ICC Rankings: ಶುಭಮನ್ ಗಿಲ್ ನಂ 1 ಒಡಿಐ ಬ್ಯಾಟ್ಸ್‌ಮನ್; 230ರ ಸ್ಥಾನಗಳಲ್ಲಿ ಏರಿಕೆ ಕಂಡ ವೈಭವ್ ಸೂರ್ಯವಂಶಿ!
ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿನ ಅಮೋಘ ಪ್ರದರ್ಶನದ ಬಳಿಕ ಶುಭಮನ್ ಗಿಲ್ ಐಸಿಸಿ ಏಕದಿನ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ. ಇದೇ ವೇಳೆ, 15ರ ವಯಸ್ಸಿನ ಯುವ ಬ್ಯಾಟರ್ ವೈಭವ್ ಸೂರ್ಯವಂಶಿ ಟಿ20ಐ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಭಾರೀ ಜಿಗಿತ ಕಂಡಿದ್ದಾರೆ. ಅವರು ಬರೋಬ್ಬರಿ 230 ಸ್ಥಾನಗಳ ಏರಿಕೆಯೊಂದಿಗೆ 48ನೇ ಸ್ಥಾನಕ್ಕೆ ತಲುಪಿದ್ದಾರೆ. ಇಶಾನ್ ಕಿಶನ್ ತಮ್ಮ ನಂ.1 ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
ಐಸಿಸಿ ಒಡಿಐ ಶ್ರೇಯಾಂಕದಲ್ಲಿ ಶುಭಮನ್ ಗಿಲ್‌ಗೆ ಅಗ್ರ ಸ್ಥಾನ. -
ನವದೆಹಲಿ: ಐಸಿಸಿ ಒಡಿಐ ಬ್ಯಾಟ್ಸ್‌ಮನ್‌ಗಳ (ICC ODI Ranking) ಶ್ರೇಯಾಂಕದಲ್ಲಿ ಭಾರತ ತಂಡದ ನಾಯಕ ಶುಭಮನ್ ಗಿಲ್ (Shubman Gill) ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಈ ತಿಂಗಳ ಆರಂಭದಲ್ಲಿ ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದ ಅವರು ಮೊದಲನೇ ಪಂದ್ಯದಲ್ಲಿ ಅಜೇಯ 80 ರನ್ ಹಾಗೂ ಮೂರನೇ ಪಂದ್ಯದಲ್ಲಿ 77 ರನ್‌ಗಳನ್ನು ಕಲೆ ಹಾಕಿದ್ದರು. ಈ ಪ್ರದರ್ಶನದ ಆಧಾರದ ಮೇಲೆ ಗಿಲ್ ಅವರು, ನ್ಯೂಜಿಲೆಂಡ್ ತಂಡದ ಬ್ಯಾಟ್ಸ್‌ಮನ್ ಡ್ಯಾರಿಲ್ ಮಿಚೆಲ್ ಅವರನ್ನು ಹಿಂದಿಕ್ಕಿದ್ದಾರೆ.
ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ 65 ರನ್ ಗಳಿಸಿದ್ದ ಮಿಚೆಲ್, ನಂತರ ಇನ್ನುಳಿದ ಎರಡೂ ಪಂದ್ಯಗಳಲ್ಲಿ ವಿಫಲರಾಗಿದ್ದರು. ಕೊನೆಯ ಎರಡೂ ಪಂದ್ಯಗಳಲ್ಲಿ ತಲಾ 28 ರನ್‌ಗಳಿಗೆ ಸೀಮಿತರಾಗಿದ್ದರು. ಇದರ ಪರಿಣಾಮ ಅವರನ್ನು ಶುಭಮನ್ ಗಿಲ್ ಹಿಂದಿಕ್ಕಿ ಅಗ್ರ ಸ್ಥಾನವನ್ನು ಅಲಂಕರಿಸಿದ್ದಾರೆ. ಡ್ಯಾರಿಲ್ ಮಿಚೆಲ್ ಸದ್ಯ ಎರಡನೇ ಸ್ಥಾನಕ್ಕೆ ಇಳಿದಿದ್ದು, ಮೂರು ಮತ್ತು ನಾಲ್ಕನೇ ಕ್ರಮಾಂಕಗಳಲ್ಲಿ ಕ್ರಮವಾಗಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇದ್ದಾರೆ.
ಭಾರತ ತಂಡವನ್ನು ತೊರೆದ ಬೆನ್ನಲ್ಲೆ ಕೆಕೆಆರ್ ತಂಡದಲ್ಲಿ ದೊಡ್ಡ ಹುದ್ದೆಯನ್ನು ಅಲಂಕರಿಸಿದ ರಯಾನ್ ಟೆನ್ ಡಶ್ಕಾಟೆ!
230 ಸ್ಥಾನಗಳಲ್ಲಿ ಏರಿಕೆ ಕಂಡ ವೈಭವ್ ಸೂರ್ಯವಂಶಿ
ಇನ್ನು ಜಿಂಬಾಬ್ವೆ ಎದುರು ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಅವರು 230 ಸ್ಥಾನಗಳಲ್ಲಿ ಗಣನೀಯವಾಗಿ ಏರಿಕೆ ಕಂಡಿದ್ದಾರೆ. ಜಿಂಬಾಬ್ವೆ ವಿರುದ್ಧದ ಸರಣಿಗೂ ಮುನ್ನ ವೈಭವ್ 278ನೇ ಸ್ಥಾನದಲ್ಲಿದ್ದರು. ಆದರೆ ಅವರು ಈ ಸರಣಿಯಲ್ಲಿ 151 ರನ್‌ಗಳನ್ನು ಕಲೆ ಹಾಕುವ ಮೂಲಕ ಟಿ20ಐ ಬ್ಯಾಟ್ಸ್‌ಮನ್‌ಗಳ ಶ್ರೇಯಾಂಕದಲ್ಲಿ ಗಮನಾರ್ಹ ಏರಿಕೆಯನ್ನು ಕಂಡಿದ್ದಾರೆ. 15ರ ವಯಸ್ಸಿನ ಆಟಗಾರ ಇದೀಗ 48ನೇ ಸ್ಥಾನಕ್ಕೆ ಲಗ್ಗೆ ಇಟ್ಟಿದ್ದಾರೆ.
