ನವದೆಹಲಿ: ಇತ್ತೀಚೆಗೆ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಚೇತೇಶ್ವರ್ ಕುಮಾರ್ (Cheteshwar Pujara) ಅವರನ್ನು ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ (R Ashwin) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. 2018-19ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಬಾರ್ಡರ್-ಗವಾಸ್ಕರ್ ಟ್ರೋಫಿ (BGT 2018-19) ಟೆಸ್ಟ್ ಸರಣಿಯಲ್ಲಿ ಚೇತೇಶ್ವರ ಪೂಜಾರ ಅವರ ವೀರೋಚಿತ ಪ್ರದರ್ಶನವನ್ನು ಅನುಸರಿಸಿ, ಜನಪ್ರಿಯ ಕಾರ್ಯಕ್ರಮ 'ಗೇಮ್ ಆಫ್ ಥ್ರೋನ್ಸ್' ನಿಂದ ಪ್ರೇರಿತರಾಗಿ ಅವರಿಗೆ ಅಡ್ಡಹೆಸರು ಇಟ್ಟಿದ್ದಾಗಿ ಭಾರತದ ಮಾಜಿ ಸ್ಪಿನ್ನರ್ ಬಹಿರಂಗಪಡಿಸಿದ್ದಾರೆ. ಈ ಸರಣಿಯಲ್ಲಿ ಚೇತೇಶ್ವರ್ ಪೂಜಾರ ಅವರು 74.42ರ ಸರಾಸರಿಯಲ್ಲಿ 521 ರನ್‌ಗಳನ್ನು ಕಲೆ ಹಾಕಿದ್ದರು ಹಾಗೂ ಈ ಸರಣಿಯನ್ನು ಟೀಮ್ ಇಂಡಿಯಾ 2-1 ಅಂತರದಲ್ಲಿ ಮುಡಿಗೇರಿಸಿಕೊಂಡಿತ್ತು.
ಅಡಿಲೇಡ್ ಓವಲ್‌ನಲ್ಲಿ ಭರ್ಜರಿ ಶತಕ ಮತ್ತು ಅರ್ಧಶತಕ ಬಾರಿಸುವ ಮೂಲಕ ಚೇತೇಶ್ವರ್ ಪೂಜಾರ ಪ್ರವಾಸ ಆರಂಭಿಸಿದ್ದರು ಹಾಗೂ ಈ ಪಂದ್ಯದಲ್ಲಿ ಭಾರತ ತಂಡ 31 ರನ್‌ಗಳಿಂದ ಗೆಲುವು ಪಡೆದಿತ್ತು. ಪರ್ತ್‌ನಲ್ಲಿ ವೈಫಲ್ಯ ಅನುಭವಿಸಿದ ಬಳಿಕ ಅವರು ಮೆಲ್ಬೋರ್ನ್ ಮತ್ತು ಸಿಡ್ನಿಯಲ್ಲಿ ಎರಡು ಭರ್ಜರಿ ಶತಕಗಳನ್ನು ಬಾರಿಸಿ ಪ್ರವಾಸವನ್ನು ಪ್ರಬಲ ರೀತಿಯಲ್ಲಿ ಮುಗಿಸಿದ್ದರು. ಸರಣಿಯ ಡ್ರಾದಲ್ಲಿ ಕೊನೆಗೊಂಡ ಅಂತಿಮ ಪಂದ್ಯದಲ್ಲಿ ಪೂಜಾರ 373 ಎಸೆತಗಳನ್ನು ಎದುರಿಸಿ 193 ರನ್ ಗಳಿಸಿದ್ದರು. ಅವರ ಪ್ರಯತ್ನದಿಂದ ಭಾರತ ಮೊದಲ ಇನಿಂಗ್ಸ್‌ನಲ್ಲಿ 7 ವಿಕೆಟ್ ನಷ್ಟಕ್ಕೆ 622 ರನ್ ಗಳಿಸಿತು, ಸರಣಿಯನ್ನು ಬಹುತೇಕ ಖಚಿತಪಡಿಸಿತ್ತು.
ಚೇತೇಶ್ವರ್ ಪೂಜಾರಗೂ ಮುನ್ನ ವಿದಾಯದ ಪಂದ್ಯವಾಡದ ಟಾಪ್ ಐವರು ಬ್ಯಾಟರ್ಸ್!
