ರಾಯ್ಪುರ: ಇಶಾನ್ ಕಿಶನ್ (Ishan Kishan) ಹಾಗೂ ಸೂರ್ಯಕುಮಾರ್ ಯಾದವ್ (Suryakumar yadav) ಅವರ ಸ್ಪೋಟಕ ಅರ್ಧಶತಕಗಳ ಬಲದಿಂದ ಭಾರತ ತಂಡ, ಎರಡನೇ ಟಿ20ಐ ಪಂದ್ಯದಲ್ಲಿಯೂ (IND vs NZ) ನ್ಯೂಜಿಲೆಂಡ್ ವಿರುದ್ಧ 7 ವಿಕೆಟ್‌ಗಳ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಎರಡು ಪಂದ್ಯಗಳ ಅಂತ್ಯಕ್ಕೆ ಟೀಮ್ ಇಂಡಿಯಾ ಟಿ20ಐ ಸರಣಿಯಲ್ಲಿ 2-0 ಮುನ್ನಡೆಯನ್ನು ಪಡೆದಿದೆ. ಇನ್ನು 200ಕ್ಕೂ ಅಧಿಕ ರನ್‌ಗಳ ಗುರಿಯನ್ನು ನೀಡಿದ್ದರ ಹೊರತಾಗಿಯೂ ಬೌಲಿಂಗ್ ವೈಫಲ್ಯದಿಂದ ಕಿವೀಸ್ ತಂಡ, ಎರಡನೇ ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಈ ಪಂದ್ಯದಲ್ಲಿ ಕೇವಲ 32 ಎಸೆತಗಳಲ್ಲಿ 76 ರನ್ ಸಿಡಿಸಿ ಭಾರತದ ಗೆಲುವಿಗೆ ನೆರವು ನೀಡಿದ ಇಶಾನ್ ಕಿಶನ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಶುಕ್ರವಾರ ಇಲ್ಲಿನ ಸಹೀದ್ ವೀರ್ ನಾರಾಯಣ್ ಸಿಂಗ್ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನ್ಯೂಜಿಲೆಂಡ್ ನೀಡಿದ್ದ 209 ರನ್‌ಗಳ ಗುರಿಯನ್ನು ಹಿಂಬಾಲಿಸಿದ ಭಾರತ ತಂಡ, ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಅವರ ಅರ್ಧಶತಕಗಳ ಬಲದಿಂದ ಕೇವಲ 15.2 ಓವರ್‌ಗಳಿಗೆ 3 ವಿಕೆಟ್ ಕಳೆದುಕೊಂಡು 209 ರನ್ ಗಳಿಸಿ ಗೆಲುವಿನ ದಡ ಸೇರಿತು. ಆ ಮೂಲಕ ಈ ಸರಣಿಯಲ್ಲಿ ಆತಿಥೇಯರು ಸತತ ಎರಡನೇ ಗೆಲುವು ದಾಖಲಿಸಿದರು.
IND vs NZ: ಮೊದಲ ಓವರ್‌ನಲ್ಲಿಯೇ 18 ರನ್ ನೀಡಿ ಅನಗತ್ಯ ದಾಖಲೆ ಹೆಗಲೇರಿಸಿಕೊಂಡ ಅರ್ಷದೀಪ್ ಸಿಂಗ್!
