ಗಾಲೆ: ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ (IND vs SL) ಸ್ಪಿನ್ ಬೌಲಿಂಗ್ ಸವಾಲನ್ನು ಭಾರತ ತಂಡ ಉತ್ತಮವಾಗಿ ಎದುರಿಸಿದೆ ಎಂದು ಉಪನಾಯಕ ಕೆಎಲ್ ರಾಹುಲ್ (KL Rahul) ತಿಳಿಸಿದ್ದಾರೆ. ಗಾಲೆಯಲ್ಲಿ ದಾಖಲಿಸಿದ 165 ರನ್‌ಗಳ ಗೆಲುವು, ಎರಡನೇ ಟೆಸ್ಟ್ ಹಾಗೂ ಮುಂದಿನ ಕಠಿಣ ಸರಣಿಗಳಿಗೆ ತಂಡದ ಆತ್ಮವಿಶ್ವಾಸ ಹೆಚ್ಚಿಸಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾವನ್ನು ಮಣಿಸಿದ ಭಾರತ, ಎರಡು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎರಡನೇ ಟೆಸ್ಟ್ ಪಂದ್ಯ ಆಗಸ್ಟ್ 23ರಂದು ಕೊಲಂಬೊದಲ್ಲಿ ಆರಂಭವಾಗಲಿದೆ.
ಪಂದ್ಯದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಕೆಎಲ್ ರಾಹುಲ್, “ಇದನ್ನು ನಿರಾಳತೆಯ ಗೆಲುವು ಎಂದು ಹೇಳುವುದಿಲ್ಲ. ಪ್ರತಿಯೊಂದು ಟೆಸ್ಟ್ ಗೆಲುವೂ ವಿಶೇಷ. ಬಹಳ ಸಮಯದ ಬಳಿಕ ನಾವು ಶ್ರೀಲಂಕಾಗೆ ಬಂದಿದ್ದೇವೆ. ತಂಡದ ಅನೇಕ ಆಟಗಾರರು ಇಲ್ಲಿ ಈ ಹಿಂದೆ ಆಡಿರಲಿಲ್ಲ. ಹೀಗಾಗಿ ಪ್ರವಾಸಕ್ಕೆ ಇದು ಅತ್ಯುತ್ತಮ ಆರಂಭ. ಟೆಸ್ಟ್‌ಗೂ ಮುನ್ನ ನಾವು ಚರ್ಚಿಸಿದ್ದ ಬಹುತೇಕ ಅಂಶಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತಂದಿದ್ದೇವೆ,” ಎಂದು ಪಂದ್ಯದ ಬಳಿಕ ರಾಹುಲ್ ತಿಳಿಸಿದ್ದಾರೆ.
ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ವಿರುದ್ಧದ ತವರು ಸರಣಿಗಳಲ್ಲಿ ಸ್ಪಿನ್ ಎದುರಿಸಲು ಭಾರತ ಸಂಕಷ್ಟ ಅನುಭವಿಸಿತ್ತು. ಹೀಗಾಗಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಬ್ಯಾಟರ್‌ಗಳಿಗೆ ಮತ್ತೊಂದು ದೊಡ್ಡ ಪರೀಕ್ಷೆ ಎದುರಾಗಿತ್ತು. ಆದರೆ ಗಾಲೆಯಲ್ಲಿ ಭಾರತದ ಬ್ಯಾಟರ್‌ಗಳು ಶ್ರೀಲಂಕಾದ ಸ್ಪಿನ್ನರ್‌ಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಎದುರಿಸಿ, ಬಹುತೇಕ ಪಂದ್ಯದುದ್ದಕ್ಕೂ ನಿಯಂತ್ರಣ ಕಾಯ್ದುಕೊಂಡರು.
IND vs SL: ಮಾನವ್ ಸುತಾರ್ ಸ್ಪಿನ್ ಮೋಡಿಗೆ ತತ್ತರಿಸಿದ ಶ್ರೀಲಂಕಾ, ಭಾರತ ತಂಡಕ್ಕೆ ಭರ್ಜರಿ ಜಯ!
ಈ ಫಲಿತಾಂಶವು ಸ್ಪಿನ್ ವಿರುದ್ಧದ ಬ್ಯಾಟಿಂಗ್ ಸುಧಾರಿಸಲು ತಂಡ ನಡೆಸಿದ ಸಿದ್ಧತೆಯ ಫಲ ಎಂದು ರಾಹುಲ್ ಹೇಳಿದ್ದಾರೆ. “ಈ ಗೆಲುವು ಖಂಡಿತವಾಗಿಯೂ ಸಂತೋಷ ತರುತ್ತದೆ. ಜೊತೆಗೆ ಕೊಲಂಬೊದಲ್ಲಿ ನಡೆಯಲಿರುವ ಮುಂದಿನ ಪಂದ್ಯಕ್ಕೂ, ಮುಂದಿನ ವರ್ಷ ಭಾರತದಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆಯಲಿರುವ ತವರು ಟೆಸ್ಟ್ ಸರಣಿಗೂ ಇದು ನಮಗೆ ಆತ್ಮವಿಶ್ವಾಸ ನೀಡುತ್ತದೆ,” ಎಂದು ಕನ್ನಡಿಗ ಹೇಳಿದ್ದಾರೆ.
