ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

John Turner: ಕೇವಲ 25ನೇ ವಯಸ್ಸಿನಲ್ಲಿ ವೃತ್ತಿಪರ ಕ್ರಿಕೆಟ್‌ಗೆ ವಿದಾಯ ಹೇಳಿದ ಜಾನ್‌ ಟರ್ನರ್‌!

ದೀರ್ಘಾವಧಿ ಬೆನ್ನು ನೋವಿನ ಸಮಸ್ಯೆಯಿಂದ ಇಂಗ್ಲೆಂಡ್‌ ತಂಡದ ಯುವ ವೇಗಿ ಜಾನ್‌ ಟರ್ನರ್‌ ಅವರು ತಮ್ಮ 25ನೇ ವಯಸ್ಸಿನಲ್ಲಿ ವೃತ್ತಿ ಪರ ಕ್ರಿಕೆಟ್‌ ಜೀವನಕ್ಕೆ ವಿದಾಯ ಹೇಳಿದ್ದಾರೆ. ಹ್ಯಾಂಪ್‌ಶೈರ್‌ ವೇಗಿ 2024ರಲ್ಲಿ ನಾಲ್ಕು ಅಂತಾರಾಷ್ಟ್ರೀಯ ವೈಟ್‌ಬಾಲ್‌ ಪಂದ್ಯಗಳನ್ನು ಆಡಿದ್ದಾರೆ. ಫಿಟ್‌ನೆಸ್‌ ಸಮಸ್ಯೆಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿದ್ದೇನೆಂದು ಅವರು ಹೇಳಿದ್ದಾರೆ.

ಕ್ರಿಕೆಟ್‌ಗೆ 25ನೇ ವಯಸ್ಸಿನಲ್ಲಿ ನಿವೃತ್ತಿ ಘೋಷಿಸಿದ ಜಾನ್‌ ಟರ್ನರ್‌.

ಲಂಡನ್‌: ಇಂಗ್ಲೆಂಡ್‌ನ ಯುವ ವೇಗಿ ಜಾನ್ ಟರ್ನರ್ (John Turner) ಬೆನ್ನುನೋವಿನ ಗಾಯದಿಂದಾಗಿ ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. 2024ರಲ್ಲಿ ಇಂಗ್ಲೆಂಡ್ ಪರ (England Cricket) ನಾಲ್ಕು ವೈಟ್‌ಬಾಲ್ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದ ಅವರು, ಮೂರು ವಿಕೆಟ್‌ಗಳನ್ನು ಕಬಳಿಸಿದ್ದರು. ಆದರೆ ಬೆನ್ನಿನ ಸ್ಟ್ರೆಸ್ ಫ್ರ್ಯಾಕ್ಚರ್ ಸಮಸ್ಯೆಯಿಂದಾಗಿ 2025ರ ಜೂನ್ ಬಳಿಕ ಯಾವುದೇ ವೃತ್ತಿಪರ ಪಂದ್ಯದಲ್ಲಿ ಆಡಿರಲಿಲ್ಲ.

25 ವರ್ಷದ ಟರ್ನರ್ ಕಳೆದ ವರ್ಷದ ಅಂತ್ಯದವರೆಗೆ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ECB) ಅಭಿವೃದ್ಧಿ ಒಪ್ಪಂದದ ಭಾಗವಾಗಿದ್ದರು. ಅಲ್ಲದೆ, ಒಂದು ವರ್ಷದ ಹಿಂದಷ್ಟೇ 2027ರ ಋತುವಿನ ಅಂತ್ಯದವರೆಗೆ ಹ್ಯಾಂಪ್‌ಶೈರ್ ತಂಡದೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಆದರೆ ನಿರಂತರ ಗಾಯಗಳಿಂದಾಗಿ ಹೆಚ್ಚಿನ ಸಮಯ ಮೈದಾನದಿಂದ ದೂರವೇ ಉಳಿಯಬೇಕಾಯಿತು.