32 ಎಸೆತಗಳಲ್ಲಿ 76 ರನ್ ಸಿಡಿಸಿದ ಇಶಾನ್
ಚೇಸಿಂಗ್ ಆರಂಭಿಸಿದ ಭಾರತ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ತಂಡದ ಮೊತ್ತ 6 ರನ್ ಇರುವಾಗಲೇ ಭಾರತ ತಂಡ, ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಅವರ ವಿಕೆಟ್‌ಗಳನ್ನು ಕಳೆದುಕೊಂಡಿತು. ಆದರೆ, ಮೂರನೇ ವಿಕೆಟ್‌ಗೆ ಇಶಾನ್ ಕಿಶನ್ ಹಾಗೂ ಸೂರ್ಯಕುಮಾರ್ ಯಾದವ್ ಸ್ಪೋಟಕ ಬ್ಯಾಟಿಂಗ್ ಮೂಲಕ ಕೇವಲ 48 ಎಸೆತಗಳಲ್ಲಿ 122 ರನ್‌ಗಳ ಜೊತೆಯಾಟವನ್ನು ಆಡಿ ತಂಡವನ್ನು ಗೆಲುವಿನ ಸನಿಹಕೆ ತಂದಿತು. ಕಳೆದ ಪಂದ್ಯದಲ್ಲಿ ವಿಫಲರಾಗಿದ್ದ ಇಶಾನ್ ಕಿಶನ್ ಈ ಪಂದ್ಯದಲ್ಲಿ ಕೇವಲ 32 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 11 ಬೌಂಡರಿಗಳೊಂದಿಗೆ 76 ರನ್‌ಗಳನ್ನು ಚಚ್ಚಿದರು.
ಸೂರ್ಯಕುಮಾರ್ ಯಾದವ್ ಅಬ್ಬರ
ಕಳೆದ ಸಾಲು ಸಾಲು ವೈಫಲ್ಯಗಳನ್ನು ಕಂಡಿದ್ದ ಸೂರ್ಯಕುಮಾರ್ ಯಾದವ್, ಈ ಪಂದ್ಯದಲ್ಲಿ ಸ್ಪೋಟಕ ಇನಿಂಗ್ಸ್ ಆಡುವ ಮೂಲಕ ತಮ್ಮ ಲಯಕ್ಕೆ ಮರಳಿದರು. ಅವರು ಆಡಿದ 37 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 9 ಬೌಂಡರಿಗಳೊಂದಿಗೆ ಅಜೇಯ 82 ರನ್‌ಗಳನ್ನು ಬಾರಿಸಿದರು. ಆ ಮೂಲಕ ಭಾರತ ತಂಡದ ಗೆಲುವಿಗೆ ನೆರವು ನೀಡಿದರು. ಇವರ ಜೊತೆ ನಾಲ್ಕನೇ ವಿಕೆಟ್‌ಗೆ 81 ರನ್ ಗಳಿಸಿದ್ದ ಶಿವಂ ದುಬೆ 18 ಎಸೆತಗಳಲ್ಲಿ ಅಜೇಯ 36 ರನ್ ಸಿಡಿಸಿದರು.
208 ರನ್ ಕಲೆ ಹಾಕಿದ ನ್ಯೂಜಿಲೆಂಡ್
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ನ್ಯೂಜಿಲೆಂಡ್ ತಂಡ, ಮಿಚೆಲ್ ಸ್ಯಾಂಟ್ನರ್ ಹಾಗೂ ರಚಿನ್ ರವೀಂದ್ರ ಬ್ಯಾಟಿಂಗ್ ಬಲದಿಂದ ತನ್ನ ಪಾಲಿನ 20 ಓವರ್‌ಗಳಿಗೆ 6 ವಿಕೆಟ್ ನಷ್ಟಕ್ಕೆ 208 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ಭಾರತ ತಂಡಕ್ಕೆ 209 ರನ್‌ಗಳ ಗುರಿಯನ್ನು ನೀಡಿತು.
