ಕೊಲಂಬೊ: ವಿಲ್ ಜ್ಯಾಕ್ಸ್(will Jacks) ಹಾಗೂ ರೆಹಾನ್ ಅಹ್ಮದ್ (Rehan Ahmed) ಅವರ ನಿರ್ಣಾಯಕ ಜೊತೆಯಾಟದ ಬಲದಿಂದ ಇಂಗ್ಲೆಂಡ್ ತಂಡ, 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯ ಸೂಪರ್-8ರ ಪಂದ್ಯದಲ್ಲಿ ನ್ಯೂಜಿಲೆಂಡ್ ಎದುರು 4 ವಿಕೆಟ್‌ಗಳ ರೋಚಕ ಗೆಲುವು ಸಾಧಿಸಿತು. ಈ ಸೋಲಿನೊಂದಿಗೆ ನ್ಯೂಜಿಲೆಂಡ್ ತಂಡದ ಸೆಮಿಫೈನಲ್ ಅರ್ಹತೆ, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ಪಂದ್ಯದ ಫಲಿತಾಂಶವನ್ನು ಅವಲಂಬಿಸಿದೆ. ಇಂಗ್ಲೆಂಡ್ ಗೆಲುವಿನಿಂದಾಗಿ ಸಲ್ಮಾನ್ ಆಘಾ ನಾಯಕತ್ವದ ಪಾಕಿಸ್ತಾನ ತಂಡದ ಅಂತಿಮ ನಾಲ್ಕರ ಹಂತದ ಆಸೆ ಇನ್ನೂ ಜೀವಂತವಾಗಿರಿಸಿಕೊಂಡಿದೆ.
ಶುಕ್ರವಾರ ಇಲ್ಲಿನ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿನ್ಯೂಜಿಲೆಂಡ್ ನೀಡಿದ್ದ 160 ರನ್ ಗುರಿಯನ್ನು ಹಿಂಬಾಲಿಸಿದ ಇಂಗ್ಲೆಂಡ್ ತಂಡಕ್ಕೆ ಕೊನೆಯ ಮೂರು ಓವರ್‌ಗಳಲ್ಲಿ 43 ರನ್‌ಗಳು ಬೇಕಾಗಿದ್ದವು. ಅಲ್ಲಿಂದ, ವಿಲ್ ಜ್ಯಾಕ್ಸ್ ಮತ್ತು ರೆಹಾನ್ ಅಹ್ಮದ್, ಗ್ಲೆನ್ ಫಿಲಿಪ್ಸ್ ಅವರ ಮೊದಲ ಓವರ್‌ನಲ್ಲಿ ಎರಡು ಸಿಕ್ಸರ್‌ಗಳು ಮತ್ತು ಎರಡು ಬೌಂಡರಿಗಳನ್ನು ಒಳಗೊಂಡ 22 ರನ್‌ಗಳನ್ನು ಸಿಡಿಸಿದರು. ನಂತರ ನಾಯಕ ಮಿಚೆಲ್ ಸ್ಯಾಂಟ್ನರ್ ಮತ್ತೊಂದು ಪ್ರಮುಖ ತಪ್ಪು ಮಾಡಿದರು.
IND vs ZIM: ಅರ್ಧಶತಕ ಸಿಡಿಸಿದ ತಮ್ಮ ಶಿಷ್ಯ ಅಭಿಷೇಕ್ ಶರ್ಮಾಗೆ ಯುವರಾಜ್ ಸಿಂಗ್ ವಿಶೇಷ ಸಂದೇಶ!
ಅವರು ಮುಂದಿನ ಓವರ್ ಅನ್ನು ಸ್ವತಃ ಬೌಲ್ ಮಾಡಿದರು. ಈ ಓವರ್‌ನಲ್ಲಿ ಜ್ಯಾಕ್ಸ್ ಮತ್ತು ರೆಹಾನ್ 16 ರನ್ ಸಿಡಿಸಿದರು. ಕೊನೆಯ ಓವರ್‌ನಲ್ಲಿ ಗೆಲ್ಲಲು ಕೇವಲ ಐದು ರನ್‌ಗಳು ಬೇಕಾಗಿತ್ತು. ಈ ವೇಳೆ ಸಿಂಗಲ್ ರನ್ ಜೊತೆಗೆ ವಿಲ್ ಜ್ಯಾಕ್ಸ್ ಬೌಂಡರಿ ಗಳಿಸಿ ತಮ್ಮ ತಂಡವನ್ನು ಗೆಲ್ಲಿಸಿದರು. ವಿಲ್ ಜ್ಯಾಕ್ಸ್ 18 ಎಸೆತಗಳಲ್ಲಿ 32 ರನ್ ಗಳಿಸಿ ಅಜೇಯರಾಗಿ ಉಳಿದರು ಮತ್ತು ರೆಹಾನ್ 7 ಎಸೆತಗಳಲ್ಲಿ 19 ರನ್ ಗಳಿಸಿ ಅಜೇಯರಾಗಿ ಉಳಿದರು.
