ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

2030ರವರೆಗೂ ವಿರಾಟ್‌ ಕೊಹ್ಲಿ ಆರ್‌ಸಿಬಿ ಪರ ಆಡಲಿದ್ದಾರೆಂದ ರಾಜೇಶ್‌ ಮೆನನ್‌!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡದ ಪರ ವಿರಾಟ್‌ ಕೊಹ್ಲಿ ಅವರು 2030ರವರೆಗೂ ಆಡಬಹುದೆಂದು ಬೆಂಗಳೂರು ಫ್ರಾಂಚೈಸಿ ಸಿಇಒ ರಾಜೇಶ್‌ ಮೆನನ್‌ ಹೇಳಿದ್ದಾರೆ. ಅವರು ಫಿಟ್‌ನೆಸ್‌, ಆಡಬೇಕೆಂಬ ಹಸಿವು ಹಾಗೂ ಯಶಸ್ಸಿನ ಉತ್ಸಾಹ ಇನ್ನೂ ಕಡಿಮೆಯಾಗಿಲ್ಲ ಎಂದು ತಿಳಿಸಿದ್ದಾರೆ.

ವಿರಾಟ್‌ ಕೊಹ್ಲಿ ಐಪಿಎಲ್‌ ಭವಿಷ್ಯ ನುಡಿದ ಆರ್‌ಸಿಬಿ ಸಿಇಒ.

ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ವೃತ್ತಿ ಜೀವನವನ್ನು ಬಹುತೇಕ ಮುಗಿಸಿರುವ ಆಧುನಿಕ ಕ್ರಿಕೆಟ್‌ ದಿಗ್ಗಜ ವಿರಾಟ್‌ ಕೊಹ್ಲಿ (Virat Kohli), ಸದ್ಯ 50 ಓವರ್‌ಗಳ ಸ್ವರೂಪ ಹಾಗೂ ಇಂಡಿಯನ್‌ ಪ್ರೀಮಿಯರ್‌ ಲೀಗ್‌ (IPL) ಟೂರ್ನಿಯಲ್ಲಿ ಮುಂದುವರಿಯುತ್ತಿದ್ದಾರೆ. ತಮ್ಮ 19 ವರ್ಷಗಳ ಐಪಿಎಲ್‌ ವೃತ್ತಿ ಜೀವನದಲ್ಲಿ ಆರ್‌ಸಿಬಿಗೆ ಎರಡು ಬಾರಿ ಟ್ರೋಫಿ ಗೆದ್ದುಕೊಟ್ಟಿರುವ ಕೊಹ್ಲಿಯ ಫ್ರಾಂಚೈಸಿ ಲೀಗ್‌ ಭವಿಷ್ಯದ ಬಗ್ಗೆ ಆರ್‌ಸಿಬಿ ಸಿಇಒ ರಾಜೇಶ್‌ ಮೆನನ್‌ ಮಹತ್ವದ ಮಾಹಿತಿ ನೀಡಿದ್ದಾರೆ. ಅವರು 2030ರ ವರೆಗೂ ಆರ್‌ಸಿಬಿ ಪರ ಐಪಿಎಲ್‌ ಟೂರ್ನಿಯಲ್ಲಿ ಆಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತಮ್ಮ ನಾಯಕತ್ವದಲ್ಲಿ ಭಾರತಕ್ಕೆ ಅಂಡರ್‌-19 ವಿಶ್ವಕಪ್‌ ಗೆದ್ದುಕೊಟ್ಟ ಬಳಿಕ ವಿರಾಟ್‌ ಕೊಹ್ಲಿಯನ್ನು 2008ರ ಉದ್ಘಾಟನಾ ಆವೃತ್ತಿಯ ಐಪಿಎಲ್‌ ಟೂರ್ನಿಯ ಆಕ್ಷನ್‌ನಲ್ಲಿ ಆರ್‌ಸಿಬಿ (ಅಂಡರ್‌-19 ಕೋಟಾದಡಿ) ಖರೀದಿಸಿತ್ತು. ಅಂದಿನಿಂದ ಇಲ್ಲಿಯವರೆಗೂ ಐಪಿಎಲ್‌ ಫ್ರಾಂಚೈಸಿ ಲೀಗ್‌ನಲ್ಲಿ ಏಕೈಕ ತಂಡದ ಪರ ಆಡಿದ ಆಟಗಾರ ಎಂಬ ದಾಖಲೆಯನ್ನು ವಿರಾಟ್‌ ಕೊಹ್ಲಿ ಬರೆದಿದ್ದಾರೆ. ಇದೀಗ ವಿರಾಟ್‌ ಕೊಹ್ಲಿ ಐಪಿಎಲ್‌ ಟೂರ್ನಿಯ ವೃತ್ತಿ ಜೀವನದ ಕೊನೆಯ ಹಂತದಲ್ಲಿದ್ದಾರೆ.

