ಲಂಡನ್: ರವೀಂದ್ರ ಜಡೇಜಾ (Ravindra Jadeja) ಅವರ ಏಕಾಂಗಿ ಹೋರಾಟದ ಹೊರತಾಗಿಯೂ ಜೋಫ್ರಾ ಆರ್ಚರ್ ಹಾಗೂ ಬೆನ್ ಸ್ಟೋಕ್ಸ್ ಮಾರಕ ಬೌಲಿಂಗ್ ದಾಳಿಗೆ ನಲುಗಿದ ಭಾರತ ತಂಡ, ಮೂರನೇ ಟೆಸ್ಟ್ ಪಂದ್ಯದಲ್ಲಿ (IND vs ENG) ಇಂಗ್ಲೆಂಡ್ ವಿರುದ್ದ 22 ರನ್‌ಗಳಿಂದ ಸೋಲು ಒಪ್ಪಿಕೊಂಡಿತು . ಆ ಮೂಲಕ ಲಾರ್ಡ್ಸ್ ಟೆಸ್ಟ್ ಗೆದ್ದು ಸರಣಿಯಲ್ಲಿ ಮುನ್ನಡೆ ಸಾಧಿಸಬೇಕೆಂಬ ಟೀಮ್ ಇಂಡಿಯಾದ ಕನಸು ಭಗ್ನವಾಯಿತು. ಇನ್ನು ಭಾರತಕ್ಕೆ ಸಾಧಾರಣ ಮೊತ್ತದ ಗುರಿಯನ್ನು ನೀಡಿದರೂ ಬೌಲರ್‌ಗಳ ಸಹಾಯದಿಂದ ಇಂಗ್ಲೆಂಡ್ ಲಾರ್ಡ್ಸ್ ಟೆಸ್ಟ್ ಗೆದ್ದು ಸರಣಿಯಲ್ಲಿ 2-1 ಮುನ್ನಡೆಯನ್ನು ಪಡೆದಿದೆ.
ಸೋಮವಾರ ಬೆಳಿಗ್ಗೆ 4 ವಿಕೆಟ್ ಕಳೆದುಕೊಂಡು 58 ರನ್‌ಗಳಿಂದ ಐದನೇ ದಿನವನ್ನು ಆರಂಭಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಮೋಡ ಕವಿದ ವಾತಾವರಣವಿದ್ದ ಕಾರಣ ಬ್ಯಾಟಿಂಗ್‌ಗೆ ಕಂಡೀಷನ್ಸ್ ಕಠಿಣವಾಗಿತ್ತು. ರಿಷಭ್ ಪಂತ್ 12 ಎಸೆತಗಳಲ್ಲಿ 9 ರನ್ ಗಳಿಸಿ ಜೋಫ್ರಾ ಆರ್ಚರ್ ಅವರ ಮಾರಕ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಇನ್ನು 58 ಎಸೆತಗಳಲ್ಲಿ 33 ರನ್‌ಗಳಿಸಿ ಭಾರತಕ್ಕೆ ಭರವಸೆಯನ್ನು ಮೂಡಿಸಿದ್ದ ಕೆಎಲ್ ರಾಹುಲ್, ಬೆನ್ ಸ್ಟೋಕ್ಸ್ ಎಸೆತದಲ್ಲಿ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದರು. ಆ ಮೂಲಕ ಅಭಿಮಾನಿಗಳಿಗೆ ಭಾರಿ ನಿರಾಶೆಯಾಯಿತು. ನಂತರ ಕ್ರೀಸ್‌ಗೆ ಬಂದ ವಾಷಿಂಗ್ಟನ್ ಸುಂದರ್, ಜೋಫ್ರಾ ಆರ್ಚರ್ ಎಸೆತದಲ್ಲಿ ಅವರಿಗೇ ಕ್ಯಾಚ್ ಕೊಟ್ಟರು. ಆ ಮೂಲಕ ಡಕ್‌ಔಟ್ ಆದರು. ಇದರೊಂದಿಗೆ ಭಾರತ 82 ರನ್‌ಗಳಿಗೆ 7 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
IND vs ENG: ಐಸಿಸಿ ನಿಯಮ ಉಲ್ಲಂಘಿಸಿದ ಮೊಹಮ್ಮದ್ ಸಿರಾಜ್‌ಗೆ ದಂಡ ವಿಧಿಸಿದ ಐಸಿಸಿ!
