ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʻನೀವು ಯಾವಾಗಲೂ ನಮಗೆ ಸ್ಪೂರ್ತಿʼ: ಕ್ರಿಸ್ಟಿಯಾನೊ ರೊನಾಲ್ಡೊಗೆ ಮೊಹಮ್ಮದ್‌ ಸಿರಾಜ್‌ ವಿಶೇಷ ಸಂದೇಶ!

ಪೋರ್ಚುಗಲ್‌ ತಂಡ 2026ರ ಫಿಫಾ ವಿಶ್ವಕಪ್‌ ಅಂತಿಮ 16ರ ಸುತ್ತಿನಲ್ಲಿ ಸೋಲು ಅನುಭವಿಸುವ ಮೂಲಕ ಟೂರ್ನಿಯಿಂದ ಅಧಿಕೃತವಾಗಿ ಹೊರಬಿದ್ದಿದೆ. ಇದರ ಬೆನ್ನಲ್ಲೆ ಭಾರತ ತಂಡದ ವೇಗಿ ಮೊಹಮ್ಮದ್‌ ಸಿರಾಜ್‌ ತಮ್ಮ ನೆಚ್ಚಿನ ತಾರೆ ಕ್ರಿಸ್ಟಿಯಾನೊ ರೊನಾಲ್ಡೊಗೆ ಭಾವನಾತ್ಮಕ ಸಂದೇಶವನ್ನು ರವಾನಿಸಿದ್ದಾರೆ.

ಕ್ರಿಸ್ಟಿಯಾನೊ ರೊನಾಲ್ಡೊಗೆ ಮೊಹಮ್ಮದ್‌ ಸಿರಾಜ್‌ ಸಂದೇಶ.

ನವದೆಹಲಿ: ಫಿಫಾ ವಿಶ್ವಕಪ್‌ 2026ರ (FIFA World Cup 2026) ಟೂರ್ನಿಯ ಅಂತಿಮ 16ರ ಸುತ್ತಿನಲ್ಲಿ ಸ್ಪೆನ್‌ ಎದುರು ಸೋಲುವ ಮೂಲಕ ಕ್ರಿಸ್ಟಿಯಾನೊ ರೊನಾಲ್ಡೊ (Cristiano Ronaldo) ನಾಯಕತ್ವದ ಪೋರ್ಚುಗಲ್‌ ತಂಡ ಟೂರ್ನಿಯಿಂದ ಎಲಿಮಿನೇಟ್‌ ಆಯಿತು. ರೊನಾಲ್ಡೊ ಅವರು ಕಣ್ಣೀರು ಹಾಕುತ್ತಿರುವ ವಿಡಿಯೊ ಹಾಗೂ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದವು. ಇದನ್ನು ಗಮನಿಸಿದ ಕ್ರಿಕೆಟಿಗ ಮೊಹಮ್ಮದ್‌ ಸಿರಾಜ್‌ (Mohammed Siraj), ತಮ್ಮ ನೆಚ್ಚಿನ ಸ್ಟಾರ್‌ ಫುಟ್‌ಬಾಲ್‌ ಆಟಗಾರನಿಗೆ ಭಾವನಾತ್ಮಕ ಸಂದೇಶವನ್ನು ರವಾನಿಸಿದ್ದಾರೆ. ನಿಮ್ಮ ಶ್ರೇಷ್ಠತೆ ಕೇವಲ ಒಂದು ಪಂದ್ಯದಿಂದ ಮಾತ್ರ ವ್ಯಾಖ್ಯಾನಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಜುಲೈ 6 ರಂದು ಟೆಕ್ಸಾಸ್‌ನ ಆರ್ಲಿಂಗ್ಟನ್‌ ಡಲ್ಲಾಸ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಫಿಫಾ ವಿಶ್ವಕಪ್‌ ಟೂರ್ನಿಯ ಪ್ರೀ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಪೋರ್ಚುಗಲ್‌ ಹಾಗೂ ಸ್ಪೇನ್‌ ತಂಡಗಳು ಕಾದಾಟ ನಡೆಸಿದ್ದವು. ಈ ಪಂದ್ಯದ ನಿಗದಿತ ಅವಧಿಯಲ್ಲಿ ಯಾವುದೇ ತಂಡ ಗೋಲು ಗಳಿಸಿರಲಿಲ್ಲ. ಆದರೆ, ಹೆಚ್ಚುವರಿ ಸಮಯದಲ್ಲಿ ಮೈದಾನಕ್ಕೆ ಆಗಮಿಸಿದ್ದ ಮೈಕಲ್‌ ಮೆರಿನೊ (90+3 ನಿಮಿಷ) ಅವರು ಮ್ಯಾಚ್‌ ವಿನ್ನಿಂಗ್‌ ಗೋಲು ಗಳಿಸುವಲ್ಲಿ ಯಶ್ವಿಯಾದರು. ಆ ಮೂಲಕ ಪೋರ್ಚುಗಲ್‌ ಹಾಗೂ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಫಿಫಾ ವಿಶ್ವಕಪ್‌ ಗೆಲ್ಲುವ ಕನಸು ಭಗ್ನವಾಯಿತು.