ತಮ್ಮ ಐಪಿಎಲ್‌ ವೃತ್ತಿ ಜೀವನದಲ್ಲಿ ಆಡಿದ 283 ಪಂದ್ಯಗಳಿಂದ ಕೊಹ್ಲಿ 9,336 ರನ್‌ಗಳನ್ನು ಗಳಿಸಿದ್ದಾರೆ. ಆ ಮೂಲಕ ಐಪಿಎಲ್‌ ಟೂರ್ನಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿಕೊಂಡಿದ್ದಾರೆ. 2025 ಮತ್ತು 2026ರ ಐಪಿಎಲ್‌ ಟೂರ್ನಿಗಳನ್ನು ಆರ್‌ಸಿಬಿ ಚಾಂಪಿಯನ್‌ ಆಗುವಲ್ಲಿ ವಿರಾಟ್‌ ಕೊಹ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಆ ಮೂಲಕ ತಮ್ಮ ಬಹುಕಾಲದ ಕನಸನ್ನು ನನಸು ಮಾಡಿದ್ದಾರೆ.

ರೋಹಿತ್‌ ಶರ್ಮಾ-ವಿರಾಟ್‌ ಕೊಹ್ಲಿಯ ಏಕದಿನ ವಿಶ್ವಕಪ್‌ ಭವಿಷ್ಯ ನುಡಿದ ಬಿಸಿಸಿಐ ಸೆಕ್ರೆಟರಿ!

ಸಿಎನ್‌ಬಿಎಸ್‌ ಟಿವಿ18 ಜೊತೆ ಮಾತನಾಡಿದ ರಾಜೇಶ್‌ ಮೆನನ್‌, "ಆರ್‌ಸಿಬಿ ಹಾಗೂ ವಿರಾಟ್‌ ಕೊಹ್ಲಿ ಒಂದೇ ನಾಣ್ಯದ ಎರಡು ಮುಖಗಳು. ಅವರು ಆರಂಭದಿಂದಲೂ ಆರ್‌ಸಿಬಿ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. ಅವರ ಕ್ರಿಕೆಟ್ ವೃತ್ತಿಜೀವನದ ಹೊರತಾಗಿಯೂ ಆರ್‌ಸಿಬಿಯಿಂದ ದೂರವಾಗಿರುವುದನ್ನು ನಾವು ಎಂದಿಗೂ ನೋಡಿಲ್ಲ. ಮುಂದಿನ ದಿನಗಳಲ್ಲಿ ಅವರ ಪಾತ್ರ ಏನಿರಬಹುದು ಎಂಬುದನ್ನು ನಾವು ನಿರ್ಧರಿಸಬೇಕಿದೆ. ಆದರೆ, ಮುಂದಿನ ಮೂರು-ನಾಲ್ಕು ವರ್ಷಗಳ ಕಾಲ ಅವರು ಖಂಡಿತವಾಗಿಯೂ ಆಡಲಿದ್ದಾರೆ ಎಂಬ ವಿಶ್ವಾಸ ನನಗಿದೆ. ಕನಿಷ್ಠ ಇನ್ನೂ ನಾಲ್ಕು ವರ್ಷಗಳ ಕಾಲ ಅವರು ಕ್ರಿಕೆಟ್ ಆಡುತ್ತಾರೆ,” ಎಂದು ಅವರು ಹೇಳಿದ್ದಾರೆ.

