ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

IND vs ENG: ಓವಲ್‌ ಟೆಸ್ಟ್‌ನಲ್ಲಿ ಅರ್ಷದೀಪ್‌, ಕುಲ್ದೀಪ್‌ಗೆ ಸ್ಥಾನ ನೀಡದ ಗಂಭೀರ್‌ ವಿರುದ್ಧ ಫ್ಯಾನ್ಸ್‌ ಆಕ್ರೋಶ!

ಇಂಗ್ಲೆಂಡ್‌ ವಿರುದ್ಧದ ಐದನೇ ಟೆಸ್ಟ್‌ ಪಂದ್ಯದ ಭಾರತ ತಂಡದಲ್ಲಿ ಅರ್ಷದೀಪ್‌ ಸಿಂಗ್‌ ಹಾಗೂ ಕುಲ್ದೀಪ್‌ ಯಾದವ್‌ಗೆ ಅವಕಾಶ ನೀಡದ ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ವಿರುದ್ಧ ಅಭಿಮಾನಿಗಳು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಸರಣಿಯ ಕೊನೆಯ ಪಂದ್ಯ ಇದಾಗಿದ್ದು, ಈ ಇಬ್ಬರಿಗೂ ಒಂದೇ ಒಂದು ಪಂದ್ಯದಲ್ಲಿಯೂ ಸ್ಥಾನ ನೀಡಲಾಗಿಲ್ಲ.

ಭಾರತ ತಂಡದ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ ವಿರುದ್ಧ ಫ್ಯಾನ್ಸ್‌ ಕಿಡಿ!

ಅರ್ಷದೀಪ್‌, ಕುಲ್ದೀಪ್‌ಗೆ ಸ್ಥಾನ ನೀಡದ ಬಗ್ಗೆ ಫ್ಯಾನ್ಸ್‌ ಆಕ್ರೋಶ.

Profile Ramesh Kote Jul 31, 2025 7:53 PM

ಕೆನಿಂಗ್ಟನ್‌: ಆಂಡರ್ಸನ್‌-ತೆಂಡೂಲ್ಕರ್‌ ಟ್ರೋಫಿ ಟೆಸ್ಟ್‌ ಸರಣಿಯ(IND vs ENG) ಐದನೇ ಹಾಗೂ ಕೊನೆಯ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯ ಕೆನಿಂಗ್ಟನ್‌ನ ಓವಲ್‌ ಮೈದಾನದಲ್ಲಿ ನಡೆಯುತ್ತಿದೆ. ಈ ಸರಣಿಯಲ್ಲಿ ಆತಿಥೇಯ ಇಂಗ್ಲೆಂಡ್‌ (England) ತಂಡ 2-1 ಮುನ್ನಡೆಯಲ್ಲಿದ್ದು, ಈ ಪಂದ್ಯವನ್ನು ಗೆದ್ದು ತವರಿನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ. ಇತ್ತ ಭಾರತ ತಂಡ (India) ಈ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿಯನ್ನು ಸಮಬಲಗೊಳಿಸಲು ಯೋಜನೆ ಹಾಕಿಕೊಂಡಿದೆ. ಹಾಗಾಗಿ ಇದು ಉಭಯ ತಂಡಗಳಿಗೆ ನಿರ್ಣಾಯಕ ಪಂದ್ಯವಾಗಿದೆ. ಇನ್ನು ಟಾಸ್‌ ಗೆದ್ದ ಇಂಗ್ಲೆಂಡ್‌ ತಂಡದ ನಾಯಕ ಒಲ್ಲಿ ಪೋಪ್‌ ಮೊದಲು ಬೌಲಿಂಗ್‌ ಆಯ್ದುಕೊಂಡಿದ್ದಾರೆ. ಅದರಂತೆ ಮೊದಲು ಬ್ಯಾಟ್‌ ಮಾಡುತ್ತಿರುವ ಟೀಮ್‌ ಇಂಡಿಯಾ ಆರಂಭಿಕ ಇಬ್ಬರೂ ಆಟಗಾರರನ್ನು ಕಳೆದುಕೊಂಡು 72 ರನ್‌ ಕಲೆಹಾಕಿದ್ದು, ಉತ್ತಮ ಆರಂಭವನ್ನು ಪಡೆದಿದೆ.

