ನವದೆಹಲಿ: ಭಾರತ ತಂಡದ ವೇಗಿ ಮೊಹಮ್ಮದ್ ಸಿರಾಜ್ (Mohammad Siraj) ಬರ್ಮಿಂಗ್‌ಹ್ಯಾಮ್‌ನ ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ (IND vs ENG) ಪಂದ್ಯದಲ್ಲಿ ಮಾರಕ ದಾಳಿಯಿಂದ 6 ವಿಕೆಟ್ ಪಡೆದು ಭಾರತ ತಂಡದ ಪರ ಇತಿಹಾಸ ಸೃಷ್ಟಿಸಿದ್ದಾರೆ. ಆ ಮೂಲಕ ಕಪಿಲ್ ದೇವ್ (Kapil Dev), ಚೇತನ್ ಶರ್ಮಾ, ಇಶಾಂತ್ ಶರ್ಮಾ ಇರುವ ಎಲೈಟ್ ಲಿಸ್ಟ್‌ಗೆ ಸೇರ್ಪಡೆಯಾಗಿದ್ದಾರೆ. 1986ರಲ್ಲಿ ಭಾರತ ತಂಡದ ಮಾಜಿ ವೇಗಿ ಚೇತನ್ ಶರ್ಮಾ, ಎಜ್‌ಬಾಸ್ಟನ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ 58ಕ್ಕೆ 6 ವಿಕೆಟ್ ಸಾಧನೆ ಮಾಡಿದ್ದರು. ನಂತರ ಈ ದಾಖಲೆ ಬರೆದ ಭಾರತದ ಎರಡನೇ ಹಾಗೂ 1993 ರ ನಂತರ ಈ ಕ್ರೀಡಾಂಗಣದಲ್ಲಿ 6 ವಿಕೆಟ್ ಸಾಧನೆ ಮಾಡಿದ ಮೊದಲ ಬೌಲರ್ ಆಗಿ ಸಿರಾಜ್ ಹೊರಹೊಮ್ಮಿದ್ದಾರೆ.
ಇಂಗ್ಲೆಂಡ್‌ನ ಪ್ರಥಮ ಇನಿಂಗ್ಸ್‌ನಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ತೋರಿದ ಮೊಹಮ್ಮದ್ ಸಿರಾಜ್ ಎದುರಾಳಿ ತಂಡವು 84 ರನ್ ಗಳಿಗೆ 5 ವಿಕೆಟ್ ಕಳೆದುಕೊಳ್ಳುವಂತೆ ಮಾಡಿ ಭಾರತ ತಂಡಕ್ಕೆ ಮೇಲುಗೈ ಸಾಧಿಸಲು ನೆರವು ನೀಡಿದ್ದರು. ಆದರೆ 6ನೇ ವಿಕೆಟ್‌ಗೆ ಜೊತೆಯಾದ ಹ್ಯಾರಿ ಬ್ರೂಕ್ (158 ರನ್) ಹಾಗೂ ಜೇಮಿ ಸ್ಮಿತ್ (184* ರನ್) ಅವರ 303 ರನ್‌ಗಳ ಜೊತೆಯಾಟದಿಂದ 407 ರನ್ ಗಳಿಸಿತು. ಪಂದ್ಯದಲ್ಲಿ 70 ರನ್ ನೀಡಿ 6 ವಿಕೆಟ್ ಪಡೆದ ಮೊಹಮ್ಮದ್ ಸಿರಾಜ್, ಪ್ರವಾಸಿ ತಂಡ 180 ರನ್ ಮುನ್ನಡೆ ಪಡೆಯಲು ಸಹಾಯ ಮಾಡಿದ್ದರು.
ಎಜ್‌ಬಾಸ್ಟನ್‌ನಲ್ಲಿ ಉತ್ತಮ ಬೌಲಿಂಗ್ ಸ್ಪೆಲ್ ಮಾಡಿದ ಬೌಲರ್‌ಗಳು
* ಚೇತನ್ ಶರ್ಮಾ: 58ಕ್ಕೆ6- 1986
* ಮೊಹಮ್ಮದ್ ಸಿರಾಜ್: 70ಕ್ಕೆ6- 2025
* ಇಶಾಂತ್ ಶರ್ಮಾ: 51ಕ್ಕೆ5- 2018
* ಕಪಿಲ್ ದೇವ್: 146ಕ್ಕೆ 5- 1979
ಈ ಪಂದ್ಯ ನನಗೆ ವಿಶೇಷವಾಗಿದೆ: ಮೊಹಮ್ಮದ್ ಸಿರಾಜ್
ಕೀ ವೇಗಿ ಜಸ್‌ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಭಾರತ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದ್ದ ಮೊಹಮ್ಮದ್ ಸಿರಾಜ್ ತಮ್ಮ ಪ್ರದರ್ಶನದ ಕುರಿತು ಸಂತಸ ವ್ಯಕ್ತಪಡಿಸಿದ್ದಾರೆ.
"ಇದು ನಿಜಕ್ಕೂ ನಂಬಲಾಗದ ಸಂಗತಿಯಾಗಿದೆ. ನಾನು ಈ ಸಾಧನೆ ಮಾಡಲು ಸುದೀರ್ಘ ಕಾಲದಿಂದ ಕಾಯುತ್ತಿದ್ದೆ. ನಾನು ಹಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರಿದರೂ ಕೂಡ 5 ವಿಕೆಟ್ ಪಡೆಯಲು ಸಾಧ್ಯವಾಗಿರಲಿಲ್ಲ. ನಾನು ಹಲವು ಪಂದ್ಯಗಳಲ್ಲಿ 4 ವಿಕೆಟ್ ಪಡೆದಿದ್ದೇನೆ, ಆದ್ದರಿಂದ ನನಗೆ ಈ ಪಂದ್ಯವು ತುಂಬಾ ವಿಶೇಷವಾಗಿದೆ," ಎಂದು ಸಿರಾಜ್ ಸಂತಸ ವ್ಯಕ್ತಪಡಿಸಿದ್ದಾರೆ.
IND vs ENG: ಶತಕ ಸಿಡಿಸಿ ವಿಶೇಷ ದಾಖಲೆ ಬರೆದ ವಿಕೆಟ್ ಕೀಪರ್ ಜೇಮಿ ಸ್ಮಿತ್!
ಸವಾಲು ಎದುರಿಸಲು ಬಯಸುತ್ತೇನೆ
"ನನ್ನ ಮುಖ್ಯ ಗುರಿ ಚೆಂಡನ್ನು ಸೂಕ್ತ ಸ್ಥಳದಲ್ಲಿ ಎಸೆಯುವುದು ಮಾತ್ರವಲ್ಲ, ನಾನು ಪಂದ್ಯದಲ್ಲಿ ಹೆಚ್ಚಿನ ಜವಾಬ್ದಾರಿ ಪಡೆಯಲು ಬಯಸುತ್ತೇನೆ. ಅಂತಹ ಸವಾಲುಗಳನ್ನು ನಾನು ತುಂಬಾ ಪ್ರೀತಿಸುತ್ತೇನೆ," ಎಂದು ಮೊಹಮ್ಮದ್ ಸಿರಾಜ್ ಹೇಳಿದ್ದಾರೆ.