ಶಫಾಲಿ ವರ್ಮಾಗೆ ಶರ್ಮಾಗೆ ಒಂದೋವರೆ ಕೋಟಿ ರು ಚೆಕ್ ನೀಡಿದ ಹರಿಯಾಣ ಸಿಎಂ!
ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಅವರು 2025ರ ಐಸಿಸಿ ಮಹಿಳಾ ವಿಶ್ವಕಪ್ ಚಾಂಪಿಯನ್ ಶಫಾಲಿ ವರ್ಮಾ ಅವರಿಗೆ 1.50 ಕೋಟಿ ರು. ಚೆಕ್ ಮತ್ತು 'ಗ್ರೇಡ್ ಎ' ಕ್ರೀಡಾ ಪ್ರಮಾಣಪತ್ರವನ್ನು ಪ್ರದಾನ ಮಾಡಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಶಫಾಲಿ ವರ್ಮಾ ಸ್ಪೋಟಕ ಅರ್ಧಶತಕ ಬಾರಿಸಿದ್ದರು. ಆ ಮೂಲಕ ಭಾರತದ ಗೆಲುವಿಗೆ ನೆರವು ನೀಡಿದ್ದರು.
ಶಫಾಲಿ ವರ್ಮಾಗೆ ಒಂದೂವರೆ ಕೋಟಿ ರು ನಗದು ಬಹುಮಾನ ನೀಡಿದ ಹರಿಯಾಣ ಸಿಎಂ. -
ನವದೆಹಲಿ: ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ (Nayab Singh Saini) ಬುಧವಾರ ತಮ್ಮ ಅಧಿಕೃತ ನಿವಾಸದಲ್ಲಿ ಭಾರತೀಯ ಮಹಿಳಾ ವಿಶ್ವಕಪ್ (Women's World Cup 2025) ವಿಜೇತ ಭಾರತ ತಂಡದ ಆರಂಭಿಕ ಆಟಗಾರ್ತಿ ಶಫಾಲಿ ವರ್ಮಾ (Shafali Verma) ಅವರನ್ನು ಸನ್ಮಾನಿಸಿದರು. ಸಿಎಂ ಸೈನಿ ಶಫಾಲಿ ವರ್ಮಾಗೆ ಶಾಲು ಹೊದಿಸಿ, 1.50 ಕೋಟಿ ರು.ಗಳ ಚೆಕ್ ಮತ್ತು 'ಗ್ರೇಡ್ ಎ' ಕ್ರೀಡಾ ಪ್ರಮಾಣಪತ್ರವನ್ನು ಪ್ರದಾನ ಮಾಡಿದರು. ದಕ್ಷಿಣ ಆಫ್ರಿಕಾ ವಿರುದ್ಧ ಮಹಿಳಾ ಏಕದಿನ ವಿಶ್ವಕಪ್ ಟೂರ್ನಿಯ ಫೈನಲ್‌ನಲ್ಲಿ ಶಫಾಲಿ ವರ್ಮಾ ಸ್ಪೋಟಕ ಅರ್ಧಶತಕ ಹಾಗೂ ಎರಡು ನಿರ್ಣಾಯಕ ವಿಕೆಟ್‌ಗಳನ್ನು ಕಬಳಿಸಿದ್ದರು. ಆ ಮೂಲಕ ಭಾರತ ಫೈನಲ್ ಗೆಲುವಿನಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು.
ಅಧಿಕೃತ ಹೇಳಿಕೆಯ ಪ್ರಕಾರ, ಶಫಾಲಿ ವರ್ಮಾ ಅವರನ್ನು ಹರಿಯಾಣ ರಾಜ್ಯ ಮಹಿಳಾ ಆಯೋಗವು ಬ್ರಾಂಡ್ ರಾಯಭಾರಿಯಾಗಿ ನೇಮಿಸಿದೆ. ಹರಿಯಾಣ ಸಿಎಂ ನಯಾಬ್ ಸೈನಿ, 'ಎಕ್ಸ್' ನಲ್ಲಿ ಪೋಸ್ಟ್‌ನಲ್ಲಿ ಹೀಗೆ ಹೇಳಿದರು, "ಇಂದು, ನಾನು ಹರಿಯಾಣದ ಪುತ್ರಿ ಮತ್ತು ಮಹಿಳಾ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ತಮ್ಮ ಐತಿಹಾಸಿಕ ಪ್ರದರ್ಶನದೊಂದಿಗೆ ಭಾರತವನ್ನು ವಿಶ್ವ ಚಾಂಪಿಯನ್ ಆಗಿ ಮಾಡಿದ ತಂಡದ ಸದಸ್ಯೆ ಶಫಾಲಿ ವರ್ಮಾ ಅವರನ್ನು ಸಂತ ಕಬೀರ್ ಕುಟೀರ್‌ನಲ್ಲಿ (ಹರಿಯಾಣ ಮುಖ್ಯಮಂತ್ರಿಯ ಅಧಿಕೃತ ನಿವಾಸ) ಭೇಟಿಯಾದೆ ಮತ್ತು ಈ ಗಮನಾರ್ಹ ಸಾಧನೆಗಾಗಿ ನನ್ನ ಹೃತ್ಪೂರ್ವಕ ಅಭಿನಂದನೆಗಳು ಮತ್ತು ಶುಭಾಶಯಗಳನ್ನು ಸಲ್ಲಿಸಿದೆ," ಎಂದು ಬರೆದಿದ್ದಾರೆ.