FIFA World CUP 2026: ಕ್ರಿಸ್ಟಿಯಾನೊ ರೊನಾಲ್ಡೊ ಕನಸು ಭಗ್ನ, ಸ್ಪೇನ್‌ ಎದುರು ಸೋತು ಟೂರ್ನಿಯಿಂದ ಹೊರಬಿದ್ದ ಪೋರ್ಚುಗಲ್‌!

ಮ್ಯಾಚ್‌ ರೆಫರಿ ಸೀಟಿ ಹೊಡೆಯುತ್ತಿದ್ದಂತೆ ಪೋರ್ಚುಗಲ್‌ ಆಟಗಾರರು ಹಾಗೂ ಅಭಿಮಾನಿಗಳು ದೊಡ್ಡ ಆಘಾತವನ್ನು ಅನುಭವಿಸಿದರು. ಕ್ರಿಸ್ಟಿಯಾನೊ ರೊನಾಲ್ಡೊ ಅವರಂಥ ಶ್ರೇಷ್ಠ ಆಟಗಾರನಿದ್ದರೂ ಕಳೆದ ಆರು ಟೂರ್ನಿಗಳಲ್ಲಿ ಒಂದೇ ಒಂದು ವಿಶ್ವಕಪ್‌ ಗೆಲ್ಲಲು ಸಾಧ್ಯವಾಗಲಿಲ್ಲ ಎಂಬ ನೋವು ಪೋರ್ಚುಗೀಸ್‌ ಅಭಿಮಾನಿಗಳು ಮಾತ್ರವಲ್ಲ, ವಿಶ್ವದಾದ್ಯಂತ ಇರುವ ರೊನಾಲ್ಡೊ ಅವರ ಅಭಿಮಾನಿಗಳಿಗೂ ಕಾಡಿತು. ಪಂದ್ಯದ ಬಳಿಕ ಸ್ವತಃ ರೊನಾಲ್ಡೊ ಅವರೇ ತಮ್ಮ ಭಾವನೆಗಳನ್ನು ತಡೆಯಲು ಸಾಧ್ಯವಾಗದೆ ಕಣ್ಣೀರಿಟ್ಟರು. ಈ ವಿಡಿಯೊ ಹಾಗೂ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.

FIFA World Cup 2026: ಸ್ಪೇನ್‌ ಎದುರು ಸೋಲಿನ ಬೆನ್ನಲ್ಲೆ ಮೈದಾನದಲ್ಲಿಯೇ ಕಣ್ಣೀರಾಕಿದ ಕ್ರಿಸ್ಟಿಯಾನೊ ರೊನಾಲ್ಡೊ!

ಕ್ರಿಸ್ಟಿಯಾನೊ ರೊನಾಲ್ಡೊಗೆ ಸಿರಾಜ್‌ ಭಾವನಾತ್ಮಕ ಸಂದೇಶ

ರೊನಾಲ್ಡೊ ಅವರ ದೊಡ್ಡ ಅಭಿಮಾನಿಯಾಗಿರುವ ಭಾರತ ತಂಡದ ವೇಗಿ ಮೊಹಮ್ಮದ್‌ ಸಿರಾಜ್‌ ಕೂಡ ಪೋರ್ಚುಗಲ್‌ ಸೋಲಿನಿಂದ ಭಾವುಕರಾಗಿದ್ದಾರೆ. ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ತಮ್ಮ ನೆಚ್ಚಿನ ಆಟಗಾರ ರೊನಾಲ್ಡೊಗೆ ಭಾವುಕ ಸಂದೇಶವನ್ನು ರವಾನಿಸಿದ್ದಾರೆ. ಒಂದು ಪಂದ್ಯದಿಂದ ನಿಮ್ಮ ಶ್ರೇಷ್ಠತೆಯನ್ನು ವ್ಯಾಖ್ಯಾನಿಸಲು ಸಾಧ್ಯವಿಲ್ಲ. ನೀವು ಯಾವಾಗಲೂ ನಮಗೆ ಸ್ಪೂರ್ತಿಯಾಗಿದ್ದೀರಿ ಎಂದು ಹೊಗಳಿದ್ದಾರೆ.

