ʻಗಲ್ಲಿ ಕ್ರಿಕೆಟ್ ಆಡುತ್ತಿದ್ದೀರಾ?ʼ: ರೋಹಿತ್ ಶರ್ಮಾ ಬೈದಿದ್ದ ಘಟನೆಯನ್ನು ನೆನೆದ ಯಶಸ್ವಿ ಜೈಸ್ವಾಲ್!
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಅವರು ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದ್ದಾರೆ. ತಮಗೆ ಮಾಜಿ ನಾಯಕ ರೋಹಿತ್ ಶರ್ಮಾ ಒನ್ನೆ ಬೈದಿದ್ದ ಹಾಸ್ಯಕರ ಪ್ರಸಂಗವನ್ನು ಎಡಗೈ ಬ್ಯಾಟ್ಸ್‌ಮನ್ ಇದೀಗ ರಿವೀಲ್ ಮಾಡಿದ್ದಾರೆ.
ರೋಹಿತ್ ಶರ್ಮಾ ಬೈದಿದ್ದ ಘಟನೆ ನೆನೆದ ಜೈಸ್ವಾಲ್. -
ನವದೆಹಲಿ: ಶ್ರೀಲಂಕಾ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗೆ (IND vs SL) ಭಾರತ ತಂಡ ಸಿದ್ಧತೆ ನಡೆಸುತ್ತಿರುವ ನಡುವೆ ಯುವ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ (Yashasvi jaiswal), ಮಾಜಿ ನಾಯಕ ರೋಹಿತ್ ಶರ್ಮಾ (Rohit Sharma)ಅವರೊಂದಿಗಿನ ಒಂದು ತಮಾಷೆಯ ಪ್ರಸಂಗವೊಂದನ್ನು ನೆನೆದು ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಭಾರತ ತಂಡದ ಅಭ್ಯಾಸದ ಕೆಲವು ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಜೈಸ್ವಾಲ್, ಅದಕ್ಕೆ ನೀಡಿದ ಶೀರ್ಷಿಕೆ ಕ್ರಿಕೆಟ್ ಅಭಿಮಾನಿಗಳಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಯಿತು.
"ಒಬ್ಬ ದಿಗ್ಗಜ ಹೇಳಿದಂತೆ – 'ಜಬ್ ತಕ್ ಖೇಲೇಗಾ ನಹೀಂ, ತಬ್ ತಕ್ ಉತ್ತ್ನೇಕಾ ನಹೀಂ'" ಎಂದು ಜೈಸ್ವಾಲ್ ಬರೆದುಕೊಂಡಿದ್ದಾರೆ.
ಈ ಸಾಲು 2024-25ರ ಬಾರ್ಡರ್-ಗವಾಸ್ಕರ್ ಟ್ರೋಫಿ ವೇಳೆ ನಡೆದ ಒಂದು ವೈರಲ್ ಘಟನೆಯನ್ನು ನೆನಪಿಸಿತು. ಆ ಪಂದ್ಯದಲ್ಲಿ ಜೈಸ್ವಾಲ್, ಫಾರ್ವರ್ಡ್ ಶಾರ್ಟ್ ಲೆಗ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದರು. ಸ್ಟೀವ್ ಸ್ಮಿತ್ ಚೆಂಡನ್ನು ಸಂಪೂರ್ಣವಾಗಿ ಆಡಲು ಮುನ್ನವೇ ಜೈಸ್ವಾಲ್ ಎದ್ದು ನಿಂತಿದ್ದರು. ಅದನ್ನು ಗಮನಿಸಿದ ಅಂದಿನ ನಾಯಕ ರೋಹಿತ್ ಶರ್ಮಾ ತಕ್ಷಣವೇ, "ಅರೇ ಜಸ್ಸು, ಗಲ್ಲಿ ಕ್ರಿಕೆಟ್ ಆಡ್ತಿದಿಯಾ? ಕೆಳಗೆ ಕೂತು... ಬ್ಯಾಟರ್ ಚೆಂಡು ಆಡುವವರೆಗೂ ಏಳಬೇಡ!" ಎಂದು ಸ್ಟಂಪ್ ಮೈಕ್‌ನಲ್ಲಿ ಗದರಿಸಿದ್ದರು.
2027ರ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ತಂಡವನ್ನು ಆರಿಸಿದ ಸುನೀಲ್ ಗವಾಸ್ಕರ್!
