ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Asian Games final: ಭಾರತದ ವಿರುದ್ಧದ ಸೋಲಿನಿಂದ ಇನ್ನೂ ನೋವಾಗುತ್ತಿದೆ ಎಂದ ಹಸನ್‌ ನವಾಝ್!‌

2026ರ ಏಷ್ಯಾ ಕ್ರೀಡಾಕೂಟದ ಫೈನಲ್‌ ಪಂದ್ಯದಲ್ಲಿ ಭಾರತದ ವಿರುದ್ಧ ಸೋತ ನೋವು ಇನ್ನೂ ಉಳಿದಿದೆ ಎಂದು ಪಾಕಿಸ್ತಾನದ ಬ್ಯಾಟರ್ ಹಸನ್ ನವಾಝ್‌ ಹೇಳಿದ್ದಾರೆ. ಆ ಪಂದ್ಯದಲ್ಲಿ ಗೆದ್ದು ಚಿನ್ನದ ಪದಕ ಪಡೆಯುವ ನಿರೀಕ್ಷೆಯಲ್ಲಿದ್ದ ಪಾಕಿಸ್ತಾನಕ್ಕೆ ಭಾರತದ ವಿರುದ್ಧದ ಸೋಲು ನಿರಾಸೆ ಮೂಡಿಸಿತ್ತು. ಈ ಸೋಲನ್ನು ಮರೆಯಲು ಕಷ್ಟವಾಗಿದೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

ಭಾರತದ ವಿರುದ್ಧದ ಸೋಲು ಇನೂ ನೋವು ಕೊಡುತ್ತಿದೆ ಎಂದ ಹಸನ್‌ ನವಾಝ್.

ನವದೆಹಲಿ: ಭಾರತ ವಿರುದ್ಧದ 2026ರ ಏಷ್ಯಾ ಕ್ರೀಡಾಕೂಟದ (Asian Games 2026) ಕ್ರಿಕೆಟ್‌ ಫೈನಲ್‌ ಪಂದ್ಯದಲ್ಲಿನ (IND vs PAK) ಸೋಲು ಇನ್ನೂ ನೋವು ಕೊಡುತ್ತಿದೆ ಎಂದು ಪಾಕಿಸ್ತಾನ ತಂಡದ ಬ್ಯಾಟ್ಸ್‌ಮನ್‌ ಹಸನ್‌ ನವಾಝ್‌ (Hasan Navaz) ಬೇಸರ ವ್ಯಕ್ತಪಡಿಸಿದ್ದಾರೆ. ಜಪಾನ್‌ನಲ್ಲಿ ನಡೆದಿದ್ದ ಫೈನಲ್‌ ಪಂದ್ಯದಲ್ಲಿ ನಾವು ಮಾಡಿದ್ದ ಸಣ್ಣ ತಪ್ಪುಗಳಿಂದ ಸೋಲು ಅನುಭವಿಸಬೇಕಾಯಿತು ಎಂದು ಅವರು ಹೇಳಿದ್ದಾರೆ. ಫೈನಲ್‌ನಲ್ಲಿ ಶ್ರೇಯಸ್‌ ಅಯ್ಯರ್‌ ನಾಯಕತ್ವದ ಟೀಮ್‌ ಇಂಡಿಯಾ 19 ರನ್‌ಗಳಿಂದ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಮಣಿಸಿ ಚಿನ್ನದ ಪದಕವನ್ನು ಗೆದ್ದಿತ್ತು. ಈ ಪಂದ್ಯದ ಚೇಸಿಂಗ್‌ನಲ್ಲಿ ಹಸನ್‌ ನವಾಝ್‌ ಹೋರಾಟದ 96 ರನ್‌ಗಳನ್ನು ಬಾರಿಸಿದ್ದರೂ ತಮ್ಮ ತಂಡವನ್ನು ಗೆಲ್ಲಿಸಲು ಸಾಧ್ಯವಾಗಿರಲಿಲ್ಲ.

