ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

IND vs NZ: ಫೈನಲ್‌ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಬದಲಾವಣೆ ತರಬೇಕೆಂದ ಮೊಹಮ್ಮದ್‌ ಕೈಫ್‌!

Mohammad kaif on Abhishek Sharma: ನ್ಯೂಜಿಲೆಂಡ್‌ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಫೈನಲ್‌ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಒಂದು ಬದಲಾವಣೆ ತರಬೇಕೆಂದು ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌ ಆಗ್ರಹಿಸಿದ್ದಾರೆ. ಅಭಿಷೇಕ್‌ ಸತತ ವೈಫಲ್ಯ ಅನುಭವಿಸುತ್ತಿದ್ದು, ವಿಶ್ರಾಂತಿ ನೀಡಬೇಕೆಂದು ಅವರು ಸಲಹೆ ನೀಡಿದ್ದಾರೆ.

ಅಭಿಷೇಕ್‌ ಶರ್ಮಾ ಬದಲು ರಿಂಕು ಸಿಂಗ್‌ಗೆ ಚಾನ್ಸ್‌ ಕೊಡಿ ಎಂದ ಕೈಫ್‌.

ಅಹಮದಾಬಾದ್‌: ಸತತ ಬ್ಯಾಟಿಂಗ್‌ ವೈಫಲ್ಯ ಅನುಭವಿಸುತ್ತಿರುವ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ಅಭಿಷೇಕ್‌ ಶರ್ಮಾ (Abhishek Sharma) ಅವರನ್ನು ನ್ಯೂಜಿಲೆಂಡ್‌ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2026) ಟೂರ್ನಿಯ ಪಂದ್ಯಕ್ಕೆ ವಿಶ್ರಾಂತಿ ನೀಡಬೇಕೆಂದು ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಕೈಫ್‌ (Mohammad Kaif) ಆಗ್ರಹಿಸಿದ್ದಾರೆ. ಭಾರತ ಹಾಗೂ ನ್ಯೂಜಿಲೆಂಡ್‌ ನಡುವಣ ಚುಟುಕು ವಿಶ್ವಕಪ್‌ ಫೈನಲ್‌ ಪಂದ್ಯ ಮಾರ್ಚ್‌ 8 ರಂದು ಭಾನುವಾರ ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಜಿಂಬಾಬ್ವೆ ಎದುರು ಅರ್ಧಶತಕ ಸಿಡಿಸಿದ್ದು ಬಿಟ್ಟರೆ ಇನ್ನುಳಿದ ಪಂದ್ಯಗಳಲ್ಲಿ ಅಭಿಷೇಕ್‌ ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದಾರೆ.

ತಮ್ಮ ಯುಟ್ಯೂಬ್‌ ಚಾನೆಲ್‌ನಲ್ಲಿ ಮಾತನಾಡಿದ ಮೊಹಮ್ಮದ್‌ ಕೈಫ್‌, "ಭಾರತ ತಂಡ ಅಭಿಷೇಕ್ ಶರ್ಮಾಗೆ ಸ್ವಲ್ಪ ವಿಶ್ರಾಂತಿ ನೀಡಬಹುದು. ಈಗಾಗಲೇ ಅವರು ಸಾಕಷ್ಟು ಪಂದ್ಯಗಳನ್ನು ಆಡಿದ್ದಾರೆ. ಬದಲಾವಣೆಗಳನ್ನು ಮಾಡುವುದರಲ್ಲಿ ಯಾವುದೇ ತೊಂದರೆ ಇಲ್ಲ. ಚುಟುಕು ಫಾರ್ಮ್ಯಾಟ್‌ನಲ್ಲಿ ಬದಲಾವಣೆಗಳನ್ನು ಮಾಡುವುದು ಸಹಜ. ಬ್ರಾಂಡನ್ ಕಿಂಗ್ ಫಾರ್ಮ್‌ನಲ್ಲಿ ಇರದ ಕಾರಣ ವೆಸ್ಟ್ ಇಂಡೀಸ್ ತಂಡ ರಾಸ್ಟನ್ ಚೇಸ್ ಅವರನ್ನು ಭಾರತದ ವಿರುದ್ಧ ಓಪನರ್ ಆಗಿ ಆಡಿಸಿತ್ತು. ಅವರು ಐದು ಅಥವಾ ಆರು ಪಂದ್ಯಗಳವರೆಗೆ ಅವರಿಗೆ ಬೆಂಬಲ ನೀಡಿದರು, ಆದರೆ ಮಹತ್ವದ ಪಂದ್ಯದಲ್ಲಿ ಅವರಿಗೆ ವಿರಾಮ ನೀಡಿದರು. ಅದೇ ರೀತಿಯಲ್ಲಿ ನೀವು ಸಂಜು ಅವರನ್ನು ತಂಡಕ್ಕೆ ಕರೆತಂದಿದ್ದೀರಿ ಮತ್ತು ಅವರು ಉತ್ತಮವಾಗಿ ಆಡುತ್ತಿದ್ದಾರೆ. ಹೀಗಾಗಿ ಆ ಬದಲಾವಣೆ ನಿಮ್ಮ ಪರವಾಗಿ ಕೆಲಸ ಮಾಡಿತು,” ಎಂದು ಹೇಳಿದ್ದಾರೆ.

