ನವದೆಹಲಿ: ಕಳೆದ ಹಲವು ತಿಂಗಳುಗಳಿಂದ ತಮ್ಮ ಬ್ಯಾಟಿಂಗ್‌ನಲ್ಲಿ ವೈಫಲ್ಯ ಅನುಭವಿಸಿದ್ದ ಭಾರತ ತಂಡದ ವಿಕೆಟ್ ಕೀಪರ್ ರಿಷಭ್ ಪಂತ್ (Rishabh Pant) ಬಗ್ಗೆ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿವಿಲಿಯರ್ಸ್ (AB De Villiers) ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಎಡಗೈ ಬ್ಯಾಟ್ಸ್‌ಮನ್ ಭಾರತ ಪರ ಮುಂದಿನ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರುವ ಮೂಲಕ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಲಿದ್ದಾರೆಂದು ಭವಿಷ್ಯವನ್ನು ನುಡಿದಿದ್ದಾರೆ. ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಣ ಎರಡು ಪಂದ್ಯಗಳ ಟೆಸ್ಟ್ ಸರಣಿ ಆಗಸ್ಟ್ 15 ರಂದು ಆರಂಭವಾಗಲಿದೆ. ಮೊದಲನೇ ಟೆಸ್ಟ್ ಗಾಲೆ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 23 ರಂದು ಕೊಲಂಬೊದ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಗ್ರೌಂಡ್‌ನಲ್ಲಿ ನಡೆಯಲಿದೆ.
ಲಖನೌ ಸೂಪರ್ ಜಯಂಟ್ಸ್ ಪರ ಐಪಿಎಲ್ ಟೂರ್ನಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ್ದ ರಿಷಭ್ ಪಂತ್, ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯದಲ್ಲಿ ಅಮೋಘ 81 ರನ್‌ಗಳ ಇನಿಂಗ್ಸ್ ಆಡಿ ಭರ್ಜರಿಯಾಗಿ ಕಮ್‌ಬ್ಯಾಕ್ ಮಾಡಿದ್ದರು.ಈ ಬಗ್ಗೆ ಪ್ರತಿಕ್ರಿಯಿಸಿರುವ ಎಬಿ ಡಿ ವಿಲಿಯರ್ಸ್, ಐಪಿಎಲ್ ವೇಳೆ ಪಂತ್ ಆತ್ಮವಿಶ್ವಾಸ ಕಳೆದುಕೊಂಡಂತೆ ಕಾಣುತ್ತಿದ್ದರು ಎಂದು ಹೇಳಿದ್ದಾರೆ. ಆದರೆ ಭಾರತ ತಂಡದ ಬಿಳಿ ಜೆರ್ಸಿ ಧರಿಸಿ ಆಡಿದಾಗ ಅವರ ಅತ್ಯುತ್ತಮ ಆಟ ಮತ್ತೆ ಹೊರಹೊಮ್ಮುತ್ತದೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.
ICC Rankings: ಶುಭಮನ್ ಗಿಲ್ ನಂ 1 ಒಡಿಐ ಬ್ಯಾಟ್ಸ್‌ಮನ್; 230ರ ಸ್ಥಾನಗಳಲ್ಲಿ ಏರಿಕೆ ಕಂಡ ವೈಭವ್ ಸೂರ್ಯವಂಶಿ!
"ನನ್ನ ಅಭಿಪ್ರಾಯದಲ್ಲಿ ರಿಷಭ್ ಪಂತ್ ಅವರನ್ನು ತಂಡದಲ್ಲಿ ಸೇರಿಸಿರುವುದು ಸ್ವಲ್ಪ ಅಚ್ಚರಿಯ ಸಂಗತಿಯೇ. ಅವರ ಫಿಟ್ನೆಸ್ ಹೇಗಿದೆ ಮತ್ತು ಉತ್ತಮ ಪ್ರದರ್ಶನ ನೀಡುವ ತೀವ್ರತೆ ಎಷ್ಟಿದೆ ಎಂಬುದನ್ನು ಕಾದು ನೋಡಬೇಕಿದೆ. ಐಪಿಎಲ್ ವೇಳೆ ಅವರು ಆತ್ಮವಿಶ್ವಾಸ ಮತ್ತು ಉತ್ಸಾಹ ಎರಡರಲ್ಲೂ ಸ್ವಲ್ಪ ಕುಗ್ಗಿದಂತೆ ಕಾಣುತ್ತಿದ್ದರು. ಆದರೆ ಈಗ ಅವರು ಮತ್ತೆ ಭಾರತ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಭಾರತದ ಬಿಳಿ ಜೆರ್ಸಿ ಧರಿಸಿದಾಗ ಅವರಲ್ಲಿರುವ ಅತ್ಯುತ್ತಮ ಆಟ ಮತ್ತೆ ಹೊರಹೊಮ್ಮುತ್ತದೆ ಎಂದು ನಾನು ನಂಬಿದ್ದೇನೆ. 17ನೇ ಸಂಖ್ಯೆಯ ಆಟಗಾರನ ದೊಡ್ಡ ಅಭಿಮಾನಿ ನಾನು. ಅವರು ಅದೇ ತೀವ್ರತೆ ಮತ್ತು ಉತ್ಸಾಹದೊಂದಿಗೆ ಆಡುತ್ತಿರುವುದನ್ನು ನೋಡಲು ಬಯಸುತ್ತೇನೆ," ಎಂದು ಎಬಿ ಡಿ ವಿಲಿಯರ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ತಿಳಿಸಿದ್ದಾರೆ.
