IND vs AUS: ಅರ್ಧಶತಕ ಸಿಡಿಸಿ ಸಚಿನ್ ತೆಂಡೂಲ್ಕರ್‌ರ ವಿಶ್ವ ದಾಖಲೆ ಮುರಿದ ವಿರಾಟ್ ಕೊಹ್ಲಿ!
ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೊದಲ ಎರಡು ಪಂದ್ಯಗಳಲ್ಲಿ ಖಾತೆ ತೆರೆಯುವಲ್ಲಿ ವಿಫಲರಾಗಿದ್ದ ವಿರಾಟ್ ಕೊಹ್ಲಿ, ಕೊನೆಯ ಪಂದ್ಯದಲ್ಲಿ ಲಯಕ್ಕೆ ಮರಳಿ ಅಜೇಯ ಅರ್ಧಶತಕ ಬಾರಿಸಿದರು. ಆ ಮೂಲಕ ಇಂಟರ್‌ನ್ಯಾಷನಲ್ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಅತೀ ಹೆಚ್ಚು ರನ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ದಾಖಲೆ ಮೊದಲು ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಹೆಸರಿನಲ್ಲಿತ್ತು.
ಸಚಿನ್ ತೆಂಡೂಲ್ಕರ್‌ರ ದೊಡ್ಡ ದಾಖಲೆ ಮುರಿದ ವಿರಾಟ್ ಕೊಹ್ಲಿ. -
ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ (IND vs AUS) ಏಕದಿನ ಸರಣಿಯನ್ನು ಭಾರತ ಗೆಲುವಿನೊಂದಿಗೆ ಮುಕ್ತಾಯಗೊಳಿಸಿದೆ. ಟೀಮ್ ಇಂಡಿಯಾಗೆ ಸರಣಿ ಗೆಲ್ಲಲು ಸಾಧ್ಯವಾಗದಿದ್ದರೂ, ಕೊನೆಯ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡಿ ಸಿಡ್ನಿಯಲ್ಲಿ ದಾಖಲೆಯ ಗೆಲುವು ತನ್ನದಾಗಿಸಿಕೊಂಡಿತು. ಸರಣಿಯ ಮೊದಲೆರಡು ಪಂದ್ಯ ಸೋತಿದ್ದ ಟೀಮ್ ಇಂಡಿಯಾ ಕ್ಲೀನ್ ಸ್ವೀಪ್ ಮುಜುಗರದಿಂದ ತಪ್ಪಿಸಿಕೊಳ್ಳಲು ಈ ಪಂದ್ಯವನ್ನು ಗೆಲ್ಲಲೇಬೇಕಾಗಿತ್ತು. ಅದರಂತೆ ತಂಡವನ್ನು ಈ ಮುಜುಗರದಿಂದ ತಪ್ಪಿಸುವ ಹೊಣೆ ಹೊತ್ತಿದ್ದ ಇಬ್ಬರು ಮಾಜಿ ನಾಯಕರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ 168 ರನ್‌ಗಳ ಅಜೇಯ ಜೊತೆಯಾಟ ತಂಡವನ್ನು ಸುಲಭವಾಗಿ ಗೆಲುವಿನ ದಡ ಸೇರಿಸಿದರು. ಈ ವೇಳೆ ಕೊಹ್ಲಿ (Virat Kohli) ಅಜೇಯ ಅರ್ಧಶತಕದ ಇನಿಂಗ್ಸ್ ಆಡಿ ಹಲವು ದಾಖಲೆಗಳನ್ನು ಬರೆದಿದ್ದು, ವೈಟ್ ಬಾಲ್ ಕ್ರಿಕೆಟ್ ( ಏಕದಿನ ಮತ್ತು ಟಿ-20) ಇತಿಹಾಸದಲ್ಲೇ ಅತಿ ಹೆಚ್ಚು ರನ್ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೊದಲು ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಹೆಸರಿನಲ್ಲಿ ಈ ದಾಖಲೆ ಇತ್ತು.
ಸರಣಿಯ ಮೊದಲೆರಡು ಪಂದ್ಯಗಳಲ್ಲಿ ಖಾತೆ ತೆರೆಯದೆ ಶೂನ್ಯಕ್ಕೆ ಔಟಾಗಿ ಸಂಕಷ್ಟದಲ್ಲಿದ್ದ ಕೊಹ್ಲಿಯವರು ಕೊನೆಯ ಪಂದ್ಯದಲ್ಲಿ ಲಯಕ್ಕೆ ಮರಳಿದರು. ಸರಣಿಯಲ್ಲಿ ನಾಯಕ ಶುಭಮನ್ ಗಿಲ್ ಅವರ ಬ್ಯಾಟಿಂಗ್ ವೈಫಲ್ಯ ಮುಂದುವರಿದ ಕಾರಣ ಬ್ಯಾಟ್ ಹಿಡಿದು ಮೈದಾನಕ್ಕೆ ಬಂದ ಕೊಹ್ಲಿ, ಆರಂಭದಿಂದಲೂ ಆಸೀಸ್ ಬೌಲರ್‌ಗಳ ವಿರುದ್ಧ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. ನೇಥನ್ ಎಲ್ಲಿಸ್ ಎಸೆದ 37ನೇ ಓವರ್‌ನ ಕೊನೆಯ ಎಸೆತವನ್ನು ಮಿಡ್ ವಿಕೆಟ್ ಕಡೆಗೆ ಫ್ಲಿಕ್ ಮಾಡಿ ನಾಲ್ಕು ರನ್ ಗಳಿಸುವ ಮೂಲಕ ಸಚಿನ್ ತಂಡೂಲ್ಕರ್ ಅವರ ಈ ದಾಖಲೆಯನ್ನು ಮುರಿದರು.