ಮಾಧ್ಯಮದ ಜೊತೆ ಮಾತನಾಡಿದ ಅವರು, "ನನಗೆ ಇನ್ನೂ ಬೇಸರವಾಗುತ್ತಿದೆ ಹಾಗೂ ಭಾರತದ ಎದುರು ಫೈನಲ್‌ ಗೆಲ್ಲಲು ಸಾಧ್ಯವಾಗಲಿಲ್ಲವಲ್ಲ ಎಂಬ ನೋವು ಇನ್ನೂ ಆಗುತ್ತಿದೆ. ನಾವು ಸಣ್ಣ ತಪ್ಪುಗಳನು ಮಾಡಿದೆವು ಹಾಗೂ ಇದಕ್ಕೆ ನಾವು ದೊಡ್ಡ ಬೆಲೆಯನ್ನು ಕಟ್ಟಿಬೇಕಾಯಿತು," ಎಂದು ಹೇಳಿದ್ದಾರೆ.

ನವಾಝ್‌ ತಮ್ಮ ವೈಯಕ್ತಿಕ ಕೊಡುಗೆಯಿಂದ ಸಂತಸಗೊಂಡಿದ್ದರೂ, ಪಂದ್ಯದ ಫಲಿತಾಂಶದಿಂದ ನಿರಾಸೆಗೊಂಡಿದ್ದಾರೆ. ವಿಶೇಷವಾಗಿ ಪಾಕಿಸ್ತಾನ ಭಾರತವನ್ನು ಸೋಲಿಸುವ ಅವಕಾಶ ಹೊಂದಿತ್ತು ಎಂಬ ನಂಬಿಕೆ ಅವರಲ್ಲಿತ್ತು ಎಂಬುದನ್ನು ಅವರು ಹೇಳಿಕೊಂಡಿದ್ದಾರೆ.

ಏಷ್ಯನ್‌ ಗೇಮ್ಸ್‌ ಕ್ರಿಕೆಟ್‌; ಪಾಕ್‌ ಸದೆಬಡಿದು ಚಿನ್ನ ಗೆದ್ದ ಟೀಮ್‌ ಇಂಡಿಯಾ

“ನನ್ನ ರನ್‌ಗಳ ಬಗ್ಗೆ ನನಗೆ ತೃಪ್ತಿಯಿದೆ. ಆದರೆ ಫೈನಲ್ ಸೋತಿದ್ದು ನಿರಾಸೆ ಮೂಡಿಸಿದೆ. ನಾವು ಪಂದ್ಯ ಗೆಲ್ಲಬಹುದು ಎಂಬ ನಂಬಿಕೆ ನನಗಿತ್ತು. ನಾನು ಲೆಕ್ಕಾಚಾರದಂತೆ ಬ್ಯಾಟ್‌ ಮಾಡುತ್ತಿದ್ದೆ. ಕೊನೆಯ ಹಂತದಲ್ಲಿ ಭಾರತ ತಂಡಕ್ಕೆ ಒಬ್ಬ ಬೌಲರ್ ಕಡಿಮೆಯಾಗಿದ್ದರು ಮತ್ತು ಬುಮ್ರಾ ಅವರ ಒಂದು ಓವರ್ ಮಾತ್ರ ಬಾಕಿಯಿತ್ತು ಎಂಬುದು ನನಗೆ ತಿಳಿದಿತ್ತು. ಆದರೆ ರನ್ ಚೇಸ್‌ನಲ್ಲಿ ನಾವು ಕೆಲವು ತಪ್ಪುಗಳನ್ನು ಮಾಡಿದೆವು ಮತ್ತು ಸೋತೆವು,” ಎಂದು ಅವರು ತಿಳಿಸಿದ್ದಾರೆ.

ಭಾರತ ವಿಶ್ವದ ನಂ. 1 ತಂಡ: ಹಸನ್‌ ನವಾಝ್‌

ಭಾರತವನ್ನು ವಿಶ್ವದ ಅಗ್ರ ತಂಡ ಎಂದು ಬಣ್ಣಿಸಿದ ನವಾಝ್, ಆ ತಂಡವನ್ನು ಎದುರಿಸುವುದು ಸವಾಲಿನ ಕೆಲಸ ಎಂದು ಒಪ್ಪಿಕೊಂಡಿದ್ದಾರೆ. ಆದರೂ ಪಂದ್ಯವನ್ನು ಗೆಲ್ಲುವ ಸ್ಥಿತಿಗೆ ತಲುಪಲು ಪಾಕಿಸ್ತಾನ ಸಾಕಷ್ಟು ಉತ್ತಮ ಪ್ರದರ್ಶನ ನೀಡಿತ್ತು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.

