IND vs AUS-ʻರೋಹಿತ್ ಶರ್ಮಾಗೆ ನಾಯಕತ್ವ ನೀಡದೇ ಇರುವುದು ಆಘಾತಕಾರಿʼ: ಹರ್ಭಜನ್ ಸಿಂಗ್!
ಭಾರತದ ಏಕದಿನ ತಂಡದ ನೂತನ ನಾಯಕನನ್ನಾಗಿ ಶುಭಮನ್ ಗಿಲ್ ಅವರನ್ನು ನೇಮಕ ಮಾಡಿರುವ ಆಯ್ಕೆ ಸಮಿತಿಯ ನಿರ್ಧಾರದಿಂದ ಅಚ್ಚರಿಗೊಂಡಿರುವ ಹರ್ಭಜನ್ ಸಿಂಗ್, ರೋಹಿತ್ ಶರ್ಮಾ ಅವರ ದಾಖಲೆಗಳನ್ನು ಗಮನಿಸಿ ಅವರು ಇನ್ನು ಸ್ವಲ್ಪ ದಿನಗಳ ಕಾಲ ನಾಯಕನಾಗಿರಬೇಕಿತ್ತು ಎಂದಿದ್ದಾರೆ.

ರೋಹಿತ್ ಶರ್ಮಾಗೆ ನಾಯಕತ್ವ ನೀಡದ ಬಗ್ಗೆ ಹರ್ಭಜನ್ ಸಿಂಗ್ ಪ್ರತಿಕ್ರಿಯೆ. -

ದುಬೈ: ಅಕ್ಟೋಬರ್ 19 ರಂದು ಆರಂಭವಾಗಲಿರುವ ಆಸ್ಟ್ರೇಲಿಯಾ ಪ್ರವಾಸದ ಏಕದಿನ ಮತ್ತು ಟಿ20ಐ ಸರಣಿಗಳಿಗೆ ಶನಿವಾರ ಬಿಸಿಸಿಐ ಭಾರತ ತಂಡವನ್ನು ಪ್ರಕಟಿಸಿದೆ. ಇದರ ಜೊತೆಗೆ ದಿಗ್ಗಜ ರೋಹಿತ್ ಶರ್ಮಾರನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಿ ಶುಭ್ಮನ್ ಗಿಲ್‌ಗೆ ಏಕದಿನ ತಂಡದ ನಾಯಕತ್ವ ನೀಡಲಾಗಿದೆ. 2021ರ ಡಿಸೆಂಬರ್ನಲ್ಲಿ ಭಾರತ ಏಕದಿನ ತಂಡದ ನಾಯಕನಾಗಿ ಆಯ್ಕೆಯಾಗಿದ್ದ ರೋಹಿತ್ ಶರ್ಮಾ, ಇದೀಗ ನಾಯಕತ್ವ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಹಲವು ಮಾಜಿ ಆಟಗಾರರು ಪರ-ವಿರೋಧ ಅಭಿಪ್ರಾಯ ಹೊರಹಾಕುತ್ತಿದ್ದಾರೆ. ಇದರ ನಡುವೆ ಭಾರತ ತಂಡದ ಮಾಜಿ ಕ್ರಿಕೆಟರ್ ಹರ್ಭಜನ್ ಸಿಂಗ್ ಆಯ್ಕೆ ಸಮಿತಿಯ ಈ ನಿರ್ಧಾರದಿಂದ ಅಚ್ಚರಿಗೊಂಡಿದ್ದಾರೆ.
ಈ ಕುರಿತು ಜಿಯೋ ಹಾಟ್‌ಸ್ಟಾರ್‌ನಲ್ಲಿ ಮಾತನಾಡಿದ ಹರ್ಭಜನ್ ಸಿಂಗ್, "ಮೊದಲನೆಯದಾಗಿ ಶುಭಮನ್ ಗಿಲ್ ಅವರಿಗೆ ಅಭಿನಂದನೆಗಳು. ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ತಂಡವನ್ನು ಉತ್ತಮವಾಗಿ ಮುನ್ನಡೆಸುತ್ತಿದ್ದಾರೆ ಮತ್ತು ಈಗ ಅವರಿಗೆ ಏಕದಿನ ತಂಡವನ್ನು ಮುನ್ನಡೆಸುವ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ. ಅವರು ಇದನ್ನು ಮೊದಲು ಮಾಡಿಲ್ಲವಾದ್ದರಿಂದ ಇದು ಅವರಿಗೆ ಹೊಸ ಸವಾಲಾಗಲಿದೆ," ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
IND vs AUS: ಆಸ್ಟ್ರೇಲಿಯಾ ವೈಟ್‌ಬಾಲ್ ಪ್ರವಾಸಕ್ಕೆ ಭಾರತ ತಂಡ ಪ್ರಕಟ, ಏಕದಿನ ತಂಡಕ್ಕೆ ಶುಭಮನ್ ಗಿಲ್ ನಾಯಕ!
