ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ENG vs NZ: ಮೂರನೇ ಟೆಸ್ಟ್‌ ಪಂದ್ಯಕ್ಕೆ ಮರಳಲಿರುವ ಬೆನ್‌ ಸ್ಟೋಕ್ಸ್‌, ಗಸ್‌ ಅಟ್ಕಿನ್ಸನ್‌!

ಬೆನ್‌ ಸ್ಟೋಕ್ಸ್‌ ಇಂಗ್ಲೆಂಡ್ ತಂಡದ ನಾಯಕತ್ವಕ್ಕೆ ಮರಳಲಿದ್ದಾರೆ. ಲಂಡನ್‌ನ ನೈಟ್‌ಕ್ಲಬ್‌ ವಿವಾದಕ್ಕೆ ಸಂಬಂಧಿಸಿದಂತೆ ತನಿಖೆ ಮುಗಿದಿದ್ದು, ಬೆನ್‌ ಸ್ಟೋಕ್ಸ್‌ಗೆ ಕ್ಲೀನ್‌ ಚಿಟ್‌ ನೀಡಲಾಗಿದೆ. ಈ ಘಟನೆ ಸಂಬಂಧ ತನಿಖೆ ನಡೆಯುತ್ತಿದ್ದ ಕಾರಣ ಎರಡನೇ ಪಂದ್ಯದಿಂದ ಹೊರಗಿದ್ದ ಬೆನ್‌ ಸ್ಟೋಕ್ಸ್‌ ಅವರು ಹಿಂಸಾಚಾರದೊಂದಿಗೆ ಯಾವುದೇ ಸಂಬಂಧ ಇಲ್ಲ ಖಚಿತವಾಗಿದೆ. ಹಾಗಾಗಿ ಅವರು ಮೂರನೇ ಟೆಸ್ಟ್‌ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ಮೂರನೇ ಟೆಸ್ಟ್‌ ಪಂದ್ಯಕ್ಕೆ ಬೆನ್‌ ಸ್ಟೋಕ್ಸ್‌, ಗಸ್‌ ಅಟ್ಕನ್ಸನ್‌ ಕಮ್‌ಬ್ಯಾಕ್‌.

ನವದೆಹಲಿ: ಲಂಡನ್‌ನ ನೈಟ್‌ಕ್ಲಬ್‌ ವಿವಾದಕ್ಕೆ (Night Club Controversy) ಸಂಬಂಧಿಸಿದಂತೆ ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಮಂಡಳಿ (ECB) ತನ್ನ ತನಿಖೆಯನ್ನು ಪೂರ್ಣಗೊಳಿಸಿದೆ. ಈ ಘಟನೆಯ ಕಾರಣ ಎರಡನೇ ಪಂದ್ಯದಿಂದ ಹೊರಗುಳಿದಿದ್ದ ಬೆನ್‌ ಸ್ಟೋಕ್ಸ್‌ (Ben Stokes), ಮೂರನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್‌ ತಂಡದ ನಾಯಕತ್ವಕ್ಕೆ ಮರಳಲಿದ್ದಾರೆಂದು ಇಸಿಬಿ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ. ಬೆನ್‌ ಸ್ಟೋಕ್ಸ್‌ ಜೊತೆಗೆ ಈ ವಿವಾದದಲ್ಲಿ ಸಿಲುಕಿಕೊಂಡಿದ್ದ ಗಸ್‌ ಅಟ್ಕಿನ್ಸನ್‌ ಅವರು ಕೂಡ ಮೂರನೇ ಟೆಸ್ಟ್‌ ನಿಮಿತ್ತ ತಂಡಕ್ಕೆ ಮರಳಲಿದ್ದಾರೆ. ಈ ಘಟನೆಯಲ್ಲಿ ಈ ಇಬ್ಬರಿಗೂ ಇಸಿಬಿ ಕ್ಲೀನ್‌ ಚಿಟ್‌ ನೀಡಿದೆ.

ನೈಟ್‌ ಕ್ಲಬ್‌ ವಿವಾದದ ತನಿಖೆ ನಡೆಯುತ್ತಿದ್ದ ಕಾರಣ ಬೆನ್‌ ಸ್ಟೋಕ್ಸ್‌ ಹಾಗೂ ಗಸ್‌ ಅಟ್ಕಿನ್ಸನ್‌ ಅವರನ್ನು ದಿ ಓವಲ್‌ ಟೆಸ್ಟ್ ಪಂದ್ಯದಿಂದ ಹೊರಗಿಡಲಾಗಿತ್ತು. ಈ ಘಟನೆ ಕುರಿತು ತನಿಖೆ ನಡೆಸಿದ ಇಸಿಬಿ ತನ್ನ ಅಧಿಕೃತ ಪ್ರಕಟಣೆಯಲ್ಲಿ ಸ್ಟೋಕ್ಸ್ ಮತ್ತು ಅಟ್ಕಿನ್ಸನ್ ತಂಡದ ನಡವಳಿಕೆ ನಿಯಮಗಳನ್ನು ಉಲ್ಲಂಘಿಸಿರುವುದು ದೃಢಪಟ್ಟಿದೆ ಎಂದು ತಿಳಿಸಿದೆ.