ಈ ಹಿನ್ನೆಲೆಯಲ್ಲಿ ನಿವೃತ್ತಿ ಘೋಷಿಸಿರುವ ಟರ್ನರ್ ತಮ್ಮ ಹೇಳಿಕೆಯಲ್ಲಿ, "ವೃತ್ತಿಪರ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುವುದು ನನ್ನ ಬಾಲ್ಯದ ಕನಸಾಗಿತ್ತು. ಹ್ಯಾಂಪ್‌ಶೈರ್ ಹಾಗೂ ಇಂಗ್ಲೆಂಡ್ ಪರ ಆಡುವ ಅವಕಾಶ ಸಿಕ್ಕಿದ್ದು, ಆ ಕನಸು ನನಸಾದಂತಾಗಿದೆ," ಎಂದು ತಿಳಿಸಿದ್ದಾರೆ.

2027ರ ಏಕದಿನ ವಿಶ್ವಕಪ್‌ ಟೂರ್ನಿಗೆ ಭಾರತ ತಂಡವನ್ನು ಆರಿಸಿದ ಸುನೀಲ್‌ ಗವಾಸ್ಕರ್‌!

"ಆದರೆ, ಈಗ ನಾನು ವೃತ್ತಿಪರ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದೇನೆ. ನೀವು ಊಹಿಸಬಹುದಾದಂತೆ, ಇದು ನನ್ನ ಜೀವನದ ಅತ್ಯಂತ ಕಠಿಣ ನಿರ್ಧಾರಗಳಲ್ಲಿ ಒಂದಾಗಿದೆ. ಒಂದು ವರ್ಷಕ್ಕೂ ಹೆಚ್ಚು ಕಾಲ ನನ್ನನ್ನು ಮೈದಾನದಿಂದ ದೂರವಿಟ್ಟ ಬೆನ್ನಿನ ಸ್ಟ್ರೆಸ್ ಫ್ರ್ಯಾಕ್ಚರ್ ಹಾಗೂ ಪದೇ ಪದೇ ಕಾಡಿದ ಗಾಯಗಳ ಕಾರಣದಿಂದ, ಕ್ರಿಕೆಟಿಗನಾಗಿ ನನ್ನ ಭವಿಷ್ಯದ ಬಗ್ಗೆ ಮಾತ್ರವಲ್ಲದೆ ಕ್ರಿಕೆಟ್ ನಂತರದ ಜೀವನದ ಬಗ್ಗೆಯೂ ಗಂಭೀರವಾಗಿ ಯೋಚಿಸಲು ಆರಂಭಿಸಿದೆ. ಈ ಎಲ್ಲವನ್ನು ಪರಿಗಣಿಸಿದ ಬಳಿಕ, ಜೀವನದ ಮುಂದಿನ ಅಧ್ಯಾಯವನ್ನು ಆರಂಭಿಸಲು ಇದೇ ಸರಿಯಾದ ಸಮಯ ಎಂದು ನಾನು ನಿರ್ಧರಿಸಿದ್ದೇನೆ," ಎಂದು ಜಾನ್ ಟರ್ನರ್ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾದಿಂದ ಇಂಗ್ಲೆಂಡ್‌ವರೆಗೆ ಜಾನ್ ಟರ್ನರ್ ಅವರ ಕ್ರಿಕೆಟ್ ಪಯಣ

