ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

IND vs ENG: ʻಔಟಾದರೂ ಪರವಾಗಿಲ್ಲ, ಮುಕ್ತವಾಗಿ ಬ್ಯಾಟ್‌ ಮಾಡಿʼ-ರೋಹಿತ್‌ ಶರ್ಮಾಗೆ ಗಂಭೀರ್‌ ಸಲಹೆ!

ಭಾರತ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು, ನಾಯಕ ರೋಹಿತ್ ಶರ್ಮಾ ತಮ್ಮ ಸ್ವಾಭವಿಕ ಆಟದ ಶೈಲಿಯನ್ನೇ ಮುಂದುವರಿಸಬೇಕು ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ. ರೋಹಿತ್ ಅವರ ಭವಿಷ್ಯದ ಬಗ್ಗೆ ಯಾವುದೇ ಒತ್ತಡ ಅಥವಾ ಅನಗತ್ಯ ಚರ್ಚೆಗಳು ಅವರ ಮೇಲೆ ಪರಿಣಾಮ ಬೀರದಂತೆ ನೋಡಿಕೊಳ್ಳಲು ಟೀಮ್‌ ಮ್ಯಾನೇಜ್‌ಮೆಂಟ್‌ ಬಯಸುತ್ತಿದೆ ಎಂದು ಅವರು ಹೇಳಿದ್ದಾರೆ.

ರೋಹಿತ್‌ ಶರ್ಮಾಗೆ ಬೆಂಬಲ ವ್ಯಕ್ತಪಡಿಸಿದ ಗೌತಮ್‌ ಗಂಭೀರ್‌.

ನವದೆಹಲಿ: ಬ್ಯಾಟಿಂಗ್‌ ವೈಫಲ್ಯದ ಹೊರತಾಗಿಯೂ ಭಾರತ ಕ್ರಿಕೆಟ್‌ ತಂಡದ ಆರಂಭಿಕ ಬ್ಯಾಟರ್ ರೋಹಿತ್ ಶರ್ಮಾ(Rohit Sharma) ಅವರು ತಮ್ಮ ಸ್ವಾಭವಿಕ ಆಟದ ಶೈಲಿಯಲ್ಲಿಯೇ ಬ್ಯಾಟಿಂಗ್‌ ಮುಂದುವರಿಸಬೇಕೆಂದು ಟೀಮ್‌ ಇಂಡಿಯಾ ಹೆಡ್‌ ಕೋಚ್‌ ಗೌತಮ್‌ ಗಂಭೀರ್‌ (Gautam Gambhir) ಸಲಹೆ ನೀಡಿದ್ದಾರೆ. ರೋಹಿತ್ ಶರ್ಮಾ ಯಾವುದೇ ಒತ್ತಡವಿಲ್ಲದೆ ನಿರಾಳ ಮನಸ್ಥಿತಿಯಲ್ಲಿ ಕ್ರಿಕೆಟ್ ಆಡಬೇಕು ಎಂಬುದು ಟೀಮ್‌ ಮ್ಯಾನೇಜ್‌ಮೆಂಟ್‌ನ ಉದ್ದೇಶವಾಗಿದೆ ಎಂದು ಮೂಲಗಳು ಹೇಳಿರುವುದನ್ನು ಇಂಡಿಯಾ ಟುಡೇಗೆ ತಿಳಿಸಿವೆ.

ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ರೋಹಿತ್ ಶರ್ಮಾ ನಿರಾಸೆ ಅನುಭವಿಸಿದ್ದರು. ಅವರು 21 ಎಸೆತಗಳಲ್ಲಿ ಕೇವಲ 11 ರನ್ ಗಳಿಸಿ ಸ್ಯಾಮ್ ಕರನ್ ಬೌಲಿಂಗ್‌ನಲ್ಲಿ ಹ್ಯಾರಿ ಬ್ರೂಕ್‌ಗೆ ಕ್ಯಾಚ್ ಕೊಟ್ಟು ಔಟಾಗಿದ್ದರು. ಜೋಫ್ರಾ ಆರ್ಚರ್ ವಿರುದ್ಧ ಸಾಂಪ್ರದಾಯಿಕ ಪುಲ್ ಶಾಟ್ ಮೂಲಕ ಬೌಂಡರಿ ಬಾರಿಸಿ ಖಾತೆ ತೆರೆದಿದ್ದ ರೋಹಿತ್, ನಂತರ ಕರನ್ ಎಸೆತವನ್ನು ಸರಿಯಾಗಿ ಅಂದಾಜಿಸುವನ್ನು ವಿಫಲರಾಗಿ ಔಟ್‌ ಆದರು.