“ಸ್ಪಿನ್ ವಿರುದ್ಧ ಹೇಗೆ ಬ್ಯಾಟ್ ಮಾಡಬೇಕು ಮತ್ತು ಸ್ಪಿನ್ ಸ್ನೇಹಿ ಪರಿಸ್ಥಿತಿಗಳಲ್ಲಿ ಹೇಗೆ ಆಡಬೇಕು ಎಂಬುದರ ಬಗ್ಗೆ ನಾವೆಲ್ಲರೂ ಕೆಲಸ ಮಾಡುತ್ತಿದ್ದೇವೆ. ಆ ದೃಷ್ಟಿಯಿಂದ ಈ ಗೆಲುವು ನಮಗೆ ಸಾಕಷ್ಟು ಸಂತೋಷ ನೀಡಿದೆ,” ಎಂದು ಅವರು ತಿಳಿಸಿದ್ದಾರೆ.
ಶ್ರೀಲಂಕಾ ಪ್ರವಾಸಕ್ಕೂ ಮುನ್ನ ಕೆಎಲ್ ರಾಹುಲ್ ಸ್ಪಿನ್ ಬೌಲಿಂಗ್ ಎದುರಿಸುವ ಸಲುವಾಗಿ ಸಾಕಷ್ಟು ಕೆಲಸ ಮಾಡಿದ್ದರು. ಇದಕ್ಕಾಗಿ ಅವರು ಮುಂಬೈನ ಖಾಸಗಿ ತರಬೇತಿ ಕೇಂದ್ರದಲ್ಲಿ ಸಮಯ ಹೆಚ್ಚಿನ ಸಮಯ ಕಳೆದಿದ್ದರು. ಯಾವುದೇ ಪರಿಸ್ಥಿತಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಿದ್ಧತೆ ಆರಂಭವಾಗುವುದು ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದರಿಂದ ಮತ್ತು ಇದೇ ರೀತಿಯ ಪರಿಸ್ಥಿತಿಗಳಲ್ಲಿ ನಡೆದ ಹಿಂದಿನ ಪಂದ್ಯಗಳನ್ನು ಅಧ್ಯಯನ ಮಾಡುವುದರಿಂದ ಎಂದು ರಾಹುಲ್ ಹೇಳಿದ್ದಾರೆ.
ʻಸಿಕ್ಸ್ ಹೊಡಿಯಿರಿʼ: ಐಪಿಎಲ್ ಆಫರ್ ನೀಡಿ ನಿರೋಶನ್ ಡಿಕ್ವೆಲ್ಲಾರನ್ನು ಔಟ್ ಮಾಡಿದ ಯಶಸ್ವಿ ಜೈಸ್ವಾಲ್!
“ನೀವು ಭಾರತದಲ್ಲಾಗಲಿ ಅಥವಾ ವಿದೇಶದಲ್ಲಾಗಲಿ ಯಾವುದೇ ಪರಿಸ್ಥಿತಿಯಲ್ಲಿ ಉತ್ತಮವಾಗಿ ಆಡಬೇಕಾದರೆ, ಸರಣಿಗೂ ಮುನ್ನ ನೀವು ಎಷ್ಟು ಚೆನ್ನಾಗಿ ಸಿದ್ಧರಾಗಿದ್ದೀರಿ ಎಂಬುದು ಅತ್ಯಂತ ಮುಖ್ಯ. ಅದು ನಿಮಗೆ ಉತ್ತಮ ಪ್ರದರ್ಶನ ನೀಡುವ ಅತ್ಯುತ್ತಮ ಅವಕಾಶವನ್ನು ನೀಡುತ್ತದೆ,” ಎಂದು ಉಪನಾಯಕ ತಿಳಿಸಿದ್ದಾರೆ.
“ಶ್ರೀಲಂಕಾದಲ್ಲಿ ನಡೆದ ಕೆಲವು ಪಂದ್ಯಗಳನ್ನು ವೀಕ್ಷಿಸಿ, ಬ್ಯಾಟರ್ ಆಗಿ ಪಂದ್ಯದ ಯಾವ ಹಂತದಲ್ಲಿ ರನ್ ಗಳಿಸಬಹುದು, ಯಾವ ಹಂತದಲ್ಲಿ ಒತ್ತಡವನ್ನು ನಿಭಾಯಿಸಬೇಕು, ಯಾವಾಗ ಆಕ್ರಮಣಕಾರಿ ಆಟ ಆಡಬೇಕು ಮತ್ತು ಯಾವಾಗ ಎಚ್ಚರಿಕೆಯಿಂದ ಆಡಬೇಕು ಎಂಬುದನ್ನು ಅರ್ಥಮಾಡಿಕೊಳ್ಳಬೇಕು,” ಎಂದು ಅವರು ವಿವರಿಸಿದ್ದಾರೆ.