ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻಪ್ರತಿಯೊಬ್ಬರೂ ಮ್ಯಾಚ್‌ ವಿನ್ನರ್‌ʼ: ಎರಡನೇ ಟಿ20ಐ ಗೆಲುವಿನ ಬಳಿಕ ಶ್ರೇಯಸ್‌ ಅಯ್ಯರ್‌ ಹೇಳಿದ್ದಿದು!

ನ್ಯೂಜಿಲೆಂಡ್‌ ವಿರುದ್ಧ ಎರಡನೇ ಟಿ20ಐ ಪಂದ್ಯದಲ್ಲಿ ನಾಲ್ಕು ವಿಕೆಟ್‌ಗಳ ಗೆಲುವಿನ ಬಳಿಕ ಮಾತನಾಡಿದ ಭಾರತ ತಂಡದ ನಾಯಕ ಶ್ರೇಯಸ್‌ ಅಯ್ಯರ್‌, ತಮ್ಮ ತಂಡದ ಆಟಗಾರರನ್ನು ಶ್ಲಾಘಿಸಿದರು. ತಂಡದ ಪ್ರತಿಯೊಬ್ಬರೂ ಮ್ಯಾಚ್‌ ವಿನ್ನರ್‌ಗಳೆಂದು ಕರೆದಿದ್ದಾರೆ. ಇದರ ಜೊತೆಗೆ ತಿಲಕ್‌ ವರ್ಮಾ, ನಿತೀಶ್‌ ರೆಡ್ಡಿ ಹಾಗೂ ನಮನ್‌ ಧೀರ್‌ ಅವರನ್ನು ವಿಶೇಷವಾಗಿ ಗುಣಗಾನ ಮಾಡಿದ್ದಾರೆ.

ಭಾರತ ತಂಡದ ಗೆಲುವಿನ ಬಳಿಕ ಶ್ರೇಯಸ್‌ ಅಯ್ಯರ್‌ ಪ್ರತಿಕ್ರಿಯೆ.

ಕ್ರೈಸ್ಟ್‌ ಚರ್ಚ್‌: ಇಲ್ಲಿನ ಹ್ಯಾಗ್ಲಿ ಓವಲ್‌ನಲ್ಲಿ ಶನಿವಾರ (ಅಕ್ಟೋಬರ್ 24) ನಡೆದಿದ್ದ ಎರಡನೇ ಟಿ20ಐ ಪಂದ್ಯದಲ್ಲಿ (IND vs NZ) ಭಾರತ ತಂಡ ಅಸಾಧಾರಣ ಪ್ರದರ್ಶನ ನೀಡಿ 181 ರನ್‌ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿತು. ಒಂದು ಹಂತದಲ್ಲಿ ಸೋಲಿನ ಸುಳಿಗೆ ಸಿಲುಕಿದ್ದ ಟೀಮ್ ಇಂಡಿಯಾ, ತಿಲಕ್ ವರ್ಮಾ (Tialk Verma) ಹಾಗೂ ನಿತೀಶ್ ಕುಮಾರ್ ರೆಡ್ಡಿ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಸ್ಮರಣೀಯ ಗೆಲುವು ದಾಖಲಿಸಿತು. ಈ ಗೆಲುವಿನೊಂದಿಗೆ ಭಾರತ ಐದು ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿತು.

ಗುರಿ ಬೆನ್ನಟ್ಟಿದ ಭಾರತ ತಂಡ 14.5 ಓವರ್‌ಗಳಲ್ಲಿ 112 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಇನ್ನು ಕೇವಲ 31 ಎಸೆತಗಳಲ್ಲಿ 69 ರನ್‌ಗಳ ಅಗತ್ಯವಿದ್ದ ಕಾರಣ ಭಾರತದ ಗೆಲುವಿನ ಸಾಧ್ಯತೆ ಕಡಿಮೆಯಾಗಿತ್ತು. ಆದರೆ, ತಿಲಕ್ ವರ್ಮಾ ಕೊನೆಯವರೆಗೂ ಕ್ರೀಸ್‌ನಲ್ಲಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು.

ತಿಲಕ್ ಕೇವಲ 26 ಎಸೆತಗಳಲ್ಲಿ ಅಜೇಯ 51 ರನ್ ಗಳಿಸಿದರು. 196.15ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ ಅವರು ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ಸಿಡಿಸಿದರು. ಮತ್ತೊಂದೆಡೆ, ನಿತೀಶ್ ಕುಮಾರ್ ರೆಡ್ಡಿ 13 ಎಸೆತಗಳಲ್ಲಿ ಅಜೇಯ 26 ರನ್ ಗಳಿಸಿ ಉತ್ತಮ ಸಾಥ್ ನೀಡಿದರು. ಈ ಇಬ್ಬರು ಕೇವಲ 30 ಎಸೆತಗಳಲ್ಲಿ ಮುರಿಯದ 69 ರನ್‌ಗಳ ಜೊತೆಯಾಟವಾಡಿ ಭಾರತಕ್ಕೆ ಗೆಲುವು ತಂದುಕೊಟ್ಟರು.