ಟಿ20 ವಿಶ್ವಕಪ್‌ ಫೈನಲ್‌ ಪಂದ್ಯಕ್ಕೆ ಭಾರತ-ಕಿವೀಸ್‌ ಸಂಭಾವ್ಯ ತಂಡಗಳು

“ಭಾರತದ ಬಳಿ ಸಾಕಷ್ಟು ಸಾಬೀತಾದ ಆಟಗಾರರು ಇದ್ದಾರೆ. ರಿಂಕು ಸಿಂಗ್ ಎಲ್ಲೆಡೆ ರನ್ ಗಳಿಸುತ್ತಾರೆ – ಅದು ಟೆಸ್ಟ್ ಆಗಿರಲಿ, ರಣಜಿ ಟ್ರೋಫಿ ಆಗಿರಲಿ ಅಥವಾ ಐಪಿಎಲ್ ಆಗಿರಲಿ. ಕುಲ್‌ದೀಪ್ ಯಾದವ್ ಮತ್ತು ಮೊಹಮ್ಮದ್ ಸಿರಾಜ್ ಕೂಡ ಎಲ್ಲೆಡೆ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಅಭಿಷೇಕ್ ಶರ್ಮಾಗೆ ಬದಲಾಗಿ ಯಾರು ಆಡಬಹುದು ಎಂದು ನೀವು ಡಗೌಟ್ ಕಡೆ ನೋಡಿದಾಗ, ಅಲ್ಲಿ ರಿಂಕು ಸಿಂಗ್ ಕುಳಿತಿರುವುದು ಕಾಣುತ್ತದೆ. ಹಾಗಾದರೆ ಅವರನ್ನು ತಂಡಕ್ಕೆ ತರಬೇಕು. ಒಬ್ಬ ಆಟಗಾರ ಫಾರ್ಮ್‌ನಲ್ಲಿ ಹೋರಾಟ ಮಾಡುತ್ತಿದ್ದರೆ, ಇನ್ನೊಬ್ಬ ಉತ್ತಮ ಪ್ರದರ್ಶನ ನೀಡಿದರೂ ಹೊರಗೆ ಕುಳಿತಿರುವುದು ಸರಿಯಲ್ಲ,” ಎಂದು ಕೈಫ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇದಕ್ಕೂ ಮುನ್ನ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ವರುಣ್ ಚಕ್ರವರ್ತಿ ತಮ್ಮ ಅತ್ಯುತ್ತಮ ಫಾರ್ಮ್‌ನಲ್ಲಿ ಕಾಣಿಸಿಕೊಳ್ಳದಿರುವುದರಿಂದ ಅವರನ್ನು ತಂಡದಿಂದ ಕೈಬಿಡಬಹುದು ಎಂಬ ಊಹಾಪೋಹಗಳು ಕೇಳಿಬರುತ್ತಿವೆ. ಆದರೆ ಕೈಫ್ ಅದನ್ನು ಒಪ್ಪುತ್ತಿಲ್ಲ. “ನನ್ನ ಅನಿಸಿಕೆಯಲ್ಲಿ ಟೀಮ್‌ ಮ್ಯಾನೇಜ್‌ಮೆಂಟ್‌ ವರುಣ್ ಅವರನ್ನು ಕೈಬಿಡುವುದಿಲ್ಲ. ಅವರೊಂದಿಗೆ ಕೆಲಸ ಮಾಡಿ, ಮುಂದಿನ ಪಂದ್ಯದಲ್ಲಿ ಅವರು ತಮ್ಮ ಲೈನ್ ಬದಲಾಯಿಸಬಹುದು,” ಎಂದು ಕೈಫ್ ಹೇಳಿದರು.

T20 world cup final 2026: ಫೈನಲ್‌ ಪಂದ್ಯಕ್ಕೆ ಮಳೆ ಬಂದರೆ, ಟೈಗೊಂಡರೆ ಏನು ಗತಿ? ನಿಯಮ ಏನು ಹೆಳುತ್ತದೆ?

