ನವದೆಹಲಿ: ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ (IND vs NZ) ನಡುವಣ ಮೂರನೇ ಹಾಗೂ ಏಕದಿನ ಸರಣಿಯ ಕೊನೆಯ ಪಂದ್ಯದ ನಿಮಿತ್ತ ಮಾಜಿ ಕ್ರಿಕೆಟಿಗ ಮೊಹಮ್ಮದ್ ಕೈಫ್ (Mohammad Kaif) ಆತಿಥೇಯ ತಂಡದ ಪ್ಲೇಯಿಂಗ್ XI ಆಯ್ಕೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಅದರಲ್ಲಿಯೂ ವಿಶೇಷವಾಗಿ ಆಲ್‌ರೌಂಡರ್ ನಿತೀಶ್ ಕುಮಾರ್ ರೆಡ್ಡಿ (Nitishkumar Reddy) ಅವರ ಪಾತ್ರವನ್ನು ಕೈಫ್ ಪ್ರಶ್ನೆ ಮಾಡಿದ್ದಾರೆ. ಅಂದ ಹಾಗೆ ಕೊನೆಯ ಏಕದಿನ ಪಂದ್ಯ ಜನವರಿ 18 ರಂದು ಇಂದೋರ್‌ನ ಹೋಳ್ಕರ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ರಾಜ್‌ಕೋಟ್‌ನಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಪರ ನಿತೀಶ್‌ಕುಮಾರ್ ರೆಡ್ಡಿ ಆಡಿದ್ದರು, ಆದರೆ ಅವರು ಪ್ರಭಾವಿತ ಪ್ರದರ್ಶನವನ್ನು ತೋರುವಲ್ಲಿ ವಿಫಲರಾದರು. ಏಳನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ್ದ ಅವರು, ಬೌಲಿಂಗ್‌ನಲ್ಲಿ ಹಾಕಿದ್ದ ಎರಡು ಓವರ್‌ಗಳಲ್ಲಿ ವಿಕೆಟ್ ಪಡೆಯದೆ 13 ರನ್‌ಗಳನ್ನು ನೀಡಿದ್ದರು. ಈ ಪಂದ್ಯದಲ್ಲಿ ಮುಂಚೂಣಿ ಸ್ಪಿನ್ನರ್‌ಗಳು ಕಡಿಮೆ ಇದ್ದರು, ಆದರೆ ನಿತೀಶ್ ರೆಡ್ಡಿ ಅವರ ಆಯ್ಕೆಯ ತಂಡದ ಸಂಯೋಜನೆಯನ್ನು ಕೆಡಿಸಿದೆ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಐಪಿಎಲ್ ಹರಾಜಿನಲ್ಲಿ ಅನ್‌ಸೋಲ್ಡ್, ಬಿಬಿಎಲ್‌ನಲ್ಲಿ 41 ಎಸೆತಗಳಲ್ಲಿ ಶತಕ ಚಚ್ಚಿದ ಸ್ಟೀವನ್ ಸ್ಮಿತ್!
"ಭಾರತ ತಂಡದ ಆಯ್ಕೆಯ ಬಗ್ಗೆ ನನಗೆ ಏನೂ ಅರ್ಥವಾಗುತ್ತಿಲ್ಲ. ನಿಧಾನಗತಿಯಿಂದ ಕೂಡಿದ್ದ ರಾಜ್‌ಕೋಟ್ ಪಿಚ್‌ನಲ್ಲಿ ನೀವು ನಾಲ್ವರು ವೇಗಿಗಳನ್ನು ಆಡಿಸಿದ್ದೀರಿ. ನ್ಯೂಜಿಲೆಂಡ್ ತಂಡ ಮೂವರು ಸ್ಪಿನ್ನರ್‌ಗಳನ್ನು ಆಡಿಸಿತ್ತು. ಹೊರಗಡೆಯಿಂದ ಬರುವ ತಂಡಗಳು ಇಲ್ಲಿನ ಕಂಡೀಷನ್ಸ್ ಅನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಿವೆ. ಅವರ ತಂಡದಲ್ಲಿ ಸ್ಪಿನ್ ಮೊದಲ ಆಧ್ಯತೆಯಲ್ಲ, ಆದರೆ, ಅವರು ಇಲ್ಲಿನ ಕಂಡೀಷನ್ಸ್ ಅನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದಾರೆ. ಭಾರತ ತಂಡದ ಪ್ಲೇಯಿಂಗ್ XI ನನಗೆ ಅರ್ಥವಾಗಿಲ್ಲ. ನಿತೀಶ್‌ಕುಮಾರ್ ರೆಡ್ಡಿ ಅವರ ಪಾತ್ರ ಕೂಡ ನನಗೆ ಅರ್ಥವಾಗಿಲ್ಲ. ಕೋಚ್ ಹಾಗೂ ಟೀಮ್ ಮ್ಯಾನೇಜ್‌ಮೆಂಟ್, ರೆಡ್ಡಿ ಪಾತ್ರದ ಬಗ್ಗೆ ಹೇಳಿ," ಎಂದು ಮೊಹಮ್ಮದ್ ಕೈಫ್ ಪ್ರಶ್ನೆ ಮಾಡಿದ್ದಾರೆ.
