ರೀಲಂಕಾಕ್ಕೆ ಸ್ಥಳಾಂತರಿಸಲು ಐಸಿಸಿ ನಿರಾಕರಿಸಿದೆ.
ಪಾಕಿಸ್ತಾನ ಸೂಪರ್ ಲೀಗ್ ಆಡಲಿರುವ ಮುಸ್ತಾಫಿಝುರ್ ರೆಹಮಾನ್
ಬಾಂಗ್ಲಾದೇಶ ತಂಡದ ಹಿರಿಯ ವೇಗದ ಬೌಲರ್ ಮುಸ್ತಾಫಿಝುರ್ ರೆಹಮಾನ್ ಅವರು 2026ರ ಪಾಕಿಸ್ತಾನ ಸೂಪರ್ ಲೀಗ್ ಆಡಲು ಮುಂದಾಗಿದ್ದಾರೆಂದು ವರದಯಾಗಿದೆ. ಬಿಸಿಸಿಐ ಸೂಚನೆಯ ಮೇರೆಗೆ ಕೋಲ್ಕತಾ ನೈಟ್ ರೈಡರ್ಸ್ ತಂಡ, ಮುಸ್ತಾಫಿಝುರ್ ರೆಹಮಾನ್ ಅವರನ್ನು ಕೈ ಬಿಟ್ಟಿತ್ತು. ಇದಾದ ಬಳಿಕ ಭಾರತ ಹಾಗೂ ಬಾಂಗ್ಲಾದೇಶ ದೇಶಗಳ ಕ್ರೀಡಾ ಕ್ಷೇತ್ರದಲ್ಲಿ ಹಲವು ಮಹತ್ತರ ಬದಲಾವಣೆಗಳಾಗುತ್ತಿವೆ.