ಕ್ರೈಸ್ಟ್ ಚರ್ಚ್: ನ್ಯೂಜಿಲೆಂಡ್ ವೇಗಿ ಕೈಲ್ ಜೇಮಿಸನ್ (Kyle Jamieson) ಅವರ ಬೌನ್ಸರ್ ದಾಳಿಗೆ ತತ್ತರಿಸಿದ ಭಾರತದ ವೇಗಿ ಆಕಾಶ್ ದೀಪ್ ಕನ್ಕಷನ್ನಿಂದಾಗಿ ಎರಡನೇ ಟೆಸ್ಟ್ ಪಂದ್ಯದಿಂದ (IND vs NZ) ಹೊರಬಿದ್ದಿದ್ದಾರೆ. ಈ ಘಟನೆ ಕ್ರಿಕೆಟ್ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಬಾಲಂಗೋಚಿ ಬ್ಯಾಟರ್ಗಳ ವಿರುದ್ಧ ಬೌನ್ಸರ್ ಅಸ್ತ್ರ ಪ್ರಯೋಗಿಸುವುದು ಸರಿಯೇ ಎಂಬ ಪ್ರಶ್ನೆ ಎದ್ದಿದೆ. ಆದರೆ ಈ ಟೀಕೆಗಳಿಗೆ ಜೇಮಿಸನ್ ತೀಕ್ಷ್ಣವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಭಾರತದ ಬೌಲರ್ಗಳು ಕೂಡ ನ್ಯೂಜಿಲೆಂಡ್ನ ಬಾಲಂಗೋಚಿ ಬ್ಯಾಟರ್ಗಳ ವಿರುದ್ಧ ಇದೇ ತಂತ್ರ ಅನುಸರಿಸಿದ್ದರು ಎಂದು ಜೇಮಿಸನ್ ತಿರುಗೇಟು ನೀಡಿದ್ದಾರೆ. ಸ್ಟಂಪ್ ಮೈಕ್ನಲ್ಲಿ ಸೆರೆಯಾದ ಅವರ ಮಾತುಗಳು ಇದೀಗ ಚರ್ಚೆಗೆ ಗ್ರಾಸವಾಗಿವೆ.
"ಏನು? ಅವರು ನಮಗೂ ಅದನ್ನೇ ಮಾಡಿದ್ದಾರೆ. ನಾನು ಅವರ ಬಗ್ಗೆ ಏಕೆ ಕಾಳಜಿ ವಹಿಸಬೇಕು? ಅವರು ನಮಗೆ ಕೊಟ್ಟಿದ್ದಾರೆ, ನಾವು ಅದನ್ನು ಮರಳಿಸಿ ಕೊಟ್ಟಿದ್ದೇವೆ. ಇದನ್ನು ನಾವು ಆರಂಭಿಸಿಲ್ಲ, ಆದರೆ ಮುಗಿಸುವುದು ಮಾತ್ರ ನಾವೇ," ಎಂದು ಜೇಮಿಸನ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾರತದ ಮೊದಲ ಇನಿಂಗ್ಸ್ನ 53ನೇ ಓವರ್ನಲ್ಲಿ ಜೇಮಿಸನ್ ಎಸೆದ ಬೌನ್ಸರ್ಗಳು ಆಕಾಶ್ ದೀಪ್ ಅವರ ತಲೆಗೆ ಎರಡು ಬಾರಿ ಬಡಿದಿದ್ದವು. ಇದಾದ ಬಳಿಕ ಮ್ಯಾಟ್ ಹೆನ್ರಿ ಎಸೆದ ವೇಗದ ಎಸೆತವೊಂದು ಗುರ್ನೂರ್ ಬ್ರಾರ್ ಅವರ ಹೆಲ್ಮೆಟ್ಗೆ ಬಡಿದಿತ್ತು.
ದ್ವಿತೀಯ ಟೆಸ್ಟ್; ಇನಿಂಗ್ಸ್ ಸೋಲಿನ ಭೀತಿಯಲ್ಲಿ ಭಾರತ
ಇದಕ್ಕೂ ಮೊದಲು ಸರಣಿಯ ಎರಡನೇ ಏಕದಿನ ಪಂದ್ಯದಲ್ಲಿ ಗುರ್ನೂರ್ ಬ್ರಾರ್ ಮತ್ತು ನ್ಯೂಜಿಲೆಂಡ್ ಆಟಗಾರರ ನಡುವೆ ಮಾತಿನ ಚಕಮಕಿ ನಡೆದಿತ್ತು. ಆ ಪಂದ್ಯದಲ್ಲಿ ಬ್ರಾರ್ ನ್ಯೂಜಿಲೆಂಡ್ ಬ್ಯಾಟರ್ಗಳ ವಿರುದ್ಧ ಶಾರ್ಟ್ ಬಾಲ್ ತಂತ್ರ ಬಳಸಿದ್ದರು. ಬಳಿಕ ಮಳೆಬಾಧಿತ ಪಂದ್ಯದಲ್ಲಿ ಬ್ಯಾಟಿಂಗ್ಗೆ ಬಂದಾಗ ಕಿವೀಸ್ ಬೌಲರ್ಗಳಿಂದಲೂ ಅದೇ ರೀತಿಯ ಪ್ರತಿದಾಳಿ ಎದುರಿಸಬೇಕಾಯಿತು.
