ನವದೆಹಲಿ: ನ್ಯೂಜಿಲೆಂಡ್ ವಿರುದ್ಧದ ಐದು ಪಂದ್ಯಗಳ ಟಿ20ಐ ಸರಣಿಗೂ (IND vs NZ) ಮುನ್ನ ಭಾರತ ತಂಡಕ್ಕೆ ಭಾರಿ ಹಿನ್ನಡೆಯಾಗಿದೆ. ಯುವ ಬ್ಯಾಟ್ಸ್‌ಮನ್ ತಿಲಕ್ ವರ್ಮಾ (Tilak Verma) ಅವರು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯ ಕಾರಣದಿಂದಾಗಿ ಟಿ20ಐ ಸರಣಿಯ ಆರಂಭಿಕ ಮೂರು ಪಂದ್ಯಗಳಿಂದ ಹೊರನಡೆದಿದ್ದಾರೆ. ಈ ಬಗ್ಗೆ ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಟೀಮ್ ಇಂಡಿಯಾ ಬ್ಯಾಟರ್ ತಿಲಕ್ ವರ್ಮಾ ವಿಜಯ್ ಹಝಾರೆ ಟ್ರೋಫಿ (VHT 2025-26) ಟೂರ್ನಿಯಲ್ಲಿ ಹೈದರಾಬಾದ್ ತಂಡವನ್ನು ಮುನ್ನಡೆಸಿದ್ದರು. ಈ ಟೂರ್ನಿಯ ವೇಳೆ ಅವರು ಹೊಟ್ಟೆಯಲ್ಲಿ ನೋವು ಇರುವುದನ್ನು ತಿಳಿಸಿದ್ದರು. ಹಾಗಾಗಿ ಅವರನ್ನು ರಾಜ್‌ಕೋಟ್‌ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಹಾಗೂ ಬುಧವಾರ ವೃಷಣ ತಿರುಚುವಿಕೆಗೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.
"ಜನವರಿ 7 ರಂದು ರಾಜ್‌ಕೋಟ್‌ನಲ್ಲಿ ತಿಲಕ್ ವರ್ಮಾ ಅವರು ಹೊಟ್ಟೆಗೆ ಸಂಬಂಧಿಸಿದ ಶಸ್ತ್ರ ಚಿಕಿತ್ಸೆಗೆ ಒಳಗಾಗಿದರು ಹಾಗೂ ಗುರವಾರ ಬೆಳಿಗ್ಗೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಶುಕ್ರವಾರ ಬೆಳಿಗ್ಗೆ ಅವರು ರಾಜ್‌ಕೋಟ್‌ನಿಂದ ಹೈದರಾಬಾದ್‌ಗೆ ವಿಮಾನದ ಮೂಲಕ ಮರಳಲಿದ್ದಾರೆ. ಪ್ರಸ್ತುತ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ," ಎಂದು ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.
ವಿಜಯ ಹಝಾರೆ ಟ್ರೋಫಿ ಟೂರ್ನಿಯಲ್ಲಿ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ಸರ್ಫರಾಝ್ ಖಾನ್!
"ಈ ಹಿನ್ನೆಲೆಯಲ್ಲಿ ಅವರು ನ್ಯೂಜಿಲೆಂಡ್ ವಿರುದ್ಧ ಟಿ20ಐ ಸರಣಿಯ ಆರಂಭಿಕ ಮೂರು ಪಂದ್ಯಗಳಿಂದ ಹೊರ ಬಿದ್ದಿದ್ದಾರೆ. ತರಬೇತಿಗೆ ಮರಳುವಿಕೆ ಮತ್ತು ಕೌಶಲ ಹಂತಗಳಲ್ಲಿನ ಅವರ ಪ್ರಗತಿಯ ಆಧಾರದ ಮೇಲೆ ಇನ್ನುಳಿದ ಎರಡು ಪಂದ್ಯಗಳಿಗೆ ಅವರ ಲಭ್ಯತೆಯನ್ನು ನಿರ್ಣಯಿಸಲಾಗುತ್ತದೆ," ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತನ್ನ ಹೇಳಿಕೆಯಲ್ಲಿ ಹೇಳಿದ್ದಾರೆ.