ಆದರೆ, ಘಟನೆಯ ವೇಳೆ ನಡೆದ ಹಿಂಸಾಚಾರಕ್ಕೆ ಈ ಇಬ್ಬರು ಆಟಗಾರರು ನೇರವಾಗಿ ಕಾರಣರಾಗಿಲ್ಲ ಎಂಬುದನ್ನೂ ಇಸಿಬಿ ಸ್ಪಷ್ಟಪಡಿಸಿದೆ. ಹೀಗಾಗಿ, ನಿಯಮ ಉಲ್ಲಂಘನೆಗಾಗಿ ಕ್ರಮ ಕೈಗೊಳ್ಳಲಾಗಿದ್ದರೂ, ಹಿಂಸಾತ್ಮಕ ಘಟನೆಯಲ್ಲಿ ಅವರ ಪಾತ್ರ ಇಲ್ಲ ಎಂದು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

Nightclub Controversy: ಎರಡನೇ ಟೆಸ್ಟ್‌ ಇಂಗ್ಲೆಂಡ್‌ ತಂಡದಲ್ಲಿ ಸ್ಥಾನ ಕಳೆದುಕೊಂಡ ಬೆನ್‌ ಸ್ಟೋಕ್ಸ್‌, ಗಸ್‌ ಅಟ್ಕಿನ್ಸನ್‌!

“ಜೂನ್ 8ರ ಸೋಮವಾರ ಮುಂಜಾನೆ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ಇಂಗ್ಲೆಂಡ್‌ ಹಾಗೂ ವೇಲ್ಸ್‌ ಕ್ರಿಕೆಟ್‌ ಅಕಾಡೆಮಿ ಶಿಸ್ತು ವಿಚಾರಣೆಯನ್ನು ಪೂರ್ಣಗೊಳಿಸಿದ ಬಳಿಕ, ಬೆನ್‌ ಸ್ಟೋಕ್ಸ್‌ ಮತ್ತು ಗಸ್‌ ಅಟ್ಕಿನ್ಸನ್‌ ಅವರನ್ನು ನ್ಯೂಜಿಲೆಂಡ್ ವಿರುದ್ಧದ ಮೂರನೇ ಪಂದ್ಯಕ್ಕಾಗಿ ಇಂಗ್ಲೆಂಡ್ ಪುರುಷರ ತಂಡಕ್ಕೆ ಸೇರಿಸಲಾಗಿದೆ,” ಎಂದು ಇಸಿಬಿ ತನ್ನ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿದೆ.

"ಇಂಗ್ಲೆಂಡ್ ಆಟಗಾರರು ಎಲ್ಲಾ ಸಂದರ್ಭಗಳಲ್ಲೂ ಅತ್ಯುನ್ನತ ಮಟ್ಟದ ನಡವಳಿಕೆಯನ್ನು ಕಾಪಾಡಿಕೊಳ್ಳಬೇಕು ಹಾಗೂ ಇಂಗ್ಲೆಂಡ್ ಕ್ರಿಕೆಟ್‌ನ ಹಿತಾಸಕ್ತಿಗೆ ಅನುಗುಣವಾಗಿ ನಡೆದುಕೊಳ್ಳಬೇಕು ಎಂಬ ಒಪ್ಪಂದದ ನಿರ್ದಿಷ್ಟ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ," ಎಂದು ಹೇಳಿದೆ.

ಇದರ ಪರಿಣಾಮವಾಗಿ ಇಬ್ಬರು ಆಟಗಾರರಿಗೂ ಲಿಖಿತ ಎಚ್ಚರಿಕೆ (Written Warning) ನೀಡಲಾಗಿದ್ದು, ಅವರನ್ನು ಎರಡನೇ ಟೆಸ್ಟ್ ಪಂದ್ಯಕ್ಕೆ ಆಯ್ಕೆ ಪರಿಗಣನೆಯಿಂದ ಹೊರಗಿಡಲಾಗಿತ್ತು ಎಂದು ಇಸಿಬಿ ಸ್ಪಷ್ಟಪಡಿಸಿದೆ.



“ನೈಟ್‌ಕ್ಲಬ್‌ನಲ್ಲಿ ನಡೆದ ಹಿಂಸಾತ್ಮಕ ಘಟನೆಯ ಬಗ್ಗೆ ಆಟಗಾರರ ಮೇಲೆ ಯಾವುದೇ ಆರೋಪ ಹೊರಿಸಬಾರದು ಎಂಬ ತೀರ್ಮಾನಕ್ಕೆ ಬರಲಾಗಿದೆ. ಬೆನ್‌ ಸ್ಟೋಕ್ಸ್‌ ಈ ಘರ್ಷಣೆಯಲ್ಲಿ ಭಾಗಿಯಾಗಿರಲಿಲ್ಲ ಮತ್ತು ನಡೆದ ಯಾವುದೇ ಘಟನೆಯನ್ನು ನೇರವಾಗಿ ನೋಡಿರಲಿಲ್ಲ. ಹಾಗೆಯೇ, ಇಸಿಬಿ ಪರಿಶೀಲಿಸಿದ ಸಾಕ್ಷ್ಯಗಳ ಪ್ರಕಾರ ಗಸ್‌ ಅಟ್ಕಿನ್ಸನ್‌ ಯಾವುದೇ ಪ್ರಚೋದನೆಯಿಲ್ಲದೆ ನಡೆದ ದಾಳಿಗೆ ಬಲಿಯಾಗಿದ್ದರು. ಅಲ್ಲದೆ, ಎರಡೂ ಸಂದರ್ಭಗಳಲ್ಲಿ ಅವರು ಯಾವುದೇ ರೀತಿಯ ಪ್ರತಿದಾಳಿ ನಡೆಸಿಲ್ಲ ಎಂಬುದು ದೃಢಪಟ್ಟಿದೆ,” ಎಂದು ಇಸಿಬಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.