ಎರಡನೇ ಟೆಸ್ಟ್ನಿಂದ ಆಕಾಶ್ ದೀಪ್ ಔಟ್
ಜೇಮಿಸನ್ ಅವರ ಬೌನ್ಸರ್ ದಾಳಿಯಿಂದ ಗಾಯಗೊಂಡ ಆಕಾಶ್ ದೀಪ್ಗೆ ಕನ್ಕಷನ್ ಆಗಿರುವುದು ದೃಢಪಟ್ಟಿದ್ದು, ಅವರು ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದಿದ್ದಾರೆ. ಅವರ ಬದಲಿಗೆ ಪ್ರಸಿಧ್ ಕೃಷ್ಣ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆದಿದ್ದಾರೆ.
ಈ ಆಯ್ಕೆ ಮತ್ತೊಂದು ವಿವಾದಕ್ಕೂ ಕಾರಣವಾಗಿದೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಗಾಗಿ ಭಾರತ ಆರು ವೇಗದ ಬೌಲರ್ಗಳನ್ನು ಆಯ್ಕೆ ಮಾಡಿಕೊಂಡಿದ್ದರೂ, ಮೊಹಮ್ಮದ್ ಸಿರಾಜ್ಗೆ ಮಾತ್ರ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿಲ್ಲ. ಏಕದಿನ ಸರಣಿಯಲ್ಲೂ ಐದು ಪಂದ್ಯಗಳಲ್ಲಿ ಸಿರಾಜ್ ಕೇವಲ ಒಂದು ಪಂದ್ಯವನ್ನಷ್ಟೇ ಆಡಿದ್ದರು. ಆಕಾಶ್ ದೀಪ್ ಹೊರಬಿದ್ದಿರುವುದು ಭಾರತಕ್ಕೆ ದೊಡ್ಡ ಹಿನ್ನಡೆಯಾಗಿದೆ. ಮೊದಲ ಇನ್ನಿಂಗ್ಸ್ನಲ್ಲಿ ಐದು ವಿಕೆಟ್ಗಳ ಗೊಂಚಲು ಪಡೆದಿದ್ದ ಅವರು, ಬ್ಯಾಟಿಂಗ್ನಲ್ಲೂ 28 ರನ್ಗಳ ಕೊಡುಗೆ ನೀಡಿದ್ದರು.
ತಲೆಗೆ ಚೆಂಡೇಟು; ಎರಡನೇ ಟೆಸ್ಟ್ ಪಂದ್ಯದಿಂದ ಹೊರಬಿದ್ದ ಆಕಾಶ್ ದೀಪ್, ಪ್ರಸಿದ್ಧ್ ಕೃಷ್ಣ ಬದಲಿ ಆಟಗಾರ
ಪಂದ್ಯದ ಮೂರನೇ ದಿನವೂ ನ್ಯೂಜಿಲೆಂಡ್ ಮೇಲುಗೈ
ಮೂರನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ ಎರಡನೇ ಇನಿಂಗ್ಸ್ನಲ್ಲಿ 3 ವಿಕೆಟ್ಗೆ 133 ರನ್ ಗಳಿಸಿದ್ದು, ಒಟ್ಟಾರೆ 243 ರನ್ಗಳ ಮುನ್ನಡೆ ಸಾಧಿಸಿದೆ. ಇದಕ್ಕೂ ಮೊದಲು ನ್ಯೂಜಿಲೆಂಡ್ ಮೊದಲ ಇನಿಂಗ್ಸ್ನಲ್ಲಿ 356 ರನ್ ಗಳಿಸಿತ್ತು. ಭಾರತ 246 ರನ್ಗಳಿಗೆ ಆಲೌಟ್ ಆಗಿತ್ತು. ಸದ್ಯ ಪಂದ್ಯದಲ್ಲಿ ಕಿವೀಸ್ ತಂಡ ಬಲಿಷ್ಠ ಸ್ಥಿತಿಯಲ್ಲಿದೆ.