ಶಸ್ತ್ರಚಿಕಿತ್ಸೆ ಸುಮಾರು 30 ನಿಮಿಷಗಳ ಕಾಲ ನಡೆಯಿತು ಮತ್ತು ಇದು ನಿಯಮಿತ ಪ್ರಕ್ರಿಯೆಯಾಗಿತ್ತು ಎಂದು ಹೈದರಾಬಾದ್ ಕ್ರಿಕೆಟ್ ತಂಡದ ಆಡಳಿತ ಮಂಡಳಿ ತೆಲಂಗಾಣ ಟುಡೇಗೆ ತಿಳಿಸಿದೆ, ಆದರೂ ಮುನ್ನೆಚ್ಚರಿಕೆಯಾಗಿ ವೈದ್ಯರು ಎರಡು ವಾರಗಳ ವಿಶ್ರಾಂತಿಗೆ ಸಲಹೆ ನೀಡಿದರು. "ತಿಲಕ್ ತಂಡದೊಂದಿಗೆ ಇದ್ದಾರೆ ಮತ್ತು ನಮ್ಮೊಂದಿಗೆ ಮನೆಗೆ ಹಿಂತಿರುಗಲಿದ್ದಾರೆ" ಎಂದು ಟೀಮ್ ಮ್ಯಾನೇಜ್‌ಮೆಂಟ್ ತಿಳಿಸಿದೆ.
ಗೋವಾ ವಿರುದ್ಧ ಶತಕ ಬಾರಿಸಿ ಲಿಸ್ಟ್ ಎ ಕ್ರಿಕೆಟ್‌ನಲ್ಲಿ ದೊಡ್ಡ ದಾಖಲೆ ಬರೆದ ಋತುರಾಜ್ ಗಾಯಕ್ವಾಡ್!
ರಾಜ್‌ಕೋಟ್‌ನಲ್ಲಿ ನಡೆದ ವಿಜಯ ಹಝಾರೆ ಟ್ರೋಫಿ ಏಕದಿನ ಪಂದ್ಯಗಳಲ್ಲಿ ಹೈದರಾಬಾದ್ ತಂಡದ ನಾಯಕರಾಗಿದ್ದ ತಿಲಕ್, ಗುರುವಾರ ಜಮ್ಮು ಮತ್ತು ಕಾಶ್ಮೀರ ವಿರುದ್ಧದ ಆಡುವ ಹನ್ನೊಂದರ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಎಡಗೈ ವೇಗಿ ಚಾಮಾ ಮಿಲಿಂದ್ ಪ್ರಸ್ತುತ ತಂಡವನ್ನು ಮುನ್ನಡೆಸಿದ್ದರು.
ತಿಲಕ್ ವರ್ಮಾ ಇನ್‌ಸ್ಟಾಗ್ರಾಮ್ ಸ್ಟೋರಿ
ತಿಲಕ್ ವರ್ಮಾ ಅವರು ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ "ನಿಮ್ಮೆಲ್ಲರ ಅಗಾಧ ಪ್ರೀತಿಗೆ ಧನ್ಯವಾದಗಳು, ಈಗಾಗಲೇ ಚೇತರಿಕೆಯ ಹಾದಿಯಲ್ಲಿದ್ದೇನೆ ಮತ್ತು ನೀವು ತಿಳಿದಿರುವುದಕ್ಕಿಂತ ಬೇಗ ನಾನು ಮೈದಾನಕ್ಕೆ ಮರಳುತ್ತೇನೆ," ಎಂದು ತಮ್ಮ ಫೋಟೋವನ್ನು ಹಂಚಿಕೊಂಡು ಈ ರೀತಿ ಬರೆದುಕೊಂಡಿದ್ದಾರೆ.