ಐದನೇ ಟೆಸ್ಟ್‌ಗೆ ಭಾರತ ತಂಡ ಹಲವು ಬದಲಾವಣೆಗಳೊಂದಿಗೆ ಕಣಕ್ಕೆ ಇಳಿದಿದೆ. ಕಳೆದ ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದ ರಿಷಭ್ ಪಂತ್ ಹೊರಗುಳಿದ ಕಾರಣ ಧ್ರುವ್ ಜುರೆಲ್ ಅವರಿಗೆ ಅವಕಾಶ ದೊರೆತಿದೆ. ಜಸ್‌ಪ್ರೀತ್‌ ಬುಮ್ರಾ ಬದಲಿಗೆ ಪ್ರಸಿಧ್‌ ಕೃಷ್ಣ, ಶಾರ್ದುಲ್ ಠಾಕೂರ್ ಬದಲಿಗೆ ಕರುಣ್ ನಾಯರ್ ಮತ್ತು ಅನ್ಶುಲ್ ಕಾಂಬೋಜ್ ಬದಲಿಗೆ ಆಕಾಶ್ ದೀಪ್ ತಂಡದಲ್ಲಿ ಸ್ಥಾನಗಳನ್ನು ನೀಡಲಾಗಿದೆ. ಇದರ ಬೆನ್ನಲ್ಲೇ ಈ ನಿರ್ಣಾಯಕ ಪಂದ್ಯಕ್ಕೆ ತಂಡವನ್ನು ಆಯ್ಕೆ ಮಾಡಿದ ಟೀಮ್‌ ಇಂಡಿಯಾ ಮುಖ್ಯ ಕೋಚ್‌ ಗೌತಮ್‌ ಗಂಭೀರ್‌ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

IND vs ENG: ಸುನೀಲ್‌ ಗವಾಸ್ಕರ್‌ರ 47 ವರ್ಷಗಳ ಹಳೆಯ ದಾಖಲೆ ಮುರಿದ ಶುಭಮನ್‌ ಗಿಲ್‌!

ಇದಕ್ಕೆ ಕಾರಣ ಓವಲ್‌ ಪಿಚ್‌ ಸೀಮರ್‌ ಬೌಲರ್‌ಗಳಿಗೆ ತುಂಬಾ ಸಹಕಾರಿಯಾಗಿದ್ದು, ಗೆಲ್ಲಲೇಬೇಕಾಗಿರುವ ಈ ಪಂದ್ಯಕ್ಕೆ ತಂಡದಿಂದ ಸ್ಪಿನ್ನರ್‌ ಕುಲ್‌ದೀಪ್‌ ಯಾದವ್ ಮತ್ತು ವೇಗಿ ಅರ್ಷದೀಪ್‌ ಸಿಂಗ್‌ ಅವರನ್ನು ಕೈ ಬಿಟ್ಟಿರುವ ಹಿನ್ನೆಲೆ ಕ್ರಿಕೆಟ್‌ ಅಭಿಮಾನಿಗಳು ಭಾರಿ ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.



ಚೆಂಡನ್ನು ಎರಡೂ ಕಡೆ ಸ್ವಿಂಗ್‌ ಮಾಡುವ ಸಾಮರ್ಥ್ಯಕ್ಕೆ ಹೆಸರು ವಾಸಿಯಾಗಿರುವ ಎಡಗೈ ಸೀಮರ್‌ ಅರ್ಷದೀಪ್‌ ಸಿಂಗ್‌ ಅವರನ್ನು ತಂಡದಿಂದ ಹೊರಗಿಟ್ಟಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಪಿಚ್‌ನಲ್ಲಿ ಇವರು ಕಣಕ್ಕಿಳಿದು ತಂಡಕ್ಕೆ ಉತ್ತಮ ಕೊಡುಗೆ ನೀಡಲಿದ್ದಾರೆ ಎನ್ನುವ ಹಲವರ ನಿರೀಕ್ಷೆ ಹುಸಿಯಾಗಿದ್ದು ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಇನ್ನು ಎಡಗೈ ಸ್ಪಿನ್ನರ್‌ ಕುಲ್‌ದೀಪ್‌ ಯಾದವ್ ಅವರನ್ನು ತಂಡದಿಂದ ನಿರಂತರವಾಗಿ ಹೊರಗಿಡುತ್ತಿರುವುದು ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಉತ್ತಮ ಫಾರ್ಮ್‌ನಲ್ಲಿರುವ ಕುಲ್‌ದೀಪ್‌, ಆಕ್ರಮಣಕಾರಿ ಭಾರತದ ಬೌಲರ್‌ಗಳಲ್ಲಿ ಒಬ್ಬರಾಗಿದ್ದಾರೆ. ಇಂತಹ ಆಟಗಾರನ್ನು ಸರಣಿಯುದ್ದಕ್ಕೂ ಒಂದೂ ಟೆಸ್ಟ್‌ಗೆ ಅವಕಾಶ ನೀಡದೆ ಬೆಂಚ್‌ ಕಾಯಿಸಿರುವುದು ವಿಚಾರ ತೀವ್ರ ಟೀಕೆಗೆ ಗುರಿಯಾಗಿದೆ.