ಪೂಜಾರ ವಿಕೆಟ್ ಪಡೆಯುವಲ್ಲಿ ವಿಫಲವಾದ ನಂತರ ಆಸ್ಟ್ರೇಲಿಯಾದ ಬೌಲರ್‌ಗಳು ಹೇಗೆ ನಿರಾಶೆಗೊಂಡರು ಎಂಬುದನ್ನು ಅಶ್ವಿನ್ ನೆನಪಿಸಿಕೊಂಡರು, ಇದರಿಂದಾಗಿ ಪೂಜಾರ ಅವರಿಗೆ 'ದಿ ವೈಟ್ ವಾಕರ್' ಎಂಬ ಅಡ್ಡಹೆಸರನ್ನು ಇಡಲಾಯಿತು ಎಂಬುದನ್ನು ಸ್ಪಿನ್ ದಿಗ್ಗಜ ಬಹಿರಂಗಪಡಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿರುವ ವಿಡಿಯೊದಲ್ಲಿ ಮಾತನಾಡಿದ ಆರ್ ಅಶ್ವಿನ್, "2018-19ರ ಆಸ್ಟ್ರೇಲಿಯಾ ಪ್ರವಾಸವು ಪೂಜಾರ ಅವರ ವೃತ್ತಿಜೀವನದಲ್ಲಿ ನಿರ್ಣಾಯಕ ಘಟ್ಟವಾಗಿದೆ. 2012ರಲ್ಲಿ ಇಂಗ್ಲೆಂಡ್ ತಂಡದ ಭಾರತ ಪ್ರವಾಸದ ಸಮಯದಲ್ಲಿ ಅವರು ದ್ವಿಶತಕ ಗಳಿಸಿದ್ದರು, ಆದರೆ 2018-19ರ ಆಸ್ಟ್ರೇಲಿಯಾ ಸರಣಿಯಲ್ಲಿ, ಆಸೀಸ್ ಬೌಲರ್‌ಗಳು ಅವರನ್ನು ಔಟ್ ಮಾಡಲು ಸಾಧ್ಯವಾಗದ ಕಾರಣ ಅದು ಸ್ಮರಣೀಯವಾಗಿತ್ತು. ಸಿಡ್ನಿಯಲ್ಲಿ ನಡೆದಿದ್ದ ಕೊನೆಯ ಟೆಸ್ಟ್‌ನಲ್ಲಿ ಬೌಲರ್‌ಗಳು ಪೂಜಾರ ಅವರನ್ನು ದಯವಿಟ್ಟು ಔಟ್ ಆಗಿ ಎಂದು ಹೇಳಿದ್ದರು. ಅಕ್ಷರಶಃ ಅದು ಅದೇ ರೀತಿ ನಡೆಯಿತು, " ಎಂದಿದ್ದಾರೆ.
ತಾವು ಎದುರಿಸಿದ ನಾಲ್ವರು ಕಠಿಣ ಬೌಲರ್‌ಗಳನ್ನು ಹೆಸರಿಸಿದ ಚೇತೇಶ್ವರ್ ಪೂಜಾರ!
"ಆ ಸರಣಿಯ ನಂತರ ನಾನು ಪೂಜಾರಗೆ ಒಂದು ಹೆಸರು ಇಟ್ಟಿದ್ದೆ, ನಾವು ಒಬ್ಬರನ್ನೊಬ್ಬರು ಕಾಲು ಎಳೆಯುವ ರೀತಿ ನಮ್ಮ ನಡುವೆ ಉತ್ತಮ ಸಂಬಂಧವಿತ್ತು. ಇತ್ತೀಚೆಗೆ ಅವರು ಕಾಮೆಂಟರಿ ಮಾಡುತ್ತಿದ್ದ ಸಮಯದಲ್ಲೂ ನನ್ನ ಕಾಲನ್ನು ಎಳೆಯುತ್ತಿದ್ದರು. ನಮ್ಮ ಸಂಬಂಧವೂ ಹಾಗೆಯೇ ಇದೆ, ಆದ್ದರಿಂದ ಗೇಮ್ ಆಫ್ ಥ್ರೋನ್ಸ್‌ನಿಂದ ಪ್ರೇರಿತವಾಗಿ ನಾನು ಅವರಿಗೆ ಇಟ್ಟ ಅಡ್ಡಹೆಸರು 'ದಿ ವೈಟ್ ವಾಕರ್'. ಆ ಪ್ರವಾಸದ ನಂತರ ಪೂಜಾರ ವಿಶ್ವ ಕ್ರಿಕೆಟ್‌ನಲ್ಲಿ ಅಲ್ಲದಿದ್ದರೂ ಭಾರತೀಯ ಕ್ರಿಕೆಟ್‌ನ ವೈಟ್ ವಾಕರ್ ಆಗಿದ್ದರು," ಎಂದು ಆರ್ ಅಶ್ವಿನ್ ಹೇಳಿದ್ದಾರೆ.
ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದರ ಫಲವಾಗಿ ಪೂಜಾರಗೆ ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಗಿತ್ತು. ಈ ಸರಣಿಯೊಂದರಲ್ಲಿ ಅವರು 500 ಕ್ಕೂ ಹೆಚ್ಚು ರನ್‌ಗಳನ್ನು ಗಳಿಸಿದ ಏಕೈಕ ಅವಧಿ ಇದಾಗಿದೆ. 2012 ರಲ್ಲಿ ಇಂಗ್ಲೆಂಡ್ ವಿರುದ್ಧದ ತವರಿನಲ್ಲಿ ನಡೆದ ಸರಣಿಯಲ್ಲಿ ಅವರು 438 ರನ್‌ಗಳನ್ನು ಗಳಿಸಿದ್ದು ಅವರ ಎರಡನೇ ಅತ್ಯುತ್ತಮ ಸಾಧನೆಯಾಗಿದೆ.