"ಅವರು ಸಂಪೂರ್ಣ ಫಿಟ್ ಆಗಿದ್ದಾರೆ. ಅವರೊಳಗಿನ ಹಸಿವು ಮತ್ತು ಸ್ಪರ್ಧಾತ್ಮಕ ಮನೋಭಾವ ಎಂದಿಗೂ ಕಡಿಮೆಯಾಗಿಲ್ಲ. ಈ ಐಪಿಎಲ್‌ ಋತುವಿನಲ್ಲಿ ಅವರು ತೋರಿಸಿದ ಉತ್ಸಾಹ, ರನ್‌ಗಳ ಹರಿವು, ಆಟದ ಮೇಲಿನ ಮನೋಭಾವ—ಎಲ್ಲವೂ ಅತ್ಯುತ್ತಮವಾಗಿತ್ತು. ಇನ್ನೂ ಮೂರು ಅಥವಾ ನಾಲ್ಕು ವರ್ಷಗಳ ಕಾಲ ಅವರು ಯಾವುದೇ ತೊಂದರೆಯಿಲ್ಲದೆ ಆಡಬಲ್ಲರು,” ಎಂದು ಬೆಂಗಳೂರು ತಂಡದ ಸಿಇಒ ತಿಳಿಸಿದ್ದಾರೆ.

ಭಾರತ ತಂಡಕ್ಕೆ ವಿವಾದಿತ ಕೋಚ್‌ ಅಗತ್ಯವಿಲ್ಲ: ಗೌತಮ್‌ ಗಂಭೀರ್‌ ವಿರುದ್ಧ ಶ್ರೀಶಾಂತ್‌ ಗುಡುಗು!

ಭಾರತದ ಮಾಜಿ ನಾಯಕ ಹವಲು ವರ್ಷಗಳ ಕಾಲ ಆರ್‌ಸಿಬಿ ತಂಡದ ಪರ ಹಲವು ಸ್ಮರಣೀಯ ಸೀಸನ್‌ಗಳನ್ನು ನೀಡಿದ್ದಾರೆ. 2016ರ ಐಪಿಎಲ್‌ ಟೂರ್ನಿಯಲ್ಲಿ ವಿರಾಟ್‌ ಕೊಹ್ಲಿ ತಮ್ಮ ಫ್ರಾಂಚೈಸಿ ಲೀಗ್‌ನ ಇತಿಹಾಸದಲ್ಲಿಯೇ ಅತ್ಯುತ್ತಮ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದಾರೆ. ಅವರು ಆ ಸೀಸನ್‌ನಲ್ಲಿ ಒಟ್ಟು 973 ರನ್‌ಗಳನ್ನು ಗಳಿಸಿ ದಾಖಲೆ ದೊಡ್ಡ ದಾಖಲೆಯನ್ನು ಬರೆದಿದ್ದರು.

ಇತ್ತೀಚೆಗೆ, 2024ರಲ್ಲಿ 741 ರನ್‌ಗಳನ್ನು ಸಿಡಿಸಿ ಅವರು ಆರೆಂಜ್‌ ಕ್ಯಾಪ್‌ ಗೆದ್ದರು. ಬಳಿಕ 2025ರ ಸೀಸನ್‌ನಲ್ಲೂ ಅದ್ಭುತ ಪ್ರದರ್ಶನ ಮುಂದುವರಿಸಿ 54.75ರ ಸರಾಸರಿಯಲ್ಲಿ 657 ರನ್‌ಗಳನ್ನು ಗಳಿಸಿದರು. ಈ ಪ್ರದರ್ಶನದ ನೆರವಿನಿಂದ ಆರ್‌ಸಿಬಿ, ಕೊನೆಗೂ ತಮ್ಮ ದೀರ್ಘಕಾಲದ ಐಪಿಎಲ್ ಪ್ರಶಸ್ತಿ ನಿರೀಕ್ಷೆಯನ್ನು ಮುಗಿಸಿ ಟ್ರೋಫಿ ಗೆದ್ದಿತು.

ವಿರಾಟ್‌ ಕೊಹ್ಲಿ ಮತ್ತೆ ಆರ್‌ಸಿಬಿ ತಂಡದ ಯಶಸ್ವಿ 2026ರ ಟೂರ್ನಿಯ ಅಭಿಯಾನದಲ್ಲಿ ಪ್ರಮುಖ ಪಾತ್ರ ವಹಿಸಿದರು. ಅನುಭವೀ ಬ್ಯಾಟರ್ ಆಗಿರುವ ಅವರು ಸೀಸನ್‌ಪೂರ್ತಿ ತಂಡದ ಅತ್ಯಂತ ವಿಶ್ವಾಸಾರ್ಹ ಆಟಗಾರರಾಗಿ ಮಿಂಚಿ, 675 ರನ್‌ಗಳನ್ನು ಗಳಿಸಿ ತಂಡದ ಪ್ರಮುಖ ರನ್‌ಸ್ಕೋರರ್ ಆಗಿ ಮುನ್ನಡೆಸಿದ್ದಾರೆ.