ಜಡೇಜಾ-ನಿತೀಶ್ 30 ರನ್ ಜೊತೆಯಾಟ
ಬಳಿಕ ಎಂಟನೇ ವಿಕೆಟ್‌ಗೆ ಜೊತೆಯಾಗಿದ್ದ ರವೀಂದ್ರ ಜಡೇಜಾ ಹಾಗೂ ನಿತೀಶ್ ಕುಮಾರ್ ರೆಡ್ಡಿ ಇಂಗ್ಲೆಂಡ್ ಬೌಲರ್‌ಗಳನ್ನು ಸಮರ್ಥವಾಗಿ ಎದುರಿಸಿದ್ದರು. ಈ ಜೋಡಿ 30 ರನ್‌ಗಳ ನಿರ್ಣಾಯಕ ಜೊತೆಯಾಟವನ್ನು ಆಡುವ ಮೂಲಕ ಭಾರತಕ್ಕೆ ಭರವಸೆಯನ್ನು ಮೂಡಿಸಿತ್ತು. ಈ ವೇಳೆ ನಿತೀಶ್ ರೆಡ್ಡಿ 53 ಎಸೆತಗಳಲ್ಲಿ 13 ರನ್‌ಗಳನ್ನು ಕಲೆ ಹಾಕಿದ್ದರು. ಆದರೆ, ಕ್ರಿಸ್ ವೋಕ್ಸ್ ಎಸೆತದಲ್ಲಿ ಅವರು ವಿಕೆಟ್ ಒಪ್ಪಿಸಿದರು. ಈ ವೇಳೆ ಭಾರತ ತಂಡದ ಗೆಲುವಿನ ಹಾದಿ ಬಹುತೇಕ ಬಂದ್ ಆಯಿತು.
ಜಡೇಜಾ-ಬುಮ್ರಾ ಕಠಿಣ ಹೋರಾಟ
ನಿತೀಶ್ ರೆಡ್ಡಿ ವಿಕೆಟ್ ಕಳೆದುಕೊಂಡ ಬಳಿಕ ಭಾರತ ತಂಡದ ಸೋಲು ಬಹುತೇಕ ಖಾತ್ರಿಯಾಗಿತ್ತು. ಆದರೆ, 9ನೇ ವಿಕೆಟ್‌ಗೆ ಜೊತೆಯಾದ ರವೀಂದ್ರ ಜಡೇಜಾ ಹಾಗೂ ಜಸ್‌ಪ್ರೀತ್ ಬುಮ್ರಾ ಆಂಗ್ಲರ ಮಾರಕ ದಾಳಿಯನ್ನು ಕೆಲಕಾಲ ಸಮರ್ಥವಾಗಿ ಎದುರಿಸಿದ್ದರು. ಬುಮ್ರಾ ಒಂದು ಕಡೆ ರಕ್ಷಣಾತ್ಮಕ ಆಟವನ್ನು ಆಡುತ್ತಿದ್ದರೆ, ಮತ್ತೊಂದು ತುದಿಯಲ್ಲಿ ಜಡೇಜಾ ರನ್ ಗಳಿಸುತ್ತಿದ್ದರು. ಈ ಜೋಡಿ ಮುರಿಯದ 9ನೇ ವಿಕೆಟ್‌ಗೆ 35 ರನ್‌ಗಳ ಜೊತೆಯಾಟವನ್ನು ಆಡಿತ್ತು. ಆದರೆ, ಜಸ್‌ಪ್ರೀತ್ ಬುಮ್ರಾ 54 ಎಸೆತಗಳಲ್ಲಿ 5 ರನ್ ಗಳಿಸಿ ಬೆನ್ ಸ್ಟೋಕ್ಸ್‌ಗೆ ವಿಕೆಟ್ ಒಪ್ಪಿಸಿದರು. ಮೊಹಮ್ಮದ್ ಸಿರಾಜ್ ಜತೆ ಕೊನೆಯ ವಿಕೆಟ್‌ನಲ್ಲಿಯೂ ರವೀಂದ್ರ ಜಡೇಜಾ ಕಠಿಣ ಹೋರಾಟ ನಡೆಸಿದ್ದರು. ಆದರೆ, ಶೋಯೆಬ್ ಬಷೀರ್ ಎಸೆತದಲ್ಲಿ ಮೊಹಮ್ಮದ್ ಸಿರಾಜ್ ಔಟ್ ಆಗುವ ಮೂಲಕ ಭಾರತ ತಂಡ ಸೋಲು ಅನುಭವಿಸಬೇಕಾಯಿತು.
