ನವದೆಹಲಿ: ಭಾರತ ತಂಡದಿಂದ ಕಡೆಣಿಸಿರುವ ಹಿರಿಯ ವೇಗಿ ಮೊಹಮ್ಮದ್ ಶಮಿ (Mohammed Shami) ಅವರ ಪರವಾಗಿ ಮಾತನಾಡಿದ ಮಾಜಿ ಕ್ರಿಕೆಟಿಗ ಮನೋಜ್ ತಿವಾರಿ (Manoj Tiwary), ಬಿಸಿಸಿಐ (BCCI) ಆಯ್ಕೆದಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡುವ ವಿಚಾರದಲ್ಲಿ ಶಮಿ ಜೊತೆಗಿನ ಸಂವಹನವನ್ನು ಪ್ರಶ್ನಿಸಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಬಂಗಾಳ ಪರ ಮೊಹಮ್ಮದ್ ಶಮಿ ಸ್ಥಿರ ಪ್ರದರ್ಶನ ನೀಡುತ್ತಿದ್ದರೂ, ಆಯ್ಕೆದಾರರು ಅನುಭವಿ ಬೌಲರ್ ಜೊತೆ ಪಾರದರ್ಶಕತೆ ಮತ್ತು ಮೂಲಭೂತ ಸಂವಹನವನ್ನು ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ತಿವಾರಿ ದೂರಿದ್ದಾರೆ.
2023ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್‌ಗಳನ್ನು ಕಬಳಿಸಿದ್ದ ಮೊಹಮ್ಮದ್ ಶಮಿ, ಸರಣಿ ಗಾಯಗಳಿಂದ ಚೇತರಿಸಿಕೊಂಡ ನಂತರ ದೀರ್ಘಕಾಲದವರೆಗೆ ತಂಡದಿಂದ ಹೊರಗುಳಿದಿದ್ದರು. ತಿಂಗಳುಗಳ ಕಾಲ ಪುನಶ್ಚೇತನ ಕಾರ್ಯದಲ್ಲಿ ತೊಡಗಿದ ನಂತರ, ಅವರು ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಭಾರತ ತಂಡಕ್ಕೆ ಮರಳಿದ್ದರು. ಅಲ್ಲಿ ಭಾರತ ಟ್ರೋಫಿಯನ್ನು ಎತ್ತಿಹಿಡಿದಿತ್ತು. ಆದಾಗ್ಯೂ, ಅವರು ದೀರ್ಘಾವಧಿ ರಾಷ್ಟ್ರೀಯ ತಂಡದಲ್ಲಿ ಉಳಿದಿಲ್ಲ. ಅಂದಿನಿಂದ ಶಮಿ ಭಾರತ ತಂಡಕ್ಕೆ ಮರಳಲು ಹೆಣಗಾಡುತ್ತಿದ್ದಾರೆ.
ಇಂಡಿಯಾ ಟುಡೆ ಜೊತೆ ಮಾತನಾಡಿದ ಮನೋಜ್ ತಿವಾರಿ, "ತಂಡದ ವಲಯದಲ್ಲಿ ನಂಬಿಕೆ ಮತ್ತು ತಿಳುವಳಿಕೆಯ ಕೊರತೆ ಕಾಣುತ್ತಿದೆ. ಮೊಹಮ್ಮದ್ ಶಮಿ ಬಂಗಾಳ ಪರ ನಿರಂತರವಾಗಿ ವಿಕೆಟ್ ಕಬಳಿಸಿದ್ದಾರೆ, ಆದರೆ ಅವರನ್ನು ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಅಥವಾ ಏಕದಿನ ಸರಣಿಗಳಿ ಆಯ್ಕೆ ಮಾಡಲಾಗಿಲ್ಲ" ಎಂದು ಅವರು ಆರೋಪ ಮಾಡಿದ್ದಾರೆ.
IND vs SA: ಗೌತಮ್ ಗಂಭೀರ್ ಕೋಚಿಂಗ್ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದ ಎಬಿ ಡಿ ವಿಲಿಯರ್ಸ್!
