ಕರ್ನಾಟಕ ಬಜೆಟ್​ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹೋಳಿ ಹಬ್ಬ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಪಾಕಿಸ್ತಾನವನ್ನು ಭಾರತ ಬಿ, ಸಿ ತಂಡಗಳು ಸೋಲಿಸಲಿದೆ ಎಂದಿದ್ದ ಸುನೀಲ್‌ ಗವಾಸ್ಕರ್‌ಗೆ ಜೇಸನ್‌ ಗಿಲೆಸ್ಪಿ ತಿರುಗೇಟು!

Jason Gillespie slams Sunil Gavaskar: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯಲ್ಲಿ ವೈಫಲ್ಯ ಅನುಭವಿಸಿದ್ದ ಪಾಕಿಸ್ತಾನ ತಂಡವನ್ನು ಟೀಕಿಸಿದ್ದ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ಗೆ ಪಾಕ್‌ ಮಾಜಿ ಕೋಚ್‌ ಜೇಸನ್‌ ಗಿಲೆಸ್ಪಿ ತಿರುಗೇಟು ನೀಡಿದ್ದಾರೆ. ಪಾಕಿಸ್ತಾನ ತಂಡವನ್ನು ಭಾರತ ಬಿ ಹಾಗೂ ಸಿ ತಂಡಗಳು ಸೋಲಿಸಲಿವೆ ಎಂದು ಗವಾಸ್ಕರ್‌ ಈ ಹಿಂದೆ ಹೇಳಿಕೆ ನೀಡಿದ್ದರು.

ʻಇದು ನಾನ್‌ಸೆನ್ಸ್ ಹೇಳಿಕೆʼ-ಗವಾಸ್ಕರ್‌ಗೆ ಜೇಸನ್‌ ಗಿಲೆಸ್ಪಿ ತಿರುಗೇಟು!

ಸುನೀಲ್‌ ಗವಾಸ್ಕರ್‌ ಹೇಳಿಕೆಯನ್ನು ಖಂಡಿಸಿದ ಜೇಸನ್‌ ಗಿಲೆಸ್ಪಿ.

Profile Ramesh Kote Mar 7, 2025 11:05 PM

ನವದೆಹಲಿ: ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಲೀಗ್‌ ಹಂತದಲ್ಲಿಯೇ ಹೊರ ಬಿದ್ದಿದ್ದ ಪಾಕಿಸ್ತಾನ ತಂಡವನ್ನು ಟೀಕಿಸಿದ್ದ ಭಾರತೀಯ ಬ್ಯಾಟಿಂಗ್‌ ದಿಗ್ಗಜ ಸುನೀಲ್‌ ಗವಾಸ್ಕರ್‌ ಅವರನ್ನು ಪಾಕ್‌ ಮಾಜಿ ಹೆಡ್‌ ಕೋಚ್‌ ಹಾಗೂ ಆಸ್ಟ್ರೇಲಿಯಾ ಮಾಜಿ ವೇಗಿ ಜೇಸನ್‌ ಗಿಲೆಸ್ಪಿ ತಿರುಗೇಟು ನೀಡಿದ್ದಾರೆ. ಫೆಬ್ರವರಿ 23 ರಂದು ದುಬೈ ಇಂಟರ್‌ನ್ಯಾಷನಲ್‌ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದಿದ್ದ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ದ ಭಾರತ ತಂಡ 6 ವಿಕೆಟ್‌ಗಳಿಂದ ಗೆಲುವು ಪಡೆದಿತ್ತು. ಈ ಪಂದ್ಯದ ಬಳಿಕ ಇಂಡಿಯಾ ಟುಡೇ ಜೊತೆ ಮಾತನಾಡಿದ್ದ ಸುನೀಲ್‌ ಗವಾಸ್ಕರ್‌, ಪಾಕಿಸ್ತಾನ ತಂಡವನ್ನು ಭಾರತ ಎ ಅಥವಾ ಭಾರತ ಸಿ ತಂಡಗಳು ಸೋಲಿಸುತ್ತವೆ ಎಂದು ವ್ಯಂಗ್ಯವಾಡಿದ್ದರು.

ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ತಂಡಗಳು ತನ್ನದೇ ಆದ ಮಹತ್ವವನ್ನು ಹೊಂದಿದೆ. ಕ್ರಿಕೆಟ್‌ ಇತಿಹಾಸದಿಂದಲೂ ಕೂಡ ಭಾರತ ಹಾಗೂ ಪಾಕ್‌ ಪಂದ್ಯಗಳು ಹೈವೋಲ್ಟೇಜ್‌ನಿಂದ ಕೂಡಿರುತ್ತವೆ. ಆದರೆ, ಇತ್ತೀಚೆಗೆ ಭಾರತ ತಂಡದ ವಿರುದ್ಧ ಪಾಕಿಸ್ತಾನ ತಂಡ ಅಷ್ಟೊಂದು ಉತ್ತಮ ಪೈಪೋಟಿ ನೀಡುತ್ತಿಲ್ಲ. ಈ ಬಗ್ಗೆ ಮಾತನಾಡಿದ್ದ ಸುನೀಲ್‌ ಗವಾಸ್ಕರ್‌, ಭಾರತದಲ್ಲಿ ಅತ್ಯುತ್ತಮ ಪ್ರತಿಭೆಗಳು ಮೂಡಿ ಬರುತ್ತಿದ್ದಾರೆ. ಆದರೆ ಪಾಕಿಸ್ತಾನದಲ್ಲಿ ಅಷ್ಟೊಂದು ಪ್ರತಿಭೆಗಳು ಬರುತ್ತಿಲ್ಲ. ಈ ಎರಡೂ ದೇಶಗಳಲ್ಲಿ ದೇಶಿ ಕ್ರಿಕೆಟ್‌ ಗುಣಮಟ್ಟದಲ್ಲಿ ವ್ಯತ್ಯಾಸವಿದೆ ಎಂದು ಹೇಳಿದ್ದರು.

IND vs PAK: ನನ್ನ ಬೌಲಿಂಗ್‌ನಲ್ಲಿ ಸಿಕ್ಸರ್‌ ಬಾರಿಸಿ ಎಂದು ವಿರಾಟ್‌ ಕೊಹ್ಲಿಯನ್ನು ರೇಗಿಸಿದ್ದೆ: ಅಬ್ರಾರ್‌ ಅಹ್ಮದ್‌!

ಸುನೀಲ್‌ ಗವಾಸ್ಕರ್‌ಗೆ ತಿರುಗೇಟು ನೀಡಿದ ಜೇಸನ್‌ ಗಿಲೆಸ್ಪಿ

ಪಾಕಿಸ್ತಾನ ತಂಡದ ಬಗೆಗಿನ ಸುನೀಲ್‌ ಗವಾಸ್ಕರ್‌ ಅವರ ಅಭಿಪ್ರಾಯವನ್ನು ಪಾಕ್‌ ಮಾಜಿ ಹೆಡ್‌ ಕೋಚ್‌ ಜೇಸನ್‌ ಗಿಲೆಸ್ಪಿ ತಳ್ಳಿ ಹಾಕಿದ್ದಾರೆ. ಅವರ ಈ ಹೇಳಿಕೆ ಅಸಂಬದ್ದವಾಗಿದೆ ಎಂದು ಹೇಳಿದ್ದಾರೆ. ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಇಲ್ಲಿನ ವ್ಯವಸ್ಥೆಯನ್ನು ಸರಿಪಡಿಸಿದರೆ, ಪಾಕಿಸ್ತಾನ ತಂಡದ ಪ್ರತಿಯೊಬ್ಬ ಆಟಗಾರರು ಕೂಡ ಸಕ್ಸಸ್‌ ಆಗುತ್ತಾರೆ. ಈ ರೀತಿಯ ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ತಿಳಿಸಿದ್ದಾರೆ.

"ನಾನು ಈ ವಾಕ್ಚಾತುರ್ಯವನ್ನು ಒಪ್ಪುವುದಿಲ್ಲ. ಭಾರತದ ಬಿ ತಂಡ ಅಥವಾ ಭಾರತದ ಸಿ ತಂಡಗಳು, ಪಾಕಿಸ್ತಾನದ ಅಗ್ರ ತಂಡವನ್ನು ಸೋಲಿಸಲಿದೆ ಎಂಬ ಸುನಿಲ್ ಗವಾಸ್ಕರ್ ಅವರ ಕೆಲವು ಕಾಮೆಂಟ್‌ಗಳನ್ನು ನಾನು ನೋಡಿದ್ದೇನೆ. ಇದು ಅಸಂಬದ್ಧವಾದ ಹೇಳಿಕೆ. ಸಂಪೂರ್ಣ ಅಸಂಬದ್ಧ. ಪಾಕಿಸ್ತಾನ ತಂಡ, ಸರಿಯಾದ ಆಟಗಾರರನ್ನು ಆಯ್ಕೆ ಮಾಡಿಕೊಂಡು ಅವರಿಗೆ ಉತ್ತಮ ಪ್ರದರ್ಶನ ತೋರಲು, ಕಲಿಯಲು ಮತ್ತು ಅವರ ಆಟಗಳನ್ನು ಅಭಿವೃದ್ಧಿಪಡಿಸಲು ಸಮಯ ನೀಡಿದರೆ, ಅವರು ಯಾವುದೇ ತಂಡವನ್ನಾದರೂ ಸೋಲಿಸಬಹುದು. ಇದರ ಬಗ್ಗೆ ನನಗೆ ಯಾವುದೇ ಸಂದೇಹವಿಲ್ಲ," ಎಂದು ಜೇಸನ್‌ ಗಿಲೆಸ್ಪಿ ಪಾಕಿಸ್ತಾನ ಪತ್ರಕರ್ತ ಸಾಜ್ ಸಾದಿಕ್ ಹಂಚಿಕೊಂಡ ವೀಡಿಯೊದಲ್ಲಿ ಹೇಳಿದ್ದಾರೆ.