ನಾಟಕೀಯ ಬೆಳವಣಿಗೆಗಳಿಂದ ಕೂಡಿದ ಈ ಬೆಳವಣಿಗೆಗಳು ವಾರಾಂತ್ಯದ ಬಳಿಕ ಬಂದಿದೆ. ಇಂಗ್ಲೆಂಡ್‌ ಮತ್ತು ವೇಲ್ಸ್‌ ಕ್ರಿಕೆಟ್‌ ಬೋರ್ಡ್‌ ಸೂಚನೆಯ ಮೇರೆಗೆ ಬೆನ್‌ ಸ್ಟೋಕ್ಸ್‌ ಮತ್ತು ಗಸ್‌ ಅಟ್ಕಿನ್ಸನ್‌ ಇಬ್ಬರನ್ನೂ ಅವರು ಆಡುತ್ತಿದ್ದ ಕೌಂಟಿ ಚಾಂಪಿಯನ್‌ಶಿಪ್ ಪಂದ್ಯಗಳಿಂದ ಹಿಂಪಡೆಯಲಾಗಿದೆ.

Night club Controversy: ಮೊದಲನೇ ಟೆಸ್ಟ್‌ ಗೆದ್ದ ಬೆನ್ನಲ್ಲೆ ದೊಡ್ಡ ಸಂಕಷ್ಟಕ್ಕೆ ಸಿಲುಕಿದ ಬೆನ್‌ ಸ್ಟೋಕ್ಸ್‌!

ಸ್ಟೋಕ್ಸ್ ಅವರು ದುರ್ಹ್ಯಾಮ್‌ ಕೌಂಟಿ ಕ್ರಿಕೆಟ್‌ ಕ್ಲಬ್‌ ಪರ ಕೇವಲ 95 ರನ್‌ಗಳ ವೇಗದ ಇನಿಂಗ್ಸ್‌ ಆಡಿದ್ದ ವೇಳೆ ಅವರನ್ನು ತಂಡದಿಂದ ಹಿಂಪಡೆಯಲಾಯಿತು. ಮತ್ತೊಂದೆಡೆ, ಅಟ್ಕಿನ್ಸನ್ ಅವರನ್ನು ಸರ್ರೆ ಕೌಂಟಿ ಕ್ರಿಕೆಟ್‌ ಕ್ಲಬ್‌ ಮತ್ತು ಗ್ಲಾಮಾರ್ಗನ್‌ ಕೌಂಟಿ ಕ್ರಿಕೆಟ್‌ ಕ್ಲಬ್‌ ನಡುವಿನ ಪಂದ್ಯದಿಂದ ಹೊರಗಿಡಲಾಯಿತು. ಈ ಬೆಳವಣಿಗೆಗಳು ಇಬ್ಬರೂ ಆಟಗಾರರು ಶೀಘ್ರದಲ್ಲೇ ಇಂಗ್ಲೆಂಡ್ ರಾಷ್ಟ್ರೀಯ ತಂಡಕ್ಕೆ ಮರಳಲಿದ್ದಾರೆ ಎಂಬುದರ ಸ್ಪಷ್ಟ ಸೂಚನೆಯಾಗಿವೆ.

ಮೂರನೇ ಟೆಸ್ಟ್‌ಗೆ ಇಂಗ್ಲೆಂಡ್‌ ತಂಡ: ಬೆನ್‌ ಸ್ಟೋಕ್ಸ್‌ (ನಾಯಕ), ರೆಹಾನ್‌ ಅಹ್ಮದ್‌, ಜೋಫ್ರಾ ಆರ್ಚರ್‌, ಗಸ್‌ ಅಟ್ಕಿನ್ಸನ್‌, ಹ್ಯಾರಿ ಬ್ರೂಕ್‌, ಜೋರ್ಡನ್‌ ಕಾಕ್ಸ್‌, ಬೆನ್‌ ಡಕೆಟ್‌, ಮ್ಯಾಥ್ಯೂ ಫಿಷರ್‌, ಎಮಿಲಿಯೊ, ಒಲ್ಲಿ ಜಾನ್ಸನ್‌, ಜೋ ರೂಟ್‌, ಜೇಮಿ ಸ್ಮಿತ್‌, ಜಾಶ್‌ ಟಾಂಗ್‌