159 ರನ್ ಕಲೆ ಹಾಕಿದ ನ್ಯೂಜಿಲೆಂಡ್
ಇದಕ್ಕೂ ಮುನ್ನ ಇಂಗ್ಲೆಂಡ್‌ನ ಸ್ಪಿನ್ನರ್‌ಗಳು ತಮ್ಮ ಸಾಮರ್ಥ್ಯಗಳನ್ನು ಅದ್ಭುತವಾಗಿ ಪ್ರದರ್ಶಿಸಿದರು, ನ್ಯೂಜಿಲೆಂಡ್ ತಂಡವನ್ನು 7 ವಿಕೆಟ್‌ಗೆ 159 ರನ್‌ಗಳಿಗೆ ಸೀಮಿತಗೊಳಿಸಿದರು. ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ನ್ಯೂಜಿಲೆಂಡ್‌ನ ಬ್ಯಾಟ್ಸ್‌ಮನ್‌ಗಳು ಉತ್ತಮವಾಗಿ ಆಡುವಲ್ಲಿ ವಿಫಲರಾದರು. ಗ್ಲೆನ್ ಫಿಲಿಪ್ಸ್ (28 ಎಸೆತಗಳಲ್ಲಿ 39 ರನ್‌ಗಳು), ಟಿಮ್ ಸೈಫರ್ಟ್ (25 ಎಸೆತಗಳಲ್ಲಿ 35 ರನ್‌ಗಳು), ಮತ್ತು ಫಿನ್ ಅಲೆನ್ (19 ಎಸೆತಗಳಲ್ಲಿ 29 ರನ್‌ಗಳು) ಬ್ಯಾಟಿಂಗ್‌ನಲ್ಲಿ ಗಮನಾರ್ಹ ಕೊಡುಗೆ ನೀಡಿದರು.
ಇಂಗ್ಲೆಂಡ್ ತಂಡದ ಸ್ಪಿನ್ನರ್‌ಗಳು ಮೋಡಿ
ಇಂಗ್ಲೆಂಡ್ ಪರ, ವಿಲ್ ಜ್ಯಾಕ್ಸ್ (2/23), ಆದಿಲ್ ರಶೀದ್ (2/28), ಮತ್ತು ರೆಹಾನ್ ಅಹ್ಮದ್ (2/28) ಅವರ ಸ್ಪಿನ್ ತ್ರಿವಳಿ ಅದ್ಭುತ ಬೌಲಿಂಗ್ ಪ್ರದರ್ಶನವನ್ನು ತೋರಿದರು. ವೇಗದ ಬೌಲರ್‌ಗಳ ಆರಂಭಿಕ ಹೊಡೆತ ನೀಡಿದ ನಂತರ, ಸ್ಪಿನ್ನರ್‌ಗಳು ಮಧ್ಯದ ಓವರ್‌ಗಳಲ್ಲಿ ನ್ಯೂಜಿಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿ ಹಾಕಿದರು.
T20 World Cup: ಅಭಿಷೇಕ್ ಶರ್ಮಾರನ್ನು ʻಸ್ಲಾಗರ್ʼ ಎಂದಿದ್ದ ಮೊಹಮ್ಮದ್ ಆಮಿರ್ ಯು-ಟರ್ನ್!
ಪಾಕಿಸ್ತಾನ ತಂಡದ ಸೆಮಿಫೈನಲ್ ಲೆಕ್ಕಾಚಾರ
ನ್ಯೂಜಿಲೆಂಡ್ ತಂಡವನ್ನು ಹಿಂದಿಕ್ಕಿ ಸೆಮಿಫೈನಲ್‌ಗೆ ಅರ್ಹತೆ ಪಡೆಯಲು ಪಾಕಿಸ್ತಾನ, ಶ್ರೀಲಂಕಾ ವಿರುದ್ಧ 65 ರನ್‌ಗಳಿಂದ ಗೆಲ್ಲಬೇಕು ಅಥವಾ 13.1 ಓವರ್‌ಗಳಲ್ಲಿ ಗುರಿಯನ್ನು ಬೆನ್ನಟ್ಟಬೇಕು. ಇಂಗ್ಲೆಂಡ್ ತಂಡ ಸೆಮಿಫೈನಲ್‌ಗಾಗಿ ಮುಂಬೈಗೆ ಪ್ರಯಾಣಿಸಲಿದೆ, ಅಲ್ಲಿ ಅವರು ಭಾರತ ಅಥವಾ ವೆಸ್ಟ್ ಇಂಡೀಸ್ ಪೈಕಿ ಒಂದು ತಂಡವನ್ನು ಎದುರಿಸಲಿದೆ. ಮಾರ್ಚ್ ಒಂದರಂದು ಭಾರತ ಹಾಗೂ ವಿಂಡೀಸ್ ಸೆಮೀಸ್‌ಗಾಗಿ ಕಾದಾಟ ನಡೆಸಲಿವೆ. ಈ ಪಂದ್ಯ ಗೆದ್ದ ತಂಡ ಅಂತಿಮ ನಾಲ್ಕರ ಘಟ್ಟಕ್ಕೆ ತಲುಪಲಿದೆ.