IND vs NZ: ಸಂಜು ಸ್ಯಾಮ್ಸನ್ ಔಟ್? ಭಾರತ ತಂಡದ ಪ್ಲೇಯಿಂಗ್ XIನಲ್ಲಿ ಒಂದು ಬದಲಾವಣೆ ಸಾಧ್ಯತೆ!
India's Probable playing Xi: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳು ಜನವರಿ 31 ರಂದು ತಿರುವನಂತಪುರಂಬಲ್ಲಿ ನಡೆಯಲಿರುವ ಐದನೇ ಹಾಗೂ ಟಿ20ಐ ಸರಣಿಯ ಕೊನೆಯ ಪಂದ್ಯದಲ್ಲಿ ಕಾದಾಟ ನಡೆಸಲು ಎದುರು ನೋಡುತ್ತಿವೆ. ಈ ಪಂದ್ಯದ ನಿಮಿತ್ತ ಭಾರತ ತಂಡದ ಪ್ಲೇಯಿಂಗ್ XI ಹೇಗಿರಲಿದೆ ಎಂದು ಇಲ್ಲಿ ವಿವರಿಸಲಾಗಿದೆ.
ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವಣ ಐದನೇ ಟಿ20ಐ ಪಂದ್ಯ. -
ತಿರುವನಂತಪುರಂ: ನಾಲ್ಕನೇ ಟಿ20ಐ ಪಂದ್ಯದಲ್ಲಿ (IND vz NZ) ನ್ಯೂಜಿಲೆಂಡ್ ವಿರುದ್ಧ 50 ರನ್‌ಗಳಿಂದ ಸೋಲು ಅನುಭವಿಸಿದ್ದ ಭಾರತ ತಂಡ, ಇದೀಗ ಜನವರಿ 31 ರಂದು ಶನಿವಾರ ನಡೆಯಲಿರುವ ಐದನೇ ಹಾಗೂ ಸರಣಿಯ ಕೊನೆಯ ಪಂದ್ಯದಲ್ಲಿ ಗೆದ್ದು ಟಿ20ಐ ಸರಣಿಯನ್ನು 4-1 ಅಂತರದಲ್ಲಿ ಮುಡಿಗೇರಿಸಿಕೊಳ್ಳಲು ಎದುರು ನೋಡುತ್ತಿದೆ. ಅಂದ ಹಾಗೆ ಈ ಪಂದ್ಯ ಗ್ರೀನ್ ಫೀಲ್ಡ್ ಇಂಟರ್‌ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಈಗಾಗಲೇ ಟಿ20ಐ ಸರಣಿಯನ್ನು ವಶಪಡಿಸಿಕೊಂಡಿರುವ ಸೂರ್ಯಕುಮಾರ್ ಯಾದವ್ (Suryakumar Yadav) ನಾಯಕತ್ವದ ಭಾರತ ತಂಡ, ಈ ಪಂದ್ಯವನ್ನು ಗೆದ್ದು ಟಿ20 ವಿಶ್ವಕಪ್ (T20 World Cup 2026) ಟೂರ್ನಿಗೆ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಬಯಸುತ್ತಿದೆ.
ಭಾರತ ತಂಡ ಈ ಸರಣಿಯ ಆರಂಭಿಕ ಮೂರು ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನವನ್ನು ತೋರಿ ಗೆದ್ದುಕೊಂಡಿತ್ತು ಹಾಗೂ ಇನ್ನೂ ಎರಡು ಪಂದ್ಯಗಳು ಬಾಕಿ ಇರುವಾಗಲೇ ಟಿ20ಐ ಸರಣಿಯನ್ನು ವಶಪಡಿಸಿಕೊಂಡಿತ್ತು. ಆದರೆ, ವಿಶಾಖಪಟ್ಟಣಂನಲ್ಲಿ ನಡೆದಿದ್ದ ನಾಲ್ಕನೇ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್ ವೈಫಲ್ಯದಿಂದ 50 ರನ್‌ಗಳಿಂದ ಸೋಲು ಅನುಭವಿಸಿತ್ತು. ಅಂದ ಹಾಗೆ ಸತತ ನಾಲ್ಕೂ ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿರುವ ಸಂಜು ಸ್ಯಾಮ್ಸನ್‌ಗೆ ತವರು ಅಂಗಣದಲ್ಲಿ ಅವಕಾಶ ನೀಡುವ ಬಗ್ಗೆ ಅನುಮಾನಗಳಿವೆ. ಕಳೆದ ಪಂದ್ಯಕ್ಕೆ ಅಲಭ್ಯರಾಗಿದ್ದ ಇಶಾನ್ ಕಿಶನ್‌ಗೆ ಈ ಪಂದ್ಯದಲ್ಲಿ ಸಂಜುಸ ಸ್ಥಾನದಲ್ಲಿ ಇನಿಂಗ್ಸ್ ಆರಂಭಿಸಲು ಅವಕಾಶ ನೀಡಿದರೂ ಅಚ್ಚರಿ ಇಲ್ಲ.