"ಇಂದು(ಸೋಮವಾರ) ಏನಾಯಿತು ಎಂಬುದು ಮುಖ್ಯವಲ್ಲ, ನೀವು ಯಾವಾಗಲೂ ನಮಗೆ ಸ್ಪೂರ್ತಿಯಾಗಿದ್ದೀರಿ, ಕ್ರಿಸ್ಟಿಯಾನೊ. ಕೇವಲ ಒಂದೇ ಒಂದು ಪಂದ್ಯ ನಿಮ್ಮ ಶ್ರೇಷ್ಠತೆಯನ್ನು ವ್ಯಾಖ್ಯಾನಿಸುವುದಿಲ್ಲ. ಇಡೀ ವಿಶ್ವದಾದ್ಯಂತ ಅಸಂಖ್ಯಾತ ಮಂದಿಗೆ ಸ್ಪೂರ್ತಿಯಾಗಿರುವುದಕ್ಕೆ ಧನ್ಯವಾದಗಳು," ಎಂದು ತಮ್ಮ ಇನ್‌ಸ್ಟಾಗ್ರಾಮ್‌ ಸ್ಟೋರಿಯನ್ನು ಮೊಹಮ್ಮದ್‌ ಸಿರಾಜ್‌ ಬರೆದುಕೊಂಡಿದ್ದಾರೆ.



ರೊನಾಲ್ಡೊ ಶೈಲಿಯಲ್ಲಿ ಸಂಭ್ರಮಿಸುವ ಸಿರಾಜ್‌

ಕ್ರಿಸ್ಟಿಯಾನೊ ರೊನಾಲ್ಡೊಗೆ ವಿರಾಟ್‌ ಕೊಹ್ಲಿ ಕೂಡ ದೊಡ್ಡ ಅಭಿಮಾನಿ. ಇದನ್ನು ಅವರು ಸಾಕಷ್ಟು ಬಾರಿ ಹೇಳಿಕೊಂಡಿದ್ದಾರೆ ಹಾಗೂ ಒಮ್ಮೆ ಭೇಟಿ ಕೂಡ ಆಗಿದ್ದಾರೆ. ಇವರ ಜೊತೆಗೆ ಆರ್‌ಸಿಬಿ ಮಾಜಿ ಸಹ ಆಟಗಾರ ಸಿರಾಜ್‌ಗೂ ಕೂಡ ಪೋರ್ಚುಗಲ್‌ ಆಟಗಾರ ಎಂದರೆ ಪಂಚ ಪ್ರಾಣ. ಈ ವಿಷಯವನ್ನು ಸಿರಾಜ್‌ ಅನೇಕ ಬಾರಿ ಸಾರ್ವಜನಿಕವಾಗಿ ಬಹಿರಂಗಪಡಿಸಿದ್ದಾರೆ.

ಅಲ್ಲದೆ ಕ್ರಿಕೆಟ್‌ ಪಂದ್ಯಗಳಲ್ಲಿಯೂ ಸಿರಾಜ್‌ ಅದನ್ನು ಸಾಬೀತುಪಡಿಸಿದ್ದಾರೆ. ತಮ್ಮ ಬೌಲಿಂಗ್‌ನಲ್ಲಿ ವಿಕೆಟ್‌ ಪಡೆದ ಬಳಿಕ ರೊನಾಲ್ಡೊ ಶೈಲಿಯಲ್ಲಿ ಸಂಭ್ರಮಿಸಿರುವುದನ್ನು ನಾವು ಸಾಕಷ್ಟು ಬಾರಿ ವೀಕ್ಷಿಸಿದ್ದೇವೆ ಹಾಗೂ ಪಂದ್ಯದ ಬಳಿಕ ಸ್ವತಃ ಸಿರಾಜ್‌ ಅವರೇ ಬಹಿರಂಗಪಡಿಸಿದ್ದರು.