ಕಿವೀಸ್‌ಗೆ ಉತ್ತಮ ಆರಂಭ
ಕಿವೀಸ್ ಪರ ಇನಿಂಗ್ಸ್ ಆರಂಭಿಸಿದ ಡೆವೋನ್ ಕಾನ್ವೆ ಹಾಗೂ ಟಿಮ್ ಸೀಫರ್ಟ್ ಜೋಡಿ ಮುರಿಯದ ಮೊದಲನೇ ವಿಕೆಟ್‌ಗೆ 3.2 ಓವರ್‌ಗಳಿಗೆ 43 ರನ್‌ಗಳನ್ನು ಕಲೆ ಹಾಕಿದ್ದರು ಹಾಗೂ ತಮ್ಮ ತಂಡಕ್ಕೆ ಉತ್ತಮ ಆರಂಭವನ್ನು ತಂದುಕೊಟ್ಟಿದ್ದರು. ಸಿಕ್ಕ ಉತ್ತಮ ಆರಂಭದಲ್ಲಿ ಡೆವೋನ್ ಕಾನ್ವೆ (19) ಹಾಗೂ ಟಿಮ್ ಸೀಫರ್ಟ್ (24) ದೊಡ್ಡ ಇನಿಂಗ್ಸ್‌ಗೆ ಪರಿವರ್ತಿಸುವಲ್ಲಿ ವಿಫಲರಾದರು. ಈ ಇಬ್ಬರನ್ನು ಕ್ರಮವಾಗಿ ಹರ್ಷಿತ್ ರಾಣಾ ಹಾಗೂ ವರುಣ್ ಚಕ್ರವರ್ತಿ ಔಟ್ ಮಾಡಿದರು.
ಗ್ಲೆನ್ ಫಿಲಿಪ್ಸ್ (19), ಡ್ಯಾರಿಲ್ ಮಿಚೆಲ್ (18) ಹಾಗೂ ಮಾರ್ಕ್ ಚಾಪ್ಮನ್ (10) ಅವರು ಮಧ್ಯಮ ಕ್ರಮಾಂಕದಲ್ಲಿ ಹೆಚ್ಚು ಹೊತ್ತು ಉಳಿಯಲಿಲ್ಲ. ಆದರೆ, ರಚಿನ್ ರವೀಂದ್ರ 26 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 2 ಬೌಂಡರಿಗಳೊಂದಿಗೆ 44 ರನ್‌ಗಳನ್ನು ಸಿಡಿಸಿದರು. ಆದರೆ, ಅವರು ಅರ್ಧಶತಕದಂಚಿನಲ್ಲಿ ಕುಲ್ದೀಪ್ ಯಾದವ್‌ಗೆ ವಿಕೆಟ್ ಒಪ್ಪಿಸಿದರು.
ಮಿಂಚಿನ ಮಿಚೆಲ್ ಸ್ಯಾಂಟ್ನರ್
ರಚಿನ್ ರವೀಂದ್ರ ವಿಕೆಟ್ ಒಪ್ಪಿಸಿದ ಬಳಿಕ ಕ್ರೀಸ್‌ಗೆ ಬಂದ ಮಿಚೆಲ್ ಸ್ಯಾಂಟ್ನರ್ ಡೆತ್ ಓವರ್‌ಗಳಲ್ಲಿ ಮಿಂಚಿನ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದರು. ಅವರು ಆಡಿದ 27 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ 6 ಬೌಂಡರಿಗಳೊಂದಿಗೆ ಅಜೇಯ 47 ರನ್‌ಗಳನ್ನು ಸಿಡಿಸಿದರು. ಝ್ಯಾಕರಿ ಫೌಕ್ಸ್ 8 ಎಸೆತಗಳಲ್ಲಿ ಅಜೇಯ 15 ರನ್ ಸಿಡಿಸಿದರು. ಭಾರತದ ಪರ ಕುಲ್ದೀಪ್ ಯಾದವ್ ಎರಡು ವಿಕೆಟ್ ಕಿತ್ತರೆ, ಹರ್ಷಿತ್ ರಾಣಾ, ಹಾರ್ದಿಕ್ ಪಾಂಡ್ಯ, ವರುಣ್ ಚಕ್ರವರ್ತಿ ಹಾಗೂ ಶಿವಂ ದುಬೆ ತಲಾ ಒಂದೊಂದು ವಿಕೆಟ್ ಕಿತ್ತರು.