ಕರುಣ್‌ ನಾಯರ್‌ ಅವರ ಆಯ್ಕೆಗೂ ಅಸಮಧಾನ

ಸತತ 8 ವರ್ಷಗಳ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಿರುವ ಕರುಣ್‌ ನಾಯರ್‌ ಅವರಿಗೆ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಅವಕಾಶ ನೀಡಲಾಗಿತ್ತು. ಆದರೆ ಬ್ಯಾಟಿಂಗ್‌ನಲ್ಲಿ ಸತತ ವೈಫಲ್ಯ ಅನುಭವಿಸಿದ ಕಾರಣ ನಾಲ್ಕನೇ ಟೆಸ್ಟ್‌ಗೆ ಕರುಣ್‌ ಬದಲಿಗೆ ಸಾಯಿ ಸುದರ್ಶನ್‌ಗೆ ಅವಕಾಶ ನೀಡಲಾಗಿತ್ತು. ಆದರೆ ಐದನೇ ಪಂದ್ಯದಲ್ಲಿ ಫಾರ್ಮ್‌ ಕೊರತೆ ಇದ್ದರೂ ಶಾರ್ದುಲ್‌ ಬದಲಿ ಕರುಣ್‌ಗೆ ತಂಡದಲ್ಲಿ ಅವಕಾಶ ನೀಡಿರುವುದು ಸಾಮಾಜಿಕ ಜಾಲತಾಣದಲ್ಲಿ ಟೀಕೆಗಳು ವ್ಯಕ್ತವಾಗಿವೆ. ಬೌಲಿಂಗ್‌ ಮತ್ತು ಬ್ಯಾಟಿಂಗ್‌ ಎರಡರಲ್ಲೂ ಕೊಡುಗೆ ನೀಡುವ ಶಾರ್ದುಲ್‌ ಅವರನ್ನು ಈ ಪಂದ್ಯಕ್ಕೆ ಕಡೆಗಣಿಸಿ ಕರುಣ್‌ಗೆ ಅವಕಾಶ ನೀಡಿರುವ ಬಗ್ಗೆ ಹಲವರು ಅಸಮಧಾನ ವ್ಯಕ್ತಪಡಿಸಿದ್ದಾರೆ.



ಸತತ 15ನೇ ಟಾಸ್ ಸೋಲು

ಶುಭ್‌ಮನ್‌ ಗಿಲ್‌ ನಾಯಕನಾಗಿ ಮೊದಲ ಟೆಸ್ಟ್‌ ಸರಣಿಯಲ್ಲೇ 5 ಪಂದ್ಯಗಳಲ್ಲಿ ಟಾಸ್‌ ಸೋತಿರುವುದು ವಿಪರ್ಯಾಸ. "ಟಾಸ್‌ ಡಿಸೈಡ್ಸ್‌ ದ ಮ್ಯಾಚ್‌" ಎನ್ನುವಂತೆ ಪಂದ್ಯದ ಗೆಲುವಿನಲ್ಲಿಯೂ ಟಾಸ್‌ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಇದು ಈ ಸರಣಿಯ ಕಥೆಯಾದರೆ ಭಾರತ ಟಾಸ್‌ ಸೋಲುವುದರಲ್ಲಿ ವಿಶ್ವ ದಾಖಲೆ ಬರೆದಿದೆ. ಅದೇನೆಂದರೆ ಸತತ 15 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಭಾರತ ಟಾಸ್‌ ಸೋತಿದೆ. ಈ ಟಾಸ್‌ ಸೋಲು ಜನವರಿ 31, 2025 ರಂದು ಸೂರ್ಯಕುಮಾರ್ ಯಾದವ್ ನಾಯಕರಾಗಿದ್ದ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದ ಟಾಸ್ ಸೋಲಿನೊಂದಿಗೆ ಆರಂಭವಾಗಿದೆ. ಬಳಿಕ ಏಕದಿನ ಸರಣಿಯಲ್ಲಿ ರೋಹಿತ್‌ ಶರ್ಮಾರವರು ಸತತವಾಗಿ ಟಾಸ್‌ ಸೋಲನ್ನನುಭವಿಸಿದ್ದರು. ಇದಾದ ನಂತರ ದೀರ್ಘ ಸ್ವರೂಪದ ಟೆಸ್ಟ್‌ಗೆ ಶುಭ್‌ಮನ್‌ ಗಿಲ್‌ ನೂತನ ನಾಯಕರಾದ ಮೇಲೆ ಇದಕ್ಕೆ ತೆರೆ ಬೀಳುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಅವರೂ ಕೂಡ ನಾಯಕನಾಗಿ ಒಂದೂ ಟಾಸ್‌ ಗೆಲ್ಲಲು ಸಾಧ್ಯವಾಗಿಲ್ಲ.



ಐದನೇ ಟೆಸ್ಟ್‌ಗೆ ಭಾರತ ತಂಡ (ಪ್ಲೇಯಿಂಗ್ XI): ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ಕರುಣ್ ನಾಯರ್, ರವೀಂದ್ರ ಜಡೇಜಾ, ಧ್ರುವ್ ಜುರೆಲ್(ವಿ.ಕೀ), ವಾಷಿಂಗ್ಟನ್ ಸುಂದರ್, ಆಕಾಶ್ ದೀಪ್, ಪ್ರಸಿಧ್‌ ಕೃಷ್ಣ, ಮೊಹಮ್ಮದ್ ಸಿರಾಜ್