ಗೌತಮ್‌ ಗಂಭೀರ್ ಅವರ ಸಂದೇಶ ಸ್ಪಷ್ಟವಾಗಿದೆ. ಭಾರತೀಯ ಕ್ರಿಕೆಟ್‌ಗೆ ರೋಹಿತ್ ಶರ್ಮಾ ಈಗಾಗಲೇ ಅಪಾರ ಕೊಡುಗೆ ನೀಡಿದ್ದಾರೆ. ಆದ್ದರಿಂದ ಅವರ ಭವಿಷ್ಯದ ಬಗ್ಗೆ ನಡೆಯುವ ಚರ್ಚೆಗಳಿಗೆ ತಲೆಕೆಡಿಸಿಕೊಳ್ಳದೆ, ತಮ್ಮ ಸ್ವಾಭವಿಕ ಆಟವನ್ನು ಮುಕ್ತವಾಗಿ ಪ್ರದರ್ಶಿಸಬೇಕು ಎಂಬುದು ಕೋಚ್ ಅಭಿಪ್ರಾಯ ಎಂದು ಮೂಲಗಳು ಉಲ್ಲೇಖಿಸಿವೆ.

ದಿಗ್ಗಜ ರಾಹುಲ್‌ ದ್ರಾವಿಡ್‌ ದಾಖಲೆ ಮೇಲೆ ಕಣ್ಣಿಟ್ಟ ಕೊಹ್ಲಿ; 4 ರನ್‌ ಅಗತ್ಯ

ರೋಹಿತ್‌ ಶರ್ಮಾಗೆ ಗಂಭೀರ್‌ ಬೆಂಬಲ

"ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ ಭಾರತ ತಂಡ ಮತ್ತು ದೇಶಕ್ಕಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಅವರು ತಮ್ಮ ವೃತ್ತಿಜೀವನದುದ್ದಕ್ಕೂ ಆಡಿದ ರೀತಿಯಲ್ಲೇ ನಿರ್ಭಯವಾಗಿ ಬ್ಯಾಟಿಂಗ್ ಮುಂದುವರಿಸಬೇಕು ಎಂದು ಕೋಚ್ ಬಯಸಿದ್ದಾರೆ," ಎಂದು ಮೂಲಗಳು ತಿಳಿಸಿವೆ.

"ಇತ್ತೀಚಿನ ದಿನಗಳಲ್ಲಿ ರೋಹಿತ್ ಶರ್ಮಾ ಒತ್ತಡದ ನಡುವೆಯೇ ಬ್ಯಾಟಿಂಗ್ ನಡೆಸುತ್ತಿರುವುದನ್ನು ಗಮನಿಸಿದರೆ, ಅವರಿಗೆ ಸ್ವಲ್ಪ ಸಮಯ ಮತ್ತು ಮಾನಸಿಕ ನೆಮ್ಮದಿ ಅಗತ್ಯವಿದೆ ಎಂಬುದು ಸ್ಪಷ್ಟವಾಗಿದೆ. ಅವರಂತಹ ಅನುಭವಿ ಆಟಗಾರರು ಯಾವುದೇ ಬಾಹ್ಯ ಒತ್ತಡವಿಲ್ಲದೆ ತಮ್ಮ ಸ್ವಾಭವಿಕ ಸಾಮರ್ಥ್ಯದ ಮೇಲೆ ವಿಶ್ವಾಸವಿಟ್ಟು ಆಡಿದಾಗ ಅತ್ಯುತ್ತಮ ಪ್ರದರ್ಶನ ನೀಡುತ್ತಾರೆ. ಪ್ರತಿಯೊಂದು ಇನಿಂಗ್ಸ್ ಅನ್ನು ಅತಿಯಾಗಿ ವಿಶ್ಲೇಷಿಸುವ ಬದಲು, ಹಲವು ವರ್ಷಗಳಿಂದ ಭಾರತಕ್ಕಾಗಿ ನಿರಂತರವಾಗಿ ಉತ್ತಮ ಪ್ರದರ್ಶನ ನೀಡಿರುವ ಆಟಗಾರನ ಮೇಲೆ ನಂಬಿಕೆ ಇಡುವುದು ಮುಖ್ಯ. ಆತ್ಮವಿಶ್ವಾಸದಿಂದ ಮತ್ತು ನಿರಾಳವಾಗಿ ಆಡುವ ರೋಹಿತ್ ಶರ್ಮಾ ಒಬ್ಬರೇ ಪಂದ್ಯದ ಗತಿಯನ್ನೇ ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾರೆ. ಕೆಲವೊಮ್ಮೆ ತಾಂತ್ರಿಕ ಬದಲಾವಣೆಗಳಿಗಿಂತ ವಿಶ್ವಾಸ ಮತ್ತು ತಾಳ್ಮೆಯೇ ಹೆಚ್ಚು ಮಹತ್ವದ್ದಾಗಿರುತ್ತದೆ," ಎಂದು ಮೂಲಗಳು ಹೇಳಿವೆ.

ಗಿಲ್ ಔಟ್, ಇಶಾನ್ ಕಿಶನ್ ಇನ್?; ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ XI

ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ರೋಹಿತ್‌ ಆಡ್ತಾರಾ?

