ಲಂಡನ್: ಭಾರತ ತಂಡದಲ್ಲಿ ರೋಹಿತ್ ಶರ್ಮಾ (Rohit Sharma) ಅವರ ನಿವೃತ್ತಿಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ನಾಯಕ ಶುಭಮನ್ ಗಿಲ್ (Shubman Gill) ಅವರು ಮೂರನೇ ಏಕದಿನ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಸ್ಪಷ್ಟತೆ ನೀಡಿದರು. ಏಕದಿನ ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ವೈಫಲ್ಯ ಅನುಭವಿಸಿದ ಬಳಿಕ ರೋಹಿತ್ ಶರ್ಮಾ, ಇಲ್ಲಿನ ಐತಿಹಾಸಿಕ ಲಾರ್ಡ್ಸ್ ಅಂಗಣದಲ್ಲಿ 138 ರನ್‌ಗಳ ದೊಡ್ಡ ಇನಿಂಗ್ಸ್ ಆಡಿದರು. ಆ ಮೂಲಕ ಬಲಿಷ್ಠವಾಗಿ ಕಮ್‌ಬ್ಯಾಕ್ ಮಾಡಿದರು. ಆದರೂ ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಮೂರನೇ ಪಂದ್ಯವನ್ನು ಸೋತು ಏಕದಿನ ಸರಣಿಯನ್ನು ಕಳೆದುಕೊಂಡಿತು.
ಭಾರತ ತಂಡದ ನಾಯಕ ಶುಭ್‌ಮನ್ ಗಿಲ್ ಅವರ ಈ ಹೇಳಿಕೆ, ರೋಹಿತ್ ಶರ್ಮಾ ಅವರ ಅಂತಾರಾಷ್ಟ್ರೀಯ ಕ್ರಿಕೆಟ್ ಭವಿಷ್ಯದ ಬಗ್ಗೆ ಹರಿದಾಡುತ್ತಿರುವ ವರದಿಗಳ ನಡುವೆಯೇ ಬಂದಿದೆ. ಆಯ್ಕೆ ಸಮಿತಿಯು 39ರ ವಯಸ್ಸಿನ ರೋಹಿತ್‌ಗೆ, 2027ರ ಏಕದಿನ ವಿಶ್ವಕಪ್ ಕಡೆಗೆ ಗಮನ ಹರಿಸುವ ಉದ್ದೇಶದಿಂದ ಇಂಗ್ಲೆಂಡ್ ವಿರುದ್ಧದ ಸರಣಿಯೇ ಅವರ ಕೊನೆಯ ಅಂತಾರಾಷ್ಟ್ರೀಯ ಸರಣಿಯಾಗಲಿದೆ ಎಂದು ತಿಳಿಸಿದೆ ಎಂಬ ವರದಿಗಳು ಪ್ರಕಟವಾಗಿದ್ದವು.
ಆದರೆ ಈ ಕುರಿತು ರೋಹಿತ್ ಶರ್ಮಾ ಅಥವಾ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಆಯ್ಕೆ ಸಮಿತಿಯಿಂದ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿರಲಿಲ್ಲ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಬೆಂಬಲ ನೀಡಿ ಅಥವಾ ಬಿಟ್ಟು ಬಿಡಿ: ಬಿಸಿಸಿಐಗೆ ಯುವರಾಜ್ ಸಿಂಗ್ ಸಂದೇಶ!
