ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಬ್ರೂಕ್‌-ಸ್ಮಿತ್‌ ಅಬ್ಬರದ ಹೊರತಾಗಿಯೂ ಸಿರಾಜ್‌ ಮಾರಕ ದಾಳಿಗೆ ಆಂಗ್ಲರು ತತ್ತರ, ಭಾರತಕ್ಕೆ ದೊಡ್ಡ ಮುನ್ನಡೆ!

IND vs ENG 2nd test Day 3 Highlights: ಹ್ಯಾರಿ ಬ್ರೂಕ್‌ ಹಾಗೂ ಜೇಮಿ ಸ್ಮಿತ್‌ ಅವರ ಅಬ್ಬರದ ಬ್ಯಾಟಿಂಗ್‌ ಹೊರತಾಗಿಯೂ ಮೊಹಮ್ಮದ್‌ ಸಿರಾಜ್‌ ಮಾರಕ ಬೌಲಿಂಗ್‌ ದಾಳಿಯ ನೆರವಿನಿಂದ ಭಾರತ ತಂಡ ಎರಡನೇ ಟೆಸ್ಟ್‌ ಮೂರನೇ ದಿನ ದೊಡ್ಡ ಮೊತ್ತದ ಮುನ್ನಡೆ ಪಡೆದಿದೆ. ಇಂಗ್ಲೆಂಡ್‌ ಪ್ರಥಮ ಇನಿಂಗ್ಸ್‌ನಲ್ಲಿ 407 ರನ್‌ಗಳಿಗೆ ಆಲ್‌ಔಟ್‌ ಆಗಿದೆ. ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ಲಭಿಸಿದೆ.

ಸಿರಾಜ್‌ ಮಾರಕ ದಾಳಿಗೆ ಆಂಗ್ಲರು ತತ್ತರ, ಭಾರತಕ್ಕೆ 244 ರನ್‌ ಮುನ್ನಡೆ!

ಭಾರತ ಹಾಗೂ ಇಂಗ್ಲೆಂಡ್‌ ನಡುವಣ ಎರಡನೇ ಟೆಸ್ಟ್‌ ಪಂದ್ಯ.

Profile Ramesh Kote Jul 4, 2025 11:46 PM

ಬರ್ಮಿಂಗ್‌ಹ್ಯಾಮ್‌: ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್‌ (158 ರನ್‌) ಹಾಗೂ ಜೇಮಿ ಸ್ಮಿತ್‌ (184 ರನ್‌) ಅವರ ಅಬ್ಬರದ ಬ್ಯಾಟಿಂಗ್‌ ಹೊರತಾಗಿಯೂ ಮೊಹಮ್ಮದ್‌ ಸಿರಾಜ್‌ (70ಕ್ಕೆ 6) ಅವರ ಮಾರಕ ಬೌಲಿಂಗ್‌ ದಾಳಿಯ ಸಹಾಯದಿಂದ ಭಾರತ ತಂಡ, ಎರಡನೇ ಟೆಸ್ಟ್‌ ಪಂದ್ಯದಲ್ಲಿ(IND vs ENG) ದೊಡ್ಡ ಮುನ್ನಡೆಯನ್ನು ಪಡೆದಿದೆ. ಸಿರಾಜ್‌ (Mohammed Siraj) ಮಾರಕ ದಾಳಿ ನಲುಗಿದ ಇಂಗ್ಲೆಂಡ್‌ ಪ್ರಥಮ ಇನಿಂಗ್ಸ್‌ನಲ್ಲಿ 407 ರನ್‌ಗಳಿಗೆ ಆಲ್‌ಔಟ್‌ ಆಯಿತು. ನಂತರ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಭಾರತ ತಂಡ ಮೂರನೇ ದಿನದಾಟದ ಅಂತ್ಯಕ್ಕೆ ಒಂದು ವಿಕೆಟ್‌ ನಷ್ಟಕ್ಕೆ 64 ರನ್‌ ಗಳಿಸಿದೆ ಹಾಗೂ ಒಟ್ಟಾರೆ 244 ರನ್‌ಗಳ ಬೃಹತ್‌ ಮುನ್ನಡೆಯನ್ನು ಪಡೆದಿದೆ. ಇದರೊಂದಿಗೆ ಶುಭಮನ್‌ ಗಿಲ್‌ ನಾಯಕತ್ವದ ಟೀಮ್‌ ಇಂಡಿಯಾ (India) ಎರಡನೇ ಟೆಸ್ಟ್‌ ಪಂದ್ಯದಲ್ಲಿ ತಮ್ಮ ಹಿಡಿತವನ್ನು ಇನ್ನಷ್ಡು ಬಿಗಿಗೊಳಿಸಿದೆ.