ರೋಹಿತ್ ಅವರ ಆ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿ, ಆಸ್ಟ್ರೇಲಿಯಾ ಪ್ರವಾಸದ ಅತ್ಯಂತ ಮನರಂಜನೆಯ ಕ್ಷಣಗಳಲ್ಲಿ ಒಂದಾಗಿ ಪರಿಣಮಿಸಿತ್ತು. ಈಗ ಹಲವು ತಿಂಗಳುಗಳ ಬಳಿಕ ಜೈಸ್ವಾಲ್ ತಮ್ಮ ಇನ್‌ಸ್ಟಾಗ್ರಾಂ ಪೋಸ್ಟ್ ಮೂಲಕ ಅದೇ ಘಟನೆಯನ್ನು ಮತ್ತೆ ನೆನಪಿಸಿ ಅಭಿಮಾನಿಗಳಿಗೆ ನಗು ತಂದಿದ್ದಾರೆ.
ಇದೀಗ ಭಾರತ ತಂಡ ಆಗಸ್ಟ್ 15ರಂದು ಗಾಲೆಯಲ್ಲಿ ಆರಂಭವಾಗಲಿರುವ ಟೆಸ್ಟ್ ಸರಣಿಯ ಮೊದಲನೇ ಪಂದ್ಯದಲ್ಲಿ ಶ್ರೀಲಂಕಾವನ್ನು ಎದುರಿಸಲು ಸಜ್ಜಾಗಿದೆ. ಶುಭಮನ್ ಗಿಲ್ ನಾಯಕತ್ವದ ತಂಡಕ್ಕೆ ಈ ಸರಣಿ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಲಯ ಕಂಡುಕೊಳ್ಳಲು ಮಹತ್ವದ್ದಾಗಿದೆ.
ಭಾರತದ ಬ್ಯಾಟಿಂಗ್ ಕ್ರಮಾಂಕದಲ್ಲಿ ಜೈಸ್ವಾಲ್ ಮತ್ತೊಮ್ಮೆ ಪ್ರಮುಖ ಪಾತ್ರ ವಹಿಸುವ ನಿರೀಕ್ಷೆಯಿದೆ. ಟೆಸ್ಟ್ ಪದಾರ್ಪಣೆಯ ಬಳಿಕ ಅವರು 29 ಪಂದ್ಯಗಳಲ್ಲಿ 48.75ರ ಸರಾಸರಿಯಲ್ಲಿ 2,535 ರನ್ ಗಳಿಸಿದ್ದು, ಏಳು ಶತಕ ಮತ್ತು 13 ಅರ್ಧಶತಕಗಳನ್ನು ದಾಖಲಿಸಿದ್ದಾರೆ.
ENG vs PAK ಟೆಸ್ಟ್ ಸರಣಿಗೆ 16 ಸದಸ್ಯರ ಇಂಗ್ಲೆಂಡ್ ತಂಡ ಪ್ರಕಟ, ಜೋರ್ಡನ್ ಕಾಕ್ಸ್ ಔಟ್!
ಆದರೆ ಇತ್ತೀಚಿನ ಕೆಲವು ಸರಣಿಗಳಲ್ಲಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಮತ್ತೆ ಉತ್ತಮ ಲಯ ಕಂಡುಕೊಂಡು ಭಾರತದ ಟೆಸ್ಟ್ ಬ್ಯಾಟಿಂಗ್ ಕ್ರಮಾಂಕದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳುವ ಗುರಿಯನ್ನು ಜೈಸ್ವಾಲ್ ಹೊಂದಿದ್ದಾರೆ.
ಶ್ರೀಲಂಕಾ ಟೆಸ್ಟ್ ಸರಣಿಗೆ ಭಾರತ ತಂಡ: ಶುಭಮನ್ ಗಿಲ್ (ನಾಯಕ), ಕೆಎಲ್ ರಾಹುಲ್ (ಉಪ ನಾಯಕ), ಯಶಸ್ವಿ ಜೈಸ್ವಾಲ್, ರಿಷಭ್ ಪಂತ್ (ವಿಕೆಟ್ ಕೀಪರ್), ಸಾಯಿ ಸುದರ್ಶನ್*, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರವೀಂದ್ರ ಜಡೇಜಾ, ಕುಲ್ದೀಪ್ ಯಾದವ್, ಮಾನವ್ ಸುತಾರ್, ಆಕಿಬ್ ನಬಿ, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ, ಗುರ್ನೂರ್ ಬ್ರಾರ್, ದೇವದತ್ ಪಡಿಕ್ಕಲ್, ಸಾರಾಂಶ್ ಜೈನ್