ಲೀಡ್ಸ್: ಇಲ್ಲಿನ ಹೆಡಿಂಗ್ಲೆ ಕ್ರಿಕೆಟ್ ಕ್ರೀಡಾಂಗಣದಲ್ಲಿ ಇದೀಗ ಆರಂಭವಾದ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು (IND vs ENG) ಕಾದಾಟ ನಡೆಸುತ್ತಿವೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಶುಭಮನ್ ಗಿಲ್ (Shubman Gill) ನಾಯಕತ್ವದ ಭಾರತ ತಂಡ ಮೊದಲು ಬ್ಯಾಟ್ ಮಾಡಲಿದೆ. ಈ ಪಂದ್ಯದ ಮೂಲಕ ಉಭಯ ತಂಡಗಳು ನಾಲ್ಕನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ (WTC 2025-27) ಅಭಿಯಾನವನ್ನು ಆರಂಭಿಸಲಿವೆ.
ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿದ್ದವು. ಈ ಹಿನ್ನೆಲೆಯಲ್ಲಿ ಈ ಸರಣಿಯನ್ನು ಗೆದ್ದು 2025-27ರ ಸಾಲಿನ ಟೆಸ್ಟ್ ಚಾಂಪಿಯನ್‌ಷಿಪ್ ಟೂರ್ನಿಯಲ್ಲಿ ಶುಭಾರಂಭ ಕಾಣಲು ಎದುರು ನೋಡುತ್ತಿದೆ. ಈ ಸರಣಿಯಲ್ಲಿ ಉಭಯ ತಂಡಗಳು ಐದು ಟೆಸ್ಟ್ ಪಂದ್ಯಗಳನ್ನು ಆಡಲಿವೆ.
IND vs ENG: ಟೆಸ್ಟ್‌ನಲ್ಲಿ ಆಂಗ್ಲರ ಬಾಝ್ಬಾಲ್ ಆಟ ಎಂದರೇನು?
ಟೆಸ್ಟ್ ಕ್ರಿಕೆಟ್‌ಗೆ ಸಾಯಿ ಸುದರ್ಶನ್ ಪದಾರ್ಪಣೆ
ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಇದೇ ಮೊದಲ ಬಾರಿ ಸಾಯಿ ಸುದರ್ಶನ್ ಸ್ಥಾನವನ್ನು ಪಡೆದಿದ್ದಾರೆ. ಆ ಮೂಲಕ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಇನ್ನು ನಿರೀಕ್ಷೆಯಂತೆ ಕನ್ನಡಿಗ ಕರುಣ್ ನಾಯರ್ ಅವರು 8 ವರ್ಷಗಳ ಬಳಿಕ ಟೆಸ್ಟ್ ಪಂದ್ಯವನ್ನು ಆಡುತ್ತಿದ್ದಾರೆ. ಮತ್ತೊಬ್ಬ ಕನ್ನಡಿಗ ಪ್ರಸಿಧ್ ಕೃಷ್ಣ ಕೂಡ ಮೊದಲನೇ ಟೆಸ್ಟ್ ಪಂದ್ಯದ ಪ್ಲೇಯಿಂಗ್ xiನಲ್ಲಿ ಸ್ಥಾನವನ್ನು ಪಡೆದಿದ್ದಾರೆ.
ನಿತೀಶ್ ರೆಡ್ಡಿ ಔಟ್, ಶಾರ್ದುಲ್ ಇನ್
ಇನ್ನು ಪ್ಲೇಯಿಂಗ್ xiನಲ್ಲಿ ಮತ್ತೊಂದು ಮಹತ್ವದ ಬದಲಾವಣೆಯನ್ನು ನಾವು ನೋಡಬಹುದು. ಆಸ್ಟ್ರೇಲಿಯಾ ವಿರುದ್ದದ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಗಮನಾರ್ಹ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದ ನಿತೀಶ್ ರೆಡ್ಡಿ ಅವರನ್ನು ಕೈ ಬಿಡುವ ಮೂಲಕ ಇವರ ಸ್ಥಾನಕ್ಕೆ ಶಾರ್ದುಲ್ ಠಾಕೂರ್‌ಗೆ ಅವಕಾಶವನ್ನು ನೀಡಲಾಗಿದೆ. ಏಕೆಂದರೆ ಶಾರ್ದುಲ್, ಬೌಲಿಂಗ್‌ನಲ್ಲಿ ರೆಡ್ಡಿಗಿಂತ ಉತ್ತಮ ಗುಣಮಟ್ಟವನ್ನು ಹೊಂದಿದ್ದಾರೆ.
ಇನ್ನು ಇಂಗ್ಲೆಂಡ್ ತಂಡ ಎರಡು ದಿನಗಳ ಮೊದಲೇ ತನ್ನ ಪ್ಲೇಯಿಂಗ್ XI ಅನ್ನು ಪ್ರಕಟಿಸಿತ್ತು. ಜಾಕೋಬ್ ಬೆಥೆಲ್ ಅವರ ಸ್ಥಾನಕ್ಕೆ ಒಲ್ಲಿ ಪೋಪ್ ಅವರನ್ನು ಆಯ್ಕೆ ಮಾಡಲಾಗಿತ್ತು. ಏಕೆಂದರೆ ಜಿಂಬಾಬ್ವೆ ವಿರುದ್ದದ ಏಕೈಕ ಟೆಸ್ಟ್ ಪಂದ್ಯದಲ್ಲಿ ಅವರು ದ್ವಿಶತಕವನ್ನು ಬಾರಿಸಿದ್ದರು.
ಉಭಯ ತಂಡಗಳ ಪ್ಲೇಯಿಂಗ್ XI
ಭಾರತ: ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್, ಸಾಯಿ ಸುದರ್ಶನ್, ಶುಭಮನ್ ಗಿಲ್ (ನಾಯಕ), ರಿಷಭ್ ಪಂತ್(ವಿ.ಕೀ), ಕರುಣ್ ನಾಯರ್, ರವೀಂದ್ರ ಜಡೇಜಾ, ಶಾರ್ದುಲ್ ಠಾಕೂರ್, ಜಸ್‌ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿಧ್ ಕೃಷ್ಣ
ಇಂಗ್ಲೆಂಡ್: ಝ್ಯಾಕ್ ಕ್ರಾವ್ಲಿ, ಬೆನ್ ಡಕೆಟ್, ಒಲ್ಲೀ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್ (ವಿ.ಕೀ), ಕ್ರಿಸ್ ವೋಕ್ಸ್, ಬ್ರೈಡೆನ್ ಕಾರ್ಸ್, ಜಾಶ್ ಟಾಂಗ್, ಶೋಯೆಬ್ ಬಶೀರ್