ಕೊಲಂಬೊ: ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ 2026ರ ಐಸಿಸಿ ಟಿ20 ವಿಶ್ವಕಪ್ (T20 World Cup 2026) ಟೂರ್ನಿಯ ಪಂದ್ಯದಲ್ಲಿ (IND vs PAK) ಭಾರತ ತಂಡ, ಏಕಪಕ್ಷೀಯವಾಗಿ 61 ರನ್‌ಗಳಿಂದ ಭರ್ಜರಿ ಗೆಲುವು ಪಡೆಯಿತು. ಆ ಮೂಲಕ ಈ ಟೂರ್ನಿಯಲ್ಲಿ ಟೀಮ್ ಇಂಡಿಯಾ ಸೂಪರ್-8ಕ್ಕೆ ಲಗ್ಗೆ ಇಟ್ಟಿತು. ಈ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಸಲ್ಮಾನ್ ಅಲಿ ಆಘಾ ನಾಯಕತ್ವದ ಪಾಕಿಸ್ತಾನ ತಂಡ ಸಾಕಷ್ಟು ಟೀಕೆಗಳಿಗೆ ಗುರಿಯಾಯಿತು. ಅಂದಹಾಗೆ ಈ ಪಂದ್ಯದಲ್ಲಿ ನಡೆದಿದ್ದ ಒಂದು ಅನಿರೀಕ್ಷಿತ ಘಟನೆ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಎಂದೂ ಬೌಲ್ ಮಾಡದ ರಿಂಕು ಸಿಂಗ್‌ಗೆ ಬೌಲಿಂಗ್ ಕೊಡುವ ಮೂಲಕ ಪಾಕ್‌ಗೆ ಭಾರತ ಅವಮಾನ ಮಾಡಿದೆ ಎಂಬ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ವಾದ-ವಿವಾದಗಳ ನಡೆಯುತ್ತಿವೆ. ಇದರ ನಡುವೆ ಇಂಗ್ಲೆಂಡ್ ಮಾಜಿ ಕ್ರಿಕೆಟಿಗರಾದ ಮೊಯೀನ್ ಅಲಿ (Moeen Ali) ಹಾಗೂ ರವಿ ಬೋಪಾರ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.
ಭಾನುವಾರ ಇಲ್ಲಿನ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ಈ ಟೂರ್ನಿಯಲ್ಲಿ ಅತ್ಯಂತ ಹೆಚ್ಚು ರೆವಿನ್ಯೂ ತಂದುಕೊಡಬಲ್ಲ ಭಾರತ ಹಾಗೂ ಪಾಕಿಸ್ತಾನ ಪಂದ್ಯ ಅಷ್ಟೊಂದು ಕುತೂಹಲದಿಂದ ಕೂಡಿರಲಿಲ್ಲ. ಪಾಕಿಸ್ತಾನ ತಂಡದ ಬ್ಯಾಟಿಂಗ್ ಸಂಪೂರ್ಣ ನೆಲ ಕಚ್ಚಿತು. ಇಶಾನ್ ಕಿಶನ್ ಸ್ಪೋಟಕ ಬ್ಯಾಟಿಂಗ್ ಮೂಲಕ ಭಾರತ 20 ಓವರ್‌ಗಳಿಗೆ 7 ವಿಕೆಟ್‌ಗಳ ನಷ್ಟಕ್ಕೆ 175 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ಪಾಕಿಸ್ತಾನ, ಬ್ಯಾಟಿಂಗ್ ವೈಫಲ್ಯ ಅನುಭವಿಸಿ ಕೇವಲ 114 ರನ್‌ಗಳಿಗೆ ಆಲ್‌ಔಟ್ ಆಯಿತು. ಈ ಗೆಲುವಿನ ಮೂಲಕ ಭಾರತ ಸೂಪರ್-8ಕ್ಕೆ ಲಗ್ಗೆ ಇಟ್ಟಿತು.
