ರಾಯ್ಪುರ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ (IND vs SA 2nd ODI Highlights) ಭಾರತ ತಂಡ (India) 359 ರನ್‌ಗಳ ಬೃಹತ್ ಮೊತ್ತದ ಗುರಿ ನೀಡಿದರ ಹೊರತಾಗಿಯೂ 4 ವಿಕೆಟ್ ಸೋಲು ಅನುಭವಿಸಿತು. ಸೋತಿದೆ. ಆ ಮೂಲಕ ಎರಡು ಪಂದ್ಯಗಳ ಅಂತ್ಯಕ್ಕೆ ಉಭಯ ತಂಡಗಳು ಏಕದಿನ ಸರಣಿಯಲ್ಲಿ 1-1 ಸಮಬಲ ಕಾಯ್ದುಕೊಂಡಿವೆ. ಪಂದ್ಯದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್ (KL Rahul) ಮಾತನಾಡಿ, ಟಾಸ್ ಸೋತಿದ್ದು ಮತ್ತು ಮಂಜು (ಇಬ್ಬನಿ) ಪಂದ್ಯದ ಫಲಿತಾಂಶದಲ್ಲಿ ಪ್ರಮುಖ ಪಾತ್ರವಹಿಸಿದೆ ಎಂದು ಹೇಳಿದ್ದಾರೆ. ಕೆಎಲ್ ರಾಹುಲ್ ಸತತ ಎರಡನೇ ಬಾರಿ ಟಾಸ್ ಸೋತಿದ್ದರಿಂದ ಬೇಸರ ವ್ಯಕ್ತಪಡಿಸಿದರು ಹಾಗೂ ಪಂದ್ಯ ಎರಡನೇ ಇನಿಂಗ್ಸ್‌ನಲ್ಲಿ ಇಬ್ಬನಿ ಬಂದಿದ್ದ ಕಾರಣ ಬೌಲರ್‌ಗಳು ಚೆಂಡಿನ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಇಲ್ಲಿನ ಶಾಹೀದ್ ವೀರ್ ಸಿಂಗ್ ಇಂಟರ್‌ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಎರಡನೇ ಏಕದಿನ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡುವಂತಾಗಿದ್ದ ಭಾರತ ತಂಡ, ವಿರಾಟ್ ಕೊಹ್ಲಿ ಹಾಗೂ ಋತುರಾಜ್ ಗಾಯಕ್ವಾಡ್ ಅವರ ಶತಕಗಳ ಬಲದಿಂದ ತನ್ನ ಪಾಲಿನ 50 ಓವರ್‌ಗಳಿಗೆ 5 ವಿಕೆಟ್ ನಷ್ಟಕ್ಕೆ 358 ರನ್‌ಗಳನ್ನು ಕಲೆ ಹಾಕಿತ್ತು. ಬಳಿಕ ಗುರಿಯನ್ನು ಹಿಂಬಾಲಿಸಿದ ದಕ್ಷಿಣ ಆಫ್ರಿಕಾ, ಏಡೆನ್ ಮಾರ್ಕ್ರಮ್ ಶತಕ ಹಾಗೂ ಡೆವಾಲ್ಡ್ ಬ್ರೆವಿಸ್ ಹಾಗೂ ಮ್ಯಾಥ್ಯೂ ಬ್ರಿಟ್ಜ್ಕಿ ಅವರ ಅರ್ಧಶತಕಗಳ ಬಲದಿಂದ ಕೊನೆಯ ಓವರ್‌ನಲ್ಲಿ ಗುರಿಯನ್ನು ತಲುಪಿತು.
IND vs SA: ಕೊಹ್ಲಿ, ಗಾಯಕ್ವಾಡ್ ಶತಕಗಳು ವ್ಯರ್ಥ, ಭಾರತಕ್ಕೆ ತಿರುಗೇಟು ನೀಡಿದ ದಕ್ಷಿಣ ಆಫ್ರಿಕಾ!