ರೋಹಿತ್ ಶರ್ಮಾ ತಮ್ಮ ಭವಿಷ್ಯದ ಕುರಿತು ತಂಡದ ಆಟಗಾರರೊಂದಿಗೆ ಯಾವುದೇ ಚರ್ಚೆ ನಡೆಸಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಭಾರತ ನಾಯಕ ಶುಭ್‌ಮನ್ ಗಿಲ್, "ನಮಗೆ ಅಂತಹ ಯಾವುದೇ ಅವಕಾಶ ಸಿಕ್ಕಿಲ್ಲ. ರೋಹಿತ್ ಈ ಬಗ್ಗೆ ನಮಗೆ ಏನನ್ನೂ ಹೇಳಿಲ್ಲ. ಈ ಎಲ್ಲವೂ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳಷ್ಟೇ. ತಂಡದೊಳಗೆ ಈ ವಿಷಯದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ," ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ, ಗುರಿ ಬೆನ್ನಟ್ಟುವ ವೇಳೆ ರೋಹಿತ್ ಶರ್ಮಾ ಅವರ ಬ್ಯಾಟಿಂಗ್ ವಿಧಾನವನ್ನು ಗಿಲ್ ಮೆಚ್ಚಿದರು. ದೊಡ್ಡ ಗುರಿಯ ಒತ್ತಡದ ನಡುವೆಯೂ ರೋಹಿತ್ ಸಮಚಿತ್ತದಿಂದ ಬ್ಯಾಟಿಂಗ್ ನಡೆಸಿದರು ಎಂದು ಭಾರತ ನಾಯಕ ಗುಣಗಾನ ಮಾಡಿದರು.
IND vs ENG: ಲಾರ್ಡ್ಸ್‌ನಲ್ಲಿ ಮೊದಲ ಒಡಿಐ ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ರೋಹಿತ್ ಶರ್ಮಾ!
ರೋಹಿತ್ ಶರ್ಮಾ ಅವರ ಬ್ಯಾಟಿಂಗ್‌ನ್ನು ಪ್ರಶಂಸಿಸಿದ ಭಾರತ ನಾಯಕ ಶುಭ್‌ಮನ್ ಗಿಲ್, "ರೋಹಿತ್ ಭಾಯ್ ಬೌಲರ್‌ಗಳನ್ನು ಎದುರಿಸಿದ ರೀತಿಯೇ ಅದ್ಭುತವಾಗಿತ್ತು. ಅವರು ತುಂಬಾ ಶಾಂತಚಿತ್ತದಿಂದ ಬ್ಯಾಟಿಂಗ್ ಮಾಡುತ್ತಿದ್ದರು. ಬಹುತೇಕ ಸಮಯ ನಾನು ನಾನ್-ಸ್ಟ್ರೈಕರ್ ಎಂಡ್‌ನಲ್ಲಿದ್ದೆ. ಅವರನ್ನು ನೋಡಿದಾಗ ಯಾವುದೇ ಒತ್ತಡದಲ್ಲಿದ್ದಂತೆ ಕಾಣಲಿಲ್ಲ," ಎಂದು ಹೇಳಿದರು.
"ಪವರ್‌ಪ್ಲೇ ವೇಳೆ ದೊಡ್ಡ ಹೊಡೆತಗಳಿಗೆ ಹೋಗಬೇಕೇ ಬೇಡವೇ ಎಂಬ ಬಗ್ಗೆ ನಾವು ಮಾತನಾಡಿದ್ದೆವು. ಆದರೆ ಹೊಸ ಚೆಂಡಿನಲ್ಲಿ ಬೌಂಡರಿ ಬಾರಿಸುವುದು ಅಷ್ಟು ಸುಲಭವಲ್ಲ ಎಂಬುದು ನಮಗೆ ಗೊತ್ತಾಯಿತು. ಆದರೂ ರೋಹಿತ್ ಬೌಲರ್‌ಗಳನ್ನು ಎದುರಿಸಿದ ರೀತಿ ಮತ್ತು ನಂತರ ವೇಗವಾಗಿ ರನ್‌ಗಳಿಸಿದ ರೀತಿಯು ಅತ್ಯುತ್ತಮವಾಗಿತ್ತು. ಅವರು ಕಡಿಮೆ ಸಮಯದಲ್ಲೇ ಸುಮಾರು 60-70 ರನ್‌ಗಳಿಗೆ ಸಮೀಪಿಸಿದರು. ಒಟ್ಟಾರೆ ಅವರು ಇಡೀ ಇನಿಂಗ್ಸ್‌ನಲ್ಲಿ ತುಂಬಾ ಸಮಚಿತ್ತದಿಂದ ಬ್ಯಾಟಿಂಗ್ ನಡೆಸಿದರು," ಎಂದು ಶುಭಮನ್ ಗಿಲ್ ತಿಳಿಸಿದ್ದಾರೆ.