ಜಾನ್ ಟರ್ನರ್ 2021ರಲ್ಲಿ ದಕ್ಷಿಣ ಆಫ್ರಿಕಾದಿಂದ ಯುನೈಟೆಡ್ ಕಿಂಗ್‌ಡಮ್‌ಗೆ ಸ್ಥಳಾಂತರಗೊಂಡಿದ್ದರು. ಅದೇ ವರ್ಷ ಹ್ಯಾಂಪ್‌ಶೈರ್ ಪರ ಒನ್-ಡೇ ಕಪ್‌ನಲ್ಲಿ ಪದಾರ್ಪಣೆ ಮಾಡಿದ್ದರು. ಅವರ ವೃತ್ತಿಪರ ಕ್ರಿಕೆಟ್‌ನ ಮೊದಲ ವಿಕೆಟ್ ಇಂಗ್ಲೆಂಡ್‌ನ ಮಾಜಿ ನಾಯಕ ಅಲಿಸ್ಟರ್ ಕುಕ್ ಅವರದ್ದಾಗಿತ್ತು. ಆ ಟೂರ್ನಿಯಲ್ಲಿ ಹ್ಯಾಂಪ್‌ಶೈರ್ ಪರ ಜಂಟಿ ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಯನ್ನು ಕೂಡ ಪಾತ್ರರಾಗಿದ್ದರು.

ʻಗಲ್ಲಿ ಕ್ರಿಕೆಟ್‌ ಆಡುತ್ತಿದ್ದೀರಾ?ʼ: ರೋಹಿತ್‌ ಶರ್ಮಾ ಬೈದಿದ್ದ ಘಟನೆಯನ್ನು ನೆನೆದ ಯಶಸ್ವಿ ಜೈಸ್ವಾಲ್‌!

ಇದಾದ ಬಳಿಕ ಶ್ರೀಲಂಕಾ ಡೆವಲಪ್‌ಮೆಂಟ್ ಇಲೆವೆನ್ ವಿರುದ್ಧದ ತಮ್ಮ ಪ್ರಥಮ ಪ್ರಥಮ ದರ್ಜೆ ಪಂದ್ಯದಲ್ಲೇ ಐದು ವಿಕೆಟ್‌ಗಳನ್ನು ಕಬಳಿಸಿ ಗಮನ ಸೆಳೆದರು. ನಂತರ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಆರು ಪಂದ್ಯಗಳನ್ನು ಆಡಿದರು. 2025ರ ಆರಂಭದಲ್ಲಿ ಲ್ಯಾಂಕಶೈರ್ ತಂಡದ ಪರ ಆಡಿದರೂ, ಗಾಯಗಳು ಅವರ ಬೆಳವಣಿಗೆಗೆ ಅಡ್ಡಿಯಾದವು.

ಟಿ20 ಕ್ರಿಕೆಟ್‌ನಲ್ಲಿ ಟರ್ನರ್ ಅತ್ಯಂತ ಪರಿಣಾಮಕಾರಿ ಪ್ರದರ್ಶನ ನೀಡಿದ್ದರು. 2023ರ ಟಿ20 ಬ್ಲಾಸ್ಟ್ ಟೂರ್ನಿಯಲ್ಲಿ 11.76ರ ಸರಾಸರಿಯಲ್ಲಿ 21 ವಿಕೆಟ್ ಪಡೆದು ಮಿಂಚಿದ್ದರು. ಈ ಪ್ರದರ್ಶನವೇ ಅವರಿಗೆ ಅದೇ ವರ್ಷದ ಕೊನೆಯಲ್ಲಿ ಮೊದಲ ಬಾರಿ ಇಂಗ್ಲೆಂಡ್ ತಂಡದಿಂದ ಕರೆ ಬರುವಂತೆ ಮಾಡಿತು. ಇದಲ್ಲದೆ, ದಿ ಹಂಡ್ರೆಡ್ ಟೂರ್ನಿಯಲ್ಲಿ ಟ್ರೆಂಟ್ ರಾಕೆಟ್ಸ್ ತಂಡವನ್ನು ಪ್ರತಿನಿಧಿಸಿದ ಅವರು ಐದು ಪಂದ್ಯಗಳಲ್ಲಿ ಆರು ವಿಕೆಟ್‌ಗಳನ್ನು ಪಡೆದು ಉತ್ತಮ ಪ್ರದರ್ಶನ ನೀಡಿದ್ದರು.