IND vs NZ: ಅರ್ಷದೀಪ್ ಸಿಂಗ್‌ಗೆ ಸ್ಥಾನ ನೀಡದ ಗೌತಮ್ ಗಂಭೀರ್ ವಿರುದ್ಧ ಆರ್ ಅಶ್ವಿನ್ ಕಿಡಿ
ನಿತೀಶ್ ರೆಡ್ಡಿ ಅವರನ್ನು ನಿಜವಾದ ಆಲ್‌ರೌಂಡರ್ ಆಗಿ ನೋಡುವ ಬದಲು ಬ್ಯಾಟರ್ ಆಗಿ ನೋಡಬೇಕು ಎಂದು ಕೈಫ್ ಒತ್ತಿ ಹೇಳಿದರು. ಭಾರತೀಯ ತಂಡದ ಆಡಳಿತ ಮಂಡಳಿಯು ಈ ವ್ಯತ್ಯಾಸವನ್ನು ಬೇಗ ಅಥವಾ ತಡವಾಗಿ ಗುರುತಿಸುವ ಅಗತ್ಯವಿದೆ ಎಂದು ಅವರು ಸಲಹೆ ನೀಡಿದ್ದಾರೆ. ಕೈಫ್ ಪ್ರಕಾರ, ರೆಡ್ಡಿ ಅವರನ್ನು ಆರನೇ ಬೌಲಿಂಗ್ ಆಯ್ಕೆಯಾಗಿ ಪರಿಗಣಿಸಲಾಗುವುದಿಲ್ಲ, ಏಕೆಂದರೆ ಅವರು ಪಂದ್ಯಗಳಲ್ಲಿ ವಿರಳವಾಗಿ ಅರ್ಥಪೂರ್ಣ ಓವರ್‌ಗಳನ್ನು ಬೌಲ್ ಮಾಡುತ್ತಾರೆ.
ತಂಡದ ನಾಯಕ ಕೂಡ ನಿತೀಶ್ ರೆಡ್ಡಿ ಅವರ ಬೌಲಿಂಗ್ ಅನ್ನು ಅವಲಂಬಿಸಲು ಹಿಂಜರಿಯುತ್ತಿರುವುದು ಕಂಡುಬಂದಿದೆ ಎಂದು ಕೈಫ್ ಗಮನಸೆಳೆದರು, ಇದು ಅವರ ಚೆಂಡಿನ ಸಾಮರ್ಥ್ಯದ ಮೇಲಿನ ನಂಬಿಕೆಯ ಕೊರತೆಯನ್ನು ಪ್ರತಿಬಿಂಬಿಸುತ್ತದೆ. ಸೀಮಿತ ಓವರ್‌ಗಳ ಸ್ವರೂಪಗಳಲ್ಲಿ ಆಲ್‌ರೌಂಡರ್ ಆಗಿ ಯಶಸ್ವಿಯಾಗಲು ಅಗತ್ಯವಿರುವ ಬೌಲಿಂಗ್ ಗುಣಮಟ್ಟ ರೆಡ್ಡಿ ಅವರಲ್ಲಿ ಪ್ರಸ್ತುತ ಇಲ್ಲ ಎಂದು ಕೈಫ್ ಹೇಳಿದರು.