ನವದೆಹಲಿ: ಯುವ ವೇಗಿ ಗುರ್ನೂರ್ ಬ್ರಾರ್‌ಗೆ (Gurnoor Brar) ಅಫ್ಘಾನಿಸ್ತಾನ ವಿರುದ್ಧದ ಮೊದಲನೇ ಏಕದಿನ ಪಂದ್ಯದಲ್ಲಿ(IND vs AFG) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಲು ಅವಕಾಶ ಮಾಡಿಕೊಟ್ಟ ಬಿಸಿಸಿಐ ಆಯ್ಕೆದಾರರನ್ನು ಸ್ಪಿನ್ ದಿಗ್ಗಜ ರವಿಚಂದ್ರನ್ ಅಶ್ವಿನ್ (R Ashwin) ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದಿದ್ದ ಮೊದಲನೇ ಏಕದಿನ ಪಂದ್ಯದಲ್ಲಿ ಅತ್ಯುತ್ತಮ ಬೌಲಿಂಗ್ ಪ್ರದರ್ಶನವನ್ನು ತೋರಿದ ಅವರು ಮೂರು ವಿಕೆಟ್‌ಗಳನ್ನು ಕಬಳಿಸುವ ಮೂಲಕ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ್ದರು.
ಮಳೆಯ ಕಾರಣ ಪಂದ್ಯದ ಓವರ್‌ಗಳನ್ನು 25ಕ್ಕೆ ಇಳಿಸಲಾಗಿತ್ತು. ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡ ಭಾರತ ತಂಡದ ಪರ ಹೊಸ ಚೆಂಡಿನಲ್ಲಿ ದಾಳಿ ನಡೆಸಿದ ಬ್ರಾರ್, ನಿಯಮಿತವಾಗಿ 145 ಕಿ. ಮೀ ವೇಗದಲ್ಲಿ ಬೌಲ್ ಮಾಡಿದ್ದರು. ಅವರು ತಮ್ಮ ಸ್ಪೆಲ್‌ನಲ್ಲಿ ಅವರು 27 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಬಳಿಸಿದ್ದರು. ತಮ್ಮ ಅಂತಾರಾಷ್ಟ್ರೀಯ ಪಂದ್ಯದ ಐದನೇ ಎಸೆತದಲ್ಲಿಯೇ ತಮ್ಮ ಮೊಟ್ಟ ಮೊದಲ ವಿಕೆಟ್ ಅನ್ನು ಕಿತ್ತರು. ಆ ಮೂಲಕ ತಮ್ಮನ್ನು ಆಯ್ಕೆ ಮಾಡಿದ ಆಯ್ಕೆದಾರರ ವಿಶ್ವಾಸವನ್ನು ಉಳಿಸಿಕೊಂಡರು.
IND vs AFG: ಮೊದಲನೇ ಏಕದಿನ ಪಂದ್ಯದ ಗೆಲುವಿನ ಬಳಿಕ ಶುಭಮನ್ ಗಿಲ್ ಹೇಳಿದ್ದಿದು!
"ಗುರ್ನೂರ್ ಬ್ರಾರ್, ಅವರು ನಿಜಕ್ಕೂ ಗಮನಾರ್ಹವಾಗಿ ಬೌಲಿಂಗ್ ಪ್ರದರ್ಶನವನ್ನು ತೋರಿದ್ದರು ಎಂದು ನಾವು ಹೇಳಬೇಕಾಗಿದೆ. ಅವರು ಎತ್ತರವಾಗಿರುವುದರ ಜೊತೆಗೆ ಬಲಿಷ್ಠವಾಗಿದ್ದಾರೆ. ಅವರು ಬೌಲ್ ಮಾಡಿದ ಪ್ರತಿಯೊಂದು ಎಸೆತವನ್ನೂ 145 ಕಿ.ಮೀ ವೇಗದಲ್ಲಿ ಹಾಕಿದ್ದರು. ಇದು ದೊಡ್ಡ ಮೇಲುಗೈ. ಕೌಶಲ, ಆಕ್ಷನ್ ಹಾಗೂ ಸ್ವಿಂಗ್ ಅನ್ನು ಅವರು ಹೊಸ ಚೆಂಡಿನಲ್ಲಿ ಪಡಯುತ್ತಾರೆ, ಇದು ಅವರಿಗೆ ಪ್ಲಸ್ ಪಾಯಿಂಟ್. ಅವರು ತಮ್ಮ ವಯಸ್ಸಿಗಿಂತ ಇನ್ನೂ ಹೆಚ್ಚಿನ ವೇಗದಲ್ಲಿ ಬೌಲ್ ಮಾಡಬಲ್ಲರು," ಎಂದು ಅಶ್ವಿನ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಗುಣಗಾನ ಮಾಡಿದ್ದಾರೆ.
