ಅಹಮದಾಬಾದ್: ಪ್ರಸ್ತುತ ನಡೆಯುತ್ತಿರುವ 2026ರ ಐಸಿಸಿ ಟಿ20 ವಿಶ್ವಕಪ್ (ICC T20 World Cup 2026) ಟೂರ್ನಿಯಲ್ಲಿ ಸತತ ಬ್ಯಾಟಿಂಗ್ ವೈಫಲ್ಯ ಅನುಭವಿಸುತ್ತಿರುವ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಅಭಿಷೇಕ್ ಶರ್ಮಾ (Abhishek Sharma) ಅವರನ್ನು ‘ಸ್ಲಾಗರ್’ ಎಂದು ಕರೆಯುವ ತಮ್ಮ ಹೇಳಿಕೆಗೆ ಪಾಕಿಸ್ತಾನ ಮಾಜಿ ವೇಗಿ ಮೊಹಮ್ಮದ್ ಆಮಿರ್ (Mohammed Amir) ಸ್ಪಷ್ಟನೆ ನೀಡಿದ್ದಾರೆ. ಈ ಪದ ಪ್ರಯೋಗದಿಂದ ಹಲವರು ಅಸಮಾಧಾನಗೊಂಡಿದ್ದಾರೆಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಭಾನುವಾರ ಅಹಮದಾಬಾದ್‌ನಲ್ಲಿ ನಡೆದದ್ದ ಸೂಪರ್ 8ರ ಪಂದ್ಯದಲ್ಲಿ ಭಾರತ 76 ರನ್‌ಗಳ ಅಂತರದಿಂದ ದಕ್ಷಿಣ ಆಫ್ರಿಕಾ ವಿರುದ್ಧ ಸೋಲು ಅನುಭವಿಸಿತು. ಬಳಿಕ ಮಾತನಾಡಿದ ಆಮಿರ್, ಅಭಿಷೇಕ್ ಅವರನ್ನು ಅತ್ಯುತ್ತಮ ಯುವ ಪ್ರತಿಭೆಗಳಲ್ಲಿ ಒಬ್ಬರೆಂದು ತಾನು ಮೌಲ್ಯಮಾಪನ ಮಾಡುತ್ತೇನೆ ಎಂದು ಹೇಳಿದರು. ಆದರೆ ವಿಶ್ವ ನಂ.1 ಟಿ20ಐ ಬ್ಯಾಟರ್ ಆಗಿರುವ ಅವರಿಗೆ ಪಾಕ್ ಮಾಜಿ ವೇಗಿ ಸಾರ್ವಜನಿಕವಾಗಿ ಒಂದು ಸಂದೇಶವನ್ನು ನೀಡಿದ್ದಾರೆ.
ಅಭಿಷೇಕ್ ಶರ್ಮಾ ಅವರನ್ನು ‘ಸ್ಲಾಗರ್’ ಎಂದು ಕರೆಯುವ ಮೂಲಕ ಮೊಹಮ್ಮದ್ ಆಮಿರ್ ವಿವಾದಕ್ಕೆ ಕಾರಣರಾಗಿದ್ದರು. ಅತ್ಯಂತ ಮೆಚ್ಚುಗೆ ಪಡೆದ ಈ ಆರಂಭಿಕ ಬ್ಯಾಟರ್‌ಗೆ ಸವಾಲಿನ ಪರಿಸ್ಥಿತಿಗಳಲ್ಲಿ ಗುಣಮಟ್ಟದ ಬೌಲರ್‌ಗಳನ್ನು ಎದುರಿಸಲು ಅಗತ್ಯವಾದ ರಕ್ಷಣಾತ್ಮಕ ತಂತ್ರದ ಕೊರತೆಯಿದೆ ಎಂದು ಅವರು ಹೇಳಿದ್ದರು. ಈ ಹೇಳಿಕೆಯನ್ನು ಪಾಕ್ ಮಾಜಿ ವೇಗಿ ಸಮರ್ಥಿಸಿಕೊಂಡರು, ‘ಸ್ಲಾಗರ್’ ಎಂಬ ಪದವನ್ನು ಬಳಸುವ ಮೂಲಕ ಅಭಿಷೇಕ್ ಅವರನ್ನು ತಗ್ಗಿಸುವ ಉದ್ದೇಶ ಇದರಲ್ಲಿ ಇರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
IND vs SA: ಸೂಪರ್-8ರಲ್ಲಿ ಭಾರತ ತಂಡದ ವಿಶ್ವಾಸವನ್ನು ಕುಗ್ಗಿಸಿದ ದಕ್ಷಿಣ ಆಫ್ರಿಕಾ!
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ದಕ್ಷಿಣ ಆಫ್ರಿಕಾ ವಿರುದ್ಧ 188 ರನ್ ಗುರಿ ಬೆನ್ನಟ್ಟಿದ ಭಾರತ ತಂಡ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ಇನಿಂಗ್ಸ್ ಆರಂಭಿಸಿದ ಅಭಿಷೇಕ್ 12 ಎಸೆತಗಳಲ್ಲಿ 15 ರನ್ ಗಳಿಸಿ ಔಟಾದ ಬಳಿಕ ಮೊಹಮ್ಮದ್ ಆಮಿರ್ ಈ ಹೇಳಿಕೆ ನೀಡಿದರು.
