ನವದೆಹಲಿ: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ (IND vs SL) ಉತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುತ್ತಿರುವ ಭಾರತ ತಂಡದ ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ (Rishabh Pant) ಅವರು ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಅಗ್ರ 10 ರೊಳಗೆ ಪ್ರವೇಶ ಮಾಡಿದ್ದಾರೆ. ಅಲ್ಲದೆ ಐಸಿಸಿ ಪರಿಷ್ಕರಿಸಿದ ಶ್ರೇಯಾಂಕದಲ್ಲಿ ಭಾರತ ತಂಡದ ನಾಯಕ ಶುಭಮನ್ ಗಿಲ್ ಹಾಗೂ ಆರಂಭಿಕ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಹಿನ್ನಡೆ ಅನುಭವಿಸಿದ್ದಾರೆ. ಗಿಲ್ ಏಳನೇ ಸ್ಥಾನದಲ್ಲಿದ್ದರೆ, ಜೈಸ್ವಾಲ್ ಅಗ್ರ 10ರಿಂದ ಹೊರಬಿದ್ದಿದ್ದಾರೆ. ಭಾರತೀಯ ಬ್ಯಾಟ್ಸ್‌ಮನ್‌ಗಳ ಪೈಕಿ ಅಗ್ರ ಸ್ಥಾನದಲ್ಲಿರುವ ಆಟಗಾರ ರಿಷಭ್ ಪಂತ್.
ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ ಅವರು ಆರು ಸ್ಥಾನಗಳಲ್ಲಿ ಏರಿಕೆ ಕಂಡಿದ್ದು, ಏಳನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಇನ್ನು ಟೀಮ್ ಇಂಡಿಯಾ ನಾಯಕ ತಮ್ಮ ಏಳನೇ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಶ್ರೀಲಂಕಾ ಟೆಸ್ಟ್ ಸರಣಿಯಲ್ಲಿ ಪಂತ್ ಉತ್ತಮ ಪ್ರದರ್ಶನವನ್ನು ಮುಂದುವರಿಸಿದ್ದಾರೆ. ಗಾಲೆ ಟೆಸ್ಟ್‌ನ ಪ್ರಥಮ ಇನಿಂಗ್ಸ್‌ನಲ್ಲಿ 39 ರನ್ ಹಾಗೂ ದ್ವಿತೀಯ ಇನಿಂಗ್ಸ್‌ನಲ್ಲಿ 66 ರನ್‌ಗಳನ್ನು ಗಳಿಸಿದ್ದರು. ಈ ಪಂದ್ಯದಲ್ಲಿ ಭಾರತ ತಂಡ 165 ರನ್‌ಗಳಿಂದ ಗೆಲುವು ಸಾಧಿಸಿತ್ತು.
ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್‌ಗೆ ಶಿಕ್ಷೆ ನೀಡಬೇಕೆಂದು ಸಂಜಯ್ ಮಾಂಜ್ರೇಕರ್ ಆಗ್ರಹ!
2026ರಲ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಥಿರವಾಗಿ ರನ್ ಗಳಿಸುತ್ತಿರುವ ಆಟಗಾರರ ಪೈಕಿ ರಿಷಭ್ ಪಂತ್ ಕೂಡ ಒಬ್ಬರು. ಇವರು ಆಡಿದ ಮೂರು ಟೆಸ್ಟ್ ಪಂದ್ಯಗಳಲ್ಲಿ ಮೂರು ಅರ್ಧಶತಕಗಳ ಮೂಲಕ 249 ರನ್‌ಗಳನ್ನು ಗಳಿಸಿದ್ದಾರೆ. ಈ ವರ್ಷ ಭಾರತದ ಪರ ಅತಿ ಹೆಚ್ಚು ಟೆಸ್ಟ್ ರನ್‌ಗಳನ್ನು ಕಲೆ ಹಾಕಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಕನ್ನಡಿಗ ದೇವದತ್ ಪಡಿಕ್ಕಲ್ ಅಗ್ರ ಸ್ಥಾನದಲ್ಲಿದ್ದಾರೆ. ಅವರು ಮೂರು ಇನಿಂಗ್ಸ್‌ಗಳಿಂದ 328 ರನ್‌ಗಳನ್ನು ಕಲೆ ಹಾಕಿದ್ದಾರೆ. ಶ್ರೀಲಂಕಾದಲ್ಲಿ ಗಾಲೆ ಹಾಗೂ ಕೊಲಂಬೊ ಎರಡೂ ಟೆಸ್ಟ್ ಪಂದ್ಯಗಳಲ್ಲಿ ಶತಕವನ್ನು ಬಾರಿಸಿದ್ದಾರೆ. ಸಾಯಿ ಸುದರ್ಶನ್ ಗಾಯಕ್ಕೆ ತುತ್ತಾದ ಕಾರಣ ಪಡಿಕ್ಕಲ್‌ಗೆ ಮೂರನೇ ಕ್ರಮಾಂಕದಲ್ಲಿ ಆಡುವ ಅವಕಾಶ ಲಭಿಸಿದೆ.