IND vs NZ: 38 ವಿಕೆಟ್‌ಗಳೊಂದಿಗೆ ಭುವನೇಶ್ವರ್‌ ಕುಮಾರ್‌ ದಾಖಲೆ ಮುರಿದ ಅರ್ಷದೀಪ್‌ ಸಿಂಗ್!

ತಿಲಕ್‌-ನಿತೀಶ್‌ ಪ್ರದರ್ಶನಕ್ಕೆ ಶ್ರೇಯಸ್ ಅಯ್ಯರ್ ಮೆಚ್ಚುಗೆ

ಭಾರತದ ಗೆಲುವಿನ ಬಳಿಕ ನಾಯಕ ಶ್ರೇಯಸ್ ಅಯ್ಯರ್ ಆಟಗಾರರ ಪ್ರದರ್ಶನವನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಾಗ ಪಂದ್ಯ ಕೈತಪ್ಪುತ್ತಿದೆ ಎಂದು ಭಾವಿಸಿದ್ದಾಗಿ ಅವರು ಒಪ್ಪಿಕೊಂಡರು. ಆದರೆ, ತಿಲಕ್ ಮತ್ತು ನಿತೀಶ್ ತೋರಿದ ಹೋರಾಟದ ಮನೋಭಾವ ತಂಡವನ್ನು ಗೆಲುವಿನತ್ತ ಕೊಂಡೊಯ್ದಿತು ಎಂದು ಹೇಳಿದರು.

“ಪ್ರತಿಯೊಬ್ಬ ಆಟಗಾರ ಪಂದ್ಯ ಗೆಲ್ಲಿಸಬಲ್ಲ ಸಾಮರ್ಥ್ಯ ಹೊಂದಿದ್ದಾರೆ ಎಂಬುದಕ್ಕೆ ಈ ಪಂದ್ಯವೇ ಉದಾಹರಣೆ. ನಾವು ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಾಗ ಪಂದ್ಯ ನಮ್ಮ ಕೈಯಿಂದ ಜಾರುತ್ತಿದೆ ಎಂದು ಭಾವಿಸಿದ್ದೆ. ಆದರೆ, ನಿತೀಶ್ ಮತ್ತು ತಿಲಕ್ ಅದ್ಭುತ ಹೋರಾಟದ ಮನೋಭಾವ ತೋರಿದರು,” ಎಂದು ಶ್ರೇಯಸ್‌ ಅಯ್ಯರ್ ತಿಳಿಸಿದ್ದಾರೆ.

ನಮನ್ ಧೀರ್ ಅವರ ಕೊಡುಗೆಯನ್ನೂ ನಾಯಕ ವಿಶೇಷವಾಗಿ ಗುಣಗಾನ ಮಾಡಿದರು. “ನಮನ್ ಕೂಡ ನಿರ್ಣಾಯಕ ಇನಿಂಗ್ಸ್ ಆಡಿದರು. ಅವರು ಅತ್ಯುತ್ತಮ ಬೌಲರ್ ಕೂಡ ಹೌದು. ತಂಡಕ್ಕೆ ಅಪಾರ ಹೋರಾಟದ ಮನೋಭಾವವನ್ನು ತರುತ್ತಾರೆ. ಅವರು ಬಹುಮುಖ ಆಟಗಾರ,” ಎಂದು ಅಯ್ಯರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ʻಕೊನೆಯವರೆಗೂ ಆಡಿದ್ರೆ ನಾವು ಗೆಲ್ಲುತ್ತೇವೆʼ: ಗಂಭೀರ್‌ ಸಂದೇಶವನ್ನು ರಿವೀಲ್‌ ಮಾಡಿದ ತಿಲಕ್‌ ವರ್ಮಾ!

ಭಾರತ ತಂಡಕ್ಕೆ ಆರಂಭಿಕ ಆಘಾತ

ಭಾರತ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾದ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ 4.4 ಓವರ್‌ಗಳಲ್ಲಿ 40 ರನ್‌ಗಳನ್ನು ಸೇರಿಸಿದರು. ಆದರೆ, ಸ್ಯಾಮ್ಸನ್ ಔಟಾದ ಬಳಿಕ ಭಾರತ ತಂಡ ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಒಂದು ಹಂತದಲ್ಲಿ 70 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.

ಈ ಸಂದರ್ಭದಲ್ಲಿ ನಮನ್ ಧೀರ್ ಮತ್ತು ತಿಲಕ್ ವರ್ಮಾ ಆರನೇ ವಿಕೆಟ್‌ಗೆ 42 ರನ್‌ಗಳನ್ನು ಸೇರಿಸಿ ಭಾರತದ ಗೆಲುವಿನ ಆಸೆಯನ್ನು ಜೀವಂತವಾಗಿಟ್ಟರು. ನಮನ್ ಆಕ್ರಮಣಕಾರಿ ಆಟವಾಡಿ ಕೇವಲ 17 ಎಸೆತಗಳಲ್ಲಿ 31 ರನ್ ಗಳಿಸಿದರು. ಬಳಿಕ ನಿತೀಶ್ ರೆಡ್ಡಿ ಅವರೊಂದಿಗೆ ತಿಲಕ್ ತಂಡವನ್ನು ಗೆಲುವಿನ ದಡ ಸೇರಿಸಿದರು.