ಮುಂಬೈ: ದಿನಾಂಕ 02-11-2025 ಅನ್ನು ಭಾರತೀಯ ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಕೆತ್ತಲಾಗಿದೆ. ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2025ರ (ICC World Cup 2025) ಫೈನಲ್‌ನಲ್ಲಿ ಭಾರತ ಮಹಿಳಾ ತಂಡ (India Women team) ಅದ್ಭುತ ಪ್ರದರ್ಶನ ನೀಡಿ, ದಕ್ಷಿಣ ಆಫ್ರಿಕಾದ ಮಹಿಳಾ ತಂಡವನ್ನು (South Africa women team) 52 ರನ್‌ಗಳ ಭಾರಿ ಅಂತರದಿಂದ ಸೋಲಿಸಿ ಮೊದಲ ಬಾರಿ ಐಸಿಸಿ ಏಕದಿನ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ನವ ಮುಂಬೈನ ಡಿ.ವೈ. ಪಾಟೀಲ್ ಕ್ರೀಡಾಂಗಣದಲ್ಲಿ ಪಡೆದ ಈ ಗೆಲುವು ಕೋಟ್ಯಂತರ ಭಾರತೀಯ ಅಭಿಮಾನಿಗಳ ಕನಸು ನನಸಾಗಿಸಿತು ಮಾತ್ರವಲ್ಲದೆ, ಭಾರತೀಯ ಮಹಿಳಾ ಕ್ರಿಕೆಟ್‌ನ ಹೊಸ ಯುಗಕ್ಕೂ ನಾಂದಿ ಹಾಡಿತು.
ಭಾರತದ ಈ ಐತಿಹಾಸಿಕ ಗೆಲುವಿನೊಂದಿಗೆ ನಮ್ಮ ತಂಡಕ್ಕೆ ಹಣದ ಸುರಿಮಳೆಯಾಯಿತು. ಈ ಋತುವಿನ ಬಹುಮಾನ ಮೊತ್ತದಲ್ಲಿ ಐಸಿಸಿ ದಾಖಲೆಯ ಹೆಚ್ಚಳವನ್ನು ಮಾಡಿತ್ತು. ವಿಶ್ವ ಚಾಂಪಿಯನ್ ಆದ ನಂತರ, ಭಾರತೀಯ ಮಹಿಳಾ ತಂಡವು ಸುಮಾರು ₹39.77 ಕೋಟಿ ರು. ನಗದು ಬಹುಮಾನವನ್ನು ಪಡೆದುಕೊಂಡಿದೆ. ಇದು ಮಹಿಳಾ ಕ್ರಿಕೆಟ್ ಇತಿಹಾಸದಲ್ಲಿ ಇದುವರೆಗಿನ ಅತಿದೊಡ್ಡ ನಗದು ಬಹುಮಾನವಾಗಿದೆ.
ಶಫಾಲಿ ವರ್ಮಾ ಆಲ್‌ರೌಂಡರ್ ಆಟ; ಭಾರತ ವನಿತೆಯರಿಗೆ ಚೊಚ್ಚಲ ವಿಶ್ವಕಪ್ ಕಿರೀಟ!
ಕಠಿಣ ಹೋರಾಟ ನಡೆಸಿ ಕೊನೆಯಲ್ಲಿ ಸೋತು ರನ್ನರ್ ಅಪ್‌ಗೆ ತೃಪ್ತಿಪಟ್ಟ ದಕ್ಷಿಣ ಆಫ್ರಿಕಾ ಕೂಡ ಟೂರ್ನಿಯಲ್ಲಿ ಅಸಾಧಾರಣ ಪ್ರದರ್ಶನವನ್ನು ತೋರಿದೆ. ಮೊದಲ ಬಾರಿ ಫೈನಲ್ ತಲುಪಿದ ಹರಿಣ ಪಡೆಯನ್ನು ಅತ್ಯುತ್ತಮ ಪ್ರದರ್ಶನಕ್ಕಾಗಿ ಗೌರವಿಸಲಾಯಿತು. ದಕ್ಷಿಣ ಆಫ್ರಿಕಾ ಮಹಿಳಾ ತಂಡವು ರನ್ನರ್ ಅಪ್ ಬಹುಮಾನದ ಮೊತ್ತವಾಗಿ 2.24 ಮಿಲಿಯನ್ ಯುಎಸ್ ಡಾಲರ್ (ಸುಮಾರು ₹19.88 ಕೋಟಿ) ಮೊತ್ತವನ್ನು ಸ್ವೀಕರಿಸಿತು.
ಭಾರತ ಚೊಚ್ಚಲ ಚಾಂಪಿಯನ್
ಫೈನಲ್‌ನಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡ, ಉತ್ತಮ ಪ್ರದರ್ಶನವನ್ನು ತೋರಿತು. ಶಫಾಲಿ ವರ್ಮಾ (87) ಹಾಗೂ ದೀಪ್ತಿ ಶರ್ಮಾ (58) ಅವರ ಅರ್ಧಶತಕಗಳ ಬಲದಿಂದ ಭಾರತ ತನ್ನ ಪಾಲಿನ 50 ಓವರ್‌ಗಳಿಗೆ 7 ವಿಕೆಟ್ ನಷ್ಟಕ್ಕೆ 298 ರನ್‌ಗಳನ್ನು ಕಲೆ ಹಾಕಿತು. ಬಳಿಕ ಗುರಿ ಹಿಂಬಾಲಿಸಿದ ದಕ್ಷಿಣ ಆಫ್ರಿಕಾ ತಂಡವನ್ನು ಭಾರತೀಯ ಬೌಲರ್‌ಗಳು ಕಟ್ಟಿ ಹಾಕಿದರು. ಲಾರಾ ವಾಲ್ವಾರ್ಡ್ಟ್ ಅವರ ಹೋರಾಟದ ಶತಕದ ಹೊರತಾಗಿಯೂ ಪ್ರವಾಸಿ ದಕ್ಷಿಣ ಆಫ್ರಿಕಾ ತಂಡ, 45.3 ಓವರ್‌ಗಳಿಗೆ 246 ರನ್‌ಗಳಿಗೆ ಆಲ್‌ಔಟ್ ಆಯಿತು. ಆ ಮೂಲಕ 52 ರನ್ ಸೋತು ಭಾರಿ ನಿರಾಶೆ ಅನುಭವಿಸಿತು.
ಟೂರ್ನಿ ಶ್ರೇಷ್ಠ ಪ್ರಶಸ್ತಿ ಯಾರಿಗೆ?
ಈ ಪಂದ್ಯದಲ್ಲಿ 87 ರನ್ ಹಾಗೂ ಎರಡು ಪ್ರಮುಖ ವಿಕೆಟ್‌ಗಳನ್ನು ಕಿತ್ತ ಶಫಾಲಿ ವರ್ಮಾ ಪಂದ್ಯ ಶ್ರೇಷ್ಠಪ್ರಶಸ್ತಿಗೆ ಭಾಜನರಾದರು. ಇನ್ನು ಈ ಟೂರ್ನಿಯಲ್ಲಿ 200 ರನ್ ಹಾಗೂ 20 ವಿಕೆಟ್‌ಗಳನ್ನು ಪಡದರು. ಆ ಮೂಲಕ ಟೂರ್ನಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.