ಇನ್ನು ಭಾರತ ತಂಡದ ಮತ್ತೊಬ್ಬ ಬ್ಯಾಟ್ಸ್‌ಮನ್ ಇಶಾನ್ ಕಿಶನ್ ಅವರು ತಮ್ಮ ಅಗ್ರ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಅವರು 910 ರೇಟಿಂಗ್ ಪಾಯಿಂಟ್ಸ್‌ಗಳೊಂದಿಗೆ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಅಭಿಷೇಕ್ ಶರ್ಮಾ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರು ಜಿಂಬಾಬ್ವೆ ಎದುರಿನ ಟಿ20ಐ ಸರಣಿಯಲ್ಲಿ ವಿಫಲರಾಗಿದ್ದರು. ಪಾಕಿಸ್ತಾನದ ಸಾಹಿಬ್ಝಾದಾ ಫರ್ಹಾನ್ ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ.
ಐಸಿಸಿ ಶ್ರೇಯಾಂಕದಲ್ಲಿ ತಿಲಕ್ ವರ್ಮಾಗೆ ಮುನ್ನಡೆ, ವರುಣ್ ಚಕ್ರವರ್ತಿಗೆ ಹಿನ್ನಡೆ
ತಿಲಕ್ ವರ್ಮಾ ಅವರು ಕೂಡ ಶ್ರೇಯಾಂಕದಲ್ಲಿ ಭರ್ಜರಿ ಏರಿಕೆ ಕಂಡಿದ್ದಾರೆ. ಸಿಕಂದರ್ ರಾಝಾ ನಾಯಕತ್ವದ ಜಿಂಬಾಬ್ವೆ ವಿರುದ್ಧದ ಮೂರು ಪಂದ್ಯಗಳ ಟಿ20ಐ ಸರಣಿಯಲ್ಲಿ ಅವರು ಎಲ್ಲಾ ಪಂದ್ಯಗಳಲ್ಲೂ ಅಜೇಯರಾಗಿದ್ದರು. ಅದರಲ್ಲೂ ಹರಾರೆಯಲ್ಲಿ ನಡೆದಿದ್ದ ಎರಡನೇ ಟಿ20 ಪಂದ್ಯದಲ್ಲಿ ಅವರು ಆಕರ್ಷಕ 60 ರನ್‌ಗಳ ಇನಿಂಗ್ಸ್ ಆಡಿದ್ದರು. ಈ ಪ್ರದರ್ಶನದ ನೆರವಿನಿಂದ ತಿಲಕ್ ವರ್ಮಾ ಟಿ20 ಬ್ಯಾಟಿಂಗ್ ಶ್ರೇಯಾಂಕದಲ್ಲಿ ಆರನೇ ಸ್ಥಾನಕ್ಕೆ ಏರಿದ್ದಾರೆ.
ಬಾಬರ್ ಆಝಮ್ ನಾಯಕನಾಗಿ ಮರಳಿದರೂ ಪಾಕಿಸ್ತಾನ ತಂಡದ ಹಣೆ ಬರಹ ಬದಲಾಗಲಿಲ್ಲ!
ವರುಣ್ ಚಕ್ರವರ್ತಿಗೆ ಹಿನ್ನಡೆ
ಇನ್ನೊಂದೆಡೆ, ಭಾರತದ ಪ್ರಮುಖ ಸ್ಪಿನ್ನರ್ ವರುಣ್ ಚಕ್ರವರ್ತಿ ಅವರಿಗೆ ಟಿ20 ಬೌಲರ್‌ಗಳ ಶ್ರೇಯಾಂಕದಲ್ಲಿ ಹಿನ್ನಡೆಯಾಗಿದೆ. ಗಾಯದ ಕಾರಣದಿಂದ ಅವರು ಜಿಂಬಾಬ್ವೆ ವಿರುದ್ಧದ ಸಂಪೂರ್ಣ ಸರಣಿಯಿಂದ ಹೊರಗುಳಿದಿದ್ದರು. ಇದರಿಂದ ಅವರ ಶ್ರೇಯಾಂಕದಲ್ಲಿ ಕುಸಿತ ಕಂಡುಬಂದು, ಅವರು ಇದೀಗ ಎಂಟನೇ ಸ್ಥಾನಕ್ಕೆ ಇಳಿದಿದ್ದಾರೆ. ಗಾಯದ ಕಾರಣದಿಂದ ವರುಣ್ ಚಕ್ರವರ್ತಿ ಜಿಂಬಾಬ್ವೆ ವಿರುದ್ಧದ ಟಿ20ಐ ಸರಣಿಯಿಂದ ಹೊರಗುಳಿದಿದ್ದರು. ಪಂದ್ಯಗಳಲ್ಲಿ ಭಾಗವಹಿಸದಿರುವುದು ಅವರ ಶ್ರೇಯಾಂಕದ ಮೇಲೆ ಪರಿಣಾಮ ಬೀರಿದ್ದು, ಪಟ್ಟಿಯಲ್ಲಿ ಅವರ ಸ್ಥಾನ ಕುಸಿದಿದೆ.