ಅಗ್ರ 10 ರಿಂದ ಹೊರಬಿದ್ದ ಯಶಸ್ವಿ ಜೈಸ್ವಾಲ್
ಇನ್ನು ಟೀಮ್ ಇಂಡಿಯಾ ಆರಂಭಿಕ ಯಶಸ್ವಿ ಜೈಸ್ವಾಲ್ ಶ್ರೇಯಾಂಕದ ಅಗ್ರ 10 ರಿಂದ ಹೊರಬಿದ್ದಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ 11ಕ್ಕೆ ಸ್ಥಾನಕ್ಕೆ ಕುಸಿದಿದ್ದಾರೆ.ಈ ವರ್ಷ ರಾಜಸ್ಥಾನ್ ರಾಯಲ್ಸ್ ಆರಂಭಿಕನಿಂದ ಮೂಡಿಬಂದಿರುವುದು ಕೇವಲ ಒಂದೇ ಒಂದು ಅರ್ಧಶತಕ ಮಾತ್ರ. ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಹಾಗೂ ಶ್ರೀಲಂಕಾದಲ್ಲಿಯೂ ಸಿಕ್ಕ ಅವಕಾಶಗಳಲ್ಲಿ ದೊಡ್ಡ ಇನಿಂಗ್ಸ್ ಆಡುವಲ್ಲಿ ಜೈಸ್ವಾಲ್ ವಿಫಲರಾಗಿದ್ದಾರೆ.
IND vs SL: ಸಿಂಹಳೀಯರ ಎದುರು ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಸನಿಹದಲ್ಲಿ ಭಾರತ!
ದೇವದತ್ ಪಡಿಕ್ಕಲ್ ಅಗ್ರ 50ರ ಒಳಗೆ ಪ್ರವೇಶ ಮಾಡಿದ್ದರೆ, ಕೆಎಲ್ ರಾಹುಲ್ ಹಾಗೂ ರವೀಂದ್ರ ಜಡೇಜಾ ಕ್ರಮವಾಗಿ 30 ಮತ್ತು 29ನೇ ಸ್ಥಾನಗಳಲ್ಲಿದ್ದಾರೆ. ಟೆಸ್ಟ್ ಆಲ್‌ರೌಂಡರ್‌ಗಳ ಶ್ರೇಯಾಂಕದಲ್ಲಿ ರವೀಂದ್ರ ಜಡೇಜಾ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಬ್ಯಾಟ್ಸ್‌ಮನ್‌ಗಳ ವಿಭಾಗದಲ್ಲಿ ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ ಅಗ್ರ ಸ್ಥಾನದಲ್ಲಿದ್ದರೆ, ಜೋ ರೂಟ್ ಎರಡನೇ ಸ್ಥಾನದಲ್ಲಿದ್ದಾರೆ. ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್ ಹಾಗೂ ದಕ್ಷಿಣ ಆಫ್ರಿಕಾದ ತೆಂಬಾ ಬವೂಮಾ ಅಗ್ರ ಐದರೊಳಗಿದ್ದಾರೆ.
ಐಸಿಸಿ ಟೆಸ್ಟ್ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕ (ಆಗಸ್ಟ್ 26)
- ಹ್ಯಾರಿ ಬ್ರೂಕ್ (ಇಂಗ್ಲೆಂಡ್): 874
- ಜೋ ರೂಟ್ (ಇಂಗ್ಲೆಂಡ್): 850
- ಸ್ಟೀವ್ ಸ್ಮಿತ್ (ಆಸ್ಟ್ರೇಲಿಯಾ) : 840
- ಟ್ರಾವಿಸ್ ಹೆಡ್ (ಆಸ್ಟ್ರೇಲಿಯಾ) : 811
- ತೆಂಬಾ ಬವೂಮಾ (ದಕ್ಷಿಣ ಆಫ್ರಿಕಾ): 775
- ರಚಿನ್ ರವೀಂದ್ರ (ನ್ಯೂಜಿಲೆಂಡ್): 740
- ರಿಷಭ್ ಪಂತ್ (ಭಾರತ) : 711
- ಶುಭಮನ್ ಗಿಲ್ (ಭಾರತ): 711
- ಡ್ಯಾರಿಲ್ ಮಿಚೆಲ್ (ನ್ಯೂಜಿಲೆಂಡ್) : 710
- ಬಾಬರ್ ಆಝಮ್ (ಪಾಕಿಸ್ತಾನ): 709