ನವದೆಹಲಿ: ಗುವಾಹಟಿ ಟೆಸ್ಟ್ ಮುಗಿದ ಬಳಿಕ ಎಲ್ಲರ ಗಮನ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ (IND vs SA) ನಡುವಣ ಮೂರು ಪಂದ್ಯಗಳ ಏಕದಿನ ಸರಣಿಯ ಮೇಲೆ ತಿರುಗಲಿದೆ. ನವೆಂಬರ್ 30 ರಂದು ಮೊದಲನೇ ಪಂದ್ಯದ ಮೂಲಕ ಏಕದಿನ ಸರಣಿ ಆರಂಭವಾಗಲಿದೆ. ಆಧುನಿಕ ಕ್ರಿಕೆಟ್ ದಿಗ್ಗಜರಾದ ವಿರಾಟ್ ಕೊಹ್ಲಿ (Virat Kohli) ಹಾಗೂ ರೋಹಿತ್ ಶರ್ಮಾ (Rohit Sharma) ಈ ಸರಣಿಯ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ. ಮುಂದಿನ ಕೆಲವೇ ದಿನಗಳಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಭಾರತ ತಂಡವನ್ನು ಪ್ರಕಟಿಸಲಿದೆ. ಹಲವು ಆಟಗಾರರು ಗಾಯಕ್ಕೆ ತುತ್ತಾಗಿದ್ದಾರೆ. ಹಾಗಾಗಿ ತಂಡದಲ್ಲಿ ಹೊಸ ಮುಖಗಳಿಗೆ ಮಣೆ ಹಾಕುವ ಸಾಧ್ಯತೆ ಇದೆ.
ಭಾರತ ತಂಡದ ನಾಯಕ ಶುಭಮನ್ ಗಿಲ್ ಕುತ್ತಿಗೆ ಗಾಯಕ್ಕೆ ತುತ್ತಾಗಿದ್ದು, ಅವರು ಒಡಿಐ ಸರಣಿಗೆ ಲಭ್ಯರಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಕೋಲ್ಕತಾ ಟೆಸ್ಟ್ ಪಂದ್ಯದಲ್ಲಿ ಇವರು ಗಾಯಕ್ಕೆ ತುತ್ತಾಗಿದ್ದರು. ಇನ್ನು ಪಕ್ಕೆಲುಬು ಗಾಯದ ಕಾರಣ ಉಪ ನಾಯಕ ಶ್ರೇಯಸ್ ಅಯ್ಯರ್ ಕೂಡ ಏಕದಿನ ಸರಣಿಗೆ ಲಭ್ಯರಾಗುವುದು ಅನುಮಾನ ಎಂದು ಹೇಳಲಾಗುತ್ತಿದೆ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ವೇಳೆ ಅಯ್ಯರ್ ಈ ಗಾಯಕ್ಕೆ ತುತ್ತಾಗಿದ್ದರು.
ಒಂದು ವೇಳೆ ಶುಭಮನ್ ಗಿಲ್ ಸಂಪೂರ್ಣ ಫಿಟ್ ಇಲ್ಲವಾದರೆ, ಋತುರಾಜ್ ಗಾಯಕ್ವಾಡ್ ಅವರು ಭಾರತ ತಂಡಕ್ಕೆ ಮರಳಲಿದ್ದಾರೆ. ದಕ್ಷಿಣ ಆಫ್ರಿಕಾ ಎ ಹಾಗೂ ಭಾರತ ಎ ನಡುವಣ ಮೂರು ಪಂದ್ಯಗಳ 50 ಓವರ್‌ಗಳ ಸರಣಿಯಲ್ಲಿ ಗಾಯಕ್ವಾಡ್ ಉತ್ತಮ ಪ್ರದರ್ಶನವನ್ನು ತೋರಿದ್ದಾರೆ. ಇನ್ನು ಆಸ್ಟ್ರೇಲಿಯಾ ಒಡಿಐ ಸರಣಿಯ ಭಾರತ ತಂಡದಲ್ಲಿದ್ದ ಯಶಸ್ವಿ ಜೈಸ್ವಾಲ್ ಅವರು ಆಫ್ರಿಕಾ ಸರಣಿಯಲ್ಲಿ ಇನಿಂಗ್ಸ್ ಆರಂಭಿಸಿದರೆ, ಗಾಯಕ್ವಾಡ್ ಮೀಸಲು ಆರಂಭಿಕನಾಗಿ ಇರಬಹುದು.
IND vs SA: ಮೊಹಮ್ಮದ್ ಶಮಿಯನ್ನು ಕಡೆಗಣಿಸಿದ ಬಿಸಿಸಿಐ ವಿರುದ್ಧ ಮನೋಜ್ ತಿವಾರಿ ಕಿಡಿ!