ಪಂದ್ಯದ ಮೂರನೇ ದಿನವಾದ ಶುಕ್ರವಾರ 77 ರನ್‌ಗಳಿಂದ ಪ್ರಥಮ ಇನಿಂಗ್ಸ್‌ ಮುಂದುವರಿಸಿದ ಇಂಗ್ಲೆಂಡ್‌ ತಂಡಕ್ಕೆ ಎರಡನೇ ಓವರ್‌ನಲ್ಲಿಯೇ ಮೊಹಮ್ಮದ್‌ ಸಿರಾಜ್‌ ಆಘಾತ ನೀಡಿದರು. ಟೆಸ್ಟ್‌ ವಿಶೇಷ ಬ್ಯಾಟ್ಸ್‌ಮನ್‌ಜೋ ರೂಟ್‌ ಹಾಗೂ ನಾಯಕ ಬೆನ್‌ ಸ್ಟೋಕ್ಸ್‌ ಅವರನ್ನು ಸತತ ಎರಡು ಎಸೆತಗಳಲ್ಲಿ ಸಿರಾಜ್‌ ಔಟ್‌ ಮಾಡಿದರು. ಆ ಮೂಲಕ ಇಂಗ್ಲೆಂಡ್‌ ತಂಡ 84 ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇನ್ನೇನು ಆತಿಥೇಯರು 200 ರನ್‌ ಗಳಿಸುವುದೂ ಅನುಮಾನ ಎಂದು ಭಾವಿಸಲಾಗಿತ್ತು. ಆದರೆ, ಹ್ಯಾರಿ ಬ್ರೂಕ್‌ ಹಾಗೂ ಜೇಮಿ ಸ್ಮಿತ್‌ ಆಕ್ರಮಣಕಾರಿಯಾಗಿ ಬ್ಯಾಟ್‌ ಮಾಡುವ ಮೂಲಕ ಭಾರತದ ಬೌಲಿಂಗ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದರು ಹಾಗೂ ದೀರ್ಘಾವಧಿ ಬ್ಯಾಟ್‌ ಮಾಡಿದ 303 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿ ಇಂಗ್ಲೆಂಡ್‌ ತಂಡವನ್ನು ಅಪಾಯದಿಂದ ಪಾರು ಮಾಡಿದರು.

IND vs ENG: ಜಸ್‌ಪ್ರೀತ್‌ ಬುಮ್ರಾ ಅನುಪಸ್ಥಿತಿಯಲ್ಲಿ 6 ವಿಕೆಟ್‌ ಕಿತ್ತು ಮಿಂಚಿದ ಮೊಹಮ್ಮದ್‌ ಸಿರಾಜ್‌!

ಜೇಮಿ ಸ್ಮಿತ್‌-ಹ್ಯಾರಿ ಬ್ರೂಕ್‌ ಶತಕ

ಮೊದಲನೇ ಎಸೆತದಿಂದಲೇ ಬ್ಯಾಝ್‌ಬಾಲ್‌ ಆಟವಾಡಿದ ಜೇಮಿ ಸ್ಮಿತ್‌ 80 ಎಸೆತಗಳಲ್ಲಿ ಶತಕವನ್ನು ಬಾರಿಸಿದರು. ಆ ಮೂಲಕ ಇಂಗ್ಲೆಂಡ್‌ ಪರ ಮೂರನೇ ವೇಗದ ಶತಕವನ್ನು ಪೂರ್ಣಗೊಳಿಸಿದರು. ಕೊನೆಯವರೆಗೂ ಅಜೇಯರಾಗಿ ಉಳಿದ ಸ್ಮಿತ್‌, 207 ಎಸೆತಗಳಲ್ಲಿ 21 ಬೌಂಡರಿಗಳು ಹಾಗೂ ನಾಲ್ಕು ಸಿಕ್ಸರ್‌ಗಳೊಂದಿಗೆ 184 ರನ್‌ ಗಳಿಸಿದರು. ಆದರೆ, ಮತ್ತೊಂದು ತುದಿಯಲ್ಲಿ ಕೊನೆಯವರೆಗೂ ಯಾರೂ ಸಾಥ್‌ ನೀಡದ ಕಾರಣ ಕೇವಲ 16 ರನ್‌ ಅಂತರದಲ್ಲಿ ದ್ವಿಶತಕ ವಂಚಿತರಾದರು. ಆದರೆ, ಇದಕ್ಕೂ ಮುನ್ನ ಮಿಂಚಿನ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ಹ್ಯಾರಿ ಬ್ರೂಕ್‌, 234 ಎಸೆತಗಳಲ್ಲಿ ಒಂದು ಸಿಕ್ಸರ್‌ ಹಾಗೂ 17 ಬೌಂಡರಿಗಳೊಂದಿಗೆ 158 ರನ್‌ಗಳನ್ನು ಗಳಿಸಿದರು.