ರವೀಂದ್ರ ಜಡೇಜಾ ಏಕಾಂಗಿ ಹೋರಾಟ
ಭಾರತ ತಂಡದ ಪರ ಕೆಎಲ್ ರಾಹುಲ್ ಬಿಟ್ಟರೆ ಇನ್ನುಳಿದ ಯಾವುದೇ ಬ್ಯಾಟ್ಸ್‌ಮನ್ 20ರ ಗಡಿ ದಾಟಲಿಲ್ಲ. ಆದರೆ, ರವೀಂದ್ರ ಜಡೇಜಾ ಅವರು ಬ್ಯಾಟಿಂಗ್‌ಗೆ ಕಠಿಣವಾದ ಕಂಡೀಷನ್ಸ್‌ನಲ್ಲಿಯೂ ಉತ್ತಮ ಆಟವನ್ನು ಆಡಿದರು. ಅವರು ಕೊನೆಯವರೆಗೂ ಒಂದು ತುದಿಯಲ್ಲಿ ಗಟ್ಟಿಯಾಗಿ ನಿಂತು ಬ್ಯಾಟ್ ಮಾಡಿದ್ದ ಜಡೇಜಾ, ಇಂಗ್ಲಿಷ್ ಬೌಲರ್‌ಗಳಿಗೆ ತಲೆ ನೋವು ಉಂಟು ಮಾಡಿದರು. ಅವರು ಆಡಿದ 181 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ ಅಜೇಯ 61 ರನ್ ಗಳಿಸಿದರು. ಆದರೆ, ಬೇರೆ ತುದಿಯಲ್ಲಿ ಯಾರೂ ಸಾಥ್ ನೀಡದ ಕಾರಣ ಭಾರತ ತಂಡ ಕೇವಲ 22 ರನ್‌ಗಳಿಂದ ಸೋಲಬೇಕಾಯಿತು.
ಸ್ಕೋರ್ ವಿವರ
ಇಂಗ್ಲೆಂಡ್
ಪ್ರಥಮ ಇನಿಂಗ್ಸ್: 387-10
ದ್ವಿತೀಯ ಇನಿಂಗ್ಸ್: 192-10
ಭಾರತ
ಪ್ರಥಮ ಇನಿಂಗ್ಸ್: 387-10
ದ್ವಿತೀಯ ಇನಿಂಗ್ಸ್: 74.5 ಓವರ್‌ಗಳಿಗೆ 170-10 (ರವೀಂದ್ರ ಜಡೇಜಾ 61*,ಕೆಎಲ್ ರಾಹುಲ್ 39; ಜೋಫ್ರಾ ಆರ್ಚರ್ 55ಕ್ಕೆ 3, ಬೆನ್ ಸ್ಟೋಕ್ಸ್ 48ಕ್ಕೆ 3, ಬ್ರೈಡನ್ ಕಾರ್ಸ್ 30 ಕ್ಕೆ 2)
ಪಂದ್ಯ ಶ್ರೇಷ್ಠ ಪ್ರಶಸ್ತಿ: ಬೆನ್ ಸ್ಟೋಕ್ಸ್