ಆ ಪಂದ್ಯದಲ್ಲಿ ಭಾರತ ತಂಡ ಒಟ್ಟು ಏಳು ಬೌಲರ್‌ಗಳನ್ನು ಬಳಸಿಕೊಂಡಿತು. ಪಾರ್ಟ್‌ಟೈಮ್ ಬೌಲರ್‌ಗಳಾದ ತಿಲಕ್ ವರ್ಮಾ ಮತ್ತು ರಿಂಕು ಸಿಂಗ್ ಇಬ್ಬರೂ ಸೇರಿ ಮೂರು ಓವರ್‌ಗಳನ್ನು ಹಾಕಿದ್ದರು. 12ನೇ ಓವರ್‌ನಲ್ಲಿ ಪಾಕಿಸ್ತಾನ 6 ವಿಕೆಟ್‌ಗಳಿಗೆ 78 ರನ್ ಗಳಿಸಿದ್ದಾಗ ತಿಲಕ್‌ಗೆ ಚೆಂಡು ನೀಡಲಾಗಿದ್ದು, ಅವರು ತಮ್ಮ ಮೊದಲ ಎಸೆತದಲ್ಲಿಯೇ ಶದಾಬ್ ಖಾನ್ (14) ಅವರನ್ನು ಔಟ್ ಮಾಡಿದರು.
T20 World Cup 2026: ಟಿ20 ಕ್ರಿಕೆಟ್‌ನಲ್ಲಿ 700 ವಿಕೆಟ್ ಕಿತ್ತು ಇತಿಹಾಸ ಬರೆದ ರಶೀದ್ ಖಾನ್!
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇಲ್ಲಿಯವರೆಗೂ ಬೌಲ್ ಮಾಡದ ರಿಂಕು ಸಿಂಗ್‌ಗೆ 17ನೇ ಓವರ್ ನೀಡಲಾಗಿದ್ದು, ಪಾಕ್‌ನ ಕೆಳ ಕ್ರಮಾಕಕ್ಕೆ ಒಂಬತ್ತು ರನ್ ನೀಡಿದರು. ‘ಬಿಯರ್ಡ್ ಬಿಫೋರ್ ವಿಕೆಟ್’ ಪಾಡ್‌ಕಾಸ್ಟ್ ಕಾರ್ಯಕ್ರಮದಲ್ಲಿ ನಿರೂಪಕರು, ಇದು ಪಾಕಿಸ್ತಾನವನ್ನು ‘ಅಪಮಾನಿಸುವ’ ಭಾರತದ ವಿಧಾನವೇ ಎಂಬ ಪ್ರಶ್ನೆಯನ್ನು ಮೊಯೀನ್ ಅಲಿ ಮತ್ತು ರವಿ ಬೋಪಾರಾ ಅವರಿಗೆ ಕೇಳಿದಾಗ, ಇಬ್ಬರೂ ಮಾಜಿ ಕ್ರಿಕೆಟಿಗರು ಪ್ರತಿಕ್ರಿಯಿಸಿದರು.
"ನನಗೆ ಅದು ಸ್ವಲ್ಪ ಮಟ್ಟಿಗೆ ಹಾಸ್ಯ ಮಾಡುವಂತೆಯೇ ಕಂಡಿತು,” ಎಂದು ಹೇಳಿದ ಮೊಯಿನ್ ಅಲಿ, “ಒಂದು ರೀತಿಯಲ್ಲಿ ನೋಡಿದರೆ, ದೊಡ್ಡ ವಿರಾಮದ ಬಳಿಕ ಮರಳಿದ್ದ ಬುಮ್ರಾಗೆ ಮತ್ತೆ ಬೌಲಿಂಗ್ ನೀಡುವ ಅಗತ್ಯವಿರಲಿಲ್ಲ. ಆ ಪಿಚ್‌ನಲ್ಲಿ ನಿಮ್ಮ ಪ್ರಮುಖ ವೇಗದ ಬೌಲರ್‌ಗಳನ್ನು ಬಳಸುವ ಅವಶ್ಯಕತೆಯೂ ಇರಲಿಲ್ಲ; ಅವರು ಸರಳವಾಗಿ ನೇರವಾಗಿ ಬೌಲ್ ಮಾಡಿದರು,” ಎಂದು ಅವರು ಹೇಳಿದರು.