ʻಸ್ಲಾಗರ್ʼ ಎಂದು ಕರೆಯಲು ಕಾರಣ ತಿಳಿಸಿದ ಆಮಿರ್
ಪಾಕಿಸ್ತಾನದ ಟಿವಿ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮೊಹಮ್ಮದ್ ಆಮಿರ್, "ನಾನು ಅವರ ಬಗ್ಗೆ ಬೌಲರ್‌ನ ದೃಷ್ಟಿಕೋನದಿಂದ ಮಾತನಾಡಿದ್ದೆ. ಅವರ ತಂತ್ರದ ಬಗ್ಗೆ ಹೇಳಿದ್ದೆ. ‘ಸ್ಲಾಗರ್’ ಎಂಬ ಪದ ಬಳಸಿದ್ದರಿಂದ ಜನರಿಗೆ ಬೇಸರವಾಯಿತು,” ಎಂದು ಹೇಳಿದರು.
“ಆ ಪದ ಬಳಸಿದ ನನ್ನ ಅರ್ಥ ಏನಂದರೆ, ಅವರ ತಂತ್ರವು ಉತ್ತಮ ತಂಡ ಹಾಗೂ ಗುಣಮಟ್ಟದ ಬೌಲರ್‌ಗಳ ಗುಂಪು ಅವರನ್ನು ಬಲೆಗೆ ಬೀಳಿಸಬಹುದು ಎಂಬುದಾಗಿತ್ತು. ಅವರು ಗಳಿಸಿದ 14 ರನ್‌ಗಳನ್ನು ನೋಡಿ, ಅವೆಲ್ಲವೂ ಒಂದೇ ಭಾಗದಲ್ಲಿ ಬಂದವು. ಅವರು ಹೊಡೆದ ಬಾಲ್‌ಗಳು ಕೆಟ್ಟ ಎಸೆತಗಳಾಗಿದ್ದವು. ಆದರೆ ರಬಾಡಾ ಉತ್ತಮವಾಗಿ ಬೌಲಿಂಗ್ ಪ್ರಾರಂಭಿಸಿದಾಗ, ಅದನ್ನು ಹೇಗೆ ಎದುರಿಸಬೇಕು ಎಂಬುದನ್ನು ಅಭಿಷೇಕ್ ಕಂಡುಹಿಡಿಯಲು ಸಾಧ್ಯವಾಗಲಿಲ್ಲ,” ಎಂದು ಮೊಹಮ್ಮದ್ ಆಮಿರ್ ವಿವರಿಸಿದರು.
IND vs SA: ಅಭಿಷೇಕ್ ಶರ್ಮಾರ ಸತತ ವೈಫಲ್ಯದ ಬಗ್ಗೆ ಸುನೀಲ್ ಗವಾಸ್ಕರ್ ಪ್ರತಿಕ್ರಿಯೆ!
ಅಭಿಷೇಕ್‌ಗೆ ಸಂದೇಶ ರವಾನಿಸಿದ ಆಮಿರ್
“ಅವರು ಒಳ್ಳೆಯ ಆಟಗಾರ. ಮೂರು ಬಾರಿ ಡಕ್‌ಔಟಾದ ಬಳಿಕವೂ ಅವರ ಉದ್ದೇಶ ಅದೇ ರೀತಿ ಇದೆ. ಅವರು ಹಿಂಜರಿಯಲಿಲ್ಲ. ಅವರು ಧನಾತ್ಮಕ ಮನೋಭಾವದಲ್ಲಿದ್ದಾರೆ. ಹಿರಿಯ ಆಟಗಾರನಾಗಿ ನನ್ನ ಸಂದೇಶ ಅವರಿಗೆ ತಲುಪುವುದಾದರೆ, ನಾನು ಅವರಿಗೆ ಹೇಳುವುದೇನೆಂದರೆ—ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನಿಮ್ಮ ತಂತ್ರ ಬಹಿರಂಗವಾಗುತ್ತದೆ. ನೀವು ಸ್ವಲ್ಪ ಸಹನೆ ತೋರಿಸಿ, ಬಾಲ್‌ನ ಗುಣಮಟ್ಟಕ್ಕೆ ಅನುಗುಣವಾಗಿ ಆಡಿದರೆ ಉತ್ತಮವಾಗುತ್ತದೆ. ಅವರಲ್ಲಿ ಕೌಶಲಗಳಿವೆ. ಆದರೆ ಅವುಗಳನ್ನು ಎಷ್ಟು ಸಮರ್ಥವಾಗಿ ಬಳಸಿಕೊಳ್ಳುತ್ತಾರೆ ಎಂಬುದು ಅವರ ಮೇಲೆ ಅವಲಂಬಿತವಾಗಿದೆ. ನಾನು ಆ ಅರ್ಥದಲ್ಲಿ ಹೇಳಿದ್ದೆ. ಆದರೆ ಜನರಿಗೆ ಬೇಸರವಾಯಿತು,” ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.