ರೋಹಿತ್ ಶರ್ಮಾರ ಟಿ20ಐ ವಿಶ್ವ ದಾಖಲೆಯನ್ನು ಮುರಿದ ಪಾಲ್ ಸ್ಟರ್ಲಿಂಗ್!
ಮತ್ತೊಂದು ಕಡೆ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡಕ್ಕೆ ತಿರುಗೇಟು ನೀಡಿದ್ದ ನ್ಯೂಜಿಲೆಂಡ್ ತಂಡ ಐದನೇ ಪಂದ್ಯದಲ್ಲಿಯೂ ಗೆದ್ದು ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಭಾರತದ ಕಂಡೀಷನ್ಸ್‌ನಲ್ಲಿ ವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ಬಯಸುತ್ತಿದೆ. ಆದರೆ, ಇದು ಸುಲಭವಲ್ಲ, ಭಾರತ ತಂಡ ಕೂಡ ಇದೇ ಯೋಜನೆಯನ್ನು ಹಾಕಿಕೊಂಡಿದೆ. ಕಿವೀಸ್ ಪರ ಟಿಮ್ ಸೀಫರ್ಟ್ ಹಾಗೂ ಡೆವೋನ್ ಕಾನ್ವೆ ಅತ್ಯುತ್ತಮ ಲಯದಲ್ಲಿದ್ದಾರೆ. ಇದು ಪ್ರವಾಸಿ ತಂಡಕ್ಕೆ ಪ್ಲಸ್ ಪಾಯಿಂಟ್ ಆಗಲಿದೆ.
ಪಿಚ್ ರಿಪೋರ್ಟ್
ಐದನೇ ಟಿ20ಐ ಪಂದ್ಯ ನಡೆಯುವ ತಿರುವನಂತಪುರಂನ ಗ್ರೀನ್ ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದ ಪಿಚ್ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗಗಳಲ್ಲಿ ಅತ್ಯುತ್ತಮ ಸಂಯೋಜನೆಯನ್ನು ಹೊಂದಿದೆ. ಇಲ್ಲಿ ನಾಲ್ಕು ಟಿ20ಐ ಪಂದ್ಯಗಳು ನಡೆದಿದ್ದು, ಒಂದು ಪಂದ್ಯದಲ್ಲಿ ಭಾರತ ಸೋತಿದೆ. ಇಲ್ಲಿ ಪ್ರಥಮ ಇನಿಂಗ್ಸ್‌ನಲ್ಲಿ 220ರ ಸರಾಸರಿಯಲ್ಲಿ ರನ್ ಗಳಿಸಬಹುದು. ಆದರೆ ಎರಡನೇ ಇನಿಂಗ್ಸ್‌ನಲ್ಲಿ ಪಿಚ್ ನಿಧಾನಗತಿಯಲ್ಲಿ ಸಾಗಬಹುದು.
ಫೆಬ್ರವರಿ 3 ರಂದು ತಿಲಕ್ ವರ್ಮಾ ಟೀಮ್ ಇಂಡಿಯಾ ಸೇರುವ ಸಾಧ್ಯತೆ
ಮುಖಾಮುಖಿ ದಾಖಲೆ
ಒಟ್ಟು ಆಡಿರುವ ಪಂದ್ಯಗಳು: 29
ಭಾರತದ ಗೆಲುವು: 15
ನ್ಯೂಜಿಲೆಂಡ್: 11
ಟೈ/ಫಲಿತಾಂಶವಿಲ್ಲ: 03
ಐದನೇ ಟಿ20ಐ ಪಂದ್ಯಕ್ಕೆ ಉಭಯ ತಂಡಗಳ ಸಂಭಾವ್ಯ ಪ್ಲೇಯಿಂಗ್ XI
ಭಾರತ: ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್/ಇಶಾನ್ ಕಿಶನ್, ಸೂರ್ಯಕುಮಾರ್ ಯಾದವ್ (ನಾಯಕ), ರಿಂಕು ಸಿಂಗ್, ಶಿವಂ ದುಬೆ, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಹರ್ಷಿತ್ ರಾಣಾ, ಜಸ್‌ಪ್ರೀತ್ ಬುಮ್ರಾ, ವರುಣ್ ಚಕ್ರವರ್ತಿ
ನ್ಯೂಜಿಲೆಂಡ್: ಟಿಮ್ ಸೀಫರ್ಟ್ (ವಿಕೆಟ್ ಕೀಪರ್), ಡೆವೋನ್ ಕಾನ್ವೆ, ರಚಿನ್ ರವೀಂದ್ರ, ಗ್ಲೆನ್ ಫಿಲಿಪ್ಸ್, ಮಾರ್ಕ್ ಚಾಪ್ಮನ್, ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್ (ನಾಯಕ), ಜಿಮ್ಮಿ ನೀಶಮ್, ಝ್ಯಾಕ್ ಫೌಲ್ಕ್ಸ್, ಮ್ಯಾಟ್ ಹೆನ್ರಿ, ಇಶ್ ಸೋಧಿ