Women's World Cup: ವಿಶ್ವ ಗೆದ್ದ ಭಾರತದ ಮಹಿಳಾ ತಂಡಕ್ಕೆ ಭರ್ಜರಿ ಗಿಫ್ಟ್ ಘೋಷಿಸಿದ ಟಾಟಾ ಮೋಟಾರ್ಸ್
"ಅವರ ಅತ್ಯುತ್ತಮ ಪ್ರದರ್ಶನವನ್ನು ಗುರುತಿಸಿ, ಹರಿಯಾಣ ಸರ್ಕಾರ ಅವರಿಗೆ 1.50 ಕೋಟಿ ರು. ನಗದು ಮತ್ತು 'ಗ್ರೇಡ್ ಎ' ಕ್ರೀಡಾ ಪ್ರಮಾಣಪತ್ರವನ್ನು ನೀಡಿದೆ. ಈ ಗೌರವವು ಹರಿಯಾಣದ ಕ್ರೀಡಾ ಪ್ರತಿಭೆಗಳು ಇನ್ನೂ ಹೆಚ್ಚಿನ ಎತ್ತರವನ್ನು ತಲುಪಲು ಸ್ಫೂರ್ತಿ ನೀಡುತ್ತದೆ," ಎಂದು ಅವರು ಹೇಳಿದ್ದಾರೆ. ತಮ್ಮ ಕಠಿಣ ಪರಿಶ್ರಮ ಮತ್ತು ಸಮರ್ಪಣೆಯಿಂದ, ಶಫಾಲಿ ಹರಿಯಾಣಕ್ಕೆ ಮಾತ್ರವಲ್ಲದೆ ಇಡೀ ದೇಶಕ್ಕೆ ಕೀರ್ತಿ ತಂದಿದ್ದಾರೆ ಎಂದು ಸೈನಿ ಶ್ಲಾಘಿಸಿದ್ದಾರೆ.
"ಈ ಸಾಧನೆಯು ರಾಜ್ಯದ ಎಲ್ಲಾ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಿದೆ. ನಿಮ್ಮ ಅದ್ಭುತ ಪ್ರದರ್ಶನದಿಂದ ದೇಶಕ್ಕೆ ಕೀರ್ತಿ ತಂದಿದ್ದೀರಿ, ನಿಮಗೆಲ್ಲರಿಗೂ ಶುಭ ಹಾರೈಸುತ್ತೇನೆ," ಎಂದು ಅವರು ಗುಣಗಾನ ಮಾಡಿದ್ದಾರೆ. ಹರಿಯಾಣ ಸರ್ಕಾರಕ್ಕೆ ಧನ್ಯವಾದ ಹೇಳಿದ ಶೆಫಾಲಿ, "ವಿಶ್ವಕಪ್ ಗೆದ್ದಿದ್ದಕ್ಕೆ ನಮಗೆ ತುಂಬಾ ಸಂತೋಷವಾಗಿದೆ. ಹರಿಯಾಣ ಕ್ರೀಡಾ ಮನೋಭಾವದಿಂದ ತುಂಬಿದೆ ಮತ್ತು ರಾಜ್ಯದ ಪ್ರತಿಯೊಬ್ಬರೂ ಕ್ರೀಡೆಗಳಲ್ಲಿ ಭಾಗವಹಿಸುವುದನ್ನು ಪ್ರೋತ್ಸಾಹಿಸುತ್ತಾರೆ," ಎಂದು ಹೇಳಿದ್ದಾರೆ.
Truly honoured to have met our State’s respected Chief Minister @nayabsainiofficial 🙏🏻 pic.twitter.com/yoHwSOQi6U
— Shafali Verma (@TheShafaliVerma) November 12, 2025
ಪ್ರತೀಕಾ ರಾವಾಲ್ ಸ್ಥಾನ ತುಂಬಿದ್ದ ಶಫಾಲಿ
ಶಫಾಲಿ ವರ್ಮಾ ಅವರು ಮಹಿಳಾ ವಿಶ್ವಕಪ್ ಭಾರತ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ, ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಇನ್ ಫಾರ್ಮ್ ಪ್ರತೀಕಾ ರಾವಲ್ ಗಾಯಕ್ಕೆ ತುತ್ತಾಗಿದ್ದರು. ಈ ಕಾರಣದಿಂದ ಅವರು ಟೂರ್ನಿಯಿಂದ ಹೊರ ನಡೆದಿದ್ದರು. ಆಗ ಅವರ ಸ್ಥಾನಕ್ಕೆ ಶಫಾಲಿ ವರ್ಮಾ ಅವರನ್ನು ಆಯ್ಕೆ ಮಾಡಲಾಗಿತ್ತು. ಸೆಮಿಫೈನಲ್‌ನಲ್ಲಿ ಇವರು ವಿಫಲರಾಗಿದ್ದರು. ಆದರೆ, ದಕ್ಷಿಣ ಆಫ್ರಿಕಾ ವಿರುದ್ಧ ಫೈನಲ್‌ನಲ್ಲಿ ಶಫಾಲಿ ವರ್ಮಾ ಅದ್ಭುತ ಬ್ಯಾಟ್ ಮಾಡಿ 87 ರನ್‌ಗಳನ್ನು ಕಲೆ ಹಾಕಿದ್ದರು. ನಂತರ ಬೌಲಿಂಗ್‌ನಲ್ಲಿ 36 ರನ್ ನೀಡಿ ಎರಡು ವಿಕೆಟ್ ಕಿತ್ತಿದ್ದರು. ಆ ಮೂಲಕ ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.