ಕಳೆದ ವರ್ಷದ ಬಹುತೇಕ ಅವಧಿಯಲ್ಲಿ ಅಂತಾರಾಷ್ಟ್ರೀಯ ತಂಡದಿಂದ ಹೊರಗುಳಿದ ಬಳಿಕ ಮತ್ತೆ ತಂಡಕ್ಕೆ ಮರಳಿರುವ ಬಗ್ಗೆಯೂ ನವಾಝ್‌ ಸಂತಸ ವ್ಯಕ್ತಪಡಿಸಿದ್ದಾರೆ. ಭಾರತ ವಿರುದ್ಧ ಅವರು ಗಳಿಸಿದ 96 ರನ್‌ಗಳು ತಂಡದಿಂದ ಹೊರಗಿದ್ದ ನಂತರದ ಅವರ ಕಮ್‌ಬ್ಯಾಕ್‌ಗೆ ಉತ್ತಮ ಆರಂಭ ನೀಡಿದೆ.

ಏಷ್ಯನ್ ಗೇಮ್ಸ್ ಪದಕ ಸಾಧಕರಿಗೆ ನೀತಾ ಅಂಬಾನಿ ಅಭಿನಂದನೆ; 85 ಪದಕಗಳ ಪೈಕಿ 29 ಪದಕಗಳಿಗೆ ರಿಲಯನ್ಸ್ ಫೌಂಡೇಶನ್ ಕೊಡುಗೆ

“ಭಾರತದ ವಿರುದ್ಧ ಉತ್ತಮ ಇನಿಂಗ್ಸ್‌ ಆಡುವ ಮೂಲಕ ತಂಡಕ್ಕೆ ಮರಳಿದ್ದು ವೈಯಕ್ತಿಕವಾಗಿ ನನಗೆ ತುಂಬಾ ತೃಪ್ತಿ ನೀಡಿದೆ," ಎಂದು ಹೇಳಿದ ಅವರು, "ಫೈನಲ್ ಪಂದ್ಯ ಈಗ ಮುಗಿದಿದೆ. ಕ್ರಿಕೆಟ್ ಮತ್ತು ಪಂದ್ಯಗಳು ಮುಂದುವರಿಯುತ್ತವೆ. ನಾವು ಮುಂದೆಯೂ ತಪ್ಪುಗಳನ್ನು ಮಾಡಬಹುದು. ಆದರೆ ಭಾರತವನ್ನು ಸೋಲಿಸಬೇಕಾದರೆ ನಮ್ಮ ತಪ್ಪುಗಳಿಂದ ಪಾಠ ಕಲಿತು, ನಮ್ಮ ಆಟವನ್ನು ಇನ್ನಷ್ಟು ಸುಧಾರಿಸಿಕೊಳ್ಳಬೇಕು," ಎಂದು ತಿಳಿಸಿದ್ದಾರೆ.

2024ರಲ್ಲಿ ನ್ಯೂಜಿಲೆಂಡ್ ವಿರುದ್ಧ ಟಿ20ಐ ಶತಕದೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಈ ಯುವ ಆಟಗಾರ, ಹೆಚ್ಚಿನ ಗ್ರಾಸ್‌ರೂಟ್ಸ್ ಮಟ್ಟದ ಕ್ರಿಕೆಟ್ ಆಡುವುದರಿಂದ ತಮ್ಮ ಆಟ ಸುಧಾರಿಸಲು ಸಹಾಯವಾಗಿದೆ ಎಂದು ಹೇಳಿದ್ದಾರೆ.

“ಈ ಪಂದ್ಯಗಳಲ್ಲಿ ಎದುರಿಸುವ ಬೌಲರ್‌ಗಳು ಹಾಗೂ ಸಿಗುವ ಪಿಚ್‌ಗಳು ಕಠಿಣ ಪರಿಸ್ಥಿತಿಗಳಲ್ಲಿ ಉತ್ತಮ ಆಟಗಾರನಾಗಲು ಸಹಾಯ ಮಾಡುತ್ತವೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ಬ್ಯಾಟಿಂಗ್ ಪರಿಸ್ಥಿತಿಗಳು ಸಿಕ್ಕಾಗ, ಅಂತಹ ಅನುಭವಗಳು ಆತ್ಮವಿಶ್ವಾಸ ಹೆಚ್ಚಿಸಲು ನೆರವಾಗುತ್ತವೆ,” ಎಂದು ಹಸನ್ ನವಾಝ್‌ ಹೇಳಿದ್ದಾರೆ.