ಮೊಹಮ್ಮದ್‌ ಸಿರಾಜ್‌ 6 ವಿಕೆಟ್‌ ಸಾಧನೆ

ಆರಂಭದಲ್ಲಿ ತ್ವರಿತವಾಗಿ ಎರಡು ವಿಕೆಟ್‌ ಕಿತ್ತಿದ್ದ ಸಿರಾಜ್‌ ಸೇರಿದಂತೆ ಭಾರತದ ಬೌಲರ್‌ಗಳು ಆರನೇ ವಿಕೆಟ್‌ಗೆ ಜೊತೆಯಾಗಿದ್ದ ಹ್ಯಾರಿ ಬ್ರೂಕ್‌ ಹಾಗೂ ಜೇಮಿ ಸ್ಮಿತ್‌ ಜೋಡಿಯನ್ನು ಬೇರ್ಪಡಿಸಲು ದೀರ್ಘಾವಧಿ ಸಾಧ್ಯವಾಗಲಿಲ್ಲ. ಹೊಸ ಚೆಂಡು ಸಿಕ್ಕ ಬಳಿಕ ಆಕಾಶ್‌ ದೀಪ್‌, ಹ್ಯಾರಿ ಬ್ರೂಕ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದರು. ನಂತರ ಸಿರಾಜ್‌ ಮಾರಕ ದಾಳಿ ನಡೆಸಿ ಬ್ರೈಡೆನ್‌ ಕಾರ್ಸ್‌, ಜಾಶ್‌ ಟಾಂಗ್‌ ಹಾಗೂ ಶೋಯೆಬ್‌ ಬಶೀರ್‌ ಅವರನ್ನು ಪೆವಿಲಿಯನ್‌ ಹಾದಿಯನ್ನು ತೋರಿಸಿದರು. ಆ ಮೂಲಕ ಸಿರಾಜ್‌ (70ಕ್ಕೆ 6) ಇಂಗ್ಲೆಂಡ್‌ ನೆಲದಲ್ಲಿ ತಮ್ಮ ಶ್ರೇಷ್ಠ ಬೌಲಿಂಗ್‌ ಸ್ಪೆಲ್‌ ಮಾಡಿದರು. ಇವರಿಗೆ ಸಾಥ್‌ ನೀಡಿದ್ದ ಆಕಾಶ್‌ ದೀಪ್‌ 4 ವಿಕೆಟ್‌ ಕಿತ್ತರು. ಇಂಗ್ಲೆಂಡ್‌ 89.3 ಓವರ್‌ಗಳಿಗೆ 407 ರನ್‌ಗಳಿಗೆ ಆಲ್‌ಔಟ್‌ ಆಯಿತು.



ಭಾರತ ತಂಡಕ್ಕೆ ಉತ್ತಮ ಆರಂಭ

ಬಳಿಕ 180 ರನ್‌ಗಳ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್‌ ಆರಂಭಿಸಿದ ಭಾರತ ತಂಡ, ಮೂರನೇ ದಿನದಾಟದ ಅಂತ್ಯಕ್ಕೆ 13 ಓವರ್‌ಗಳಿಗೆ ಒಂದು ವಿಕೆಟ್‌ ನಷ್ಟಕ್ಕೆ 64 ರನ್‌ ಗಳಿಸಿದೆ. ಆ ಮೂಲಕ 244 ರನ್‌ಗಳ ಮುನ್ನಡೆಯನ್ನು ಪಡೆದಿದೆ. 22 ಎಸೆತಗಳಲ್ಲಿ 28 ರನ್‌ ಗಳಿಸಿ ಸ್ಪೋಟಕ ಆರಂಭ ಪಡೆದಿದ್ದ ಯಶಸ್ವಿ ಜೈಸ್ವಾಲ್‌, ಇನ್ನೇನು ಮೂರನೇ ದಿನದಾಟ ಮುಗಿಯುವುದಕ್ಕೂ ಮುನ್ನ ಜಾಶ್‌ ಟಾಂಗ್‌ಗೆ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಕೆಎಲ್‌ ರಾಹುಲ್‌ (28*) ಹಾಗೂ ಕರುಣ್‌ ನಾಯರ್‌ (7*) ನಾಲ್ಕನೇ ದಿನದಾಟಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದಾರೆ. ಇನ್ನು ಭಾರತ ತಂಡ ಪ್ರಥಮ ಇನಿಂಗ್ಸ್‌ನಲ್ಲಿ 587ರನ್‌ಗಳನ್ನು ಕಲೆ ಹಾಕಿತ್ತು.