26 ವರ್ಷದ ಬ್ರಾರ್ ಬ್ರಾರ್ ಅವರನ್ನು ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್ ಆಕಿಬ್ ನಬಿಗಿಂತ ಮುಂಚಿತವಾಗಿ ಟೆಸ್ಟ್ ಹಾಗೂ ಏಕದಿನ ತಂಡಕ್ಕೆ ಆಯ್ಕೆ ಮಾಡಿರುವುದು ಹಲವರಲ್ಲಿ ಆಶ್ಚರ್ಯಕ್ಕೆ ಕಾರಣವಾಯಿತು. ದೇಶಿ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಸೀಮ್ ಬೌಲರ್‌ಗಳಲ್ಲಿ ಒಬ್ಬರಾಗಿರುವ ಆಕಿಬ್ ನಬಿಯನ್ನು ಕಡೆಗಣಿಸಿ ಬ್ರಾರ್‌ಗೆ ಅವಕಾಶ ನೀಡಿರುವುದರಿಂದ ಹಲವರು ಪ್ರಶ್ನೆಗಳನ್ನು ಎತ್ತಿದ್ದರು. ಆದರೆ, ಬ್ರಾರ್ ಅವರನ್ನು ಭವಿಷ್ಯದ ಪ್ರತಿಭಾವಂತ ಆಟಗಾರನಾಗಿ ಗುರುತಿಸಿದ ಆಯ್ಕೆ ಸಮಿತಿಯ ದೂರದೃಷ್ಟಿಯನ್ನು ರವಿಚಂದ್ರನ್ ಅಶ್ವಿನ್ ಸಮರ್ಥಿಸಿಕೊಂಡರು. ಜೊತೆಗೆ, ಬ್ರಾರ್ ಮುಂದಿನ ದಿನಗಳಲ್ಲಿ ಭಾರತ ತಂಡದ ಪ್ರಮುಖ ತಾರಾ ಬೌಲರ್ ಆಗಿ ಹೊರಹೊಮ್ಮುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಅಶ್ವಿನ್ ಭವಿಷ್ಯ ನುಡಿದಿದ್ದಾರೆ.
IND vs AFG: ರೋಹಿತ್ ರನೌಟ್ ಬಗ್ಗೆ ಪ್ರತಿಕ್ರಿಯೆ ನೀಡಿದ ನಾಯಕ ಗಿಲ್
ಗುರ್ನೂರ್ ಬ್ರಾರ್ ಭವಿಷ್ಯದ ಸ್ಟಾರ್ ಬೌಲರ್
"ಆಯ್ಕೆದಾರರು ಆಕಿಬ್ ನಬಿ ಬದಲಿಗೆ ಗುರ್ನೂರ್ ಬ್ರಾರ್ ಅವರನ್ನು ಆಯ್ಕೆ ಮಾಡಿದಾಗ ಸಾಕಷ್ಟು ಚರ್ಚೆಗಳು ನಡೆದವು. ನನ್ನ ಅಭಿಪ್ರಾಯದಲ್ಲಿ ಅದು ಅತ್ಯುತ್ತಮ ಆಯ್ಕೆಯಾಗಿತ್ತು. ಇದು ಇಬ್ಬರು ಬೌಲರ್‌ಗಳ ನಡುವಿನ ಹೋಲಿಕೆಯಲ್ಲ. ಆದರೆ ಗುರ್ನೂರ್ ಅವರನ್ನು ಗುರುತಿಸಿದ ಆಯ್ಕೆದಾರರು ಮತ್ತು ತರಬೇತುದಾರರು ಪ್ರಶಂಸೆಗೆ ಅರ್ಹರು. ಅವರ ಪ್ರತಿಭೆಯನ್ನು ಗುರುತಿಸಿದ ಅವರ ದೃಷ್ಟಿ ನಿಜಕ್ಕೂ ಶ್ಲಾಘನೀಯ. ಗುರ್ನೂರ್ ತಮ್ಮ ಫಿಟ್ನೆಸ್‌ನ್ನು ಕಾಪಾಡಿಕೊಂಡು, ಸರಿಯಾದ ಮಾರ್ಗದಲ್ಲಿ ಮುಂದುವರಿದರೆ, ಭವಿಷ್ಯದಲ್ಲಿ ಭಾರತಕ್ಕೆ ಅತ್ಯಂತ ದೊಡ್ಡ ಬೌಲರ್ ಆಗಿ ಬೆಳೆದುಬರಬಹುದು," ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
IND vs AFG: ಶುಭಮನ್ ಗಿಲ್ ಭರ್ಜರಿ ಬ್ಯಾಟಿಂಗ್, ಆಫ್ಘನ್ ಎದುರು ಭಾರತಕ್ಕೆ ಭರ್ಜರಿ ಜಯ!
ಹರ್ಷ್ ದುಬೆಗೆ ಅಶ್ವಿನ್ ಮೆಚ್ಚುಗೆ
ಇದೇ ಪಂದ್ಯದಲ್ಲಿ ಬ್ರಾರ್ ಜೊತೆಗೆ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಹರ್ಷ ದುಬೆ ಅವರನ್ನು ಆರ್ ಅಶ್ವಿನ್ ಗುಣಗಾಣ ಮಾಡಿದರು. ವಿದರ್ಭದ ಎಡಗೈ ಸ್ಪಿನ್ನರ್ ಆಗಿರುವ ಹರ್ಷ ದುಬೆ ಅವರನ್ನು ಆರಂಭದಲ್ಲಿ ಶತಕವೀರ ರಹಮಾನ್‌ವುಲ್ಲಾ ಗುರ್ಬಾಝ್ ಕಠಿಣವಾಗಿ ಎದುರಿಸಿ ರನ್ ಮಳೆ ಹರಿಸಿದರು. ಆದರೆ ಬಳಿಕ ಅದ್ಭುತವಾಗಿ ಪುಟಿದೇಳಿದ ದುಬೆ, 47 ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದು ಗಮನ ಸೆಳೆದರು.
"ಹರ್ಷ ದುಬೆ ಅವರನ್ನು ನಾನು ತುಂಬಾ ಚೆನ್ನಾಗಿ ಬಲ್ಲೆ. ಅವರು ಉತ್ತಮ ಆಟಗಾರನಾಗುತ್ತಾರೆ ಎಂಬುದರಲ್ಲಿ ನನಗೆ ಯಾವುದೇ ಅನುಮಾನ ಇರಲಿಲ್ಲ. ಅವರು ಯಾವಾಗಲೂ ಹೋರಾಟದ ಮನೋಭಾವ ಹೊಂದಿರುವ ಆಟಗಾರ; ಸವಾಲುಗಳಿಂದ ಎಂದಿಗೂ ಹಿಂದೆ ಸರಿಯುವುದಿಲ್ಲ. ಈ ಪಂದ್ಯದಲ್ಲಿ ಅವರು ಸ್ವಲ್ಪ ದುಬಾರಿಯಾಗಿದ್ದರೂ, ನಂತರ ಅವರು ಮಾಡಿದ ಕಮ್‌ಬ್ಯಾಕ್ ಹರ್ಷ ದುಬೆ ಅವರ ನಿಜವಾದ ಗುಣವನ್ನು ತೋರಿಸಿತು. ಅವರು ಅತ್ಯುತ್ತಮವಾಗಿ ಬ್ಯಾಟಿಂಗ್ ಕೂಡ ಮಾಡಬಲ್ಲರು," ಎಂದು ಅಶ್ವಿನ್ ಹೇಳಿದರು.