IND vs AUS: ಅರ್ಧಶತಕ ಬಾರಿಸಿ ಕುಮಾರ ಸಂಗಕ್ಕಾರ ದಾಖಲೆ ಮುರಿದ ವಿರಾಟ್ ಕೊಹ್ಲಿ!
ಇಲ್ಲಿಯವರೆಗೆ ಕೊಹ್ಲಿ, 305 ಏಕದಿನ ಪಂದ್ಯಗಳನ್ನು ಆಡಿದ್ದು, 14, 255 ರನ್‌ಗಳನ್ನು ಕಲೆಹಾಕಿದ್ದಾರೆ. ಇನ್ನು ಟಿ20ಐ ಪಂದ್ಯಗಳಲ್ಲಿ 4,188 ರನ್ ಗಳಿಸಿದ್ದಾರೆ. ಈ ಮೂಲಕ ಒಟ್ಟು 18,443 ರನ್ ಕಲೆಹಾಕಿ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವೈಯಕ್ತಿಕ ರನ್ ಬಾರಿಸಿದ ಆಟಗಾರ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಏಕದಿನ ಮತ್ತು ಟಿ20ಐ ಮಾದರಿಯಲ್ಲಿ 18, 436 ರನ್‌ಗಳನ್ನು ಗಳಿಸಿದ್ದು, ಎರಡನೇ ಸ್ಥಾನಕ್ಕೆ ಕುಸಿದಿದ್ದಾರೆ.
ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್ ಬಾರಿಸಿದ ಟಾಪ್ 5 ಆಟಗಾರರು
- ವಿರಾಟ್ ಕೊಹ್ಲಿ: 18,443
- ಸಚಿನ್ ತೆಂಡೂಲ್ಕರ್: 18,436
- ಕುಮಾರ್ ಸಂಗಕ್ಕಾರ: 15,616
- ರೋಹಿತ್ ಶರ್ಮಾ: 15,528
- ಮಹೇಲಾ ಜಯವರ್ದನೆ: 14,133
IND vs ರೋಹಿತ್, ಕೊಹ್ಲಿ ಅಜೇಯ ಶತಕದ ಜತೆಯಾಟ; ವೈಟ್‌ವಾಶ್‌ನಿಂದ ಪಾರಾದ ಭಾರತ
ಭಾರತ ತಂಡಕ್ಕೆ 9 ವಿಕೆಟ್ ಜಯ
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆತಿಥೇಯ ಆಸ್ಟ್ರೇಲಿಯಾ ತಂಡ ಉತ್ತಮ ಆರಂಭ ಕಂಡರೂ, ಹರ್ಷಿತ್ ರಾಣಾ ಅವರ ಮೋಡಿಗೆ ತತ್ತರಿಸಿ ಹೋಯಿತು. 46.4 ಓವರ್ ಗಳಿಗೆ 10 ವಿಕೆಟ್ ನಷ್ಟಕ್ಕೆ 236 ರನ್ ಕಲೆಹಾಕಲಷ್ಟೇ ಆಸೀಸ್ ತಂಡ ಶಕ್ತವಾಯಿತು. ಇನ್ನು ಸಾಧಾರಣ ಗುರಿ ಬೆನ್ನತ್ತಿದ ಭಾರತ ತಂಡಕ್ಕೆ ನಾಯಕ ಗಿಲ್ ಮತ್ತು ರೋಹಿತ್ ಶರ್ಮಾ ಅರ್ಧಶತಕದ ಉತ್ತಮ ಆರಂಭ ಒದಗಿಸಿದರು. ಗಿಲ್ ಔಟಾದ ಬಳಿಕ ಮೈದಾನಕ್ಕೆ ಬಂದ ಕೊಹ್ಲಿ, ರೋಹಿತ್ ಜೊತೆಗೂಡಿ 168 ರನ್‌ಗಳ ಅಮೋಘ ಜೊತೆಯಾಟ ನೀಡಿದರು. ಇದು ಈ ಸ್ಟಾರ್ ಜೋಡಿಯ 19ನೇ ಶತಕದ ಜೊತೆಯಾಟವಾಗಿದೆ. ಇನ್ನು ಆಸೀಸ್ ಬೌಲರ್‌ಗಳನ್ನು ಮೈದಾನದಲ್ಲಿ ನಿರಂತರವಾಗಿ ದಂಡಿಸಿದ ಈ ಜೋಡಿ 38.3 ಓವರ್‌ಗಳಲ್ಲಿ 237 ರನ್ ಪೇರಿಸಿ ಗೆಲುವನ್ನು ದಾಖಲಿಸಿತು.