ರೋಹಿತ್ ಶರ್ಮಾ, ವಿರಾಟ್ ಕೊಹ್ಲಿಗೆ ಬೆಂಬಲ ನೀಡಿ ಅಥವಾ ಬಿಟ್ಟು ಬಿಡಿ: ಬಿಸಿಸಿಐಗೆ ಯುವರಾಜ್ ಸಿಂಗ್ ಸಂದೇಶ!
ಭಾರತ ತಂಡದ ಹಿರಿಯ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ಒಡಿಐ ಭವಿಷ್ಯದ ಬಗ್ಗೆ ಬಿಸಿಸಿಐ ಹಾಗೂ ಟೀಮ್ ಮ್ಯಾನೇಜ್‌ಮೆಂಟ್ ಸ್ಪಷ್ಟತೆ ನೀಡಬೇಕೆಂದು ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ಆಗ್ರಹಿಸಿದ್ದಾರೆ. 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಯೋಜನೆಗಳಲ್ಲಿ ಕೊಹ್ಲಿ, ರೋಹಿತ್ ಇರುವ ಬಗ್ಗೆ ಬಿಸಿಸಿಐ ಹಿರಿಯ ಆಟಗಾರರಿಗೆ ತಿಳಿಸಬೇಕೆಂದು ಹೇಳಿದ್ದಾರೆ.
ರೋಹಿತ್-ಕೊಹ್ಲಿ ಬಗ್ಗೆ ದೊಡ್ಡ ಹೇಳಿಕೆ ನೀಡಿದ ಯುವರಾಜ್ ಸಿಂಗ್. -
ನವದೆಹಲಿ: ರೋಹಿತ್ ಶರ್ಮಾ (Rohit Sharma) ಮತ್ತು ವಿರಾಟ್ ಕೊಹ್ಲಿ (Virat Kohli) ಅವರ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಬಿಸಿಸಿಐ ಹಾಗೂ ತಂಡದ ಟೀಮ್ ಮ್ಯಾನೇಜ್‌ಮೆಂಟ್ ಸ್ಪಷ್ಟತೆ ನೀಡಬೇಕು ಎಂದು ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ Yuvraj Singh) ಒತ್ತಾಯಿಸಿದ್ದಾರೆ. 2027ರ ಏಕದಿನ ವಿಶ್ವಕಪ್ ಟೂರ್ನಿಯ ಭಾರತ ತಂಡದ ಯೋಜನೆಯಲ್ಲಿ ಈ ಇಬ್ಬರು ಹಿರಿಯ ಆಟಗಾರರು ಸ್ಥಾನ ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ಅರಿತುಕೊಳ್ಳಲು ಈ ಇಬ್ಬರೂ ದಿಗ್ಗಜರು ಅರ್ಹರಾಗಿದ್ದಾರೆ ಎಂದು ಯುವರಾಜ್ ಅಭಿಪ್ರಾಯಪಟ್ಟಿದ್ದಾರೆ.
"ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರಂತಹ ಆಟಗಾರರು ತಂಡದ ಭವಿಷ್ಯದ ಯೋಜನೆಗಳಲ್ಲಿ ತಮ್ಮ ಸ್ಥಾನವೇನು ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಹೊಂದಿದ್ದಾರೆ. 2027ರ ವಿಶ್ವಕಪ್ ಟೂರ್ನಿಗಾಗಿ ಅವರು ಭಾರತದ ಯೋಜನೆಯ ಭಾಗವಾಗಿದ್ದಾರೆಯೇ ಅಥವಾ ಇಲ್ಲವೇ ಎಂಬ ಬಗ್ಗೆ ಬಿಸಿಸಿಐ ಮತ್ತು ತಂಡದ ಆಡಳಿತ ಸಂಪೂರ್ಣ ಸ್ಪಷ್ಟತೆ ನೀಡಬೇಕು," ಎಂದು ಯುವರಾಜ್ ಸಿಂಗ್ ಜಿಯೊ ಸ್ಟಾರ್‌ಗೆ ಹೇಳಿದ್ದಾರೆ.
"ರೋಹಿತ್ ಮತ್ತು ವಿರಾಟ್ ಅವರಂತೆಯೇ ನಾನು ಕೂಡ ನನ್ನ ವೃತ್ತಿಜೀವನದ ವೇಳೆ ಈ ಹಂತವನ್ನು ಅನುಭವಿಸಿದ್ದೇನೆ. ಆದ್ದರಿಂದ ಅವರು ಮುಂದುವರಿದು ಆಡಬೇಕೋ ಬೇಡವೋ ಎಂದು ನಾವು ತೀರ್ಪು ನೀಡುವುದು ಸರಿಯಲ್ಲ. ಆ ನಿರ್ಧಾರವನ್ನು ಟೀಮ್ ಮ್ಯಾನೇಜ್‌ಮೆಂಟ್, ಮುಖ್ಯ ಕೋಚ್ ಮತ್ತು ಆಯ್ಕೆ ಸಮಿತಿಯೇ ತೆಗೆದುಕೊಳ್ಳಬೇಕು," ಎಂದು 2011ರ ಏಕದಿನ ವಿಶ್ವಕಪ್‌ನ ಟೂರ್ನಿ ಶ್ರೇಷ್ಠ ಪ್ರಶಸ್ತಿ ವಿಜೇತ ತಿಳಿಸಿದ್ದಾರೆ.
