IND vs ENG: ರಾಹುಲ್ ದ್ರಾವಿಡ್ ದಾಖಲೆ ಮುರಿಯುವ ಸನಿಹದಲ್ಲಿ ಜೋ ರೂಟ್!
ಭಾರತ ಮತ್ತು ಇಂಗ್ಲೆಂಡ್ ನಡುವಣ ಎರಡನೇ ಟೆಸ್ಟ್ ಪಂದ್ಯ ಬರ್ಮಿಂಗ್ಹ್ಯಾಮ್ನ ಎಜ್ಬಾಸ್ಟನ್ನಲ್ಲಿ ಜುಲೈ 2 ರಂದು ಆರಂಭವಾಗಲಿದೆ. ಈ ಪಂದ್ಯದಲ್ಲಿ ಆಂಗ್ಲರ ಮಾಜಿ ನಾಯಕ ಜೋ ರೂಟ್, ದಿಗ್ಗಜರಾದ ರಾಹುಲ್ ದ್ರಾವಿಡ್ ಮತ್ತು ಜಾಕ್ ಕಾಲಿಸ್ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ.

ರಾಹುಲ್ ದ್ರಾವಿಡ್ ದಾಖಲೆ ಮುರಿಯುವ ಸನಿಹದಲ್ಲಿ ಜೋ ರೂಟ್.

ನವದೆಹಲಿ: ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ (IND vs ENG) ಜುಲೈ 2 ರಂದು ಆರಂಭವಾಗಲಿದೆ. ಈ ಪಂದ್ಯ ಬರ್ಮಿಂಗ್ಹ್ಯಾಮ್ನ ಎಡಜ್ಬಾಸ್ಟನ್ನಲ್ಲಿ ನಡೆಯಲಿದ್ದು, ಇಂಗ್ಲೆಂಡ್ ಮಾಜಿ ನಾಯಕ ಜೋ ರೂಟ್ (Joe Root), ರಾಹುಲ್ ದ್ರಾವಿಡ್ (Rahul Dravid) ಮತ್ತು ಜಾಕ್ ಕಾಲಿಸ್ ಅವರ ಟೆಸ್ಟ್ ದಾಖಲೆಗಳನ್ನು ಮುರಿಯುವ ಸನಿಹದಲ್ಲಿದ್ದಾರೆ. ಭಾರತ ವಿರುದ್ಧದ ಮೊದಲ ಟೆಸ್ಟ್ನಲ್ಲಿ ಜೋ ರೂಟ್ ಅಜೇಯ ಅರ್ಧಶತಕ ಗಳಿಸಿದ್ದರು. ಈ ಪಂದ್ಯದ ದ್ವಿತೀಯ ಇನಿಂಗ್ಸ್ನಲ್ಲಿ ಅವರು ಒಟ್ಟು 81 ರನ್ ಗಳಿಸಿದ್ದರು. ಈಗ ಜೋ ರೂಟ್ ಎರಡನೇ ಟೆಸ್ಟ್ ಪಂದ್ಯದಲ್ಲಿ ಒಟ್ಟು 202 ರನ್ ಗಳಿಸಿದರೆ, ಟೆಸ್ಟ್ ಸ್ವರೂಪದಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ಮತ್ತು ಜಾಕ್ ಕಾಲಿಸ್ ಅವರನ್ನು ಹಿಂದಿಕ್ಕಲಿದ್ದಾರೆ.