ಅಭಿಷೇಕ್‌ ಶರ್ಮಾಗೆ ಸಂಜು ಸ್ಯಾಮ್ಸನ್‌ ಹೋಲಿಕೆ ಸರಿಯಿಲ್ಲ: ಕೈಫ್‌

ಅಭಿಷೇಕ್‌ ಶರ್ಮಾ ಅವರನ್ನು ಸಂಜು ಸ್ಯಾಮ್ಸನ್‌ಗೆ ಹೋಲಿಕೆ ಮಾಡುವುದು ಸರಿಯಲ್ಲ. ಅಭಿಷೇಕ್‌ ಶರ್ಮಾಗೆ ಇದು ಹೊಸ ಟಿ20 ವಿಶ್ವಕಪ್‌ ಟೂರ್ನಿಯಾಗಿದೆ. ಆದರೆ, ಸಂಜು ಸ್ಯಾಮ್ಸನ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ಅನುಭವನ್ನು ಹೊಂದಿದ್ದಾರೆ. ಹಾಗಾಗಿ ಹೋಲಿಕೆ ಮಾಡುವುದು ನ್ಯಾಯ ಸಮ್ಮತವಲ್ಲ ಎಂದಿದ್ದಾರೆ ಮೊಹಮ್ಮದ್‌ ಕೈಫ್‌.

“ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ನಡುವಿನ ದೊಡ್ಡ ವ್ಯತ್ಯಾಸವೆಂದರೆ, ಅಭಿಷೇಕ್ ಶರ್ಮಾ ಇನ್ನೂ ಐಸಿಸಿ ಟೂರ್ನಿಗಳಲ್ಲಿ ಹೊಸ ಆಟಗಾರ. ಐಸಿಸಿ ಟೂರ್ನಿಗಳನ್ನು ಬಿಟ್ಟರೆ ಅವರ ದಾಖಲೆ ಅತ್ಯುತ್ತಮವಾಗಿದೆ. ಆದರೆ ಐಸಿಸಿ ಟೂರ್ನಿ ಅಥವಾ ವಿಶ್ವಕಪ್‌ನಲ್ಲಿ ಆಡುವುದು ಸಂಪೂರ್ಣವಾಗಿ ವಿಭಿನ್ನ ಅನುಭವ,” ಎಂದು ಅವರು ಹೇಳಿದರು.

ಮಿಶ್ರ ಮಣ್ಣಿನ ಪಿಚ್‌ನಲ್ಲಿ ಭಾರತ vs ಕಿವೀಸ್‌ ಟಿ20 ವಿಶ್ವಕಪ್‌ ಫೈನಲ್‌ ಫೈಟ್‌

“ಸಂಜು ಸ್ಯಾಮ್ಸನ್ ಟಿ20 ಕ್ರಿಕೆಟ್‌ನಲ್ಲಿ ಈಗಾಗಲೇ 8000 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ರನ್ ಗಳಿಸುವ ಸಾಮರ್ಥ್ಯವಾಗಲಿ ಅಥವಾ ಸಿಕ್ಸರ್ ಹೊಡೆಯುವ ಶಕ್ತಿಯಾಗಲಿ, ಐಪಿಎಲ್‌ನಲ್ಲಿ ಅವರ ಹೆಸರು ಟಾಪ್ 10ರಲ್ಲಿ ಬರುತ್ತದೆ. ಅವರು ಈಗಾಗಲೇ ಸ್ಥಿರವಾದ ಆಟಗಾರರಾಗಿದ್ದಾರೆ. ಅಭಿಷೇಕ್ ಶರ್ಮಾ ಇನ್ನೂ ಯುವ ಆಟಗಾರರಾಗಿದ್ದು ತಮ್ಮ ಆಟದ ಮೇಲೆ ಇನ್ನಷ್ಟು ಕೆಲಸ ಮಾಡಬೇಕಿದೆ. ಅವರು ಇನ್ನೂ ಸಂಪೂರ್ಣವಾಗಿ ರೂಪುಗೊಂಡ ಆಟಗಾರನಲ್ಲ. ಅವರನ್ನು ಸಂಜು ಅವರೊಂದಿಗೆ ಹೋಲಿಸಬೇಡಿ. ಸಂಜು ಈಗಾಗಲೇ ಪೂರ್ಣ ಪ್ರಮಾಣದ ಆಟಗಾರರಾಗಿದ್ದಾರೆ. ಅವರು ಭಾರತರ ಪರವಾಗಿ 11 ವರ್ಷಗಳ ಹಿಂದೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ,” ಎಂದು ಅವರು ವಿವರಿಸಿದರು.