"ಭಾರತ ಏಕದಿನ ತಂಡದ ನಾಯಕನಾಗಿ ಶುಭಮನ್ ಗಿಲ್, ರೋಹಿತ್ ಶರ್ಮಾ ಅವರ ಸ್ಥಾನವನ್ನು ತುಂಬಿದ್ದಾರೆ. ರೋಹಿತ್ ವೈಟ್-ಬಾಲ್ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆ ಹೊಂದಿರುವ ವ್ಯಕ್ತಿ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಅವರು ನಾಯಕನಾಗದಿದ್ದರೂ ಆಯ್ಕೆಯಾಗಿರುವುದನ್ನು ನೋಡುವುದು ಸ್ವಲ್ಪ ಆಘಾತಕಾರಿಯಾಗಿದೆ," ಎಂದು ಹೇಳಿದ್ದಾರೆ.
ಈ ವರ್ಷದ ಆರಂಭದಲ್ಲಿ ಭಾರತ ತಂಡವನ್ನು ಚಾಂಪಿಯನ್ಸ್ ಟ್ರೋಫಿ ಗೆಲುವಿನತ್ತ ಕೊಂಡೊಯ್ದಿದ್ದು ಮತ್ತು ಇತರ ಹಲವು ಸರಣಿಗಳನ್ನು ಗೆದ್ದಿದ್ದು ಸೇರಿದಂತೆ ರೋಹಿತ್ ಅವರ ಸ್ಥಿರತೆ ಮತ್ತು ಸಾಧನೆಗಳ ಬಗ್ಗೆಯೂ ಹರ್ಭಜನ್ ಸಿಂಗ್ ಮುಕ್ತಕಂಠದಿಂದ ಗುಣಗಾನ ಮಾಡಿದ್ದಾರೆ.
"ಅವರು ನಾಯಕನಾಗಿ ಆಸ್ಟ್ರೇಲಿಯಾಕ್ಕೆ ಹೋಗುತ್ತಿದ್ದಾರೆ ಎಂದು ನಾನು ಭಾವಿಸಿದ್ದೆ. ಅವರು ವೈಟ್-ಬಾಲ್ ಸ್ವರೂಪಗಳಲ್ಲಿ ಭಾರತೀಯ ಕ್ರಿಕೆಟ್‌ನ ಆಧಾರಸ್ತಂಭಗಳಲ್ಲಿ ಒಬ್ಬರಾಗಿದ್ದಾರೆ. ಭಾರತವನ್ನು ಮುನ್ನಡೆಸಲು ರೋಹಿತ್ ಅವರಿಗೆ ಆಸ್ಟ್ರೇಲಿಯಾ ಪ್ರವಾಸವನ್ನು ನೀಡಬೇಕಾಗಿತ್ತು, ಇದರಿಂದಾಗಿ ಅವರು ಹೆಚ್ಚು ಗೌರವಯುತವಾಗಿ ನಾಯಕತ್ವದಿಂದ ಕೆಳಗಿಳಿಯಲು ಅವಕಾಶ ಸಿಗುತ್ತಿತ್ತು," ಎಂದು ಭಜ್ಜಿ ತಿಳಿಸಿದ್ದಾರೆ.
IND vs AUS: ರೋಹಿತ್ ಶರ್ಮಾರನ್ನು ಭಾರತ ಒಡಿಐ ನಾಯಕತ್ವದಿಂದ ತೆಗೆದಿದ್ದೇಕೆ? ಕಾರಣ ಇಲ್ಲಿದೆ!
"ನೀವು 2027ರ ಐಸಿಸಿ ಏಕದಿನ ವಿಶ್ವಕಪ್ ಬಗ್ಗೆ ಯೋಚಿಸುತ್ತಿದ್ದರೆ, ಈ ಟೂರ್ನಿ ಇನ್ನೂ ಸಾಕಷ್ಟು ದೂರ ಇದೆ. ಶುಭಮನ್ ಗಿಲ್‌ಗೆ ಇನ್ನೂ ಸಮಯವಿದೆ ಹಾಗೂ ಅವರು 6 ಅಥವಾ 8 ಅಥವಾ ಒಂದು ವರ್ಷ ಕಾಯುವ ಮೂಲಕ ನಂತರ ಭಾರತ ತಂಡವನ್ನು ಮುನ್ನಡೆಸಬಹುದಿತ್ತು. ಇದಕ್ಕೆ ಇನ್ನೂ ತುಂಬಾ ಸಮಯವಿದೆ. ಹೌದು, ಗಿಲ್‌ಗೆ ನಾಯಕತ್ವ ನೀಡಿರುವುದು ನನಗೆ ಸಂತೋಷವನ್ನು ತಂದುಕೊಟ್ಟಿದೆ. ಆದರೆ, ರೋಹಿತ್ ಶರ್ಮಾ ನಾಯಕನಾಗಿಲ್ಲ ಎಂಬುದು ನನಗೆ ಬೇಸರ ತರಿಸಿದೆ," ಎಂದು ಸ್ಪಿನ್ ದಿಗ್ಗಜ ಹೇಳಿದ್ದಾರೆ.
ಭಾರತ ತಂಡ: ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ (ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಕೆಎಲ್ ರಾಹುಲ್ , ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲ್‌ದೀಪ್ ಯಾದವ್, ಹರ್ಷಿತ್ ಸಿಂಗ್ ರಾಣಾ, ಮೊಹಮ್ಮದ್ ಸಿರಾಜ್, ಯಶಸ್ವಿ ಜೈಸ್ವಾಲ್