ಇದಕ್ಕೂ ಮುನ್ನ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಯ ಸಮಯದಲ್ಲಿ ಶಮಿ ಅನುಪಸ್ಥಿತಿಯನ್ನು ಮುಖ್ಯ ಆಯ್ಕೆದಾರ ಅಜಿತ್ ಅಗರ್ಕರ್ ಉಲ್ಲೇಖಿಸಿ ವೇಗಿಯ ಫಿಟ್ನೆಸ್ ಬಗ್ಗೆ ಸಮಿತಿಗೆ ಸ್ಪಷ್ಟ ಮಾಹಿತಿ ಇಲ್ಲ ಎಂದು ಒಪ್ಪಿಕೊಂಡರು. "ನನಗೆ ಯಾವುದೇ ಮಾಹಿತಿ ಇಲ್ಲ. ಅವರು ದುಲೀಪ್ ಟ್ರೋಫಿಯಲ್ಲಿ ಆಡಿದ್ದರು, ಆದರೆ ಕಳೆದ ಎರಡು ಮೂರು ವರ್ಷಗಳಿಂದ ಅವರು ಹೆಚ್ಚು ಕ್ರಿಕೆಟ್ ಆಡಿಲ್ಲ. ಒಬ್ಬ ಪ್ರದರ್ಶಕನಾಗಿ, ಅವರು ಏನು ಮಾಡಬಹುದು ಎಂದು ನಮಗೆ ತಿಳಿದಿದೆ, ಆದರೆ ಅವರು ಕ್ರಿಕೆಟ್ ಆಡಲೇಬೇಕು," ಎಂದು ಅಗರ್ಕರ್ ಹೇಳಿದ್ದರು.
ಅಗರ್ಕರ್‌ಗೆ ತಿರುಗೇಟು ಕೊಟ್ಟ ತಿವಾರಿ
"ಯಾವುದೇ ಫಿಟ್ನೆಸ್ ಅಪ್ಡೇಟ್ ಇಲ್ಲ ಎಂದು ಆಯ್ಕೆದಾರರು ಹೇಳಿದ್ದಾರೆ. ಆದರೆ ಅದು ಯಾರ ಕೆಲಸ? ತರಬೇತುದಾರರು ಮತ್ತು ಫಿಸಿಯೊಗಳು ಇದರ ಬಗ್ಗೆ ಮಾಹಿತಿ ಒದಗಿಸಬೇಕು. ಕನಿಷ್ಠ ಫೋನ್ ತೆಗೆದುಕೊಂಡು ಆಟಗಾರನನ್ನು ಕೇಳಿ," ಎಂದು ಒತ್ತಿ ಹೇಳಿದ ಅವರು, "ಶಮಿ ಹಲವು ವರ್ಷಗಳಿಂದ ಭಾರತ ತಂಡಕ್ಕೆ ಕೊಡುಗೆ ನೀಡಿರುವ ಹಿರಿಯ ಆಟಗಾರ, ನೀವು ಕನಿಷ್ಠ ಅವರಿಗೆ ಕರೆ ಮಾಡಬಹುದು. ಅದು ತರಬೇತುದಾರ ಮತ್ತು ಆಯ್ಕೆ ಸಮಿತಿಯ ಜವಾಬ್ದಾರಿ," ಎಂದು ಮನೋಜ್ ತಿವಾರಿ ಕಿಡಿ ಕಾರಿದ್ದಾರೆ.
IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಶುಭಮನ್ ಗಿಲ್ ಔಟ್?
ಮೊಹಮ್ಮದ್ ಶಮಿ ರಣಜಿ ಟ್ರೋಫಿ ಟೂರ್ನಿಯಲ್ಲಿ ಬಂಗಾಳ ತಂಡದ ಪರ ರಣಜಿ ಟ್ರೋಫಿ ಆಡುತ್ತಿದ್ದಾರೆ. ಅವರ ಅಂತಾರಾಷ್ಟ್ರೀಯ ಭವಿಷ್ಯದ ಬಗ್ಗೆ ಇನ್ನೂ ಅನಿಶ್ಚಿತತೆ ಇದೆ. ಸದ್ಯಕ್ಕೆ, ತಿವಾರಿ ಅವರ ಹೇಳಿಕೆಗಳು ಭಾರತದ ಆಯ್ಕೆದಾರರು ಮತ್ತು ಆಟಗಾರರ ನಡುವಿನ ಸಂವಹನ ಅಂತರದ ಕುರಿತು ದೀರ್ಘಕಾಲದ ಚರ್ಚೆಯನ್ನು ಮತ್ತೆ ಹುಟ್ಟುಹಾಕಿವೆ. ಆದರೆ, ಶಮಿ ಕೂಡ ಈ ಹಿಂದೆ ಪರೋಕ್ಷವಾಗಿ ಬಿಸಿಸಿಐ ಆಯ್ಕೆದಾರರ ವಿರುದ್ಧ ಅಸಮಾಧಾನವನ್ನು ವ್ಯಕ್ತಪಡಿಸಿದ್ದರು.