ಅಂದ ಹಾಗೆ ಎರಡನೇ ಇನಿಂಗ್ಸ್‌ನಲ್ಲಿ ಇಬ್ಬನಿ ಬಂದಿತ್ತು ಹಾಗೂ ಚೆಂಡಿನ ಮೇಲೆ ಹಿಡಿತ ಭಾರತೀಯ ಬೌಲರ್‌ಗಳಿಗೆ ಸಾಧ್ಯವಾಗಲಿಲ್ಲ. ಇದು ಪಂದ್ಯದ ಫಲಿತಾಂಶದ ಮೇಲೆ ಗಂಭೀರ ಪರಿಣಾಮ ಬೀರಿತು. ಪಂದ್ಯದ ಬಳಿಕ ಟೀಮ್ ಇಂಡಿಯಾ ನಾಯಕ ಕೆಎಲ್ ರಾಹುಲ್ ಕೂಡ ಇದೇ ಅಂಶವನ್ನು ಬಹಿರಂಗಪಡಿಸಿದರು. ಅಲ್ಲದೆ ಪ್ರಥಮ ಇನಿಂಗ್ಸ್‌ನ ಡೆತ್ ಓವರ್‌ಗಳಲ್ಲಿ ನಾವು ಇನ್ನಷ್ಟು ರನ್‌ಗಳನ್ನು ಕಲೆ ಹಾಕಬೇಕಾಗಿತ್ತು ಎಂದು ತಿಳಿಸಿದ್ದಾರೆ.
ಭಾರತದ ಸೋಲಿಗೆ ಕಾರಣ ತಿಳಿಸಿದ ಕೆಎಲ್ ರಾಹುಲ್
ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್‌ನಲ್ಲಿ ಮಾತನಾಡಿದ ಕೆಎಲ್ ರಾಹುಲ್, "ಎರಡನೇ ಇನಿಂಗ್ಸ್‌ನಲ್ಲಿ ತುಂಬಾ ಇಬ್ಬನಿ ಇತ್ತು ಹಾಗೂ ಬೌಲ್ ಮಾಡಲು ತುಂಬಾ ಕಠಿಣವಾಗಿತ್ತು. ಕಳೆದ ಪಂದ್ಯದಲ್ಲಿ ನಾವು ಚೆನ್ನಾಗಿ ಆಡಿದ್ದೇವೆಂದು ಭಾವಿಸಿದ್ದೆವು. ಇಂದು (ಬುಧವಾರ) ಅಂಪೈರ್‌ಗಳು ಚೆಂಡನ್ನು ಬದಲಾಯಿಸಲು ಸಂತೋಷಪಟ್ಟರು. ಟಾಸ್ ದೊಡ್ಡ ಪಾತ್ರ ವಹಿಸುತ್ತದೆ, ಆದ್ದರಿಂದ ಟಾಸ್ ಸೋತ ನಾನು ನನ್ನನ್ನು ನಾನೇ ದೂಷಿಸಿಕೊಳ್ಳುತ್ತೇನೆ. ನಾವು ಇನ್ನೂ ಉತ್ತಮವಾಗಿ ಮಾಡಬಹುದಾದ ಕೆಲಸಗಳು ಯಾವಾಗಲೂ ಇರುತ್ತವೆ," ಎಂದರು.
ಇನ್ನು 20-25 ರನ್ ಕಡಿಮೆಯಾಗಿದೆ
"ಬ್ಯಾಟಿಂಗ್‌ನಲ್ಲಿ 350 ರನ್‌ಗಳು ಚೆನ್ನಾಗಿ ಕಾಣುತ್ತವೆ ಎಂದು ನನಗೆ ತಿಳಿದಿದೆ. ಡ್ರೆಸ್ಸಿಂಗ್ ಕೋಣೆಯಲ್ಲಿ ನಾವು ಹೆಚ್ಚುವರಿ 20-25 ರನ್‌ಗಳನ್ನು ಹೇಗೆ ಗಳಿಸಬಹುದು ಎಂಬುದರ ಬಗ್ಗೆ ಚರ್ಚೆ ನಡೆಸಿದೆವು ಹಾಗೂ ಇದರಿಂದ ಬೌಲರ್‌ಗಳಿಗೆ ಒದ್ದೆಯಾದ ಚೆಂಡನ್ನು ತಡೆದುಕೊಳ್ಳಲು ಸಾಧ್ಯವಾಗುತ್ತದೆ," ಎಂದು ಹೇಳಿದ್ದಾರೆ.