ಸಾರಾಂಶ್ ಜೈನ್ ಸೇರ್ಪಡೆಗೆ ಬಗ್ಗೆ ಎಬಿಡಿ ಪ್ರತಿಕ್ರಿಯೆ
ಎಬಿ ಡಿ ವಿಲಿಯರ್ಸ್ ಅವರು ಭಾರತ ತಂಡಕ್ಕೆ ಹೊಸದಾಗಿ ಆಯ್ಕೆಯಾಗಿರುವ ಆಲ್‌ರೌಂಡರ್ ಸಾರಾಂಶ್ ಜೈನ್ ಅವರ ಸೇರ್ಪಡೆಯನ್ನು ಶ್ಲಾಘಿಸಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಹಲವು ವರ್ಷಗಳಿಂದ ಸ್ಥಿರ ಪ್ರದರ್ಶನ ನೀಡುತ್ತಿರುವ 33 ವರ್ಷದ ಆಫ್‌ಸ್ಪಿನ್ ಆಲ್‌ರೌಂಡರ್, ಗಾಯಗೊಂಡಿರುವ ವಾಷಿಂಗ್ಟನ್ ಸುಂದರ್ ಅವರ ಬದಲಿಯಾಗಿ ತಂಡಕ್ಕೆ ಅವಕಾಶ ಪಡೆದಿದ್ದಾರೆ. ಹ್ಯಾಮ್‌ಸ್ಟ್ರಿಂಗ್ ಗಾಯದ ಕಾರಣ ಸುಂದರ್ ಈ ಸರಣಿಯಿಂದ ಹೊರಗುಳಿದಿದ್ದಾರೆ.
ಶ್ರೀಲಂಕಾ ಟೆಸ್ಟ್ ಸರಣಿಗೆ ಭಾರತ ತಂಡ ಪ್ರಕಟ; ಜಡೇಜಾ ಕಮ್‌ಬ್ಯಾಕ್
"ದೊಡ್ಡ ಅಚ್ಚರಿ ಏನೆಂದರೆ ಸಾರಾಂಶ್ ಜೈನ್ ಆಯ್ಕೆ. ಅವರು 33 ವಯಸ್ಸಿನ ಆಟಗಾರ ಹಾಗೂ ಅವರು ದೀರ್ಘಾವಧಿಯಿಂದ ಪ್ರಥಮ ದರ್ಜೆ ಕ್ರಿಕೆಟ್ ಆಡುತ್ತಿದ್ದಾರೆ. ಅವರ ಕೊನೆಗೂ ಭಾರತ ತಂಡದಲ್ಲಿ ಆಡಲು ಅವಕಾಶ ಪಡೆದುಕೊಂಡಿರುವುದು ನಿಜಕ್ಕೂ ಅದ್ಭುತ. ಅವರು ಆಫ್ ಸ್ಪಿನ್ನರ್ ಹಾಗೂ ಎಡಗೈ ಬ್ಯಾಟ್ಸ್‌ಮನ್ ಆಗಿದ್ದು, ವಾಷಿಂಗ್ಟನ್ ಸುಂದರ್ ಅವರ ರೀತಿಯ ಆಟಗಾರರಾಗಿದ್ದಾರೆ. ಅವರ ಬೌಲಿಂಗ್ ಅಂಕಿಅಂಶಗಳು ಅತ್ಯುತ್ತಮವಾಗಿವೆ," ಎಂದು ಎಬಿಡಿ ಗುಣಗಾನ ಮಾಡಿದ್ದಾರೆ.
"ಸಾರಾಂಶ್ ಜೈನ್ ಅವರ ಬೌಲಿಂಗ್ ಸರಾಸರಿ 27ಕ್ಕಿಂತ ಸ್ವಲ್ಪ ಹೆಚ್ಚಿದ್ದು, ಪ್ರತಿ 54 ಎಸೆತಗಳಿಗೆ ಒಂದು ವಿಕೆಟ್ ಪಡೆಯುವಷ್ಟು ಉತ್ತಮ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಪಂದ್ಯ ಮಧ್ಯದ ಓವರ್‌ಗಳಲ್ಲಿ ಚೆಂಡು ಹಳೆಯದಾದ ಬಳಿಕ ನಾಯಕ ಶುಭಮನ್ ಗಿಲ್ ಅವರಿಗೆ ಅವರು ಮತ್ತೊಂದು ಉಪಯುಕ್ತ ಬೌಲಿಂಗ್ ಆಯ್ಕೆಯಾಗಲಿದ್ದಾರೆ. ಬ್ಯಾಟಿಂಗ್‌ನಲ್ಲೂ ಅವರ ದಾಖಲೆಯು ಉತ್ತಮವಾಗಿದೆ. ಅವರು ಹಲವು ಅರ್ಧಶತಕಗಳು ಮತ್ತು ಎರಡು ಶತಕಗಳನ್ನು ಗಳಿಸಿದ್ದಾರೆ. ನನ್ನ ದೃಷ್ಟಿಯಲ್ಲಿ ಅವರು ಬ್ಯಾಟಿಂಗ್ ಆಲ್‌ರೌಂಡರ್‌ಗಿಂತ ಬೌಲಿಂಗ್ ಆಲ್‌ರೌಂಡರ್‌ಗೆ ಹೆಚ್ಚು ಸೂಕ್ತರಾಗಿದ್ದಾರೆ," ಎಂದು ಎಬಿ ಡಿ ವಿಲಿಯರ್ಸ್ ಹೇಳಿದ್ದಾರೆ.