ಪಾಕಿಸ್ತಾನದಲ್ಲಿ ಅದ್ಭುತ ಪ್ರತಿಭೆಗಳಿದ್ದಾರೆ: ಗಿಲೆಸ್ಪಿ

"ಪಾಕಿಸ್ತಾನದ ಆಟಗಾರರು ಪ್ರತಿಭೆಯಲ್ಲಿ ಉನ್ನತ ಸ್ಥಾನದಲ್ಲಿದ್ದಾರೆ. ನೀವು ಸರಿಯಾದ ರೀತಿಯ ಪ್ರತಿಭೆಯನ್ನು ಆರಿಸಿಕೊಳ್ಳಬೇಕು. ನೀವು ಅವರನ್ನು ಬೆಂಬಲಿಸಬೇಕು ಮತ್ತು ಅವರೊಂದಿಗೆ ತಾಳ್ಮೆಯಿಂದಿರಬೇಕು. ಆದರೆ, ಪಾಕಿಸ್ತಾನ ಕ್ರಿಕೆಟ್‌ನಲ್ಲಿ ತುಂಬಾ ಅಸಹನೆ ಇದೆ ಎಂಬುದು ನನ್ನ ಅನಿಸಿಕೆ," ಎಂದು ಆಸ್ಟ್ರೇಲಿಯಾ ಮಾಜಿ ವೇಗಿ ತಿಳಿಸಿದ್ದಾರೆ.

IND vs PAK: ʻಬಾಬರ್‌ ಆಝಮ್‌ ಒಬ್ಬ ಮೋಸಗಾರʼ-ಮಾಜಿ ನಾಯಕನ ವಿರುದ್ಧ ಶೋಯೆಬ್‌ ಅಖ್ತರ್‌ ಕಿಡಿ!

"ಒಂದು ವೇಳೆ ಪಿಸಿಬಿ ಒಂದು ಕ್ರಿಕೆಟ್‌ ಮಂಡಳಿಯಾಗಿ ಸರಿಯಾದ ಫಲಿತಾಂಶಗಳನ್ನು ಪಡೆಯಲು ಬಯಸಿದರೆ, ಸರಿಯಾದ ಜನರನ್ನು, ಸರಿಯಾದ ಆಯ್ಕೆ ಸಮಿತಿಯನ್ನು ಪಡೆಯಬೇಕು ಮತ್ತು ಆಟಗಾರರು ಅಭಿವೃದ್ಧಿ ಹೊಂದಲು ಮತ್ತು ಉತ್ತಮ ಪ್ರದರ್ಶನವನ್ನು ತೋರಲು ಅವರಿಗೆ ಸೂಕ್ತ ಸಮಯವನ್ನು ನೀಡಬೇಕಾಗುತ್ತದೆ. ನೀವು ಹೊಸ ತರಬೇತುದಾರರನ್ನು ನೇಮಿಸಿಕೊಳ್ಳುತ್ತಿದ್ದರೆ, ಅವರಿಗೆ ಅರ್ಥಪೂರ್ಣವಾದದ್ದನ್ನು ಮಾಡಲು ಅವಕಾಶ ನೀಡಿ, ಅವರಿಗೆ ಸಮಯ ನೀಡಿ. ಇಲ್ಲದಿದ್ದರೆ, ಫಲಿತಾಂಶಗಳು ಒಂದೇ ರೀತಿ ಇರುತ್ತವೆ," ಎಂದು ಜೇಸನ್‌ ಗಿಲೆಸ್ಪಿ ಪಿಸಿಬಿಗೆ ಸಲಹೆ ನೀಡಿದ್ದಾರೆ.