ಗಂಭೀರ್ ಅವರ ಈ ನಿಲುವು, ರೋಹಿತ್ ಶರ್ಮಾ ಅವರ ಏಕದಿನ ಭವಿಷ್ಯದ ಬಗ್ಗೆ ನಡೆಯುತ್ತಿದ್ದ ಊಹಾಪೋಹಗಳಿಗೆ ಸ್ಪಷ್ಟ ಉತ್ತರವೆಂದು ಪರಿಗಣಿಸಲಾಗಿದೆ. ಮುಂದಿನ ವರ್ಷದ ಏಕದಿನ ವಿಶ್ವಕಪ್‌ ಟೂರ್ನಿಗೂ ಮುನ್ನ ತಂಡದಲ್ಲಿ ಅವರ ಸ್ಥಾನ ಪ್ರಶ್ನಾರ್ಥಕವಾಗಿದೆ ಎಂಬ ವರದಿಗಳು ಹರಿದಾಡುತ್ತಿದ್ದವು. 2025ರ ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಭಾರತವನ್ನು ಮುನ್ನಡೆಸಿದ್ದ ರೋಹಿತ್ ಅವರನ್ನು ಏಕದಿನ ನಾಯಕತ್ವದಿಂದ ಕೆಳಗಿಳಿಸಿ, ಶುಭ್‌ಮನ್ ಗಿಲ್‌ಗೆ ಜವಾಬ್ದಾರಿ ನೀಡಲಾಗಿತ್ತು.

ಪ್ರಸ್ತುತ 39ರ ವಯಸ್ಸಿನ ರೋಹಿತ್, ಮುಂದಿನ ವಿಶ್ವಕಪ್ ಟೂರ್ನಿಯ ವೇಳೆಗೆ 41 ವರ್ಷ ವಯಸ್ಸಾಗಲಿದ್ದು, ದಕ್ಷಿಣ ಆಫ್ರಿಕಾದ ಪರಿಸ್ಥಿತಿಯಲ್ಲಿ ಬ್ಯಾಟಿಂಗ್‌ನ ಸವಾಲುಗಳನ್ನು ಎದುರಿಸಲು ಸಾಧ್ಯವೇ ಎಂಬ ಪ್ರಶ್ನೆಗಳು ಕೇಳಿಬಂದಿದ್ದವು. ಆದರೆ ಈಗ ಏಕದಿನ ಕ್ರಿಕೆಟ್ ಮಾತ್ರ ಆಡುತ್ತಿರುವ ರೋಹಿತ್ ತಮ್ಮ ಫಿಟ್ನೆಸ್ ಕಾಪಾಡಿಕೊಳ್ಳಲು ಸಾಕಷ್ಟು ಶ್ರಮಿಸುತ್ತಿದ್ದಾರೆ.

ನಾಳೆ 2ನೇ ಏಕದಿನ; ಕಾರ್ಡಿಫ್‌ನಲ್ಲಿ ಭಾರತದ ದಾಖಲೆ ಹೇಗಿದೆ?

ಗಿಲ್‌ ನಾಯಕತ್ವದಲ್ಲಿ ರೋಹಿತ್‌ ಪ್ರದರ್ಶನ

ಶುಭ್‌ಮನ್ ಗಿಲ್ ನಾಯಕತ್ವದಲ್ಲಿ ಆಡಿದ ಬಳಿಕ ರೋಹಿತ್ ಶರ್ಮಾ 13 ಪಂದ್ಯಗಳಲ್ಲಿ 563 ರನ್ ಗಳಿಸಿದ್ದು, 46.91ರ ಸರಾಸರಿಯಲ್ಲಿ ಒಂದು ಶತಕ ಹಾಗೂ ನಾಲ್ಕು ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಮತ್ತೊಂದೆಡೆ, ಹಿರಿಯ ಬ್ಯಾಟರ್ ವಿರಾಟ್ ಕೊಹ್ಲಿ 17 ಪಂದ್ಯಗಳಲ್ಲಿ 896 ರನ್ ಗಳಿಸಿ 64ರ ಸರಾಸರಿಯೊಂದಿಗೆ ನಾಲ್ಕು ಶತಕ ಮತ್ತು ಐದು ಅರ್ಧಶತಕಗಳನ್ನು ತಮ್ಮ ಖಾತೆಗೆ ಸೇರಿಸಿಕೊಂಡಿದ್ದಾರೆ.

ಎರಡನೇ ಪಂದ್ಯದ ಮೇಲೆ ಹಿಟ್‌ಮ್ಯಾನ್‌ ಕಣ್ಣು

ಭಾರತ ಹಾಗೂ ಇಂಗ್ಲೆಂಡ್‌ ತಂಡಗಳ ನಡುವಣ ಎರಡನೇ ಏಕದಿನ ಪಂದ್ಯ ಜುಲೈ 16 ರಂದು ಗುರುವಾರ ನಡೆಯಲಿದೆ. ಈ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ಮೂಲಕ ಕಮ್‌ಬ್ಯಾಕ್‌ ಮಾಡಲು ಟೀಮ್‌ ಇಂಡಿಯಾ ಮಾಜಿ ನಾಯಕ ರೋಹಿಶ್‌ ಶರ್ಮಾ ಎದುರು ನೋಡುತ್ತಿದ್ದಾರೆ.