ಕೊಹ್ಲಿ ಮತ್ತು ಗಾಯಕ್ವಾಡ್ ಮೂರನೇ ವಿಕೆಟ್‌ಗೆ 195 ರನ್‌ಗಳ ಜೊತೆಯಾಟ ನೀಡಿ ತಂಡ ಸವಾಲಿನ ಗುರಿ ನೀಡಲು ನಿರ್ಣಾಯಕ ಪಾತ್ರ ವಹಿಸಿದರು. ಈ ವೇಳೆ ಭಾರತ 340-400 ರನ್ ಕಲೆಹಾಕುವ ಸಾಧ್ಯತೆಯಿತ್ತು. ಭಾರತ 3 ವಿಕೆಟ್ ನಷ್ಟಕ್ಕೆ 39 ಓವರ್‌ಗಳಿಗೆ 289 ರನ್ ಗಳಿಸಿತ್ತು. ಆದರೆ, ಕೊನೆಯ 11 ಓವರ್‌ಗಳಲ್ಲಿ ಟೀಮ್ ಇಂಡಿಯಾ ಕೇವಲ 74 ರನ್‌ಗಳನ್ನು ಕಲೆಹಾಕಲಷ್ಟೆ ಶಕ್ತವಾಯಿತು.
IND vs SA: 53ನೇ ಒಡಿಐ ಶತಕ ಸಿಡಿಸಿ ಜಿಂಕೆಯಂತೆ ಜಿಗಿದು ಸಂಭ್ರಮಿಸಿದ ವಿರಾಟ್ ಕೊಹ್ಲಿ!
ವಿರಾಟ್ ಕೊಹ್ಲಿ ಮತ್ತು ಋತುರಾಜ್ ಗಾಯಕ್ವಾಡ್ ಔಟಾದ ಬಳಿಕ ಬ್ಯಾಟ್ ಬೀಸಲು ಮೈದಾನಕ್ಕೆ ಬಂದ ರವೀಂದ್ರ ಜಡೇಜಾ ಮತ್ತು ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್ ವೈಫಲ್ಯ ಅನುಭವಿಸಿದರು. ಇದರಿಂದಾಗಿ ಭಾರತ ತಂಡ ಕೊನೆಯ ಓವರ್‌ಗಳಲ್ಲಿ ರನ್ ಗಳಿಸುವಲ್ಲಿ ವಿಫಲವಾಯಿತು. ಇನ್ನು ನಾಯಕ ಕೆಎಲ್ ರಾಹುಲ್ 43 ಎಸೆತಗಳಲ್ಲಿ 66 ಕಲೆಹಾಕಿ ತಂಡಕ್ಕೆ ಆಸರೆಯಾದರು. ಇತ್ತ ದಕ್ಷಿಣ ಆಫ್ರಿಕಾ ಪರ ಏಡೆನ್ ಮಾರ್ಕ್ರಮ್ (110), ಮ್ಯಾಥ್ಯೂ ಬ್ರೀಟ್ಜ್ಕೆ (68) ಮತ್ತು ಡೆವಾಲ್ಡ್ ಬ್ರೆವಿಸ್ (54) ಉತ್ತಮ ಪ್ರದರ್ಶನದ ಕಾರಣ ಪ್ರವಾಸಿ ತಂಡ ದಾಖಲೆಯ ಚೇಸ್ ಮಾಡಿತು.