“ಹೌದು, ಅವರು ಪಂದ್ಯದಲ್ಲಿ ಬಹಳ ಮುನ್ನಡೆ ಹೊಂದಿದ್ದರಿಂದ ರಿಂಕು ಸಿಂಗ್‌ಗೆ ಬೌಲ್ ನೀಡಿರಬಹುದು," ಎಂದು ರವಿ ಬೋಪಾರಾ ಸಹ ಒಪ್ಪಿದರು.
AUS vs SL: ಪಥುಮ್ ನಿಸಾಂಕ ಶತಕ, ಆಸ್ಟ್ರೇಲಿಯಾಗೆ ಶಾಕ್ ನೀಡಿ ಸೂಪರ್-8ಕ್ಕೆ ಪ್ರವೇಶಿಸಿದ ಶ್ರೀಲಂಕಾ!
ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತ ತಂಡ, ಏಕಪಕ್ಷೀಯ ಪಂದ್ಯಗಳಲ್ಲಿ ಪಾರ್ಟ್ ಟೈಮ್ ಬೌಲರ್‌ಗಳಿಗೆ ಚೆಂಡು ನೀಡಿರುವುದು ಇದೇ ಮೊದಲ ಬಾರಿ ಅಲ್ಲ. ಭವಿಷ್ಯದಲ್ಲಿ ಅಗತ್ಯಬಿದ್ದರೆ ಇಂತಹ ಆಟಗಾರರು ಸಹ ಸಹಾಯಕರಾಗಿ ಬೌಲ್ ಮಾಡಲು ಸಿದ್ಧರಾಗಿರಬೇಕೆಂಬ ಉದ್ದೇಶದಿಂದ ಅವರು ರಿಂಕುಗೆ ಬೌಲ್ ನೀಡಿರಬಹುದು.
"ಇಂದು ಎರಡೂ ತಂಡಗಳ ನಡುವಿನ ಅಂತರ ಸ್ಪಷ್ಟವಾಗಿ ಕಾಣಿಸಿಕೊಂಡಿತು. ಇದು ಪಾಕಿಸ್ತಾನಕ್ಕೆ ಕಠಿಣ ದಿನವಾಗಿತ್ತು,” ಎಂದು ರವಿ ಬೋಪಾರಾ ಪಂದ್ಯ ಕುರಿತು ಹೇಳಿದರು.
“ನಾನು ಸಹ ಒಪ್ಪುತ್ತೇನೆ. ಇತ್ತೀಚಿನ ಅವಧಿಯಲ್ಲಿ ಈ ಪಂದ್ಯದಲ್ಲಿನ ಹೋರಾಟ ಕಠಿಣವಾಗಿರಬಹುದು ಎಂದು ನಾನು ಭಾವಿಸಿದ್ದೆ. ಪಾಕಿಸ್ತಾನಕ್ಕೆ ಉತ್ತಮ ಸ್ಪಿನ್ನರ್‌ಗಳು, ಮಿಸ್ಟರಿ ಸ್ಪಿನ್ನರ್‌ಗಳು ಇದ್ದಾರೆ ಮತ್ತು ಶ್ರೀಲಂಕಾದಲ್ಲಿ ಆಡುತ್ತಿರುವುದರಿಂದ ಅವರಿಗೆ ಹೆಚ್ಚು ಅನುಕೂಲವಾಗಬಹುದು ಎಂದುಕೊಂಡಿದ್ದೆ. ಆದರೆ ರವಿ ಹೇಳಿದಂತೆ, ಭಾರತ ಭಾರಿ ಮುನ್ನಡೆಯನ್ನು ಪಡೆದಿತ್ತು. ಅಂದ ಹಾಗೆ ಎರಡೂ ತಂಡಗಳನ್ನು ಹೋಲಿಕೆಗೆ ತರುವುದೇ ಸಾಧ್ಯವಿಲ್ಲ,” ಎಂದು ಮೊಯೀನ್ ಅಲಿ ಅಭಿಪ್ರಾಯಪಟ್ಟರು.