ಚೆನ್ನೈ, ಫೆ.27: ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ(Hardik Pandya) ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಅರ್ಧಶತಕ ಬಾರಿಸುವ ಮೂಲಕ ಪಾಕಿಸ್ತಾನದ ಶೋಯೆಬ್ ಮಲಿಕ್ ಮತ್ತು ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಅವರ ಜಂಟಿ ಟಿ20 ವಿಶ್ವಕಪ್(T20 World Cup) ದಾಖಲೆಯೊಂದನ್ನು ಮುರಿದಿದ್ದಾರೆ.
ಐದನೇ ಕ್ರಮಾಂಕ ಅಥವಾ ಅದಕ್ಕಿಂತ ಕಡಿಮೆ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವ ಮೂಲಕ ಟಿ20 ವಿಶ್ವಕಪ್‌ನಲ್ಲಿ ನಾಲ್ಕು ಅರ್ಧಶತಕಗಳನ್ನು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಹಾರ್ದಿಕ್ ಪಾತ್ರರಾದರು. ನಮೀಬಿಯಾ ವಿರುದ್ಧದ ಪಂದ್ಯದಲ್ಲಿ ಈ ಮೈಲಿಗಲ್ಲು ತಲುಪಿದ ನಂತರ ಈ ಸ್ಟಾರ್ ಆಲ್‌ರೌಂಡರ್ ಈ ಆವೃತ್ತಿಯಲ್ಲಿ ಎರಡು ಬಾರಿ ಅರ್ಧಶತಕ ಬಾರಿಸಿದ್ದಾರೆ. 2024 ಮತ್ತು 2022 ರ ಆವೃತ್ತಿಗಳಲ್ಲಿ ತಲಾ ಒಂದು ಅರ್ಧಶತಕ ಗಳಿಸಿದ್ದರು. ಶೋಯೆಬ್ ಮಲಿಕ್ ಮತ್ತು ಡೇವಿಡ್ ಮಿಲ್ಲರ್ ತಲಾ 3 ಅರ್ಧಶತಕ ಬಾರಿಸಿದ್ದಾರೆ.
ಟಿ20 ವಿಶ್ವಕಪ್‌ನಲ್ಲಿ ಅತ್ಯಧಿಕ ಅರ್ಧಶತಕ ಬಾರಿಸಿದವರು
ಹಾರ್ದಿಕ್ ಪಾಂಡ್ಯ- 4
ಡೇವಿಡ್ ಮಿಲ್ಲರ್- 3
ಶೋಯೆಬ್ ಮಲಿಕ್- 3
ಮಾರ್ಕಸ್ ಸ್ಟೊಯಿನಿಸ್- 3
ಹ್ಯಾರಿ ಬ್ರೂಕ್ (ಇಂಗ್ಲೆಂಡ್)- 2
ಜೆಪಿ ಡುಮಿನಿ- 2
ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ ತಂಡವು 4 ವಿಕೆಟ್‌ಗೆ 256 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ವಿಶ್ವಕಪ್‌ನಲ್ಲಿ ಭಾರತದ ಅತ್ಯಧಿಕ ಮೊತ್ತ ಇದಾಗಿದೆ. ಬೃಹತ್ ಮೊತ್ತ ಬೆನ್ನಟ್ಟಿದ ಜಿಂಬಾಬ್ವೆ ಕೊನೆಯತನಕ ಉತ್ತಮ ಹೋರಾಟ ತೋರಿ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 184 ರನ್ ಗಳಿಸಿ ಹೋರಾಟ ಮುಗಿಸಿತು. ಭಾರತದ ಪರ ಅರ್ಷದೀಪ್ ಸಿಂಗ್ ಮೂರು ವಿಕೆಟ್ ಪಡೆದರು. ಸ್ಪಿನ್ನರ್‌ಗಳಾದ ಅಕ್ಷರ್ ಪಟೇಲ್ ಮತ್ತು ವರುಣ್ ಚಕ್ರವರ್ತಿ ತಲಾ ಒಂದು ವಿಕೆಟ್ ಗಳಿಸಿದರು. ಮಧ್ಯಮ ವೇಗಿ ಶಿವಂ ದುಬೆ (2–0–46–1) ಬಲು ದುಬಾರಿ ಎನಿಸಿದರು.
ಭಾರತ-ವೆಸ್ಟ್ ಇಂಡೀಸ್ ಪಂದ್ಯಕ್ಕೆ ಮಳೆ ಬಂದರೆ ಯಾರಿಗೆ ಲಾಭ?
ಸೂಪರ್ ಎಂಟರ ಎ ಗುಂಪಿನಲ್ಲಿ ಭಾರತ ಸದ್ಯ ಮೂರನೇ ಸ್ಥಾನದಲ್ಲಿದೆ. ಮಾರ್ಚ್ 1ರಂದು ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಕೊನೆಯ ಪಂದ್ಯ ಉಭಯ ತಂಡಗಳಿಗೆ ನಿರ್ಣಾಯಕವಾಗಲಿದೆ. ಒಂದೊಮ್ಮೆ ಭಾರತ-ವಿಂಡೀಸ್ ಪಂದ್ಯ ಮಳೆ ಅಥವಾ ಬೇರಾವುದೇ ಕಾರಣದಿಂದ ರದ್ದುಗೊಂಡರೆ, ಹಾಲಿ ರನ್ರೇಟ್ ಪ್ರಕಾರ ವಿಂಡೀಸ್ ತಂಡವೇ ಸೆಮಿಫೈನಲ್ಗೇರಲಿದೆ. ಜಿಂಬಾಬ್ವೆ ವಿರುದ್ಧ ಭಾರತ 108 ರನ್ಗಳಿಂದ ಗೆದ್ದರಷ್ಟೇ ರನ್ರೇಟ್ನಲ್ಲಿ ವಿಂಡೀಸ್ ತಂಡವನ್ನು ಹಿಂದಿಕ್ಕಬಹುದಾಗಿತ್ತು.