1996 ಮತ್ತು 2012ರ ನಡುವೆ ರಾಹುಲ್ ದ್ರಾವಿಡ್ 164 ಟೆಸ್ಟ್ ಪಂದ್ಯಗಳ 286 ಇನಿಂಗ್ಸ್ಗಳಲ್ಲಿ 52.31ರ ಸರಾಸರಿಯೊಂದಿಗೆ 13,288 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ರಾಹುಲ್ ದ್ರಾವಿಡ್ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ದಿಗ್ಗಜ ಜಾಕ್ ಕಾಲಿಸ್ ಇದ್ದಾರೆ. ಇವರು 1995 ರಿಂದ 2013 ರವರೆಗೆ 166 ಟೆಸ್ಟ್ಗಳ 280 ಇನಿಂಗ್ಸ್ಗಳಲ್ಲಿ 55.37ರ ಸರಾಸರಿಯಲ್ಲಿ 13,289 ರನ್ ಗಳಿಸಿದ್ದಾರೆ. 2012 ರಿಂದ ಒಟ್ಟು 154 ಟೆಸ್ಟ್ ಪಂದ್ಯಗಳನ್ನು ಆಡಿರುವ ರೂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.
IND vs ENG: ಕೆಎಲ್ ರಾಹುಲ್ಗೆ ಮಹತ್ವದ ಸಂದೇಶ ರವಾನಿಸಿದ ಸಂಜಯ್ ಮಾಂಜ್ರೇಕರ್!
ಇಂಗ್ಲೆಂಡ್ ಮಾಜಿ ನಾಯಕ 281 ಇನಿಂಗ್ಸ್ಗಳಲ್ಲಿ 50.92ರ ಸರಾಸರಿಯಲ್ಲಿ 13,087 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಬಗ್ಗೆ ಹೇಳುವುದಾದರೆ, ರಿಕಿ ಪಾಂಟಿಂಗ್ (13,378) ಮತ್ತು ಸಚಿನ್ ತೆಂಡೂಲ್ಕರ್ (15,921), ಜೋ ರೂಟ್, ರಾಹುಲ್ ದ್ರಾವಿಡ್ ಮತ್ತು ಜಾಕ್ವೆಸ್ ಕಾಲಿಸ್ಗಿಂತ ಮುಂದಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟೆಸ್ಟ್ ಲೀಡ್ಸ್ನಲ್ಲಿ ನಡೆದಿದ್ದು, ಇದರಲ್ಲಿ ಟೀಮ್ ಇಂಡಿಯಾ ಐದು ವಿಕೆಟ್ಗಳಿಂದ ಸೋಲನ್ನು ಅನುಭವಿಸಿತ್ತು.
ಈ ಪಂದ್ಯದಲ್ಲಿ ಭಾರತ ತಂಡದಿಂದ ಐದು ಶತಕಗಳು ಮೂಡಿ ಬಂದಿದ್ದವು. ಆದರೆ ಇದರ ಹೊರತಾಗಿಯೂ ಪ್ರವಾಸಿ ತಂಡ ಗೆಲ್ಲಲು ಸಾಧ್ಯವಾಗಲಿಲ್ಲ. ಮೊದಲು ಬ್ಯಾಟ್ ಮಾಡಿದ್ದ ಭಾರತ, ಪ್ರಥಮ ಇನಿಂಗ್ಸ್ನಲ್ಲಿ 471 ರನ್ ಗಳಿಸಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಇಂಗ್ಲೆಂಡ್ ಮೊದಲ ಇನಿಂಗ್ಸ್ನಲ್ಲಿ 465 ರನ್ ಗಳಿಸಿತು. ಆ ಮೂಲಕ ಭಾರತ ಆರು ರನ್ಗಳ ಮುನ್ನಡೆಯನ್ನು ಹೊಂದಿತ್ತು. ದ್ವಿತೀಯ ಇನಿಂಗ್ಸ್ನಲ್ಲಿ 364 ರನ್ ಗಳಿಸಿ ಆತಿಥೇಯ ತಂಡಕ್ಕೆ ಗೆಲ್ಲಲು 301 ರನ್ಗಳ ಗುರಿಯನ್ನು ನೀಡಿತು. ಇಂಗ್ಲೆಂಡ್ 82 ಓವರ್ಗಳಲ್ಲಿ ಗೆದ್ದಿತು.