ಶ್ರೇಯಸ್ ಅಯ್ಯರ್ ಸ್ಥಾನಕ್ಕೆ ತಿಲಕ್ ವರ್ಮಾ
ಇನ್ನು ಶ್ರೇಯಸ್ ಅಯ್ಯರ್ ಅವರ ಸ್ಥಾನಕ್ಕೆ ತಿಲಕ್ ವರ್ಮಾ ಬರಬಹುದು. ಗಾಯದ ಕಾರಣ ಆಸ್ಟ್ರೇಲಿಯಾ ಪ್ರವಾಸದಿಂದ ಹೊರಗಿದ್ದ ರಿಷಭ್ ಪಂತ್ ಅವರು ಹೊರಗಿದ್ದರು. ಹಾಗಾಗಿ ಎರಡನೇ ವಿಕೆಟ್ ಕೀಪರ್ ಆಗಿ ಕೆಎಲ್ ರಾಹುಲ್‌ಗೆ ಧ್ರುವ್ ಜುರೆಲ್ ಇದ್ದರು. ಕಳೆದ ಮೂರು ವರ್ಷಗಳಲ್ಲಿ ಪಂತ್ ಆಡಿರುವುದು ಕೇವಲ ಒಂದೇ ಒಂದು ಒಡಿಐ ಮಾತ್ರ. ಹಾಗಾಗಿ ಪಂತ್ ಪ್ರವೇಶ ಮಾಡಿದರೆ, ಸಂಜು ಸ್ಯಾಮ್ಸನ್ ಇನ್ನಷ್ಟು ದಿನಗಳ ಕಾಲ ಕಾಯಬೇಕಾಗುತ್ತದೆ.
ಹಾರ್ದಿಕ್ ಪಾಂಡ್ಯ ಆಯ್ಕೆ ಅನುಮಾನ
ಗಾಯದಿಂದ ಇನ್ನೂ ಗುಣಮುಖರಾಗುತ್ತಿರುವ ಹಾರ್ದಿಕ್ ಪಾಂಡ್ಯ ಅವರು ಈ ಒಡಿಐ ಸರಣಿಯಲ್ಲಿ ಆಡುವುದು ಅನುಮಾನ. ಹಾಗಾಗಿ ಅವರ ಸ್ಥಾನಕ್ಕೆ ನಿತೀಶ್ ಕುಮಾರ್ ರೆಡ್ಡಿ ಅವರನ್ನು ಆಯ್ಕೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಆಸ್ಟ್ರೇಲಿಯಾ ಸರಣಿಯಂತೆ ಈ ಸರಣಿಗೂ ಜಸ್‌ಪ್ರೀತ್ ಬುಮ್ರಾಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. ಏಕೆಂದರೆ ಮುಂದಿನ ಟಿ20 ವಿಶ್ವಕಪ್ ಟೂರ್ನಿಗೆ ಇನ್ನೂ ಕೆಲವೇ ತಿಂಗಳು ಬಾಕಿ ಇರುವ ಕಾರಣ ಬುಮ್ರಾಗೆ ವಿಶ್ರಾಂತಿ ನೀಡಬಹುದು. ಹಾಗಾಗಿ ಭಾರತದ ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ಹಾಗೂ ಪ್ರಸಿಧ್ ಕೃಷ್ಣ ಈ ಸರಣಿಯಲ್ಲಿ ಆಡಬಹುದು.
IND vs SA: ಗೌತಮ್ ಗಂಭೀರ್ ಕೋಚಿಂಗ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಎಬಿ ಡಿ ವಿಲಿಯರ್ಸ್!
ಮದುವೆ ನಿಮಿತ್ತ ಕುಲ್ದೀಪ್ ಯಾದವ್ ಅವರು ಈ ಸರಣಿಯಿಂದ ವಿರಾಮ ಪಡೆಯಬಹುದು, ಹಾಗಾಗಿ ವರುಣ್ ಚಕ್ರವರ್ತಿ ಒಡಿಐ ತಂಡಕ್ಕೆ ಮರಳಬಹುದು. ಅಕ್ಷರ್ ಪಟೇಲ್ ಮತ್ತು ವಾಷಿಂಗ್ಟನ್ ಸುಂದರ್ ತಮ್ಮ ಸ್ಥಾನಗಳನ್ನು ಉಳಿಸಿಕೊಳ್ಳಬಹುದು. ಹಾಗಾಗಿ ರವೀಂದ್ರ ಜಡೇಜಾ ವಿಶ್ರಾಂತಿ ಪಡೆಯಲಿದ್ದಾರೆ.
ದಕ್ಷಿಣ ಆಫ್ರಿಕಾ ಒಡಿಐ ಸರಣಿಗೆ ಭಾರತದ ಸಂಭಾವ್ಯ ಆಟಗಾರರ ತಂಡ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭಮನ್ ಗಿಲ್/ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಷಭ್ ಪಂತ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಪ್ರಸಿಧ್ ಕೃಷ್ಣ, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್, ಕುಲ್ದೀಪ್ ಯಾದವ್/ವರುಣ್ ಚಕ್ರವರ್ತಿ.