'ಗದ್ದಲವಿಲ್ಲ, ಮಜಾ ಇಲ್ಲ': ನಿವೃತ್ತಿ ವದಂತಿಗೆ ರೋಹಿತ್ ಶರ್ಮಾ ಸ್ಪಷ್ಟನೆ
ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ಮುಂದಿನ ವಿಶ್ವಕಪ್ ಟೂರ್ನಿಯವರೆಗೂ ಮುಂದುವರಿಯಬೇಕು ಎಂದು ಆಯ್ಕೆ ಸಮಿತಿ ಬಯಸಿದರೆ, ಆ ನಿರ್ಧಾರವನ್ನು ಸ್ಪಷ್ಟವಾಗಿ ತಿಳಿಸಿ, ಕಠಿಣ ಸಮಯದಲ್ಲೂ ಅವರಿಗೆ ಬೆಂಬಲ ನೀಡಬೇಕು ಎಂದು ಹೇಳಿದ್ದಾರೆ.
"ನೀವು ಅವರನ್ನು ವಿಶ್ವಕಪ್ ಟೂರ್ನಿಯವರೆಗೆ ಆಡಿಸಬೇಕು ಎಂದು ಬಯಸಿದರೆ, ಅವರ ಹೆಗಲ ಮೇಲೆ ಕೈ ಇಟ್ಟು, ‘ನಾವು ನೀವು ವಿಶ್ವಕಪ್ ಆಡಬೇಕೆಂದು ಬಯಸುತ್ತೇವೆ. ಸಂಪೂರ್ಣವಾಗಿ ನಿಮ್ಮ ಬೆಂಬಲಕ್ಕೆ ನಿಲ್ಲುತ್ತೇವೆ. ನಿಮ್ಮ ಸಹಜ ಆಟವನ್ನು ಆಡಿರಿ. ನಾಳೆ ಒಂದು ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗದಿದ್ದರೆ ತಂಡದಿಂದ ಹೊರಗುಳಿಯಬೇಕಾಗುತ್ತದೆ ಎಂಬ ಒತ್ತಡ ಇರಬಾರದು’ ಎಂದು ಹೇಳಬೇಕು," ಎಂದು ಯುವರಾಜ್ ತಿಳಿಸಿದ್ದಾರೆ.
IND vs ENG: ಲಾರ್ಡ್ಸ್‌ನಲ್ಲಿ ಮೊದಲ ಒಡಿಐ ಶತಕ ಸಿಡಿಸಿ ವಿಶ್ವ ದಾಖಲೆ ಬರೆದ ರೋಹಿತ್ ಶರ್ಮಾ!
"ಕೋಚ್, ನಾಯಕ ಮತ್ತು ಆಯ್ಕೆ ಸಮಿತಿ—ಯಾರೇ ಆಗಿರಲಿ, ಅವರಿಂದ ಸ್ಪಷ್ಟವಾದ ಮಾಹಿತಿ ಸಿಗಬೇಕು. ಏಕೆಂದರೆ ನನ್ನ ಸಂದರ್ಭದಲ್ಲಿ ನನಗೆ ಅಂತಹ ಸ್ಪಷ್ಟತೆ ಸಿಗಲಿಲ್ಲ. ಇಷ್ಟು ವರ್ಷಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿದ ಆಟಗಾರನಿಗೆ ಅದು ಸರಿಯಾದ ಅನುಭವವಾಗಿರಲಿಲ್ಲ ಎಂದು ನಾನು ಭಾವಿಸುತ್ತೇನೆ," ಎಂದು ಅವರು ಹೇಳಿದ್ದಾರೆ.
"ಯಾರಾದರೂ ನಿಮ್ಮ ಭವಿಷ್ಯದ ಯೋಜನೆಗಳಲ್ಲಿ ಇಲ್ಲದಿದ್ದರೆ, ಅದನ್ನು ಅವರಿಗೆ ಪ್ರಾಮಾಣಿಕವಾಗಿ ತಿಳಿಸಬೇಕು. ಅದು ಕಠಿಣ ನಿರ್ಧಾರವಾಗಿರಬಹುದು, ಹೊರಗಿನವರಿಗೆ ಅದು ಕೆಟ್ಟದಾಗಿ ಕಾಣಿಸಬಹುದು. ಆದರೆ ಅವರ ಮುಖಾಮುಖಿಯಾಗಿ ಸತ್ಯ ಹೇಳಿದರೆ, ಅವರು ಅದನ್ನು ಗೌರವಿಸುತ್ತಾರೆ," ಎಂದು ಮಾಜಿ ಆಲ್‌ರೌಂಡರ್ ತಿಳಿಸಿದ್ದಾರೆ.